‘ಮಲ್ಹಾರ್’ ಮಹೋತ್ಸವದಲ್ಲಿ

7

‘ಮಲ್ಹಾರ್’ ಮಹೋತ್ಸವದಲ್ಲಿ

Published:
Updated:

ಹೊರಗೆ ಮಳೆ ಸುರಿಯುತ್ತಿದ್ದರೆ ಮಲ್ಹಾರ ಸಂಗೀತೋತ್ಸವ ಮಳೆಯ ಕಂಪನ್ನು ಸಭಾಂಗಣದಲ್ಲೇ ಹರಡಿಸುವಂತಿತ್ತು. ಗುರುರಾವ್ ದೇಶಪಾಂಡೆ ಸಂಗೀತ ಸಭಾ ಪಂಡಿತ್ ಭೀಮಸೇನ ಜೋಷಿ ಅವರ ನೆನಪಿನಲ್ಲಿ ಕಳೆದ ವಾರ ಜೆಎಸ್ಎಸ್ ಸಭಾಂಗಣದಲ್ಲಿ ‘ಮಲ್ಹಾರ್’ ಎಂಬ ಸಂಗೀತ ಮಹೋತ್ಸವವನ್ನು ಆಯೋಜಿಸಿತ್ತು. ವಿದೂಷಿ ಆರತಿ ಆಂಕ್ಲಿಕರ್ ಟೀಕೆಕರ್ ಹಾಗೂ ಉಸ್ತಾದ್ ರಫೀಕ್ ಖಾನ್ ಅವರ ನಾದ ಲಹರಿಯಲ್ಲಿ ತೇಲುವ ಅವಕಾಶ ಬೆಂಗಳೂರಿನ ಶ್ರೋತೃಗಳದಾಗಿತ್ತು.ಧಾರವಾಡದ ಉಸ್ತಾದ್ ರಫಿಕ್ ಖಾನ್ ಗ್ವಾಲಿಯರ್ ಘರಾಣೆಗೆ ಸೇರಿದ ಸಂಗೀತ ಮನೆತನದ ಕುಡಿ. ಏಳು ತಲೆಮಾರುಗಳಿಂದ ಸಿತಾರ್ ವಾದನದ ನದಿ ಹರಿಯುತ್ತಲೇ ಇದೆ. ಇವರು ತಂದೆ ಕರೀಮ್ ಖಾನ್ ಹಾಗೂ ಅಣ್ಣ ಬಾಲೇ ಖಾನರ ಬಳಿ ಸಂಗೀತಾಭ್ಯಾಸ ಮಾಡಿದವರು. ಮೊದಲಿಗೆ ಕೆಲ ಹೊತ್ತು ಸುರ್ ಮಲ್ಹಾರ ರಾಗದ ನುಡಿಸಾಣಿಕೆಯಲ್ಲಿ ಕೇಳುಗರನ್ನು ತೇಲಿಸಿದ ಖಾನರು ನಂತರ ವಾಚಸ್ಪತಿ ರಾಗವನ್ನು ಪ್ರಸ್ತುತಪಡಿಸಿದರು.  ವಾಚಸ್ಪತಿ ರಾಗದ ಮೂಲ ಕರ್ನಾಟಕ ಸಂಗೀತ (೭೨ ಮೇಳಕರ್ತದಲ್ಲಿ ೬೪ನೇ ಮೇಳಕರ್ತರಾಗವಿದು. ಮುತ್ತುಸ್ವಾಮಿ ದೀಕ್ಷಿತರ ಶಾಲೆಯಲ್ಲಿ ಭೂಶವತಿ ಎಂದೂ ಇದನ್ನು ಕರೆಯುವುದುಂಟು) ಆಲಾಪ್ ಆಗಲೀ ಜೋಡ್-ಜಾಲಾಗಳನ್ನು ತಾಳದ ಚೌಕಟ್ಟಿನಲ್ಲಿ ವಿನ್ಯಾಸಗೊಳಿಸಿದ ರೀತಿ ಹಾಗೂ ಎಲ್ಲೂ ಪುನರಾವರ್ತಿತವಾಗದೇ ಪ್ರತೀ ತಾಳದ ಆವರ್ತನದಲ್ಲೂ ತುಂಬಿಕೊಳ್ಳುತ್ತಿದ್ದ ಅವರ ಸ್ವರ ಕಲ್ಪನೆಗಳು ಕೇಳುಗರಿಗೆ ಸ್ವರ ರಸದೌತಣ ನೀಡಿದವು.ಸಿತಾರ್ ತಂತಿಗಳನ್ನು ನೀರಿನಲ್ಲಿ ಕೈಯಾಡಿಸಿದಷ್ಟೇ ಸುಲಭವಾಗಿ ಮೀಟಿ, ರಾಗದ ಸೌಂದರ್ಯವನ್ನು ಹೆಕ್ಕುತ್ತಿದ್ದ ರಫೀಕ್ ಖಾನರ ವಾದನ ಸಂಗೀತ ರಸಿಕರನ್ನು ಅತ್ತಿತ್ತ ಅಲುಗಾಡದಂತೆ ಸೆರೆಹಿಡಿದಿತ್ತು. ಸವಾಲ್- ಜವಾಬು ಹಾಗೂ ತನಿ ನುಡಿಸಾಣಿಕೆಯಲ್ಲಿ ಶ್ರೋತೃಗಳನ್ನು ರಂಜನೆಯಲ್ಲಿ ಮೀಯಿಸಿದ ರಾಜೇಂದ್ರ ನಾಕೋಡರ ತಬಲಾ ವಾದನಕ್ಕೂ ಕರತಾಡನದ ಮೆಚ್ಚುಗೆ.ಬಿಜಾಪುರ ಮೂಲದ ಆರತಿ ಅಂಕ್ಲಿಕರ್ ಆಗ್ರಾ ಹಾಗೂ ಗ್ವಾಲಿಯರ್-ಅತ್ರೌಳಿ ಘರಾಣೆಗಳೆರಡರಲ್ಲೂ ಪ್ರಭುತ್ವ ಸಾಧಿಸಿದವರು. ಬೇರೆ ಬೇರೆ ಘರಾಣೆಗೆ ಸೇರಿದ ಹಲವು ಗುರುಗಳ ಬಳಿ ಸಂಗೀತಾಭ್ಯಾಸವನ್ನು ಮಾಡಿರುವ ಆರತಿ ಅವರ ಗಾಯನ ಶೈಲಿ ವಿಶಿಷ್ಟವಾದದ್ದು. ಬೆಂಗಳೂರಿನ ಶ್ರೋತೃಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಅವರು ಗಾಯನ ಆರಂಭಿಸಿದರು. ಮಲ್ಹಾರ ಉತ್ಸವಕ್ಕೆ ಮಿಯಾ ಮಲ್ಹಾರ್ (ಕಾಫಿ ಥಾಟ್) ರಾಗದಲ್ಲಿ ಗಾಯನವನ್ನು ಆರಂಭಿಸಿದರು. ತೀನ್ ತಾಳದಲ್ಲಿ ರೂಪಿತಗೊಂಡ ‘ಧೂಂಡೋರೆ ಆವೆ’ ಹಾಗೂ ‘ಸರಸಿ ಶ್ಯಾಮಂದರ್’ ಎಂಬ ಬಂದಿಶ್‌ಗಳು ಮಲ್ಹಾರದ ಘಮವನ್ನು ತಂದಿತ್ತವು.ಹಾಗೂ ‘ರಾಮದಾಸಿ ಮಲ್ಹಾರ್’ (ಕಾಫಿ ಥಾಟ್) ರಾಗಗಳನ್ನು ಪ್ರಸ್ತುತಪಡಿಸಿದರು. ಪ್ರತಿಯೊಂದು ರಾಗದಲ್ಲೂ ಮಂದ್ರ ಸ್ಥಾಯಿಯಿಂದ ನಿಧಾನವಾಗಿ ಆರಂಭಗೊಳ್ಳುತ್ತಿದ್ದ ಗಾಯನ  ಒಂದೊಂದು ಹಂತದಲ್ಲೂ ಒಂದಷ್ಟು ಕೆಲಸಗಳನ್ನು ಮಾಡಿದ ನಂತರ ಮುಂದಿನ ಹಂತಕ್ಕೆ ತಲುಪುತ್ತಿದ್ದ ರೀತಿ ಗಾಯನದ ಪ್ರೌಢಿಮೆಗೆ ಹಿಡಿದ ಕನ್ನಡಿಯಾಗಿತ್ತು. ರಾಮದಾಸಿ ಮಲ್ಹಾರ್ ರಾಗದಲ್ಲಿ ಹಾಡಿದ ನಾದ ಬ್ರಹ್ಮ ಪರಮೇಶ್ವರಿ ಎಂಬ ಬಂದಿಶ್ ಅಂತೂ ಕರ್ಣಾನಂದವಾಗಿತ್ತು. ಕೊನೆಗೆ ‘ಆವೋ ಸಬ ಸಖಿಯಾ’ ಎಂಬ ಒಂದು ಝೂಲಾ ಹಾಗೂ ಸಂತ ಸೋಯರಾಬಾಯಿ ರಚಿತ ಮರಾಠಿ ಅಭಂಗವನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ಹಾರ್ಮೊನಿಯಂನಲ್ಲಿ ಡಾ. ರವೀಂದ್ರ ಕಾಟೋಟಿ ಹಾಗೂ ತಬಲಾ ವಾದನದಲ್ಲಿ ಗುರುಮೂರ್ತಿ ವೈದ್ಯರ ಸಾಥ್ ಆರತಿಯವರ ಗಾಯನಕ್ಕೆ ಪೂರಕವಾಗಿತ್ತು.ಶ್ರಾವಣ ಸಂಭ್ರಮ

ಆಷಾಢ ಮಾಸ ಕಳೆದು ಶ್ರಾವಣ ಬಂತೆಂದರೆ ಸಾಕು ಹಿಂದೂ ಸಂಪ್ರದಾಯದಲ್ಲಿ ಅಲ್ಲಿಂದ ಹಬ್ಬ ಹರಿದಿನಗಳ ಸರಮಾಲೆಯೇ ಆರಂಭವಾಗುತ್ತದೆ. ಅದೇ ಶ್ರಾವಣ ನಮ್ಮ ಎಷ್ಟೋ ಕವಿ ಮನಗಳಿಗೆ ಸ್ಫೂರ್ತಿಯಾಗಿಲ್ಲ ಹೇಳಿ. ದ.ರಾ ಬೇಂದ್ರೆಯವರಂತೂ ‘ಶ್ರಾವಣಾ ಬಂತು ಘಟ್ಟಕ್ಕ, ರಾಜ್ಯ ಪಟ್ಟಕ್ಕ, ಬಾನ ಮಟ್ಟಕ್ಕ. ಏರ್ಯಾವ ಮುಗಿಲು ರವಿ ಕಾಣೆ ಹಾಡೆ ಹಗಲು’ ಎಂದು ಪಟ್ಟಕ್ಕೆ ಬಂದ ಶ್ರಾವಣದ ಕಾಲದಲ್ಲಿ, ಪ್ರಕೃತಿ ಕಂಗೊಳಿಸುವ ಪರಿಯನ್ನು ಎಳೆ ಎಳೆಯಾಗಿ ತಮ್ಮ ಶ್ರಾವಣ ಪದ್ಯದಲ್ಲಿ ವರ್ಣಿಸಿದ್ದಾರೆ. ಇದೇ ಶ್ರಾವಣದ ಅಂಗವಾಗಿ ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿಯು ಶ್ರಾವಣ ಸಂಗೀತೋತ್ಸವವನ್ನು ಹಮ್ಮಿಕೊಂಡಿತ್ತು.ಪಂ. ಬಸವರಾಜ ಬೆಂಡೀಗೇರಿಯವರ ಶಿಷ್ಯರಾದ ಹಂಪಿಹೊಳಿ ಅವರು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಾಗಿನಿಂದಲೂ ಸಂಗೀತ ಕ್ಷೇತ್ರದಲ್ಲಿ ಅವಿರತ ದುಡಿಯುತ್ತಿರುವವರು. ತಮ್ಮ ಸಂಗೀತ ಶಾಲೆಯಲ್ಲಿ ಕಲಿಯುವ ಎಲ್ಲಾ ಮಕ್ಕಳ ಜೊತೆಗೆ ಉದಯೋನ್ಮುಖ ಕಲಾವಿದರುಗಳನ್ನು ಹುಡುಕಿ, ಸಂಗೀತ ವೇದಿಕೆಯಲ್ಲಿ ಹಾಡಲು ಅವಕಾಶ ಮಾಡಿಕೊಡುವ ಕೈಂಕರ್ಯವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಗುರು ಮ್ಯೂಸಿಕ್ ಅಕಾಡೆಮಿ ನಡೆಸಿಕೊಡುವ ಹಲವಾರು ಕಾರ್ಯಕ್ರಮಗಳಲ್ಲಿ ಶ್ರಾವಣದ ಸಂಗೀತ ಕಾರ್ಯಕ್ರಮವೂ ಒಂದು.ಅಕಾಡೆಮಿಯ ಪ್ರತಿಭೆಗಳಾದ ಆಕಾಂಕ್ಷಾ ಬಾದಾಮಿ, ಪ್ರೇರಣಾ ಚಿದಾನಂದ, ಅರ್ಪಿತಾ ಬೆಂಕಿಪೂರ, ಕೃತಿ, ಭಾವನಾ ಬಾನು, ಸ್ನೇಹಾ ಕೇಣಿ ಹಾಗೂ ಕೀರ್ತನಾ ಅಲೇಖ್ ಶ್ರಾವಣದ ಸೊಗಸನ್ನು ಗಾಯನದ ಮೂಲಕ ವ್ಯಕ್ತಪಡಿಸಿದ ರೀತಿಗೆ ಕೇಳುಗರಿಂದ ಹಾಗೂ ಬಿ.ಕೆ ಸುಮಿತ್ರಾ ಅವರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಜೊತೆಗೆ ಚಿಕ್ಕ ವಯಸ್ಸಿಗೇ ಸುಮಾರು ಸಾವಿರ ಕಾರ್ಯಕ್ರಮಗಳನ್ನು ನೀಡಿರುವ ಉದಯೋನ್ಮುಖ ತಬಲಾ ವಾದಕ ಅಭಯ್ ಕುಲಕರ್ಣಿ ಹಾಗೂ ಮತ್ತೊಂದು ಯುವ ಪ್ರತಿಭೆ ಅಮಿತ್ ಭಟ್ ಸೋಲೊ ತಬಲಾ ವಾದನವನ್ನು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry