‘ಭವಿಷ್ಯದ ಪ್ರಜೆ’ಗಿಲ್ಲ ಭದ್ರತೆ

7

‘ಭವಿಷ್ಯದ ಪ್ರಜೆ’ಗಿಲ್ಲ ಭದ್ರತೆ

Published:
Updated:

ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಿ ಭಾರತ ವಿಶ್ವ­ದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. 2013­ರಲ್ಲಿ ದೇಶದಲ್ಲಿ 10.34 ಲಕ್ಷ ಮಕ್ಕಳು ಸಾವಿಗೀಡಾಗಿರುವುದನ್ನು ‘ಮಕ್ಕಳ ಮರಣ ಪ್ರಮಾಣದ ವರದಿ– 2014’ ಎತ್ತಿ ಹಿಡಿದಿದೆ. ಈ ಮಾಹಿತಿ­ಯಿಂದ, ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂಬಂತಹ ಹೇಳಿಕೆ­ಗಳು ಅರ್ಥ ಕಳೆದುಕೊಳ್ಳುತ್ತಿವೆ. ‘ಭವಿಷ್ಯದ ಪ್ರಜೆ’ಗಳಿಗೆ ಸುರಕ್ಷತೆ ಕಲ್ಪಿಸುವ ವಿಷಯದಲ್ಲಿ ನಾವು ಹಿಂದುಳಿದಿದ್ದೇವೆ ಎಂಬುದು ಆತಂಕ­ಕಾರಿ.ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆದರೂ ನಮ್ಮ ಮಕ್ಕಳನ್ನು ಬಲಿ ತೆಗೆದು­ಕೊಳ್ಳುತ್ತಿರುವ ಸಂಗತಿಗಳನ್ನು ನಾವು ಇನ್ನೂ ಗಂಭೀರವಾಗಿ ಪರಿ­ಗಣಿಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷ ಹಲವಾರು ಯೋಜನೆಗಳನ್ನು ರೂಪಿಸುತ್ತಿವೆ. ಅವು­ಗಳ ಅನುಷ್ಠಾನ­ಕ್ಕಾಗಿ  ಕೋಟ್ಯಂತರ ರೂಪಾಯಿ ವ್ಯಯಿಸುತ್ತಿವೆ. ಹಾಗಿದ್ದರೆ ಈ ಎಲ್ಲ ಹಣ, ಮಾನವ ಶಕ್ತಿ ಎಲ್ಲವೂ ಎಲ್ಲಿ ಹೋಗುತ್ತಿದೆ?ವಿಶ್ವದಲ್ಲಿ ಸಾವಿ­ಗೀಡಾಗುತ್ತಿರುವ ಮಕ್ಕಳಲ್ಲಿ ಅತಿ ಹೆಚ್ಚಿನವರು ನಮ್ಮವರೇ  ಎಂಬುದು ಸಣ್ಣ ಸಂಗತಿಯಲ್ಲ. ಅವಧಿಪೂರ್ವ ಜನನ, ಅಪೌಷ್ಟಿಕತೆ, ಬಡತನ, ಸೋಂಕುಗಳು, ಅನಕ್ಷರತೆ, ಸಕಾಲದಲ್ಲಿ ಸಿಗದ ವೈದ್ಯಕೀಯ ಸೇವೆ, ಎಳೆಯ ವಯಸ್ಸಿನಲ್ಲೇ ಗರ್ಭ ಧರಿಸಲು ಕಾರಣವಾಗುವ ಬಾಲ್ಯವಿವಾಹ ಇವೆಲ್ಲವೂ ಪ್ರಪಂಚವನ್ನು ಅರಿಯುವ ಮುನ್ನವೇ ಮಕ್ಕಳು ಇಹಲೋಕ ತ್ಯಜಿಸಲು ಕಾರಣವಾಗುತ್ತಿವೆ.

ಯಾವುದಾದರೊಂದು ಯೋಜನೆಯಲ್ಲಿ ಪ್ರಗತಿ ಸಾಧನೆ ಸಾಧ್ಯ ವಾಗಿಲ್ಲ­ವೆಂದರೆ ಅದಕ್ಕಾಗಿ ನಾವು ಅನುಸರಿಸುತ್ತಿರುವ ಮಾರ್ಗೋಪಾಯ­ಗಳು ಸಮರ್ಪಕವಾಗಿಲ್ಲ ಅಥವಾ ಆ ಯೋಜನೆಗಳಿಗೆ ವ್ಯಯಿಸುತ್ತಿರುವ ಹಣದ ದುರ್ಬ­ಳಕೆ ಆಗುತ್ತಿದೆ ಎಂದೇ ಅರ್ಥ. ಇಂತಹ ಸಂಗತಿಗಳ ಬಗ್ಗೆ ಸೂಕ್ತ ಮೇಲ್ವಿ­ಚಾರಣೆ ಸಾಧ್ಯವಾಗದಿದ್ದರೆ ಫಲಿತಾಂಶವೂ ವ್ಯತಿರಿಕ್ತವಾಗಿಯೇ ಇರುತ್ತದೆ. ಅಲ್ಲದೆ ಇದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಸಹ. ಸಾವಿ­ಗೀ­ಡಾಗುತ್ತಿರುವ ಮಕ್ಕಳೆಲ್ಲರೂ ಬಡವರೇ ಏನಲ್ಲ.ಮೂಢನಂಬಿಕೆ, ನೈರ್ಮಲ್ಯ, ಪೌಷ್ಟಿಕ ಆಹಾರದ ಬಗೆಗಿನ ಅಜ್ಞಾನ, ಮಾರಕ ರೋಗದಂಥ ಅಂಶಗಳೂ   ವಿವಿಧ ವರ್ಗದ ಮಕ್ಕಳ ಸಾವಿಗೆ ಕಾರಣವಾಗುತ್ತಿವೆ. ಹೀಗಾಗಿ ಲಕ್ಷಾಂತರ ಮಕ್ಕಳ ಸಾವು ಹಾಗೂ ಅದಕ್ಕೆ ಕಾರಣವಾಗುವ ಸಾಮಾಜಿಕ, ಸಾಂಸ್ಕೃ­ತಿಕ ಪರಿಮಿತಿಗಳನ್ನೂ ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಬಿಸಿ­ಯೂಟ, ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಜನರಲ್ಲಿ, ಅದರಲ್ಲೂ ವಿಶೇಷ­ವಾಗಿ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ, ಆರೋಗ್ಯ ಕಾಳಜಿಯ ಬಗ್ಗೆ ಜನಜಾಗೃತಿ ಮೂಡಿಸಬೇಕು.ಮಾರಕ ಕಾಯಿಲೆಗಳಿಂದ ಮಕ್ಕಳನ್ನು ಪಾರು ಮಾಡುವ ವೈದ್ಯಕೀಯ ತಂತ್ರಜ್ಞಾನದ ಸುಧಾರಣೆಗೆ ಗಮನಹರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮಕ್ಕಳ ಆರೋಗ್ಯ ಕಾಳಜಿಯ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಈಗಾ­ಗಲೇ ಇರುವ ವಿವಿಧ ಯೋಜನೆಗಳ ಸಮರ್ಪಕ ಮೇಲ್ವಿಚಾರಣೆಯೂ ‘ಭವಿಷ್ಯದ ಪ್ರಜೆ’ಗಳಿಗೆ ಸುರಕ್ಷತೆ ಒದಗಿಸುವ ಸರ್ಕಾರದ ಪ್ರಮುಖ ಆದ್ಯತೆ­ಗಳಲ್ಲಿ ಒಂದಾಗಬೇಕು. ಆಗಷ್ಟೇ ಮಕ್ಕಳ ಮರಣ ಪ್ರಮಾಣದಲ್ಲಿ ದೇಶಕ್ಕೆ ಅಂಟಿ­ರುವ ನಿರ್ಲಕ್ಷ್ಯದ ಕಳಂಕವನ್ನು ತೊಡೆದುಕೊಳ್ಳಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry