ಭಾನುವಾರ, ಫೆಬ್ರವರಿ 28, 2021
23 °C

‘ಭಾರತೀಯ ಸಂಸ್ಕೃತಿ ಉಳಿಸುವ ಕೆಲಸವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾರತೀಯ ಸಂಸ್ಕೃತಿ ಉಳಿಸುವ ಕೆಲಸವಾಗಲಿ’

ಅಕ್ಕಿಆಲೂರ: ಭಾರತೀಯ ಸಂಸ್ಕೃತಿ, ಆಚಾರ, ವಿಚಾರ ವಿಶ್ವಮಾನ್ಯವಾಗಿದ್ದು ಅವುಗಳನ್ನು ಉಳಿಸಿ ಬೆಳೆಸಬೇಕಾದ ಮಹತ್ವದ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ. ಮನಸ್ಸು, ಮಾತು ಮತ್ತು ಕಾರ್ಯವನ್ನು ಶುದ್ಧವಾಗಿರಿಸಿ ಕೊಂಡು ಆತ್ಮಕಲ್ಯಾಣ ಹೊಂದುವಂತೆ ಸೋಂದಾ ಸೋದೆ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಕಿವಿಮಾತು ಹೇಳಿದರು.  ಇಲ್ಲಿಯ ದಿಗಂಬರ ಜೈನ ಸಮಾಜದ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬೇರಿಗೆ ನೀರುಣಿಸಿದರೆ ಮಾತ್ರ ಉತ್ತಮ ಫಲ ನಿರೀಕ್ಷೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಭಗವಂತನನ್ನು ಆರಾಧಿಸಿ, ಪೂಜಿಸಿದರೆ ಇಷ್ಟಾರ್ಥಗಳ ಜೊತೆಗೆ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಯಾಗಲಿದೆ. ಚಂಚಲವಾದ ಮನಸ್ಸಿನ ಮೇಲೆ ಹತೋಟಿ ಸಾಧಿಸಿ ಭಕ್ತಿ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಲಭಿಸಲಿದೆ ಎಂದು ನುಡಿದ ಅವರು ಇತ್ತೀಚಿನ ದಿನಗಳಲ್ಲಿ ಹಣ ಗಳಿಕೆ ಜೀವನದ ಪ್ರಮುಖ ಗುರಿಯಾಗಿದೆ. ಪರಿಣಾಮ ಮಾನಸಿಕ ನೆಮ್ಮದಿಯನ್ನು ಕರುಣಿಸುವ ಧಾರ್ಮಿಕ ಕಾರ್ಯಗಳಿಂದ ಯುವಕರು ವಿಮುಖರಾಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಯುವಕರಿಗೆ ತಿಳಿ ಹೇಳಿ ಧರ್ಮ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ಪ್ರೇರೇಪಿಸುವ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚಾಗಿ ಆಕರ್ಷಿತಗೊಳ್ಳುತ್ತಿರುವುದು ಭಾರತ ದೇಶದ ಸಂಸ್ಕೃತಿ ನಾಶವಾಗಲು ಕಾರಣವಾಗುತ್ತಿದೆ. ದೇಶದಲ್ಲಿ ವಿದ್ಯೆಗೆ ಸಾಕಷ್ಟು ಗೌರವ ನೀಡಲಾಗಿದೆ. ಆದರೆ ನಮ್ಮಲ್ಲಿ ನೈಜ ವಿದ್ಯೆಗಿಂದ ಉದ್ಯೋಗ ಮತ್ತು ಹಣ ಗಳಿಕೆಗೆ ಅವಶ್ಯವಿರುವ ಶಿಕ್ಷಣ ಮಾತ್ರವೇ ಲಭ್ಯವಾಗುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಕೂಡ ಶ್ರದ್ಧೆ, ಭಕ್ತಿ, ನಿಷ್ಠೆಯನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು.ಉದ್ಘಾಟನೆ ನೆರವೇರಿಸಿದ ಧಾರವಾಡದ ಎಸ್‌.ಡಿ.ಎಂ. ವೈದ್ಯಕೀಯ ಸಂಸ್ಥೆಯ ಎ.ಎಲ್‌.ಸಿ. ಅಧ್ಯಕ್ಷೆ ಪದ್ಮಲತಾ ನಿರಂಜನಕುಮಾರ ಮಾತನಾಡಿ, ಜೀವ ಬೇರೆ, ಆತ್ಮ ಬೇರೆ ಎನ್ನುವ ತಿಳಿವಳಿಕೆ ಮೂಡಿದಾಗ ಮಾತ್ರವೇ ಸರಿ ತಪ್ಪಿನ ಅರಿವಾಗಲಿದೆ. ವೈಚಾರಿಕತೆ ಬೆಲೆ ಕಳೆದುಕೊಳ್ಳುತ್ತಿರುವ ಪ್ರಚಲಿತ ದಿನ ಮಾನಗಳಲ್ಲಿ ಸಂಸ್ಕೃತಿಯನ್ನು ಗಟ್ಟಿ ಗೊಳಿಸುವ ಕಾರ್ಯ ನಡೆಯ ಬೇಕಿದೆ ಎಂದರು.ಹೋತನಹಳ್ಳಿಯ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ, ಸ್ಥಳೀಯ ಮುತ್ತಿನಕಂತಿ ಮಠದ ಉತ್ತರಾಧಿಕಾರಿ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಸಿ.ಎಂ.ಉದಾಸಿ, ಜಿ.ಪಂ. ಸದಸ್ಯೆ ಗೀತಾ ಅಂಕಸಖಾನಿ, ಗ್ರಾ.ಪಂ. ಅಧ್ಯಕ್ಷೆ ನಂದಿನಿ ವಿರುಪಣ್ಣನವರ, ಉಪಾಧ್ಯಕ್ಷ ಪ್ರದೀಪ ಶೇಷಗಿರಿ, ನಿವೃತ್ತ ಶಿಕ್ಷಕ ಎಸ್.ಎ. ಬೋಗಾರ, ಡಿ.ಎನ್. ಭೀಮಣ್ಣನವರ, ಸುಲೋಚನಾ ಬೆಂಗಳೂರ, ಧರಣೇಂದ್ರಪ್ಪ ಹದಳಗಿ ಈ ವೇಳೆ ಹಾಜರಿದ್ದರು.ವಿನೋದಾ ಬಾಳಂಬೀಡ ಪ್ರಾರ್ಥಿಸಿದರು. ಆರ್.ವಿ.ಹೊಸೂರ ಸ್ವಾಗತಿಸಿದರು. ಸಿದ್ದಾರ್ಥ ಜೈನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಬಿತಾ ಪ್ರೇಮಕುಮಾರ ವಂದಿಸಿದರು.ಪುರಪ್ರವೇಶ ಸಂಭ್ರಮ

ಅಕ್ಕಿಆಲೂರ:  ಶಿರಸಿ ತಾಲ್ಲೂಕಿನ  ಸೋದೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯ ಮಂಗಳ ಪುರ ಪ್ರವೇಶ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ಸಂಭ್ರಮದಿಂದ ಜರುಗಿದವು.ಪುರ ಪ್ರವೇಶದ ಹಿನ್ನೆಲೆಯಲ್ಲಿ ಇಡೀ ಊರಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ತಳಿರು–ತೋರಣ ಕಟ್ಟಲಾಗಿತ್ತು. ರಸ್ತೆಗಳಲ್ಲಿ ರಂಗೋಲಿ ಚಿತ್ತಾರ ಮನ ಸೆಳೆದವು. ವಿವಿಧೆಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಫ್ಲೆಕ್ಸ್, ಬ್ಯಾನರ್‌ ಅಳವಡಿಸಲಾಗಿತ್ತು. ಭಟ್ಟಾರಕ ಸ್ವಾಮೀಜಿ ಮೂಲತಃ ಅಕ್ಕಿಆಲೂರಿನವರಾಗಿದ್ದು, ನಾಡಿನ ಪವಿತ್ರ ಜೈನಕ್ಷೇತ್ರವಾಗಿರುವ ಸ್ವಾದಿ ಮಠದ ಪಟ್ಟಾಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಎಲ್ಲೆಡೆ ಸಡಗರ ನೆಲೆಗೊಂಡಿತ್ತು.ಇಲ್ಲಿಯ ಮುತ್ತಿನಕಂತಿಮಠ ಕಲ್ಯಾಣ ಮಂಟಪದ ಬಳಿ ಸ್ವಾಮೀಜಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.ಬಳಿಕ ಉತ್ಸವ ಆರಂಭಗೊಂಡಿತು. ಕುದುರೆ ರಥದಲ್ಲಿ ಆಸೀನರಾಗಿದ್ದ ಸ್ವಾಮೀಜಿ ಮಾರ್ಗದುದ್ದಕ್ಕೂ ಮಂತ್ರಾಕ್ಷತೆ ನೀಡಿ ಭಕ್ತರನ್ನು ಹರಸಿದರು. ಸಿಂಧೂರ ಸಿದ್ದಪ್ಪ ವೃತ್ತ, ಕುಮಾರ ನಗರ, ಸಿ.ಎಂ.ಉದಾಸಿ ಮುಖ್ಯರಸ್ತೆ, ಪೇಟೆ ಓಣಿ, ವಿರಕ್ತಮಠ ಓಣಿ ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಉತ್ಸವ ಸಂಚರಿಸಿತು. ಎಲ್ಲ ಮನೆಗಳ ಎದುರಿಗೆ ಆರತಿ ಬೆಳಗಿ ಸ್ವಾಮೀಜಿಯನ್ನು ಸ್ವಾಗತಿಸುತ್ತಿದ್ದ ದೃಶ್ಯ ಕಂಡು ಬಂದಿತು. ಡೊಳ್ಳು, ಕೋಲಾಟ, ಝಾಂಜ್‌ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು. ಪೂರ್ಣಕುಂಭ ಹೊತ್ತಿದ್ದ ಮಹಿಳೆಯರು ಉತ್ಸವದ ಮುಂಭಾಗದಲ್ಲಿ ಹೆಜ್ಜೆ ಹಾಕಿದರು. ಕೊನೆಗೆ ಜಿನ ಮಂದಿರ ತಲುಪಿ ಉತ್ಸವ ತೆರೆಕಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.