ಸೋಮವಾರ, ಜೂನ್ 21, 2021
28 °C

‘ಮತದಾನ: ಕನಿಷ್ಠ ದರದಲ್ಲಿ ಸಾರಿಗೆ ಸೌಲಭ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ‘ಲೋಕಸಭೆ ಚುನಾವಣೆ­ಯಲ್ಲಿ ಮತದಾರರು ಮತ ಚಲಾಯಿಸಲು ಮತಗಟ್ಟೆಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದಿದ್ದರೆ, ಮತದಾನಕ್ಕೆ ನೆರವಾಗಲು ಕನಿಷ್ಠ ಶುಲ್ಕದಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಚಿಂತನೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಶುಕ್ರವಾರ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಯುವ ರಂಗೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಬಾರಿ ಚುನಾವಣೆಗೆ ಜಿಲ್ಲೆಯಾದ್ಯಂತ ಪ್ರತಿ ಒಂದೂವರೆ ಕಿ.ಮಿ.ಗೆ ಒಂದು ಮತಗಟ್ಟೆ ಸ್ಥಾಪಿಸ­ಲಾಗಿದೆ. ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ದೂರ ಇರಬಹುದು. ಅಂಥ ಕಡೆ ಕನಿಷ್ಠ ಶುಲ್ಕದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವುದು ಈಗಿನ ಚಿಂತನೆ ಎಂದು ಹೇಳಿದರು.

ಮತದಾನ ದಿನದಂದು ಯಾವುದೇ ರಾಜಕೀಯ ಪಕ್ಷ ವಾಹನ ವ್ಯವಸ್ಥೆ ಮಾಡಿದರೆ ನಿಯಮದ ಉಲ್ಲಂಘನೆ ಆಗಲಿದೆ. ಮತಗಟ್ಟೆ ದೂರ ಇದೆ ಎಂಬ ಕಾರಣದಿಂದಲೇ ಮತದಾನದಿಂದ ದೂರ ಉಳಿಯಬಾರದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳ­ಲಾಗುತ್ತಿದೆ ಎಂದು ಹೇಳಿದರು.ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಶೇ 70 ರಷ್ಟು ಮತದಾನ ಆಗಬೇಕೆಂಬ ಉದ್ದೇಶದಿಂದ ವಿವಿಧ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.ವಿದ್ಯಾವಂತರು ಇರುವ ನಗರ ಪ್ರದೇಶಗಳಲೇ ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ­ಯಾಗುತ್ತಿದೆ. ಸರ್ಕಾರದ ವ್ಯವಸ್ಥೆ ಬಗ್ಗೆ ವಿಮರ್ಶೆ ಮಾಡುವವರೆ ಮತದಾನ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಚಾರ್ಯ ಪ್ರಭು ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಆರತಿ ಆನಂದ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಜ್ವಲ್‌ ಕುಮಾರ್‌ ಘೋಷ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನ್ವಾರ್‌, ಪ್ರೊ. ಬಿ.ಆರ್. ಕೊಂಡಾ, ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾ­ಧಿಕಾರಿ ಡಾ. ಜಗನ್ನಾಥ ಹೆಬ್ಬಾಳೆ ಇದ್ದರು.ಮತಗಟ್ಟೆ ಅಧಿಕಾರಿಗಳಿಗೆ 28ರಂದು ತರಬೇತಿ:  ಚುನಾವಣಾ ಕರ್ತವ್ಯಕ್ಕಾಗಿ ಮತಗಟ್ಟೆ, ಅಧ್ಯಕ್ಷರಾಗಿ ನೇಮಕ ಆಗಿರುವ ಅಧಿಕಾರಿಗಳಿಗೆ ಇದೇ 28 ಮತ್ತು 29ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ತರಬೇತಿ ಅಯೋಜಿಸ­ಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕರ್ತವ್ಯಕ್ಕೆ ನಿಯೋಜನೆಗೊಂಡು ತರಬೇತಿಗೆ ಹಾಜರಾಗದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸ­ಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಜಾಫರ್ ತಿಳಿಸಿದ್ದಾರೆ.ಮತಯಂತ್ರಗಳ ಆಯ್ಕೆ ನಾಳೆ: ಲೋಕಸಭೆ ಚುನಾವಣೆಯಲ್ಲಿ ಬಳಕೆ­ಯಾಗುವ ವಿದ್ಯುನ್ಮಾನ ಮತಯಂತ್ರ­ಗಳ ಆಯ್ಕೆ ಪ್ರಕ್ರಿಯೆ ಮಾ. 22ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆಯಲಿದೆ. ಮಾನ್ಯತೆ ಪಡೆದ ಪಕ್ಷಗಳ ಪ್ರತಿನಿಧಿಗಳು ಬರಬೇಕು ಎಂದು ಹೇಳಿಕೆ ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.