ಶುಕ್ರವಾರ, ಫೆಬ್ರವರಿ 26, 2021
30 °C
ಜಿಲ್ಲೆಯಲ್ಲಿ ವಿವಿಧೆಡೆ ಬಸವ ಜಯಂತಿ ಸಂಭ್ರಮ

‘ಬಸವಣ್ಣನ ಅಧ್ಯಾತ್ಮ ಅನುಸರಿಸಿ,ಅನುಭವಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಸವಣ್ಣನ ಅಧ್ಯಾತ್ಮ ಅನುಸರಿಸಿ,ಅನುಭವಿಸಿ’

ಚಿತ್ರದುರ್ಗ: ಬಸವಣ್ಣ ಅವರಂತೆ ಅಧ್ಯಾತ್ಮವನ್ನು ದಿನವೂ ಅನುಸರಿಸಿ, ಅನುಭವಿಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ವೀರಶೈವ ಸಮಾಜ ಹಮ್ಮಿಕೊಂಡಿದ್ದ ಮಹಾಮಾನವತಾವಾದಿ ಬಸವಣ್ಣನವರ ೧೦೨ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣ ಅವರು ಮಹಾದೇವ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಮಹಾದೇವ ಎಂದರೆ ಬಯಲು, ಶೂನ್ಯ, ನಿರ್ಭಯ. ಯಾರು ಬಯಲನ್ನು ರೂಪ ಮಾಡುತ್ತಾರೋ ಅವನು ನಿಜವಾದ ಶರಣ. ಬಯಲು ನಿರಾಕಾರ. ಲಿಂಗ ಆಕಾರ. ಎಲ್ಲರ ಶರೀರಕ್ಕೂ ಆಕಾರ, ಆಕೃತಿ ಇದೆ. ಅದರೊಳಗಿನ ಭಾವ ನಿರಾಕಾರ. ನಿರಾಕಾರ ಬಯಲು. ಇದು ಬಸವಣ್ಣ ಅವರ ಅಧ್ಯಾತ್ಮ. ಇವನ್ನು ದಿನವೂ ಅನುಭವಿಸಬೇಕು ಎಂದರು.‘ಪ್ರಸಾದ ಆಸ್ವಾದಿಸುತ್ತೇವೆ. ಅದರ ಜೊತೆ ಅಧ್ಯಾತ್ಮ ಆಸ್ವಾದಿಸಬೇಕು. ಪ್ರಸಾದದ ಜೊತೆ ಅಧ್ಯಾತ್ಮ ಬೆರೆಸಿ ಆಸ್ವಾದಿಸಿದರೆ ಬದುಕು ನಿರಾಳವಾಗುತ್ತದೆ. ಅದು ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದರು.‘ಕೇಳಿದವರಿಗೆ ಬೇಡಿದವರಿಗೆ ಕೊಡುವವನಲ್ಲ ಬಸವಣ್ಣ. ಬಸವಣ್ಣ ನಿನ್ನ ಮಾನವೀಯತೆ, ದಯೆ, ಜೀವ ಪ್ರೀತಿ ನಮಗೆ ಕೊಡು ಎಂದು ಕೇಳಬೇಕು. ಬಸವಣ್ಣನವರನ್ನು ಪ್ರತಿಕ್ಷಣವೂ ಬರಮಾಡಿಕೊಳ್ಳಬೇಕು. ನಮ್ಮೊಳಗೆ ಬಸವಣ್ಣ ಬಾರದೇ ಹೋದರೆ ಶಕ್ತಿಹೀನರಾಗುತ್ತೇವೆ. ಬಸವಣ್ಣ ಎಂದರೆ ಶಕ್ತಿ ನಮಗೆ ಬಸವತನ ಬೇಕು’ ಎಂದು ಪ್ರತಿಪಾದಿಸಿದರು.‘ನಮ್ಮೊಳಗೆ ಬಸವನ ಸಾಮರ್ಥ್ಯ ಸೇರಿದರೆ ಬದುಕು ಘನವಾಗುತ್ತದೆ. ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ ಎನ್ನುವ ಹಾಗೆ ಬಯಲ ರೂಪ ಮಾಡಬಲ್ಲಾತನೇ ಲಿಂಗಾನುಭವಿ’ ಎಂದು ಶರಣರು ಉಲ್ಲೇಖಿಸಿದರು. ‘ಬಸವಣ್ಣನನ್ನು ಹೊಗಳುವುದರಿಂದ ಬಸವಣ್ಣ ದೊಡ್ಡವನಾಗುವುದಿಲ್ಲ. ನಾವು ನೀವು ಬಸವಣ್ಣನಂತೆ ದೊಡ್ಡವರಾಗಬೇಕು’ ಎಂದರು.‘ಬಸವಣ್ಣ ಶ್ರೇಷ್ಠ ಸಮಾಜಸುಧಾರಕ’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಪ್ರೊ.ಸಿ.ವಿ. ಸಾಲಿಮಠ ಅವರು, ‘ಬಸವಣ್ಣ ಮತ್ತು ಗಾಂಧೀಜಿಯವರ ಬಗ್ಗೆ ರಚನೆಯಾಗಿರುವಷ್ಟು ಗ್ರಂಥಗಳು ಬೇರೆ ಯಾರ ಬಗ್ಗೆಯೂ ಆಗಿಲ್ಲ. ಕಾರಣ ಅವರಿಬ್ಬರು ಮಾನವೀಯತೆಯ ತಳಹದಿಯ ಮೇಲೆ ಸಮಾಜವನ್ನು ನೋಡಿದವರು. ಬಸವಣ್ಣ ಎಲ್ಲ ವರ್ಗದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ತನ್ನ ಉಸಿರಾಗಿಸಿ ಕೊಂಡರು. ಬಸವಣ್ಣನವರ ಯಶಸ್ಸಿಗೆ ಅವರು ಬಳಸಿದ ಕನ್ನಡ ಭಾಷೆಯೂ ಪ್ರಮುಖ ಕಾರಣ’ ಎಂದರು.ಸಮಕಾಲೀನ ಸಂದರ್ಭದಲ್ಲಿ ಬಸವಣ್ಣನವರು ವಿಷಯ ಕುರಿತು ಮಾತನಾಡಿದ ಶೈಲಾ ಜಯಕುಮಾರ್, ‘12ನೇ ಶತಮಾನದಿಂದ ಇಲ್ಲಿಯವರೆವಿಗೆ ೯೦೦ ವರ್ಷಗಳ ಅಂತರವಿದ್ದರೂ ಬಸವಣ್ಣನ ವಿಚಾರಧಾರೆಗಳು ಸದಾ ಬಳಕೆಯಾಗುತ್ತಲೇ ಇವೆ. ಜನಸಾಮಾನ್ಯರ ದೃಷ್ಟಿಯಿಂದ ಬಸವಣ್ಣ ದೇವರು, ವೈಚಾರಿಕ ವ್ಯಕ್ತಿ. ಸಾಹಿತಿಗಳ ದೃಷ್ಟಿಯಿಂದ ಕವಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ರಾಂತಿ ಮಾಡಿದವರು. ಎಲ್ಲವೂ ಇದ್ದು ಸಾಮಾನ್ಯರಂತೆ ಬದುಕಿದವರು ಅವರು. ಸಂಪ್ರದಾಯ ಧಿಕ್ಕರಿಸಿ ಅರ್ಥಪೂರ್ಣ ಬದುಕನ್ನು ತೋರಿಸಿದವರು. ಕಾಯಕದಿಂದ ಸ್ವಚ್ಛ ಬದುಕು ಸಾಧಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ಶೀಲ, ಶಿಸ್ತು, ಸಂಯಮ ಮತ್ತು ಸೌಜನ್ಯ ಈ ನಾಲ್ಕು ಮೌಲ್ಯಗಳನ್ನು ನಂಬಿದ ಶರಣ’ ಎಂದು ವಿವರಿಸಿದರು.ವೀರಶೈವ ಸಮಾಜದ ಅಧ್ಯಕ್ಷ ಶಿವಪ್ರಕಾಶ್, ಮುತ್ತಣ್ಣ, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರುದ್ರೇಶ್ ಐಗಳ್, ನಾಗರಾಜ ಸಂಗಂ, ಕೆಇಬಿ ಷಣ್ಮುಖಪ್ಪ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಸ್.ಮಹಾಂತಪ್ಪ ಅವರ ಬಸವಪ್ರಭೆ  ಭಾಗ-–೩ ಪುಸ್ತಕ ಬಿಡುಗಡೆ ಮಾಡಲಾಯಿತು.ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಎಸ್.ವೀರೇಶ್ ಸ್ವಾಗತಿಸಿದರು. ಜಿ.ಸಿ. ಮಲ್ಲಿಕಾರ್ಜುನಪ್ಪ ನಿರೂಪಿಸಿದರು. ಮೋಕ್ಷಾರುದ್ರಸ್ವಾಮಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.