ಬುಧವಾರ, ಜೂನ್ 23, 2021
21 °C

‘ಬಲಗೈ’ ಹಿಡಿತದಲ್ಲಿ ಚಾಮರಾಜನಗರ

ಕೆ.ಎಚ್‌. ಓಬಳೇಶ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಐದು ಲೋಕಸಭಾ ಕ್ಷೇತ್ರಗಳಲ್ಲಿ ಚಾಮರಾಜನಗರ ಒಂದು.

ಇದು ಅಸ್ತಿತ್ವಕ್ಕೆ ಬಂದಿದ್ದು 1962ರ ಚುನಾವಣೆಯಲ್ಲಿ. ಇದಕ್ಕೂ ಮೊದಲು 1952, 1957ರಲ್ಲಿ ನಡೆದ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯು ಮೈಸೂರು ದ್ವಿಸದಸ್ಯ ಕ್ಷೇತ್ರಕ್ಕೆ ಒಳಪಟ್ಟಿತ್ತು.ಆರಂಭದಿಂದಲೂ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ. ಪರಿಶಿಷ್ಟ ಜಾತಿಯ ಉಪಜಾತಿಯಾದ ‘ಬಲಗೈ’ ಸಮುದಾಯದ ಜನಪ್ರತಿನಿಧಿಗಳೇ ಇಂದಿಗೂ ಆಯ್ಕೆಯಾಗುತ್ತಿರುವುದು ಈ ಕ್ಷೇತ್ರದ ವೈಶಿಷ್ಟ್ಯ.‘ಬಲಗೈ’ ಸಮುದಾಯ ಹೆಚ್ಚಿರುವುದರಿಂದ ರಾಜಕೀಯ ಪಕ್ಷಗಳು ಕೂಡ ಟಿಕೆಟ್ ಹಂಚಿಕೆಯಲ್ಲಿ ಸಿದ್ಧಸೂತ್ರಕ್ಕೆ ಜೋತುಬಿದ್ದಿವೆ. ಪರಿಶಿಷ್ಟರಲ್ಲಿನ ಇತರ ಜಾತಿಯ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ಅಪ್ಪಿತಪ್ಪಿಯೂ ಯೋಚಿಸುವುದಿಲ್ಲ.ಕ್ಷೇತ್ರದಲ್ಲಿ 2 ಬಾರಿ ಜನತಾದಳ, ತಲಾ ಒಂದು ಬಾರಿ ಜೆಡಿಎಸ್‌, ಜೆಡಿಯುಗೆ ಮತದಾರರ ಒಲವು ದಕ್ಕಿದೆ. ಉಳಿದಂತೆ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ.1962ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಎಂ. ಸಿದ್ದಯ್ಯ ಜಯ ಗಳಿಸಿದ್ದರು. 1967, 1971ರ ಚುನಾವಣೆಯಲ್ಲೂ ಅವರು ಗೆಲುವು ಸಾಧಿಸಿದರು.1977ರ ಚುನಾವಣೆ ವೇಳೆಗೆ ಬಿ. ರಾಚಯ್ಯ ಲೋಕಸಭಾ ಅಖಾಡಕ್ಕೆ ಧುಮುಕಿದರು. ರಾಜ್ಯ ಸರ್ಕಾರದಲ್ಲಿ ಕೃಷಿ, ಅರಣ್ಯ, ಸಹಕಾರ ಸಚಿವರಾಗಿ ಹೆಸರು ಮಾಡಿದ್ದ ಅವರಿಗೆ ಗೆಲುವು ಕಷ್ಟವಾಗಲಿಲ್ಲ. ಜತೆಗೆ, ಪರಿಶಿಷ್ಟ ಸಮುದಾಯದ ಧೀಮಂತ ನಾಯಕನೆಂಬ ಹಿರಿಮೆ ಹಾಗೂ ಲಿಂಗಾಯತರೊಂದಿಗೆ ಬೆಸೆದುಕೊಂಡಿದ್ದ ‘ಸ್ನೇಹ’ ಅವರ ಪರವಾಗಿತ್ತು. ಅವರ ವಿರುದ್ಧ ಸ್ಪರ್ಧಿಸಿ ಸೋತವರು ಈಗಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌.ಬದನವಾಳು ಪ್ರಕರಣ: 1980ರ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‌ (ಕಾಂಗ್ರೆಸ್‌–ಐ) ಮೊದಲ ಬಾರಿಗೆ ಗೆಲುವಿನ ರುಚಿ ಕಂಡರು. ಆ ನಂತರ ನಡೆದ 1984, 1989, 1991ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಆದರೆ, 1993ರ ಮಾರ್ಚ್ 25ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆದ ದಲಿತರ ಹತ್ಯೆ ಪ್ರಕರಣ ಅವರ ರಾಜಕೀಯ ಜೀವನದಲ್ಲಿ ತಲ್ಲಣ ಸೃಷ್ಟಿಸಿತು.ದಲಿತರು– ಲಿಂಗಾಯತರ ನಡುವಿನ ಘರ್ಷಣೆಯು ಕ್ಷೇತ್ರದ ರಾಜಕೀಯ, ಸಾಮಾಜಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರಿತು. 1996ರ ಲೋಕಸಭಾ ಚುನಾವಣೆಯಲ್ಲಿ ಬದನವಾಳು ಪ್ರಕರಣವೇ ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಯಿತು. ಆ ವೇಳೆ ಕೈ ಪಾಳೆಯದಲ್ಲಿದ್ದ ಪ್ರಭಾವಿ ಲಿಂಗಾಯತ ನಾಯಕರು ಶ್ರೀನಿವಾಸ ಪ್ರಸಾದ್‌ಗೆ ಟಿಕೆಟ್‌ ನೀಡಬಾರದೆಂದು ಬಿಗಿ ಪಟ್ಟು ಹಿಡಿದರು.ಇನ್ನೊಂದೆಡೆ ಅಂದಿನ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಸಚಿವ ಸಂಪುಟದ ವಿಸ್ತರಣೆಯ ಕಸರತ್ತಿಗೆ ಕೈಹಾಕಿದರು.

ಚಿಕ್ಕೋಡಿಯ ಶಂಕರಾನಂದ ಅವರನ್ನು ಸಂಪುಟದಿಂದ ಕೈಬಿಟ್ಟರು. ಆ ಸ್ಥಾನಕ್ಕೆ ಕೋಲಾರದ ಜಿ.ವೈ. ಕೃಷ್ಣನ್‌ ಅವರನ್ನು ಸೇರಿಸಿಕೊಂಡರು. ಇದರಿಂದ ಅಸಮಾಧಾನಗೊಂಡ ಶ್ರೀನಿವಾಸ ಪ್ರಸಾದ್‌ ಅವರು ನರಸಿಂಹರಾವ್‌ ವಿರುದ್ಧ ತಿರುಗಿಬಿದ್ದರು. ಒಂದೆಡೆ ಬದನವಾಳು ಪ್ರಕರಣ, ಮತ್ತೊಂದೆಡೆ ಪ್ರಧಾನಿ ವಿರುದ್ಧ ತಿರುಗಿಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿತು. ಕೊನೆಗೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋಲು ಅನುಭವಿಸಿದರು.ಆ ಚುನಾವಣೆಯಲ್ಲಿ ಜನತಾ­ದಳದಿಂದ ಸ್ಪರ್ಧಿಸಿದ್ದ ಎ. ಸಿದ್ದರಾಜುಗೆ ಬದನವಾಳು ಪ್ರಕರಣ ವರದಾನ­ವಾಯಿತು. ಅವರು ಅನಾಯಾಸ­ವಾಗಿ ಜಯ ಗಳಿಸಿದರು. ಜತೆಗೆ, ಆ ವೇಳೆ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದ 7 ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದ ಶಾಸಕರೇ ಚುನಾಯಿತ­ರಾಗಿದ್ದರು. ಶಾಸಕರ ಬೆಂಬಲ ಕೂಡ ಸಿದ್ದರಾಜು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

1998ರಲ್ಲಿ ನಡೆದ ಚುನಾವಣೆ­ಯಲ್ಲೂ ಜನತಾದಳದಿಂದ ಸ್ಪರ್ಧಿಸಿದ್ದ ಸಿದ್ದರಾಜು ಜಯ ಗಳಿಸಿದರು. 1999ರ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‌ ಜೆಡಿಯು ಕದ ತಟ್ಟಿದ್ದರು. ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ಸಿದ್ದರಾಜು ವಿರುದ್ಧ ಗೆಲುವು ಸಾಧಿಸಿದರು.

2004ರ ಲೋಕಸಭಾ ಚುನಾವಣೆ ವೇಳೆಗೆ ಕ್ಷೇತ್ರದ ರಾಜಕೀಯದಲ್ಲಿ ಸ್ಥಿತ್ಯಂತರ ಕಾಣಿಸಿಕೊಂಡಿತು. ಕ್ಷೇತ್ರ­ದಲ್ಲಿ ಪ್ರಥಮ ಬಾರಿಗೆ ಜೆಡಿಎಸ್‌ ಬಿರುಗಾಳಿ ಬೀಸಿತು. ಇದೇ ವೇಳೆಯೇ ವಿಧಾನಸಭೆಗೂ ಚುನಾವಣೆ ನಡೆಯಿತು.ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯ ಗಳಿಸಿದರು. ಇದು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಂ. ಶಿವಣ್ಣ ಅವರ ಗೆಲುವಿಗೆ ಸಹಕಾರಿಯಾಯಿತು.2009ರ ಲೋಕಸಭಾ ಚುನಾವಣೆಯಲ್ಲಿ ಆರ್‌. ಧ್ರುವನಾರಾಯಣ (ಕಾಂಗ್ರೆಸ್‌) ಹಾಗೂ ಎ.ಆರ್‌. ಕೃಷ್ಣಮೂರ್ತಿ (ಬಿಜೆಪಿ) ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. ಜತೆಗೆ, ಕೇಂದ್ರದ ಯುಪಿಎ ಅಲೆ ಧ್ರುವನಾರಾಯಣ ಗೆಲುವಿಗೆ ಮುನ್ನುಡಿ ಬರೆಯಿತು.

ಈ ಬಾರಿಯೂ ಮತ್ತೆ ಹಳೆಯ ಮುಖಗಳ ಜುಗಲ್‌ಬಂದಿಗೆ ಕ್ಷೇತ್ರ ಸಜ್ಜಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.