ಬುಧವಾರ, ಜೂನ್ 16, 2021
28 °C

‘ಭಾರತದ ಮೇಲೆ ನಿರಂತರ ದಾಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಭಾರತದ ಮೇಲೆ ಆದಷ್ಟು ದಾಳಿಗಳು ಬೇರೆ ಯಾವ ದೇಶದ ಮೇಲೂ ಆಗಿಲ್ಲ. ಒಂದು ವೇಳೆ ಆಗಿದ್ದರೆ ಆ ದೇಶ ಭೂಪಟದಲ್ಲಿಯೇ ಕಾಣುತ್ತಿರಲಿಲ್ಲ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಇಲ್ಲಿನ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಮೈದಾನದಲ್ಲಿ ಭಾರತ ಸ್ವಾಭಿಮಾನ ಟ್ರಸ್ಟ್‌ ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿ­ಕೊಂಡಿದ್ದ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.‘ನಿರ­ಂ­ತರ ದಾಳಿಗಳು ನಡೆದರೂ ಈ ದೇಶ ಇನ್ನೂ ಎತ್ತರಕ್ಕೆ ಬೆಳೆಯುತ್ತಲೇ ಇದೆ. ಏಕೆಂದರೆ ಮೂಲದಿಂದ ಈ ದೇಶವನ್ನು ಯೋಗ ಮತ್ತು ಅಧ್ಯಾತ್ಮಿಕತೆ ಕಾಪಾಡಿಕೊಂಡು ಬಂದಿದೆ. ಜಗತ್ತಿಗೆ ಯೋಗ ಮತ್ತು ಅಧ್ಯಾತ್ಮಿಕತೆಯನ್ನು ಸಾರುವ ಶಕ್ತಿ ಭಾರತಕ್ಕೆ ಇದ್ದರೂ ಅದರ ಅನುಷ್ಠಾನದ ಕೊರತೆ ಎದ್ದು ಕಾಣುತ್ತಿದೆ’ ಎಂದರು.‘ಈ ದೇಶವನ್ನು ಪರಕೀಯರ ಕೈಯಿಂದ ಬಿಡುಗಡೆಗೊಳಿಸಲು ಭಗತ್‌ಸಿಂಗ್‌, ಸುಖದೇವ್‌ ಹಾಗೂ ರಾಜಗುರು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದರು. ಅಂಥವರ ಜೀವನ ಚರಿತ್ರೆಯನ್ನು ಈ ದೇಶದ ಜನತೆ ಕೇವಲ ಹತ್ತು ಪುಟವನ್ನಾದರೂ ಓದಿದ್ದೇ ಆದಲ್ಲಿ ಜಗತ್ತಿಗೇ ಭಾರತ ದೇಶ ಗುರುವಿನ ಸ್ಥಾನದಲ್ಲಿ ನಿಲ್ಲುತ್ತದೆ. ಅಂಥವರ ಸ್ಮರಣೆ ಮಾಡುವುದು ಮಾತ್ರವಲ್ಲ.ಅವರ ಋಣ ಹೇಗೆ ತೀರಿಸಬೇಕು ಎಂಬುದರ ಬಗ್ಗೆ ನಾವು ವಿಚಾರ ಮಾಡಬೇಕಿದೆ. ತ್ಯಾಗ ಮತ್ತು ಸೇವೆ ಈ ದೇಶದ ಆದರ್ಶಗಳು. ಅಂತೆಯೇ ಆಧ್ಯಾತ್ಮಿಕತೆ ಎಂಬುದು ಈ ದೇಶದ ಧ್ಯೇಯೋದ್ದೇಶ. ಪ್ರಸ್ತುತ ಇವೆರಡೂ ಈ ದೇಶಕ್ಕೆ ಅನಿವಾರ್ಯವಾಗಿ ಬೇಕಾಗಿವೆ’ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ‘ಯಾವ ಮನುಷ್ಯ ಸಮಾಜದಲ್ಲಿ ತ್ಯಾಗ ಭಾವನೆಯನ್ನು ಹೊಂದಿ ಜೀವನ ಸಾಗಿಸುತ್ತಿರುತ್ತಾನೋ ಅಂಥವನು ಲೋಕದ ಪುಣ್ಯ ಪರುಷನಾಗಿ ಕಾಣಿಸಿಕೊಳ್ಳುತ್ತಾನೆ. ಹಾಗೆ ಭಗತ್‌ಸಿಂಗ್‌, ಸುಖದೇವ್‌ ಹಾಗೂ ರಾಜಗುರು ಅವರು ಈ ದೇಶಕ್ಕೆ ತಮ್ಮನ್ನಷ್ಟೇ ಅಲ್ಲ, ಇಡೀ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾರೆ. ಆದ್ದರಿಂದಲೇ ಇಂದು ನಾವು ದೇಶದಲ್ಲಿ ನಿಶ್ಚಿಂತೆಯಿಂದ ಬಾಳುವಂತಾಗಿದೆ’ ಎಂದರು.ನಂತರ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಾಂತೀಯ ಪ್ರಭಾರಿ ಕಮಲ ಸಿಕ್ವೇರಾ ಅವರು ಯೋಗ ಪ್ರಾತ್ಯಕ್ಷಿಕೆಗಳನ್ನು, ಅಲ್ಲಿ ಸೇರಿದ್ದ ಯೋಗಾಸಕ್ತರಿಗೆ ಮಾಡಿಸಿದರು. ಲಕ್ಷ್ಮಣ ಸಣ್ಣೆಲ್ಲಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿದ್ಧಲಿಂಗಯ್ಯ ಪುರಾಣಿಕಮಠ, ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ ಹಾಗೂ ಜಗದೀಶ ಮಳಗಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.