ಗುರುವಾರ , ಜೂನ್ 17, 2021
28 °C

‘ಭೂಸ್ವಾಧೀನ ಕಾಯ್ದೆ ಅರಿತುಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೇಂದ್ರ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರ­ದರ್ಶ­ಕತೆ ಮತ್ತು ಸೂಕ್ತ ಪರಿಹಾರ ಹಕ್ಕು, ಪುನರ್‌ನಿರ್ಮಾಣ ಮತ್ತು ಪುನರ್‌ವಸತಿ ಕಾಯ್ದೆ–2013’ ದೇಶ­ದಾದ್ಯಂತ ಜನವರಿ ತಿಂಗಳಿನಲ್ಲಿ ಜಾರಿಗೆ ಬಂದಿದೆ. ಈ ಕುರಿತ ನಿಯಮ ರಚನೆಯ ಹಂತದಲ್ಲಿದೆ. ಹೀಗಾಗಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಮನನ ಮಾಡಿಕೊಂಡು, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಬೇಕು’ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಭವನ­ದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಬೆಳಗಾವಿ ವಿಭಾಗದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ‘ಭೂಸ್ವಾಧೀನ ಪ್ರಕ್ರಿಯೆ­ಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕಾಯ್ದೆ– 2013’ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸಾರ್ವಜನಿಕ ಉದ್ದೇಶಗಳಿಗೆ ವಶಪಡಿಸಿಕೊಳ್ಳುವ ಭೂಮಿಯ ಬಗ್ಗೆ ನಿರ್ದಿಷ್ಟವಾದ ವ್ಯಾಖ್ಯೆ ಹಿಂದಿನ ಕಾಯ್ದೆಯಲ್ಲಿ ಇರಲಿಲ್ಲ. ಅಧಿಕಾರಿಗಳಲ್ಲಿ ಹಲವು ಸಂದರ್ಭಗಳಲ್ಲಿ ಜಿಜ್ಞಾಸೆ ಕೂಡಾ ಉಂಟಾಗುತ್ತಿತ್ತು. ಅಲ್ಲದೇ ಭೂ ಮಾಲೀಕರಿಗೆ ಕೊಡುವ ಪರಿಹಾರದ ಮೊತ್ತದ ಬಗ್ಗೆ ಕೂಡಾ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಇದನ್ನೆಲ್ಲಾ ಮನಗಂಡ ಕೇಂದ್ರ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿದ್ದು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಲಿದ್ದಾರೆ’ ಎಂದು ತಿಳಿಸಿದರು.‘ನೂತನ ಕಾಯ್ದೆಯು ಭೂ ಮಾಲೀಕರ ಹಿತಾಸಕ್ತಿಯನ್ನು ಪ್ರಮುಖ ಉದ್ದೇಶವಾಗಿಟ್ಟುಕೊಂಸು ರೂಪಿಸಲಾ­ಗಿದೆ. ಅವರ ಒಪ್ಪಿಗೆ ಇಲ್ಲದೇ ಜಮೀ­ನನ್ನು ಸ್ವಾಧೀನಪಡಿಸಿಕೊಳ್ಳು­ವಂತಿಲ್ಲ. ಅಲ್ಲದೇ ಬೃಹತ್ ಯೋಜನೆಗಳಿಗೆ ಭೂಸ್ವಾಧೀನಪಡಿಸಿ­ಕೊಳ್ಳು­ವಾಗ ಭೂ ಮಾಲೀಕರಿಗೆ ಹಾಗೂ ಅವರ ಅವಲಂಬಿತರಿಗೆ ಆಗುವ ತೊಂದರೆಗಳ ಬಗ್ಗೆ ಸಾಮಾಜಿಕ ಅಧ್ಯಯನ ಮಾಡುವುದನ್ನು ಈ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.‘ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸ್ಥಳಾಂತರವಾಗುವ ಜನರ ಹಕ್ಕುಗಳ ರಕ್ಷಣೆ, ಭೂಸ್ವಾಧೀನ ಪರಿಹಾರವನ್ನು ದ್ವಿಗುಣಗೊಳಿಸಿರುವುದು ಹಾಗೂ ಭೂಮಿ ಕಳೆದುಕೊಂಡುವರು ಹಾಗೂ ಅವರ ಅವಲಂಬಿತರನ್ನು ಪುನರವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಹೀಗೆ ಹಲವಾರು ನೂತನ ಅಂಶಗಳು ಈ ಕಾಯ್ದೆಯಲ್ಲಿದೆ. ಇವುಗಳನ್ನು ಸಂಪೂರ್ಣವಾಗಿ ತಿಳಿದು­ಕೊಂಡು ಅನುಷ್ಠಾನಗೊಳಿಸ­ಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹೈದರಾಬಾದಿನ ಭಾರತೀಯ ಆಡಳಿತಾತ್ಮಕ ತರಬೇತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ರೇಷ್ಮಿ ನಾಯರ್ ಹಾಗೂ ಕೃಷ್ಣಾ ಮೇಲ್ಡಂಡೆ ಯೋಜನೆಯ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಎ.ಎನ್. ಪಾಟೀಲ ನೂತನ ಕಾಯ್ದೆಯ ಪ್ರಮುಖ ಅಂಶಗಳ ಬಗ್ಗೆ ಹಾಗೂ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಸಂದರ್ಭದಲ್ಲಿ ಸಂದರ್ಭದಲ್ಲಿ ಎದುರಿಸಬೇಕಾದ ತೊಂದರೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಬೋಧಕ ಎ.ಸಿ. ದಿವಾಕರ ಸ್ವಾಗತಿಸಿದರು. ಬೆಳಗಾವಿಯ ಆಡಳಿತ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಎಂ.ಡಿ. ಉಪ್ಪಿನ ವಂದಿಸಿದರು. ಬೆಳಗಾವಿ ವಿಭಾಗದ 80ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.