‘ಬುದ್ಧಿವಂತ ಸಾರಿಗೆ ವ್ಯವಸ್ಥೆ’ಯ ಕಣ್ಗಾವಲು

7
ಬಿಎಂಟಿಸಿ: 4 ತಿಂಗಳಲ್ಲಿ ಯಲಹಂಕ ಡಿಪೊದಲ್ಲಿ ಪ್ರಾಯೋಗಿಕ ಜಾರಿ

‘ಬುದ್ಧಿವಂತ ಸಾರಿಗೆ ವ್ಯವಸ್ಥೆ’ಯ ಕಣ್ಗಾವಲು

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ನಿರ್ವಹಣಾ ವ್ಯವಸ್ಥೆ, ಪ್ರಯಾಣಿಕರು- ನಿರ್ವಾಹಕರ ನಡುವಿನ ಜಟಾಪಟಿ, ಕೊನೆಯ ಕ್ಷಣದಲ್ಲಿ ಬಸ್‌ಗಳ ರದ್ದು ಮತ್ತಿತರ ಸಂಗತಿಗಳ ಬಗ್ಗೆ ಪ್ರತಿನಿತ್ಯ ದೂರುವವರು ನೂರಾರು ಮಂದಿ. ಬಸ್‌ಗಳ ಕಾರ್ಯಾಚರಣೆಯನ್ನು ಸಮಗ್ರವಾಗಿ ನಿರ್ವಹಿಸಲು ಕಣ್ಗಾವಲು ವ್ಯವಸ್ಥೆ ಇರಲಿಲ್ಲ. ಇದೀಗ ಬಿಎಂಟಿಸಿ `ಬುದ್ಧಿವಂತ ಸಾರಿಗೆ ವ್ಯವಸ್ಥೆ (ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್)' ಅನುಷ್ಠಾನ ಮಾಡುವ ಮೂಲಕ `ದೂರುಮುಕ್ತ'ವಾಗಲು ಹೊರಟಿದೆ.40 ಡಿಪೊಗಳಲ್ಲಿ ಅತೀ ಹೆಚ್ಚು ಸಮಸ್ಯೆ ಇರುವ ಯಲಹಂಕ ಡಿಪೊದಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಬಿಎಂಟಿಸಿ ಉದ್ದೇಶಿಸಿದೆ. 3-4 ತಿಂಗಳಲ್ಲಿ ಇಲ್ಲಿ `ಬುದ್ಧಿವಂತ ಸಾರಿಗೆ ವ್ಯವಸ್ಥೆ' ಕಾರ್ಯಾಚರಣೆ ಆರಂಭಿಸಲಿದೆ. ಇಲ್ಲಿನ ಯಶಸ್ಸು ನೋಡಿಕೊಂಡು ಉಳಿದ ಡಿಪೊಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಅದಕ್ಕೆ ಬೇಕಿರುವ ಪರಿಕರಗಳ ಅಳವಡಿಕೆಗೆ ಒಂಬತ್ತು ತಿಂಗಳ ಕಾಲಾವಕಾಶ ನೀಡಲಾಗಿದೆ. ಜಿಪಿಎಸ್ ಬಳಸಿದ ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್ ನೆರವಿನಿಂದ ಕಾರ್ಯಾಚರಣೆಯ ಸಾಮರ್ಥ್ಯ ವೃದ್ಧಿಯಾಗಲಿದೆ ಎನ್ನುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.ಐಟಿಎಸ್ ಅನುಷ್ಠಾನದ ಸಂಬಂಧ ಸಂಸ್ಥೆ ಮಾರ್ಚ್‌ ನಲ್ಲಿ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಮುಂಬೈಯ ಟ್ರೈಮ್ಯಾಕ್ಸ್ ಐಟಿ ಇನ್ಫಾಸ್ಟ್ರಕ್ಚರ್ ಆಂಡ್ ಸರ್ವಿಸಸ್ ಲಿಮಿಟೆಡ್ ಹಾಗೂ ಹೈದರಾಬಾದಿನ ಇಸಿಐ ಎಂಜಿನಿಯರಿಂಗ್ ಆಂಡ್ ಕನ್‌ಸ್ಟ್ರಕ್ಷನ್ ಕಂಪೆನಿಗಳು ಪಾಲ್ಗೊಂಡಿದ್ದವು. ಟ್ರೈಮ್ಯಾಕ್ಸ್ ಕಂಪೆನಿ ಮಾತ್ರ ತಾಂತ್ರಿಕ ಬಿಡ್‌ನಲ್ಲಿ ಉಳಿಯಿತು. ಐದು ವರ್ಷಗಳ ಕಾರ್ಯಾ ಚರಣೆಗೆ ಟ್ರೈಮ್ಯಾಕ್ಸ್ ಸಂಸ್ಥೆಯ ಟೆಂಡರ್ ಮೊತ್ತ ರೂ69,98,89,677 ಆಗಿತ್ತು. ಚೌಕಾಸಿಯ ಬಳಿಕ ಟೆಂಡರ್ ಮೊತ್ತವನ್ನು ರೂ69,86,80,500ಕ್ಕೆ ಅಂತಿಮಗೊಳಿಸ ಲಾಯಿತು.ಒಪ್ಪಂದದ ಪ್ರಕಾರ ಈ ಸಂಸ್ಥೆ ಯೋಜನೆಯ ವಿನ್ಯಾಸ ರೂಪಿಸಿ ಅಭಿವೃದ್ಧಿ, ಪರೀಕ್ಷೆ, ತಪಾಸಣೆ, ಅಳವಡಿಕೆ, ಕಾರ್ಯನಿರ್ವಹಣೆ, ಸಂವಹನ, ಜಾಲ, ತರಬೇತಿ, ನಿರ್ವಹಣೆಯನ್ನು ನೋಡಿಕೊಳ್ಳಬೇಕಿದೆ. ಈಗಿನ ಸಮಸ್ಯೆ ಏನು?ಬಿಎಂಟಿಸಿಯಲ್ಲಿ ಇದೀಗ 6,500 ಬಸ್‌ಗಳು ಇವೆ. ರಸ್ತೆ ವಿಸ್ತರಣೆ, ಸಂಚಾರ ದಟ್ಟಣೆ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ಬಸ್‌ಗಳ ಸಂಚಾರದಲ್ಲಿ ವಿಳಂಬವಾಗುತ್ತಿರುವುದು ಸಾಮಾನ್ಯ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಬಿಎಂಟಿಸಿ ಬಸ್‌ಗಳು ತುಂಬಿ ತುಳುಕಿದರೆ, ಉಳಿದ ಹೊತ್ತಿನಲ್ಲಿ ಬಸ್‌ಗಳಲ್ಲಿ ಸಿಗುವ ಲಾಭ ಕಡಿವೆು. ಎರಡು ಬಸ್ ನಿಲ್ದಾಣಗಳ ನಡುವಿನ ಅಂತರ, ಪ್ರಯಾಣ ಅವಧಿ, ಬಸ್ ನಿಲ್ದಾಣಗಳ ಸಂಖ್ಯೆ ಮತ್ತಿತರ ವಿಷಯಗಳ ಬಗ್ಗೆ 15 ವರ್ಷಗಳ ಹಿಂದೆ ಸಮೀಕ್ಷೆ ನಡೆಸಿ `ನಮೂನೆ-4' ತಯಾರಿಸಿ ನಿರ್ವಾಹಕರಿಗೆ ನೀಡಲಾಗಿದೆ. ಇಲ್ಲಿ ನಿಗದಿಪಡಿಸಿರುವ ಮಾನದಂಡದ ಪ್ರಕಾರವೇ ಬಸ್‌ಗಳು ಕಾರ್ಯಾಚರಣೆ ನಡೆಸಬೇಕಿದೆ.ಈ ವ್ಯವಸ್ಥೆ ಪ್ರಕಾರ ಗಡಿಬಿಡಿಯಲ್ಲಿ ಟ್ರಿಪ್‌ಗಳ ರದ್ದು, ಹೆಚ್ಚುವರಿ ಬಸ್‌ಗಳ ನಿಯೋಜನೆ ಕಷ್ಟ. ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಹಲವು ಬಸ್‌ಗಳು ಒಂದೇ ಮಾರ್ಗದಲ್ಲಿ ಸಿಲುಕಿಕೊಳ್ಳುವುದು ಉಂಟು. ಇಂತಹ ಸಂದರ್ಭದಲ್ಲಿ ಬಸ್‌ಗಳ ಮಾರ್ಗ ಬದಲಾವಣೆ ಮಾಡುವ ವ್ಯವಸ್ಥೆಯೂ ಈಗಿಲ್ಲ.ಇನ್ನೊಂದೆಡೆ ಸಂಸ್ಥೆಯ ಸಿಬ್ಬಂದಿಗೆ ಆದಾಯ ಹೆಚ್ಚಿಸುವ ಒತ್ತಡವೂ ಇದೆ. ಇದರಿಂದಾಗಿ ಜನರಿಗಾಗಿ ಕಾದು ಬಸ್‌ಗಳು ವಿಳಂಬವಾಗಿ ಹೊರಡುವುದು ಉಂಟು. ಪ್ರಯಾಣಿಕರು ತುಂಬಾ ಹೊತ್ತು ಕಾದರೂ ಬಸ್‌ಗಳು ಬರುವುದಿಲ್ಲ. ನಿಲ್ದಾಣದ ಹತ್ತಿರದಲ್ಲೇ ಬಸ್ ಇದ್ದರೂ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಇಲ್ಲ.ಕೆಲವು ಬಾರಿ ಒಂದೇ ಮಾರ್ಗದ ನಾಲ್ಕೈದು ಬಸ್‌ಗಳು ಬೆನ್ನು ಬೆನ್ನಿಗೆ ನಿಲ್ದಾಣ ಪ್ರವೇಶಿಸುವುದು ಉಂಟು. ಇದರಿಂದ ಸಂಸ್ಥೆಗೂ ನಷ್ಟ, ಪ್ರಯಾಣಿಕರಿಗೂ ಲಾಭ ಇಲ್ಲ. ಈ ಎಲ್ಲ ಸಮಸ್ಯೆಗಳಿಗೆ `ಬುದ್ಧಿವಂತ ಸಾರಿಗೆ ವ್ಯವಸ್ಥೆ'ಯ ಮೂಲಕ ಉತ್ತರ ದೊರಕಲಿದೆ ಎಂಬ ವಿಶ್ವಾಸದಲ್ಲಿ ಬಿಎಂಟಿಸಿ ಇದೆ.ಐಟಿಎಸ್‌ನಲ್ಲಿ ಏನೇನು ಇರಲಿದೆ?

ವಾಹನ ಶೋಧ ವ್ಯವಸ್ಥೆ (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್): ಈ ವ್ಯವಸ್ಥೆಯ ಮೂಲಕ 6,500 ಬಸ್‌ಗಳಿಗೂ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಯಿಂದಲೇ ಮೇಲ್ವಿಚಾರಣೆ ನೋಡಿಕೊಳ್ಳಲಾಗುವುದು. ಎಲ್ಲಾ ಬಸ್‌ಗಳ ಸ್ಥಿತಿಯ ಕ್ಷಣ ಕ್ಷಣದ ಮಾಹಿತಿಯನ್ನು ನಿಯಂತ್ರಣ ಕೊಠಡಿಯಲ್ಲೇ ನೋಡಬಹುದು. ಈ ವ್ಯವಸ್ಥೆ ಮೂಲಕ ಬಸ್ ಎಲ್ಲಿದೆ, ಎಷ್ಟು ಪ್ರಯಾಣಿಕರು ಇದ್ದಾರೆ ಸೇರಿದಂತೆ ಬಸ್‌ನ ಸಮಗ್ರ ಚಿತ್ರಣ ದೊರಕಲಿದೆ. ಇಲ್ಲಿ ದ್ವಿಮುಖ ಸಂವಹನಕ್ಕೆ ಅವಕಾಶ ಕಲ್ಪಿಸಲಾಗಿದೆ. ಐದು ವರ್ಷಗಳಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆ 8,500ಕ್ಕೆ ಹೆಚ್ಚಲಿದೆ. ಈ ಬಸ್‌ಗಳಲ್ಲೂ ವ್ಯವಸ್ಥೆ ಅನುಷ್ಠಾನ ಮಾಡಲು ಅನುವಾಗುವಂತೆ ಯೋಜನೆ ರೂಪಿಸಲಾಗಿದೆ.ದತ್ತಾಂಶ ಹಾಗೂ ವ್ಯವಸ್ಥೆಯ ನಿಯಂತ್ರಣ ಕೇಂದ್ರ: ಈ ಕೇಂದ್ರವು, ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬಸ್‌ಗಳ ಮಾಹಿತಿ ಪಡೆದು ಅಪಘಾತ ಸಂಭವಿಸಿದ ಸಂದರ್ಭ ದಲ್ಲಿ ಕೂಡಲೇ ಕಾರ್ಯಾಚರಣೆ ನಡೆಸುವಂತೆ ವಿನ್ಯಾಸ ಗೊಳಿಸಲಾಗಿದೆ.ಅತೀ ವೇಗದಿಂದ ಬಸ್‌ಗಳು ಸಂಚಾರ ನಡೆಸಿದಾಗ ಕಡಿವಾಣ ಹಾಕಲೂ ಸಾಧ್ಯವಾಗುವಂತೆ ರೂಪಿಸಲಾಗಿದೆ. ಒಂದೇ ಮಾರ್ಗದ ನಾಲ್ಕೈದು ಬಸ್‌ ಗಳು ಸಾಲಾಗಿ ನಿಲ್ದಾಣಕ್ಕೆ ಬರುವು ದನ್ನು ಈ ಕೇಂದ್ರದ ಮೂಲಕ ತಪ್ಪಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಸ್‌ಗಳ ವೇಳಾಪಟ್ಟಿಯಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕೂಡಲೇ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ವಿಶ್ವಾಸ.ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳು (ಇಟಿಎಂ): ಇಟಿಎಂಗಳು ನಿರ್ವಾಹಕರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲಿವೆ. ಈಗ ಹಳೆ ಟಿಕೆಟ್‌ಗಳನ್ನು ಕೊಟ್ಟು ಜನರನ್ನು ಮೋಸ ಮಾಡುವ ನಿರ್ವಾಹಕರೂ ಇದ್ದಾರೆ. ಇಂತಹ ಚಟುವಟಿಕೆ ನಡೆಸುವ ಮೂಲಕ ಸಂಸ್ಥೆಗೆ ಭಾರಿ ನಷ್ಟ ಆಗುತ್ತಿದೆ.ಎಲ್ಲ ಬಸ್‌ಗಳ ನಿರ್ವಾಹಕರಿಗೂ ಇಟಿಎಂ ಗಳನ್ನು ನೀಡಲಾಗುವುದು. ಇಲ್ಲೂ ಸಹ ಆನ್‌ಲೈನ್ ವ್ಯವಸ್ಥೆಯ ನೆರವಿನಿಂದ ಟಿಕೆಟ್ ವಿತರಣೆಯ ಕ್ಷಣ ಕ್ಷಣದ ನೈಜ ಮಾಹಿತಿ ದೊರಕಲಿದೆ. ಪ್ರಯಾಣಿಕರ ದಟ್ಟಣೆಯ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ಒದಗಿಸಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಅವಧಿಯಲ್ಲಿ ಬಸ್‌ಗಳ ಕಡಿತಕ್ಕೂ ನೆರವಾಗಲಿದೆ. ನಿರ್ವಾಹಕರು ಹಾಗೂ ಪ್ರಯಾಣಿಕರ ನಡುವಿನ `ಚಿಲ್ಲರೆ' ಜಗಳಕ್ಕೂ ಇಟಿಎಂ ಕೊನೆ ಹಾಡಲಿದೆ. ಒಟ್ಟು 10,000 ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳನ್ನು ಸಂಸ್ಥೆ ಒದಗಿಸಬೇಕಿದೆ.ಪ್ರಯಾಣಿಕರ ಮಾಹಿತಿ ವ್ಯವಸ್ಥೆ

ಈಗ ಟಿಟಿಎಂಸಿಗಳು ಹಾಗೂ ದೊಡ್ಡ ಬಸ್ ನಿಲ್ದಾಣಗಳಲ್ಲಿ ಬಸ್ ಎಷ್ಟು ಹೊತ್ತಿಗೆ ಬರಲಿದೆ ಎಂಬ ಮಾಹಿತಿ ನೀಡುವ ಸಮಗ್ರ ವ್ಯವಸ್ಥೆ ಇಲ್ಲ. ಪ್ರಯಾಣಿಕರ ಮಾಹಿತಿ ವ್ಯವಸ್ಥೆಯಡಿ 35 ದೊಡ್ಡ ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುವುದು. ಈ ಸ್ಕ್ರೀನ್‌ನಲ್ಲಿ ನಿಲ್ದಾಣಕ್ಕೆ ಬರುವ ಬಸ್ ಎಲ್ಲಿದೆ, ಯಾವ ಹೊತ್ತಿಗೆ ಬರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಪ್ರಯಾಣಿಕರು ವೀಕ್ಷಿಸಬಹುದು. ಎಸ್‌ಎಂಎಸ್ ಮೂಲಕ ಬಸ್ ಸೇವೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ವೆಬ್‌ಸೈಟ್ ನೆರವಿನಿಂದ ದೂರುಗಳನ್ನು ಸಲ್ಲಿಸಿ ಉತ್ತರ ಕಂಡುಕೊಳ್ಳಬಹುದು. ಡಿಪೊ ನಿರ್ವಹಣಾ ವ್ಯವಸ್ಥೆ: ಈ ವ್ಯವಸ್ಥೆ ಕೇಂದ್ರ ನಿಯಂತ್ರಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಲಿದೆ. ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಡಿಪೊ ಮ್ಯಾನೇಜರ್‌ಗಳು ಕೆಲವು ಚಾಲಕರು ಹಾಗೂ ನಿರ್ವಾಹಕರಿಗೆ ಉತ್ತಮ ಮಾರ್ಗಗಳನ್ನು ನಿಯೋಜಿಸುವುದು ಉಂಟು. ಹೊಂದಾಣಿಕೆ ಮಾಡಿಕೊಳ್ಳದ ಸಿಬ್ಬಂದಿಯನ್ನು ನಷ್ಟದ ಮಾರ್ಗಗಳಿಗೆ ನಿಯೋಜಿಸುವ ಪರಿಪಾಠವೂ ಇದೆ. ಇಂತಹ ಪ್ರವೃತ್ತಿಗೆ ಡಿಪೊ ನಿರ್ವಹಣಾ ವ್ಯವಸ್ಥೆ ಕೊನೆ ಹಾಕಲಿದೆ.‘ಶೇ 20ರಷ್ಟು ಆದಾಯ ಹೆಚ್ಚಳ ನಿರೀಕ್ಷೆ”

ಬುದ್ಧಿವಂತ ಸಾರಿಗೆ ಸಾರಿಗೆ ವ್ಯವಸ್ಥೆ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗಲಿದೆ. ಈಗಿನ ರಗಳೆಗಳಿಗೆ ಅಂತ್ಯ ಹಾಡಲು ಸಾಧ್ಯವಾಗಲಿದೆ. ಸಂಸ್ಥೆಯ ಆದಾಯದಲ್ಲೂ ಶೇ 20ರಷ್ಟು ಹೆಚ್ಚಳ ಆಗಲಿದೆ ಎಂದು ಅಂದಾಜು ಮಾಡಲಾಗಿದೆ.ತಾರತಮ್ಯಕ್ಕೆ ಅವಕಾಶ ಇಲ್ಲದೆ ಉತ್ತಮ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಬಡ್ತಿ ಸೇರಿದಂತೆ ವಿವಿಧ ರೀತಿಯ ಉತ್ತೇಜನ ನೀಡಲು ಸಾಧ್ಯವಾಗಲಿದೆ. ಮೈಸೂರು ಹಾಗೂ ನವದೆಹಲಿಯಲ್ಲಿ ಕ್ಷಿಪ್ರ ಸಾರಿಗೆ ವ್ಯವಸ್ಥೆ ಇದೆ. ಮೈಸೂರಿನಲ್ಲಿ ಪೂರ್ಣಪ್ರಮಾಣ ದಲ್ಲಿ ಅನುಷ್ಠಾನ ಆಗಿಲ್ಲ. ನವದೆಹಲಿಯಲ್ಲಿ 400 ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.ನಮ್ಮಲ್ಲಿ ಪ್ರಯಾಣಿಕರ ಆದ್ಯತೆಗಳಿಗೆ ಮೊದಲ ಆದ್ಯತೆ ನೀಡಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಗುತ್ತಿಗೆ ಪಡೆದಿರುವ ಸಂಸ್ಥೆಯ ಕಾರ್ಯಶೈಲಿ ಗಮನಿಸಿ ಪ್ರತಿತಿಂಗಳು ಹಣ ಪಾವತಿಸಲಾಗುತ್ತದೆ. ಕಾರ್ಯಾಚರಣೆ ಸಮರ್ಪಕವಾಗಿ ನಡೆಯದಿದ್ದರೆ ಮೊತ್ತ ಕಡಿತ ಮಾಡಿಯೇ ಪಾವತಿ ಮಾಡಲಾಗುವುದು.

-ಕುಮಾರ್ ಪುಷ್ಕರ್, ನಿರ್ದೇಶಕ (ಮಾಹಿತಿ ತಂತ್ರಜ್ಞಾನ), ಬಿಎಂಟಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry