ಭಾನುವಾರ, ಫೆಬ್ರವರಿ 28, 2021
23 °C
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಬಳಗದಿಂದ ಸಿಇಟಿ ಕೌನ್ಸೆಲಿಂಗ್ ಪೂರ್ವ ಮಾರ್ಗದರ್ಶನ

‘ಮಕ್ಕಳ ಮೇಲೆ ಒತ್ತಡದ ಚಾಟಿ ಬೀಸದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಕ್ಕಳ ಮೇಲೆ ಒತ್ತಡದ ಚಾಟಿ ಬೀಸದಿರಿ’

ಶಿವಮೊಗ್ಗ:  ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಸಿಇಟಿ ಪರೀಕ್ಷಾ ನಂತರದ ಕೌನ್ಸೆಲಿಂಗ್‌ ಪೂರ್ವ ಉಚಿತ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯ ಕುಲಸಚಿವೆ ಪ್ರೊ.ಮಲ್ಲಿಕಾ ಎಸ್. ಘಂಟಿ ಮಾತನಾಡಿ, ಪೋಷಕರು ತಮ್ಮ ಆಸೆಗಳನ್ನು ಈಡೇರಿಸಿ ಕೊಳ್ಳುವುದಕ್ಕೋಸ್ಕರ ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ಕೇಳುವ ವ್ಯವದಾನ ಪೋಷಕರಲ್ಲಿ ಇಲ್ಲದಂತಾಗಿದೆ. ವೈದ್ಯರು, ಎಂಜನಿಯರ್ ರನ್ನಾಗಿ ಮಾಡುವ ರಭಸದಲ್ಲಿ, ಅವರ ಮೇಲೆ ಒಂದಿಲ್ಲೊಂದು ಒತ್ತಡ ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.ನಮ್ಮ ಆಸೆ–ಆಕಾಂಕ್ಷೆಗಳ ಈಡೇರಿಕೆಗೋಸ್ಕರ ಅವರನ್ನು ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಿದ್ದೇವೆ. ಆದರೆ, ಅವರಲ್ಲಿರುವ ಪ್ರತಿಭೆ ಹೊರತರುವುದಕ್ಕೆ ಮಾತ್ರ ಯಾರೂ ಪ್ರಯತ್ನಿಸುತ್ತಿಲ್ಲ ಎಂದ ಅವರು, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೋಷಕರು ದಾರಿ ದೀಪಗಳಾಗಿ ವರ್ತಿಸಬೇಕೆ ಹೊರತು, ಅವರ ಮೇಲೆ ಒತ್ತಡವೆಂಬ ಚಾಟಿ ಬೀಸುವುದಲ್ಲ ಎಂದರು.ಮಕ್ಕಳು ಮಾಡುವ ತಪ್ಪು–ಒಪ್ಪುಗಳನ್ನು ತಿದ್ದಿ ಹೇಳುವ ಉತ್ತಮ ಸ್ನೇಹಿತರಾಗಿ ಪೋಷಕರು ಬದಲಾಗಬೇಕು. ಬಹುತೇಕ ಪೋಷಕರ ಹಠಮಾರಿತನದಿಂದ ಮಕ್ಕಳ ನೈತಿಕ ಮೌಲ್ಯಗಳ ಅಧಃಪತನಕ್ಕೆ ಕಾರಣರಾಗುತ್ತಾರೆ ಎಂದು ಹೇಳಿದರು.ಜ್ಞಾನಕ್ಕಾಗಿ ಓದಬೇಕೆ ಹೊರತು, ದುಡ್ಡು ಮಾಡುವ ಒಂದು ದಂಧೆಯಾಗಿ ಅದನ್ನು ಬಳಸಿಕೊಳ್ಳಬಾರದು. ತಮ್ಮ ಮಕ್ಕಳು ಏನು ಮಾಡಬೇಕು? ಎಂಬಂತಹ ಹಲವು ಪ್ರಶ್ನೆಗಳಿಗೆ ಪೋಷಕರು ತಮ್ಮ ಮನದಲ್ಲಿಯೇ  ಉತ್ತರ ಹುಡುಕಿದಾಗ ಮಾತ್ರ ಮಗು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.‘ಜನಸೇವೆಯೇ ಗುರಿ’

ವೈದ್ಯಕೀಯ ಶಿಕ್ಷಣ ಕುರಿತು ಸಹ್ಯಾದ್ರಿ ನಾರಾಯಣ ಹೃದಯಾಲಯದ ಜೈನೋಲಜಿಸ್ಟ್ ಡಾ.ರಾಘವೇಂದ್ರ ಭಟ್ ಮಾತನಾಡಿ, ಜನಸೇವೆಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡಿರುವ ವಿದ್ಯಾರ್ಥಿಗಳು ವೈದ್ಯ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಪ್ರತಿ ದಿವಸ ಶೇ 5ರಷ್ಟು ವೈದ್ಯಕೀಯ ಜ್ಞಾನ ಬೆಳವಣಿ ಗೆಯಾಗುತ್ತಿರುತ್ತದೆ. ವೈದ್ಯ ವೃತ್ತಿಗೆ ಬರುವವರು ಪ್ರತಿ ದಿವಸವೂ ತಮ್ಮ ಜ್ಞಾನವನ್ನು ಬೆಳವಣಿಗೆ ಮಾಡಿಕೊಳ್ಳಬೇಕು ಎಂದರು.‘ಹಣದ ಹಿಂದೆ ಓಡಬೇಡಿ’

ಬೆಂಗಳೂರು ಆಚಾರ್ಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಸ್ ನ ಡಾ.ಪಿ. ಶಿವಾನಂದ ಎಂಜನಿಯರಿಂಗ್ ಆಯ್ಕೆ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹಣದ ಹಿಂದೆ ಓಡಬಾರದು. ಪ್ರಾಮಾಣಿಕತೆ ಯಿಂದ ಕಾರ್ಯನಿರ್ವಹಿಸಿದರೆ ಹಣ ನಿಮ್ಮ ಹಿಂದೆಯೇ ಬರುತ್ತದೆ ಎಂದ ಅವರು, ಹಣ ಮಾಡುವುದರ ಬದಲಾಗಿ ಒಳ್ಳೆಯ ಉದ್ಯೋಗಿ ಆಗಬೇಕು ಎಂದು ಅಭಿಪ್ರಾಯಪಟ್ಟರು.ಎಂಜನಿಯರಿಂಗ್ ಸೀಟು ಪಡೆಯಲು ಪಿಜಿಸಿಇಟಿ, ಎಐಇಇ ಮುಂತಾದ ಪರೀಕ್ಷೆ ಬರೆಯಬೇಕು. ನೀವು ಪಡೆಯುವ ಅಂಕಗಳ ಆಧಾರದ ಮೇಲೆ ನಿಮಗೆ ಸೀಟು ಲಭ್ಯವಾಗುತ್ತದೆ ಎಂದು ತಿಳಿಸಿದರು.ದಾಖಲೆಗಳನ್ನು ಕ್ರೋಡೀಕರಿಸಿ

ಸಿಇಟಿ ಕುರಿತು ಕೆಇಎ ನೋಡೆಲ್ ಅಧಿಕಾರಿ ಜಿ.ಸಿ.ನಿರಂಜನ್ ಮಾತನಾಡಿ, ಕಡಿಮೆ ಆದಾಯ ಇರುವ ವಿದ್ಯಾರ್ಥಿಗಳಿಗೆ ಶೇಕಡವಾರು ಸೀಟುಗಳು ಲಭ್ಯ ಇರುತ್ತವೆ. ಸಿಇಟಿ ಪರೀಕ್ಷೆಯಾದ ನಂತರ, ತಾವು ಕೆಇಎಗೆ ಕಳುಹಿಸುವ ಮಾಹಿತಿಗಳುಳ್ಳ ದಾಖಲೆಗಳನ್ನು ಕ್ರೋಡಿೀಕರಿಸಿಕೊಂಡಿರಬೇಕು ಎಂದರು.ಯಾವುದೇ ವಿದ್ಯಾರ್ಥಿ ತನಗೆ ಬೇಕಾದ ಸೀಟು ಹಾಗೂ ಕಾಲೇಜನ್ನು ಕೆಇಎ  ವೆಬ್ ಸೈಟ್ ಮೂಲಕ ಆಯ್ಕೆಮಾಡಿಕೊಳ್ಳಬಹುದು. ಆದರೆ, ಕೆಇಎ ದಾಖಲೆಗಳನ್ನು ಪರೀಕ್ಷಿಸುವ ಮುನ್ನ ಅವುಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢಪಟ್ಟ ಸಹಿ ಮತ್ತು ಸೀಲುಗಳಿರಬೇಕು ಎಂದು ತಿಳಿಸಿದರು.ನಂತರ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ಕೂಡ ನಡೆಯಿತು.ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ಹಿರಿಯ ಪ್ರಸರಣ ಅಧಿಕಾರಿ ಶಿವರಾಜ್ ಎಸ್.ನರೋನ, ‘ಪ್ರಜಾವಾಣಿ’ ಹಿರಿಯ ಜಿಲ್ಲಾ ವರದಿಗಾರ ಪ್ರಕಾಶ ಕುಗ್ವೆ, ಡೆಕ್ಕನ್ ಹೆರಾಲ್ಡ್ ಜಿಲ್ಲಾ ವರದಿಗಾರ ನೃಪತುಂಗ, ಶಿವಮೊಗ್ಗ ಜಿಲ್ಲಾ ಪ್ರಸರಣ ಅಧಿಕಾರಿ ನಂದಗೋಪಾಲ್, ಪತ್ರಿಕಾ ಏಜೆಂಟ್‌ ಎನ್‌.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಭವಾನಿ ಪ್ರಾರ್ಥಿಸಿದರು.  ಜಾಹಿರಾತು ಪ್ರತಿನಿಧಿ ಚೇತನ್ ಕುಮಾರ್ ಸ್ವಾಗತಿಸಿದರು. ದೀಕ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. 

ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೆ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಸಿಇಟಿ ಕುರಿತು ಇದ್ದ ಗೊಂದಲಗಳನ್ನು ಪರಿಹರಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.