‘ಭಯೋತ್ಪಾದಕರು ಇಸ್ಲಾಂ ಧರ್ಮದವರಲ್ಲ’

ಮಂಗಳೂರು: ‘ಇಸ್ಲಾಂ ಧರ್ಮ ಶಾಂತಿಯ ಪ್ರತೀಕವಾಗಿದ್ದು, ಭಯೋತ್ಪಾದಕರು ಇಸ್ಲಾಂ ಧರ್ಮದವರಲ್ಲ. ಐಎಸ್, ಐಸಿಸ್ನಂತಹ ಉಗ್ರರು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದವರಲ್ಲ’ ಎಂದು ನಗರಾಭಿವೃದ್ಧಿ ಮತ್ತು ಹಜ್ ಖಾತೆ ಸಚಿವ ಆರ್. ರೋಷನ್ ಬೇಗ್ ಹೇಳಿದರು.
ಹಜ್ ನಿರ್ವಹಣಾ ಸಮಿತಿ ಹಾಗೂ ಕರ್ನಾಟಕ ಹಜ್ ಸಮಿತಿ ವತಿಯಿಂದ ಬಜ್ಪೆ ಹಳೆಯ ವಿಮಾನ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಜ್ ಯಾತ್ರೆಯ ವಿಮಾನಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಜ್ ಯಾತ್ರೆಗೆ ತೆರಳುವ ಪಾಕಿಸ್ತಾನದವರನ್ನು ಸೌದಿ ಅರೇಬಿಯಾದಲ್ಲಿ ನಾಲ್ಕೈದು ಬಾರಿ ತಪಾಸಣೆ ಮಾಡಲಾಗುತ್ತದೆ. ಆದರೆ, ಭಾರತೀಯ ಮುಸ್ಲಿಮರನ್ನು ಗೌರವದಿಂದ ಕಾಣಲಾಗುತ್ತಿದೆ ಎಂದ ಅವರು, ಜಗತ್ತನ್ನು ಆವರಿಸಿರುವ ಭಯೋತ್ಪಾದನೆ ಎಂಬ ಪಿಡುಗು ನಿವಾರಣೆಗೆ ಹಜ್ ಯಾತ್ರಿಕರು ಪ್ರಾರ್ಥನೆ ಮಾಡಬೇಕು ಎಂದು ಸಲಹೆ ನೀಡಿದರು.
ನಗರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಆದರೆ, ಈ ಹಜ್ ಭವನ ಕೇವಲ ಹಜ್ ಯಾತ್ರೆಯ ಸಂದರ್ಭದಲ್ಲಿ ಮಾತ್ರ ಬಳಕೆ ಆಗಬಾರದು. ಇದು ಬಹುಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಕೂಡಲೇ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೊದಲು ದೇಶದ ಜನರು, ನಾಲ್ಕು ನಗರಗಳಿಂದ ಮಾತ್ರ ಹಜ್ ಯಾತ್ರೆಗೆ ತೆರಳಬೇಕಾಗಿತ್ತು. ಗುಲಾಂ ನಬಿ ಆಜಾದ್ರು ವಿಮಾನಯಾನ ಸಚಿವರಾಗಿದ್ದಾಗ, ಬೆಂಗಳೂರಿನಿಂದಲೂ ಹಜ್ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ಮಂಗಳೂರಿನಿಂದಲೂ ಕಳೆದ 7 ವರ್ಷಗಳಿಂದ ಹಜ್ ಯಾತ್ರೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪುಣ್ಯದ ಫಲವಾಗಿ ಹಜ್ ಯಾತ್ರೆಗೆ ಅವಕಾಶ ಸಿಕ್ಕಿದೆ. ಮೆಕ್ಕಾ–ಮದೀನಾಗೆ ತೆರಳುವ ಯಾತ್ರಿಕರು, ದೇಶ, ರಾಜ್ಯ, ಜಿಲ್ಲೆಗಳು ಸುಭಿಕ್ಷವಾಗಿರಲಿ ಎಂದು ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಾಮನಾಥ ರೈ ಮಾತನಾಡಿ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಈಗಾಗಲೇ ಸುಮಾರು 2 ಎಕರೆ ಜಮೀನು ಗುರುತಿಸಲಾಗಿದೆ. ಬೆಂಗಳೂರಿನ ಹಜ್ ಘರ್ ಮಾದರಿಯಲ್ಲಿಯೇ ಮಂಗಳೂರಿನಲ್ಲೂ ಹಜ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿ, ಸರ್ವಧರ್ಮಗಳ ಜನರ ಶ್ರೇಯಸ್ಸಿಗೆ ಹಜ್ ಯಾತ್ರಿಕರು ಪ್ರಾರ್ಥನೆ ಸಲ್ಲಿಸಬೇಕು. ಯಾತ್ರೆಯ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುವುದು ಸಹಜ. ಪವಿತ್ರ ಯಾತ್ರೆಗೆ ತೆರಳಿದವರು ತಾಳ್ಮೆ ಯಿಂದ ವರ್ತಿಸಬೇಕು. ಸುರಕ್ಷಿತ ವಾಗಿ ಹಜ್ ಯಾತ್ರೆ ಪೂರೈಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎ. ಮೊಯಿದ್ದೀನ್ ಬಾವ ಮಾತನಾಡಿ, ಹಜ್ ಭವನಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ₹1 ಕೋಟಿ ನೀಡಿದ್ದಾರೆ. ಅಲ್ಲದೇ ಜಿಲ್ಲೆಯ ಬ್ಯಾರಿ ಭವನಕ್ಕೆ ₹3 ಕೋಟಿ ಅನುದಾನ ಒದಗಿಸಲಾಗಿದೆ. ಬರುವ ಬಜೆಟ್ನಲ್ಲಿ ಮಂಗಳೂರು ಹಜ್ ಭವನಕ್ಕೆ ₹5 ಕೋಟಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಾಸಕ ಅಭಯಚಂದ್ರ ಜೈನ್, ಮೇಯರ್ ಹರಿನಾಥ ಮಾತನಾಡಿದರು. ತ್ವಾಕ ಅಹಮ್ಮದ್ ಮುಸ್ಲಿಯಾರ್ ಪ್ರಾರ್ಥನೆ ಸಲ್ಲಿಸಿದರು.
ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ವಿಧಾನ ಪರಿಷತ್ ಮಾಜಿ ಸದಸ್ಯ ಮೊಹಮ್ಮದ್ ಮಸೂದ್, ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ವೈ. ಮಹಮ್ಮದ್ ಕುಂಞಿ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಹನೀಫ್, ಪಾಲಿಕೆ ಆಯುಕ್ತ ಮುಹ ಮ್ಮದ್ ನಜೀರ್, ಪಾಲಿಕೆ ಸಚೇತಕ ಎಂ. ಶಶಿಧರ್ ಹೆಗ್ಡೆ, ಹಜ್ ಕಮಿಟಿ ಸಿಇಒ ಸಫ್ರಾಜ್ ಖಾನ್, ವಿಮಾನ ನಿಲ್ದಾಣದ ಪ್ರಾಧಿಕಾರದ ರಾಧಾಕೃಷ್ಣ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಹಜ್ ಯಾತ್ರಿಕರಿಗೆ ಸಾಂಕೇತಿಕವಾಗಿ ಪಾಸ್ಪೋರ್ಟ್ಗಳನ್ನು ವಿತರಿಸ ಲಾಯಿತು.
‘ಕನ್ನಡಿಗರ ರಕ್ಷಣೆಗೆ ಕ್ರಮ’
ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಆರ್. ರೋಷನ್ ಬೇಗ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಸೌದಿಯಲ್ಲಿ ಸಿಲುಕಿರುವ ಕನ್ನಡಿಗರ ಪಟ್ಟಿ ನೀಡುವಂತೆ ಕೇಳಲಾಗಿದೆ ಎಂದರು.
ವಿದೇಶಾಂಗ ಸಚಿವಾಲಯದಿಂದ ಪಟ್ಟಿ ಸಿಕ್ಕ ತಕ್ಷಣ, ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗು ವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.