‘ಬುಡಕಟ್ಟು ಜನರಿಗೂ ಮೂಲ ಸೌಲಭ್ಯ ಕಲ್ಪಿಸಿ’

7

‘ಬುಡಕಟ್ಟು ಜನರಿಗೂ ಮೂಲ ಸೌಲಭ್ಯ ಕಲ್ಪಿಸಿ’

Published:
Updated:

ಹಾಸನ: ‘ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಒಟ್ಟು 51 ಪಂಗಡಗಳಿದ್ದು, ಈ ಪಂಗಡಕ್ಕೆ ಬರಬೇಕಾದ ಸೌಲಭ್ಯದ ಹೆಚ್ಚಿನ ಪಾಲನ್ನು ನಾಯಕ ಜನಾಂಗ­ದವರೇ ಕಬಳಿಸುತ್ತಿದ್ದಾರೆ. ಆದ್ದರಿಂದ ನಮಗೂ ಒಳ ಮೀಸಲಾತಿ ನೀಡಬೇಕು’ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಒತ್ತಾಯಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಸಂಚಾಲಕ ಹೂರಾಜ್‌, ‘ಪರಿಶಿಷ್ಟ ಪಂಗಡದಲ್ಲಿ ಒಟ್ಟು 12ನ್ನು ಬುಡಕಟ್ಟು ಜನಾಂಗಗಳೆಂದು ಗುರುತಿಸಿದ್ದರೂ ಅವುಗಳಲ್ಲಿ ಮೂರು ಪಂಗಡಗಳಿಗೆ ಮಾತ್ರ ಸೌಲಭ್ಯಗಳು ಲಭಿಸು­ತ್ತಿವೆ. ಎಲ್ಲ 12 ಜನಾಂಗದವರಿಗೂ ಸೌಲಭ್ಯಗಳನ್ನು ವಿಸ್ತರಿಸಬೇಕು.ಶೇ 70ರಷ್ಟು ಬುಡಕಟ್ಟು ಜನಾಂಗದವರಿಗೆ ಇನ್ನೂ ಭೂಮಿ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದಾಗಿ ಅವರಿಗೆ ಸರ್ಕಾರದ ಯಾವ ಸೌಲಭ್ಯಗಳೂ ಲಭಿಸದಂತಾಗಿದೆ. ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ನಮ್ಮನ್ನು ಆದಿಮಾನವರಂತೆ ಕಾಣಲಾಗುತ್ತಿದೆಯೇ ವಿನಃ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಆಗಿಲ್ಲ. ರಾಜಕೀಯ ಪ್ರಾತಿನಿಧ್ಯವನ್ನು ನಾಯಕ ಜನಾಂಗದವರೇ ಅನುಭವಿಸುತ್ತಿದ್ದಾರೆ. ನಮ್ಮಲ್ಲಿರುವ ಸುಶಿಕ್ಷಿತರಿಗೆ ಉದ್ಯೋಗವೂ ಸಿಗುತ್ತಿಲ್ಲ’ ಎಂದರು.‘ಶತಮಾನಗಳಿಂದ ಕಾಡು ಪ್ರಾಣಿಗಳೊಂದಿಗೇ ಬದುಕುತ್ತ, ನಮ್ಮ ಅರಣ್ಯ ಸಂರಕ್ಷಣೆ ಮಾಡಿದ್ದು ಬುಡಕಟ್ಟು ಸಮುದಾಯದವರೇ ವಿನಃ ಅರಣ್ಯ ಇಲಾಖೆಯವರಲ್ಲ. ಹೀಗಿರುವಾಗ ನಮ್ಮನ್ನು ಅರಣ್ಯದಿಂದ ಒಕ್ಕಲೆಬ್ಬಿಸುವುದು ಎಷ್ಟು ಸರಿ? ಇದರ ಬದಲು ನಮ್ಮಲ್ಲಿರುವ ಔಷಧ ಜ್ಞಾನವನ್ನು ಜನರಿಗೆ ತಲುಪಿಸಲು ಸರಿಯಾದ ವೇದಿಕೆ ಕಲ್ಪಿಸಿ ಕೊಡಬೇಕು. ಸರ್ಕಾರ ಆಗಾಗ ಆಯೋಜಿಸುವ ಪ್ರದರ್ಶನಗಳಲ್ಲಿ ನಮಗೂ ಮಳಿಗೆ ಹಾಕಲು ಅವಕಾಶ ನೀಡಿ ಮುಖ್ಯ­ವಾಹಿನಿಗೆ ತರುವ ಕೆಲಸ ಮಾಡಬೇಕು’ ಎಂದರು.‘ಒಂದು ಜನಾಂಗವನ್ನು ‘ಕ್ರಿಮಿನಲ್‌’ ಎಂದು ಗುರುತಿಸು­ವುದನ್ನು 1962ರಲ್ಲಿಯೇ ನಿಷೇಧಿಸ­ಲಾ­ಗಿದೆ. ಆದರೆ, ಈಗಲೂ ಕೆಲವು ಅಧಿಕಾರಿಗಳು ಬುಡಕಟ್ಟು ಜನಾಂಗವನ್ನು ‘ಕ್ರಿಮಿನಲ್‌ ಟ್ರೈಬ್ಸ್‌’ ಎಂದು ಕರೆಯುತ್ತಿದ್ದಾರೆ. ಒಂದೆರಡು ಪುಸ್ತಕಗಳಲ್ಲೂ ಇದೇ ಪದ ಬಳಕೆಯಾಗಿದೆ. ಇಂಥವರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಬೇಕು. ಇದೇ ಅಲ್ಲದೆ ಇನ್ನೂ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ. 26ರಂದು ಒಕ್ಕೂಟದ ನೇತೃತ್ವದಲ್ಲಿ ಹಾಸನದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳ­ಲಾಗಿದೆ’ ಎಂದು ಹೂರಾಜ ತಿಳಿಸಿದರು.ಒಕ್ಕೂಟದ ಸಂಚಾಲಕರಾದ ಅನಿಲ್‌, ಇಂದ್ರಾಣಿ, ಆಶೀರ್ವಾದ್‌, ತ್ರಿವೇಣಿ, ಮನೋಜ್‌ ಇದ್ದರು.ಅರ್ಜಿ ಆಹ್ವಾನ

ಮೈಸೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಜಂಟಿಯಾಗಿ ದಸರಾ ವಸ್ತುಪ್ರದರ್ಶನದಲ್ಲಿ ‘ರಾಷ್ಟ್ರೀಯ ಕೈಗಾರಿಕಾ ಪ್ರದರ್ಶನ’ ಆಯೋಜಿಸಿವೆ.ಸಣ್ಣ ಉದ್ಯಮಗಳಿಂದ ತಯಾರಿಸಲಾಗುವ ಎಲೆಕ್ಟ್ರಾನಿಕ್ಸ್ ಉತ್ಪನ್ನ, ನವೀಕರಿಸ­ಬಹು­ದಾದ ಇಂಧನ ಮೊದಲಾದ ಕೈಗಾರಿಕಾ ಉತ್ಪನ್ನ­ಗಳ ಪ್ರದರ್ಶನ ಹಾಗೂ ಉತ್ಪಾದಕರಿಂದ ಗ್ರಾಹಕರಿಗೆ ನೇರ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಸೆ. 25 ಕೊನೆ ದಿನ. ಮೊ 99864 44654 ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry