ಸೋಮವಾರ, ಜನವರಿ 20, 2020
29 °C

‘ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರು ವಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ ಪಾತ್ರ ಮಹತ್ವದ್ದು, ಇಂತಹ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ, ತಿಳಿವಳಿಕೆ ನೀಡಿ ಅವರನ್ನು ಭವಿಷ್ಯದ ಸತ್ಪ್ರಜೆಗ ಳನ್ನಾಗಿ ರೂಪಿಸಬೇಕು ಎಂದು ಹೈಕೋರ್ಟ್‌ ನ್ಯಾಯ ಮೂರ್ತಿ ಹುಲುವಾಡಿ ಜಿ. ರಮೇಶ್‌ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಗುಲ್ಬರ್ಗದ ಡಾ. ಎಸ್‌. ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಅಧಿನಿಯಮ–೨೦೦೦ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದರೆ ಮುಂದೆ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ರೂಪಿಸಿದಂತೆ. ಇಂತಹ ಉತ್ತಮ ಮಾನವ ಸಂಪನ್ಮೂಲದ ಮೂಲಕ ನಾವು ಪ್ರಪಂಚದ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿ ನಿಲ್ಲಬಹುದು. ಆದ್ದರಿಂದ ಪಾಲಕರು, ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.ಮಕ್ಕಳಲ್ಲಿ ನಾವು ಯಾವ ರೀತಿಯ ಮನೋಭಾವ ವನ್ನು ಬಿತ್ತುತ್ತೇವೋ ಅದು ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ಮನೋಭಾವ ಬಿತ್ತಿದರೆ ಅವರು ಮುಂದೆ ಸರಿ ತಪ್ಪನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ. ಅದೇ ರೀತಿ ಪ್ರಾಥಮಿಕ ಶಾಲೆಯಿಂದಲೇ ಮಾತೃ ಭಾಷೆಯ ಜೊತೆಗೆ ವಿಶ್ವದ ಸಂಪರ್ಕ ಭಾಷೆಯಾದ ಇಂಗ್ಲಿಷ್‌ ಭಾಷೆಯನ್ನೂ ಕಲಿಸಬೇಕು. ಇದು ಅವರ ಬೆಳವಣಿಗೆಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.ಇಂದು ಮಕ್ಕಳ ಏಳಿಗೆಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಅಲ್ಲದೆ ಮಕ್ಕಳಿಗಾಗಿ ಹಲವು ಕಾನೂನುಗಳೂ ಇವೆ. ಇಂದು ಶಿಕ್ಷಕರಾಗಲಿ, ಪಾಲಕರಾಗಲಿ ಮಕ್ಕಳಿಗೆ ಹೊಡೆಯುವುದು, ಬೈಯುವುದು ಮಾಡುವಂತಿಲ್ಲ. ಹೀಗಾದರೆ ಅವರ ಮೇಲೆಯೂ ಕೇಸು ದಾಖಲಿಸಬಹುದು. ಆದ್ದರಿಂದ ಶಿಕ್ಷಕರು, ಪಾಲಕರು ಮಕ್ಕಳ ಮನಸ್ಸು ಅರ್ಥ ಮಾಡಿಕೊಂಡು ವ್ಯವಹರಿಸಬೇಕು. ಸರ್ಕಾರ ಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಇವು ಸದ್ವಿನಿಯೋಗವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.ಜಿಲ್ಲಾಧಿಕಾರಿ ಡಾ. ಎನ್‌. ವಿ. ಪ್ರಸಾದ ಮಾತನಾಡಿ, ಮಕ್ಕಳಿಗಾಗಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ ಇವುಗಳ ಕುರಿತು ಮೊದಲು ಶಿಕ್ಷಕರು, ಅಧಿಕಾರಿಗಳಲ್ಲಿ ಅರಿವು ಮೂಡಿಸಬೇಕು ಆ ಮೂಲಕ ಮಕ್ಕಳಿಗೂ ತಿಳಿಯಪಡಿಸಬೇಕು. ಹಾಗಿದ್ದರೆ ಮಾತ್ರ ಇದು ಫಲಪ್ರದವಾಗಬಹುದು ಎಂದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಮೊದಲ ಜವಾಬ್ದಾರಿ ಪಾಲಕರದ್ದು, ಅನಂತರ ಶಿಕ್ಷಕರದ್ದು ಇವರಿಬ್ಬರೂ ಮಕ್ಕಳನ್ನು ತಿದ್ದಿ ಬೆಳೆಸಿದರೆ ಮುಂದೆ ದೇಶದ ಭವಿಷ್ಯ ಉತ್ತಮವಾಗುತ್ತದೆ ಎಂದು ಹೇಳಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಆರ್‌. ವೆಂಕಟಸುದರ್ಶನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ಯೂಸುಫ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗ ಉಪನಿರ್ದೇಶಕ ಬಿ.ಎಸ್‌. ಪರಮೇಶ್ ಇದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ವಿಜಯನ್‌ ಸ್ವಾಗತಿಸಿದರು. ಎನ್‌. ನಾರಾಯಣಸ್ವಾಮಿ ವಂದಿಸಿದರು.

ಪ್ರತಿಕ್ರಿಯಿಸಿ (+)