ಬುಧವಾರ, ಜನವರಿ 29, 2020
28 °C
‘ನಿರಂಜನ’ ಪ್ರಶಸ್ತಿ ಸ್ವೀಕರಿಸಿದ ಕೆ.ಟಿ.ಗಟ್ಟಿ ಅಭಿಮತ

‘ಬದುಕಿನಲ್ಲಿ ಸಾಧನೆ ಬಗ್ಗೆ ಚಿಂತಿಸಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ‘ನನ್ನ ಕೃತಿಗಳನ್ನು ಕೇವಲ ವಿದ್ವಾಂಸರು, ವಿಮರ್ಶಕರಷ್ಟೇ ಓದುವಂತಾಗಬಾರದು. ಸಮಾಜದ ವಿವಿಧ ಸ್ತರದವರು ಓದುವಂತಾಗಬೇಕೆಂಬ ಆಶಯ ಹೊಂದಿದ್ದೇನೆ. ಓದುಗನೊಂದಿಗೆ ಕೃತಿಯ ಮೂಲಕ ಚರ್ಚಿಸುವಂತಾಗಬೇಕೆಂಬ ಕನಸು ನನ್ನದು. ಬದುಕಿ­ನಲ್ಲಿ ಸಾಧನೆ, ಸಫಲತೆಯ ಬಗೆಗೆ ಚಿಂತಿಸ­ಬಾರದು. ಇರುವಷ್ಟು ದಿನ ಸಂತೋಷದಿಂದ ಬದುಕಬೇಕೆಂಬ ಸಿದ್ಧಾಂತ ನನ್ನದು’ ಎಂದು ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಅವರು ಹೇಳಿದರು.ಪುತ್ತೂರಿನ ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯ­ಕ್ರಮದಲ್ಲಿ ‘ನಿರಂಜನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಆರಂಭದಲ್ಲಿ ಕಥೆ, ಕವನಗಳ ಮೇಲೆ ಆಸಕ್ತಿ ಹೊಂದಿದ್ದ ನಾನು ಕ್ರಮೇಣ ಕಾದಂಬರಿ ಬರೆಯುವು­ದರ ಕಡೆಗೆ ಹೊರಳಿದೆ. ಅನೇಕರು ಇಂಥದ್ದನ್ನೇ ಬರೆಯ­ಬೇಕು ಎಂದು ನನ್ನನ್ನು ಒತ್ತಾಯಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗುವುದಕ್ಕೆ ಸಾಧ್ಯ­ವಾಯಿತು. ಎಲ್ಲ ಹಿರಿಯ ಬರಹಗಾರರನ್ನು ಗುರು­ಗಳಾಗಿ ಸ್ವೀಕರಿಸಿ ಬರೆಯುತ್ತಾ ಹೋದೆ’ ಎಂದರು.ಅಭಿನಂದನಾ ಭಾಷಣ ಮಾಡಿದ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಬಿ.­ರಾಜೇಶ್ ಅವರು ಕೆ.ಟಿ.ಗಟ್ಟಿ ಗ್ರಾಮೀಣ ಪ್ರದೇಶ­ದಲ್ಲಿದ್ದು, ತನ್ನ ಸಾಧನೆಯ ಕಂಪನ್ನು ಎಲ್ಲೆಡೆ ಬೀರಿದ­ವರು. ಅವರ ಕವನಗಳಲ್ಲಿ ನೋವಿನಿಂದ ಹುಟ್ಟುವ ಬಂಡಾಯದ ಗುಣ ಎದ್ದು ಕಾಣುತ್ತದೆ. ಅವರ ಎಲ್ಲ ಬರಹಗಳಲ್ಲಿ ಗಟ್ಟಿತನವನ್ನು ಕಾಣಬಹುದು ಎಂದರು. ಗಟ್ಟಿಯವರು ಎಂದೂ ಪ್ರಶಸ್ತಿಯ ಬೆನ್ನು ಬಿದ್ದವ­ರಲ್ಲ. ಈವರೆಗೆ ಸುಮಾರು 46 ಕಾದಂಬರಿಗಳನ್ನು ಸಾರ­­ಸ್ವತ ಲೋಕಕ್ಕೆ ನೀಡಿದವರು. ವೈಚಾರಿಕ ಚಿಂತನೆ­ಗಳ ಅಗ್ರಗಣ್ಯರಾಗಿ ಗಟ್ಟಿಯವರು ಕಾಣಿಸಿಕೊಂಡರೂ ಸಮ­ಕಾಲೀನ ವಿಮರ್ಶಾ ಲೋಕ ಅವರನ್ನು ಸಾಕಷ್ಟು ಪರಿ­ಗಣಿಸದೇ ಇರುವುದು ನಿಜಕ್ಕೂ ಖೇದಕರ ವಿಷಯ ಎಂದರು.ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ನಿರಂಜನ ಪ್ರಶಸ್ತಿ ಅರ್ಹ ವ್ಯಕ್ತಿಗಳನ್ನು ಅರಸಿಕೊಂಡು ಹೋಗುತ್ತಿರುವುದು ಸಂತಸ­ದ ಸಂಗತಿ. ದೊಡ್ಡ ಸಾಹಿತಿಗಳೆನಿಸಿಕೊಂಡು ವಿವಿಧ ಫರ್ಮಾನು ಹೊರಡಿಸುವವರು, ಕೀಳು ರಾಜಕೀಯದೊಂದಿಗೆ ತಳಕು ಹಾಕಿಕೊಂಡವರು, ರಾಜಕಾರಣಿಗಳಿಗೆ ಜ್ಯೂಸ್ ಕುಡಿಸುವ ಸಾಹಿತಿಗಳು ನಮ್ಮ ನಡುವೆ ಇದ್ದಾರೆ.

ಇಂದಿನ ಸಾಹಿತ್ಯದ ವಿದ್ಯಾರ್ಥಿ­ಗಳಿಗೂ ಅಂತಹ ಸಾಹಿತಿಗಳ ಬಗೆಗೇ ಹೇಳ ಬೇಕಾದ ಸ್ಥಿತಿಯೂ ಶಿಕ್ಷಣ ಕ್ಷೇತ್ರದಲ್ಲಿದೆ. ನಿಜವಾದ ಸಾಹಿತ್ಯ ಪ್ರೀತಿಯಿಂದ ಸಾಹಿತ್ಯಕ್ಕಾಗಿ ಮಾತ್ರ ಕೆಲಸ ಮಾಡಿದ ಸಾಹಿತಿಗಳ ಬಗೆಗೆ ಯುವಜನತೆ ಅರಿಯಬೇಕು. ಅಂತಹವರನ್ನು ಗೌರವಿಸಬೇಕು ಎಂದು ನುಡಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಾ­ಧಿಕಾರಿ ಪ್ರೊ.ಎ.ವಿ.ನಾರಾಯಣ, ಕಾಲೇಜು ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ., ಉಪನ್ಯಾಸಕಿ ಗೀತಾ ಕುಮಾರಿ, ವಿದ್ಯಾರ್ಥಿನಿ ಮೇಘ ಕುಕ್ಕುಜೆ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)