‘ಭದ್ರೆ’ ಹರಿಸುವುಳೇ ಜನಪ್ರತಿನಿಧಿಗಳ ಕನಸು!

7
ಜೋಗಿಮಟ್ಟಿಯಲ್ಲಿ ಮಾದಾರ ಚನ್ನಯ್ಯ ಶ್ರೀ ನೇತೃತ್ವದಲ್ಲಿ ಸಂವಾದ

‘ಭದ್ರೆ’ ಹರಿಸುವುಳೇ ಜನಪ್ರತಿನಿಧಿಗಳ ಕನಸು!

Published:
Updated:

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತ್ವರಿತಗತಿಯ ಚಿಂತನೆ, ಜಿಲ್ಲೆಯಲ್ಲಿ ತಲೆ ಎತ್ತಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿ ಉತ್ಪನ್ನ ಹೆಚ್ಚಳಕ್ಕೆ ಪ್ರೋತ್ಸಾಹ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ...ಇವು ನಗರದ ಜೋಗಿಮಟ್ಟಿ ಗಿರಿಧಾಮದಲ್ಲಿ ಭಾನುವಾರ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಲೋಕಸಭಾ ಆಕಾಂಕ್ಷಿಗಳಿಗಾಗಿ ಹಮ್ಮಿಕೊಂಡಿದ್ದ ‘ಚಿಂತನ-ಮಂಥನ’ ಕಾರ್ಯಕ್ರಮದಲ್ಲಿ ಆಕಾಂಕ್ಷಿಗಳು ಬಿಚ್ಚಿಟ್ಟ ಕ್ರಿಯಾ ಯೋಜನೆಗಳು.ಆರಂಭದಲ್ಲಿ ಮಾತು ಶುರು ಮಾಡಿದ ಸಂಸತ್‌ ಸದಸ್ಯ ಜನಾರ್ದನ ಸ್ವಾಮಿ, ‘ಹಿಂದುಳಿದ ಹಾಗೂ ಬರಪೀಡಿತ ಪ್ರದೇಶ ಎಂಬ ಅಪಖ್ಯಾತಿಗೆ ಗುರಿಯಾಗಿರುವ ಈ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶವಿದೆ. ಚಳ್ಳಕೆರೆಯ ಕುದಾಪುರ ಕಾವಲಿನಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳು ಕೈಗೆತ್ತಿಕೊಳ್ಳಲಾಗಿದೆ ಇದರಿಂದಾಗಿ ನಿರುದ್ಯೋಗಿಗಳಿಗೆ ಸಾಕಷ್ಟು ಉದ್ಯೋಗಾವಕಾಶ ದೊರೆಯಲಿದೆ’ ಎಂದರು.ಕಾಂಗ್ರೆಸ್‌ನ ಆಕಾಂಕ್ಷಿ ಪ್ರಕಾಶ್‌ಮೂರ್ತಿ, ‘ಸಂಸತ್‌ ಸದಸ್ಯನಾದರೆ, ಅಂತರ ರಾಜ್ಯ ನದಿ ಜೋಡಣೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ’ ಎಂದರು. ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಮಾತನಾಡಿ ‘ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ ಬರುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.ಪೌರಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸ್ಪರ್ಧಿಸುತ್ತಿರುವ ಬಹುತೇಕ ಆಕಾಂಕ್ಷಿಗಳು ಪದವೀಧರರಾಗಿದ್ದಾರೆ. ಈ ನಿಟ್ಟಿನಲ್ಲಿ ಆಯ್ಕೆಯಾದವರು ಜಿಲ್ಲೆಗೆ ಬರಬೇಕಿರುವ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಆಕಾಂಕ್ಷಿ ಓ.ಶಂಕರ್, ‘ಯಾರೇ ಗೆದ್ದರೂ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಸರಿಯಾಗಿ ಅರಿಯಬೇಕು’ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಡಿ.ಎನ್. ಮೈಲಾರಪ್ಪ ಮಾತನಾಡಿ, ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ, ‘ದಶಕಗಳಿಂದ ಜಿಲ್ಲೆಯ ಚಿತ್ರಣ ಬದಲಾಗಿಲ್ಲ. ಈ ಕುರಿತು ಜಿಲ್ಲೆಯಿಂದ ಆಯ್ಕೆಯಾದವರು ಗಂಭೀರ ಚಿಂತನೆ ನಡೆಸಬೇಕು’ ಎಂದರು.ಡಾ.ತಿಪ್ಪೇಸ್ವಾಮಿ ಮಾತನಾಡಿ, ‘ನಾನು ಸಂಸತ್‌ ಸದಸ್ಯನಾಗಿ ಜೋಗಿಮಟ್ಟಿ ಗಿರಿಧಾಮವನ್ನು ಪ್ರವಾಸಿ ತಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.ನಿವೃತ್ತ ಅಧಿಕಾರಿ ವಿಜಯಕುಮಾರ್, ‘ಚುನಾವಣೆಯಲ್ಲಿ ಆಯ್ಕೆಯಾದವರು ತಮ್ಮ ಕೆಲಸದಲ್ಲಿ ಜನರನ್ನು ತೊಡಗಿಸಿಕೊಳ್ಳಬೇಕು. ಜನರ ಸಹಭಾಗಿತ್ವ ಇದ್ದಲ್ಲಿ ಅಭಿವೃದ್ಧಿ ಸಾಧ್ಯ’ ಎಂದರು.ಜೆಡಿಎಸ್ ಆಕಾಂಕ್ಷಿ ಯಶವಂತ್‌ಗೆ, ‘ಹಣವಿದ್ದವರು ಬೇರೆ ಕಡೆಯಿಂದ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಪಡೆಯುತ್ತಾರೆ ಎಂಬ ಬೇಸರ. ಹಾಗಾಗಿ ಸ್ಥಳೀಯ ಅಭ್ಯರ್ಥಿಗಳೇ ಸ್ಪರ್ಧಿಸಿ ಗೆದ್ದರೆ, ಜಿಲ್ಲೆಯ ಅಭಿವೃದ್ಧಿ ಸಹಕಾರಿಯಾಗುತ್ತದೆ’ ಎಂಬುದು ಅವರ ಅಭಿಮತ.‘ಚಿಂತನ-ಮಂಥನ‘ ಸಂವಾದದ ಉಪಸಂಹಾರ ಮಾಡಿದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ತಳ ಸಮುದಾಯದವರೇ ಆಗಿದ್ದು, ಚುನಾವಣೆಯಲ್ಲಿ ಅನಗತ್ಯ ವೆಚ್ಚ ಮಾಡುವುದು ಸರಿಯಲ್ಲ. ನಾವೂ ನಿಮ್ಮ ಜತೆ ಬರುತ್ತೇವೆ. ಜಿಲ್ಲೆಯಲ್ಲಿ ಎಲ್ಲ ಅಭ್ಯರ್ಥಿಗಳು ಪ್ರವಾಸ ಮಾಡಿ ನೀವು ಮಾಡುವ ಕೆಲಸದ ಬಗ್ಗೆ ಜನತೆಗೆ ತಿಳಿಸಿ. ಇಷ್ಟು ಜನರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಜನತೆ ತೀರ್ಮಾನಿಸುತ್ತಾರೆ’ ಎಂದು ಸಲಹೆ ಮಾಡಿದರು.ಸಂವಾದಕ್ಕೂ ಮುನ್ನ ಲೋಕಸಭಾ ಆಕಾಂಕ್ಷಿಗಳು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ವಾಮೀಜಿಯವರ ನೇತೃತ್ವದಲ್ಲಿ ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಜೋಗಿಮಟ್ಟಿಯವರೆಗೆ ಚಾರಣ ಕೈಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry