ಶುಕ್ರವಾರ, ಜೂನ್ 25, 2021
29 °C
ರಾಜ್ಯಮಟ್ಟದ ನೃತ್ಯ, ಪ್ರದರ್ಶನ ಕಲೆ ಸಂಪನ್ನ

‘ಬುಡಕಟ್ಟು ಸಂಸ್ಕೃತಿ ಪವಿತ್ರವಾದದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ‘ಆಧುನಿಕತೆಯ ವೇಗದಲ್ಲಿ ನಶಿಸಿಹೋಗುತ್ತಿರುವ ಬುಡಕಟ್ಟು ಸಂಸ್ಕೃತಿ ಬಗ್ಗೆ ಯೋಚನೆ ಮಾಡುವ ಈಗಿನ ಕಾಲಘಟ್ಟದಲ್ಲಿ ಆ ಸಂಸ್ಕೃತಿಯಲ್ಲೇ ಜೀವನಸತ್ವವನ್ನು ಕಂಡ ಕಲಾವಿದರ ಭವಿಷ್ಯದ ಬಗ್ಗೆಯೂ ಚಿಂತನೆ ಆಗಬೇಕಾಗಿದೆ’ ಎಂದು  ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.ನಗರದ ಹಳೆದಾಂಡೇಲಿಯಲ್ಲಿ  ಕಳೆದ ಐದು ದಿನಗಳಿಂದ ನಡೆಯುತ್ತಿರುವ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ತಮಗಾಗುತ್ತಿರುವ ಶೋಷಣೆ, ಸಾಮಾಜಿಕ ಅನ್ಯಾಯವನ್ನು ಸಹಿಸಿ ಕೊಂಡು ಆ ನೋವಿನಿಂದ ಹೊರ ಬರಲು ತಮ್ಮದೇ ಆದ ಶೈಲಿಯ ದಾಟಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳುವಂತಹ ಬುಡಕಟ್ಟು ಜನರ ಮನೋಧರ್ಮ ನಿಜಕ್ಕೂ ಶ್ಲಾಘನೀಯ. ಈ ನಿಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿ ಪವಿತ್ರವಾದ ಸಂಸ್ಕೃತಿ’ ಎಂದರು.‘ಬುಡಕಟ್ಟು ಜನರು ತಮ್ಮ ಬದುಕಿನ ಉದ್ದಗಲಕ್ಕೂ ಶೋಷಣೆಗೊಂಡರೂ ಪ್ರಕೃತಿ ಸಂಪತ್ತಿನ ನಡುವೆ ಕಲೆಗಳನ್ನು ಆರಾಧಿಸುವ ಮೂಲಕ ತಮ್ಮ ನೋವುಗಳನ್ನು ಶಮನಗೊಳಿಸುತ್ತಿ ದ್ದರು. ಆದುನಿಕತೆಯ ಅರ್ಭಟದಲ್ಲಿ ಈ ಉನ್ನತ ಸಂಸ್ಕೃತಿ ಕ್ಷೀಣಗೊಳ್ಳುತ್ತಿರು ವುದು ವಿಷಾದದ ಸಂಗತಿ. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದರ ಜೊತೆಗೆ ಇದನ್ನು ದಾಖಲಿಸಿಕರಿಸುವ ಸಾಹಸಕ್ಕೆ ಕೈಹಾಕಿರುವ ಹಂಪಿ ವಿಶ್ವವಿದ್ಯಾಲಯದ ಕಾರ್ಯ ಪ್ರಶಂಸನೀಯ’ ಎಂದರು.ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ ಮಾತನಾಡಿ, ‘ಕಾಡಿನ ಬದುಕನ್ನು ಜತನ ಮಾಡಿಕೊಂಡಿರುವ ಆದಿವಾಸಿಗಳ ಬದುಕು ನಿಜವಾಗಿಯೂ ಶ್ರೇಷ್ಠ ಬದುಕಾಗಿದೆ. ತಮಗಾದ ನೋವುಗಳನ್ನು ಜೀರ್ಣಿಸಿಕೊಂಡು ಇನ್ನೊಬ್ಬರನ್ನು ನಗಿಸುವ ಆದಿವಾಸಿಗಳ ಜೀವನ ಕ್ರಮ ಎಲ್ಲರಿಗೂ ಅನುಕರಣೀಯ.ದೇವರತ್ತ ಹೋಗುವುದರ ಬದಲು ದೈವವನ್ನೆ ಸಂಬಂಧಿಯನ್ನಾಗಿಸಿದ ಅದ್ಭುತ ಸಂಸ್ಕೃತಿ ನಮ್ಮ ಬುಡಕಟ್ಟು ಸಂಸ್ಕೃತಿ. ಇಂದು ಬದುಕು ಬದಲಾಗುತ್ತಿಲ್ಲ, ಆದರೆ ಬದುಕಿನ ಕ್ರಮ ಬದಲಾಗುತ್ತಿದೆ ಎಂದ ಅವರು ಆಧುನೀಕತೆಯಲ್ಲಿ ಸಾಗುತ್ತಿರುವ ಇಂದಿನ ಸಮಾಜದಲ್ಲಿ ಕಾಡಿನ ಮನುಷ್ಯನನ್ನು ಪೇಟೆಗೆ ಕರೆ ತಂದು ಕೊನೆಗೊಮ್ಮೆ ಬದುಕಿಗೆ ದಾರುಣ ಅಂತ್ಯ ಹಾಡಿದ ಘಟನೆ ಇನ್ನು ಮಾಸಿಲ್ಲ ಎಂದರಲ್ಲದೇ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವಂತಹ ಮಹೋನ್ನತ ಕಾರ್ಯಕ್ಕೆ ಕೈಹಾಕಿದ ಹಂಪಿ ವಿಶ್ವವಿದ್ಯಾಲಯದ ಘನ ಕಾರ್ಯ ಶ್ಲಾಘನೀಯ’ ಎಂದರು.ಹಂಪಿ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಸುಭಾಷ್ ಸಿಂಗ್ ಜಮಾದಾರ್ ಮಾತನಾಡಿ, ‘ಅಮೂಲ್ಯ ಕಲೆ, ಸಂಸ್ಕೃತಿಗಳನ್ನೊಳ ಗೊಂಡ ಬುಡಕಟ್ಟು ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಯನ್ನು ಉನ್ನತಿಕರಿಸಲು ಸರ್ಕಾರ ಮುಂದಾಗಬೇಕು’ ಎಂದರು.ಜೇನುಕುರುಬರ ನಾಯಕ ಸೋಮಣ್ಣ ಮಾತನಾಡಿ, ‘ಈ ದೇಶದ ಸಾಂಸ್ಕೃತಿಕ ಶಕ್ತಿಯಾಗಿರುವ ಬುಡಕಟ್ಟು ಸಂಸ್ಕೃತಿಯ ರಕ್ಷಣೆಯ ಬಗ್ಗೆ ಸರ್ಕಾರ ಕ್ರಮವನ್ನು ಕೈಗೊಳ್ಳುವುದರ ಜೊತೆಗೆ ಆಯಾಯ ಬುಡಕಟ್ಟುಗಳು ತಮ್ಮ ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.ಎರವರ ಬುಡಕಟ್ಟಿನ ಪರವಾಗಿ ಗೋಪಮ್ಮ, ಕುಣಬಿ ಸಮುದಾಯದ ಪರವಾಗಿ ಸುಭಾಷ ಗಾವಡ, ಗೌಳಿ ಸಮುದಾಯದ ಪರವಾಗಿ ಬಾಗು ದಾಕು ಕೊಳಾಪ್ಟೆ, ಸಿದ್ದಿ ಸಮುದಾಯದ ಪರವಾಗಿ ದಿಯೋಗ್‌ ಸಿದ್ದಿ, ಸೋಲಿಗ ಸಮುದಾಯದ ಬಸವರಾಜು, ವಿದ್ವಾಂಸ ವೆಂಕಟೇಶಮೂರ್ತಿ ಮಾತನಾಡಿದರು. ವೇದಿಕೆಯಲ್ಲಿ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್.ಪರಡ್ಡಿ ಉಪಸ್ಥಿತರಿದ್ದರು.ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ಎ.ಎಸ್.ಪ್ರಭಾಕರ ವಂದಿಸಿದರು.ಕಮ್ಮಟದ ನಿರ್ಣಯಗಳು

ಐದು ದಿನಗಳ ಬುಡಕಟ್ಟು ನೃತ್ಯ ಕಮ್ಮಟದಲ್ಲಿ ಸರ್ವ ಬುಡಕಟ್ಟುಗಳೊಂದಿಗೆ ಚರ್ಚಿಸಿ ಐದು ಬೇಡಿಕೆಗಳನ್ನೊಳಗೊಂಡ ನಿರ್ಣಯಗಳನ್ನು ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ.ಎ.ಎಸ್.ಪ್ರಭಾಕರ ಮಂಡಿಸಿದರು.

ವರ್ಷಕ್ಕೆ ಮೂರು ಬಾರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬುಡಕಟ್ಟು ಸಮ್ಮೇಳನ ನಡೆಯಬೇಕು. ತಿಂಗಳಿಗೆ ಒಂದು ಬುಡಕಟ್ಟು ಕುಟುಂಬವನ್ನು ಆಯ್ಕೆಮಾಡಿ ಮೂರು ತಿಂಗಳವರೆಗೆ ಉಚಿತ ತರಬೇತಿಯನ್ನು ನೀಡಬೇಕು. ಬುಡಕಟ್ಟು ಕಲಾ ತಂಡಕ್ಕೆ ವೇಷಭೂಷಣಗಳನ್ನು ಸರ್ಕಾರ ಒದಗಿಸಿಕೊಡಬೇಕು.  ಪ್ರಮುಖ ಬುಡಕಟ್ಟು ಕಲಾವಿದರುಗಳಿಗೆ ಮಾಸಾಶನ ನೀಡಬೇಕು ಹಾಗೂ ಪ್ರಮುಖ ಬುಡಕಟ್ಟು ಕಲಾ ತಂಡಗಳಿಗೆ ವಾರ್ಷಿಕ ಸಹಾಯಧನವನ್ನು ಒದಗಿಸಿಕೊಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.