ಶುಕ್ರವಾರ, ಫೆಬ್ರವರಿ 26, 2021
30 °C
ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳಿಗೆ ಚಾಲನೆ

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ’

ಬ್ಯಾಡಗಿ: ವ್ಯಕ್ತಿತ್ವ ವಿಕಸನವೇ ಶಿಕ್ಷಣದ ಮುಖ್ಯ ಗುರಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಾಲೆಯಲ್ಲಿ ನೀಡಲು ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಝಡ್.ಎಂ.ಖಾಜಿ ಹೇಳಿದರು. ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದ ಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬುಧವಾರ ಆಯೋಜಿಸಿದ್ದ ಪ್ರಸಕ್ತ ಶೈಕ್ಷಣಿಕ (2015-16) ವರ್ಷದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಜವಾಬ್ದಾರಿ ಅರಿತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿಕೊಂಡರು.ದೃಶ್ಯ ಮಾಧ್ಯಮಕ್ಕೆ ಮಾರು ಹೋಗಿರುವ ಇಂದಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಮಾಯವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಮಕ್ಕಳನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಕ್ರಿಯಾಶೀಲತೆ, ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಹುಟ್ಟುಹಾಕಬೇಕಾಗಿದೆ ಎಂದು ಹೇಳಿದರು.ಶಿಕ್ಷಕರ ಮಾರ್ಗದರ್ಶಿ ಪುಸ್ತಕ ಬಿಗಡೆಗೊಳಿಸಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಆರ್.ಹಾವಿನಾಳೆ ಮಾತನಾಡಿ, ನಿವೃತ್ತ ನೌಕರರಿಗೆ ಸಿಗಬೇಕಾದ ಸೌಲಭ್ಯ ಹಾಗೂ  ಶಿಕ್ಷಕರ ಕಾರ್ಯ ಚಟುವಟಿಕೆಗಳ ಕುರಿತು ಉಪನ್ಯಾಸ ನೀಡಿದರು.ಉಪನಿರ್ದೇಶಕರ ಕಾರ್ಯಾಲಯದ ವಿಷಯ ಪರಿವೀಕ್ಷಕ ಎಸ್.ಜಿ.ಕೋಟಿ ಮಾತನಾಡಿ, ಶಿಕ್ಷಕರು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಪದ್ಧತಿ (ಸಿಸಿಇ)ಯನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ಸಲಹೆ ನೀಡಿದರು.ವೇದಿಕೆಯಲ್ಲಿ ಅಕ್ಷರದಾಸೋಹದ ಸಹಾಯಕ ನಿರ್ದೆಶಕ ಬಿ.ಸಿ.ಪೀರಜಾದೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಜಗಾಪುರ, ಪುರಸಭೆ ಸದಸ್ಯ ಮಂಜುನಾಥ ಭೋವಿ, ವೀರಭದ್ರಪ್ಪ ಹೊಮ್ಮರಡಿ, ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಮಹೇಶ ನಾಯಕ, ಎಂ.ಎಂ.ಪಾಟೀಲ, ಸಿ.ಬಿ.ಪಾಟೀಲ. ದೈಹಿಕ ಶಿಕ್ಷಣ ಸಂಯೋಜಕ ಬಿ.ಎಚ್.ಎನ್.ರಾವಳ, ಎಚ್‌. ಎಫ್‌.ಭಜಂತ್ರಿ ಉಪಸ್ಥಿತರಿದ್ದರು.ಪ್ರಕಾಶ ಕೊರಮರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ವೈ.ಟಿ.ಹೆಬ್ಬಳ್ಳಿ ಸ್ವಾಗತಿಸಿದರು. ಜೀವರಾಜ ಛತ್ರದ ನಿರೂಪಿಸಿದರು. ವಿ.ವಿ.ಮಾತನವರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.