ಗುರುವಾರ , ಜೂನ್ 24, 2021
29 °C
ತಿ. ನರಸೀಪುರ: ಕೃಷಿ ಉತ್ಸವ– 2014ಕ್ಕೆ ತೆರೆ

‘ಮಹಿಳಾ ಮೀಸಲಾತಿ ಜಾರಿಗೆ ಇಚ್ಛಾಶಕ್ತಿ ಕೊರತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ. ನರಸೀಪುರ: ಮಹಿಳೆಯರು ಜೀವನದಲ್ಲಿ ಮೊದಲು ಗುರಿ ಇಟ್ಟುಕೊಳ್ಳಬೇಕು. ನಂತರ ಅದನ್ನು ತಲುಪುವತ್ತ ನಿರಂತರ ಪ್ರಯತ್ನ ಮಾಡಬೇಕು ಎಂದು ಮಾಜಿ ಶಾಸಕಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾವೀರಪ್ಪಗೌಡ ಸಲಹೆ ನೀಡಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧುಗಳ ಸ್ವಸಹಾಯ ಸಂಘಗಳ ಒಕ್ಕೂಟ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಹಾಗೂ ಇತರೆ ಇಲಾಖೆಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೃಷಿ ಉತ್ಸವದಲ್ಲಿ ಭಾನುವಾರ ‘ಮಹಿಳಾ ಸಬಲೀಕರಣ’ ಕುರಿತ ಉಪನ್ಯಾಸ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳಾ ಮೀಸಲಾತಿ ಜಾರಿಗೆ ತರಲು ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಆದರೆ, ನಾವು ಹೋರಾಟ ಬಿಡಬಾರದು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶ ದೊರಕಿಸಲು ಇನ್ನೂ ಎಡರು ತೊಡರುಗಳಿವೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವೀರೇಂದ್ರ ಹೆಗ್ಗಡೆ ದಂಪತಿ ಜನಪರ ಕಾಳಜಿ ಹಾಗೂ ಗ್ರಾಮೀಣ ಜನರ ನೋವು– ನಲಿವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯು ಜನಾಭಿವೃದ್ಧಿ ಯೋಜನೆಗಳನ್ನು ನೀಡಿದ್ದು, ಅವುಗಳನ್ನು ಬಳಸಿಕೊಂಡು ಮಹಿಳೆಯರು ಸಬಲರಾಗಬೇಕು ಎಂದು ಸಲಹೆ ನೀಡಿದರು.ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ಶಾರದ ವಿಲಾಸ ಕಾಲೇಜಿನ ಉಪನ್ಯಾಸಕಿ ಪ್ರೊ.ವಿಮಲಾಶ್ರೀ ಮತ್ತು ಕೆಆರ್‌ಎಸ್‌ ಸರ್ಕಾರಿ ಕಾಲೇಜಿನ ಪ್ರೊ.ಪ್ರಶಾಂತಿ ಅವರು ‘ಮಹಿಳಾ ಸಬಲೀಕರಣ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ದ ಬಗ್ಗೆ  ಮಾತನಾಡಿದರು. ಮಹಿಳೆಯರ ಸಾಧನೆ, ನಿರ್ವಹಿಸಬೇಕಾದ ಜವಬ್ದಾರಿಗಳು, ಹಿಂದಿನ ಮಹಿಳೆಯರಲ್ಲಿದ್ದ ಜಾನಪದ ಹಿನ್ನೆಲೆ, ಗ್ರಾಮೀಣ ಮಹಿಳೆಯರ ಸೊಗಡು ಹಾಗೂ ಮಹಿಳೆಯರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಉಪನ್ಯಾಸ ನೀಡಿದರು.ಇದಲ್ಲದೆ, ಲಾಭದಾಯಕ ಹೈನುಗಾರಿಕೆ ಹಾಗೂ ಇತರೆ ಪಶುಸಂಗೋಪನೆ ಮತ್ತು ಆಹಾರ ಬೆಳೆಗಳ ಮೌಲ್ಯವರ್ಧನೆ ಬಗ್ಗೆ ಪ್ರತ್ಯೇಕ ಉಪನ್ಯಾಸ ನಡೆಯಿತು.ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಮಾಡ್ರಹಳ್ಳಿ ಶಂಕರ್ ಗುರು, ಉತ್ಸವ ಸಮಿತಿ ಅಧ್ಯಕ್ಷ ಹೊನ್ನನಾಯಕ. ಎಸ್.ಎನ್. ಸಿದ್ಧಾರ್ಥ, ಉಪಾಧ್ಯಕ್ಷ ಸಿದ್ದಲಿಂಗಮೂರ್ತಿ, ಪ್ರಧಾನ ಸಂಚಾಲಕ ಮಹಾಬಲ್ ಕುಲಾಲ್, ಕೆ.ಎನ್. ಪ್ರಭುಸ್ವಾಮಿ, ಯೋಜನಾಧಿಕಾರಿ ಮೋಹನ್ ನಾಯ್ಕ, ಕಿರಗಸೂರು ಶಂಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಜ್ರೇಗೌಡ, ಕುಮಾರಿ ನೇತ್ರಾವತಿ, ಟಿಎಪಿಸಿಎಸ್ಎಂಎಸ್ ಅಧ್ಯಕ್ಷ ಸುಬ್ರಹ್ಮಣ್ಯ, ರೈತ ಮುಖಂಡ ಮಾದಾಪುರ ಶಿವಣ್ಣ, ವಕೀಲ ತೊಟ್ಟವಾಡಿ ಮಹದೇವಸ್ವಾಮಿ, ಹೈನುಗಾರಿಕೆಯ ಯೋಗೇಶ್ ಕುಮಾರ್, ಜ್ಞಾನ ವಿಕಾಸ ಯೋಜನೆಯ ಮಂಜುಳಾ, ಕೃಷಿ ವಿಭಾಗದ ನೇಮನಗೌಡ,  ಕಳ್ಳಿಪುರ ಮಹದೇವಸ್ವಾಮಿ ಇತರರು ಇದ್ದರು.ಶನಿವಾರದಿಂದ ನಡೆದ ಎರಡು ದಿನಗಳ ಕೃಷಿ ಉತ್ಸವದಲ್ಲಿ  ಟೊಮೆಟೊ ಹಣ್ಣಿನ ಮಂಟಪ, ಗುಡಿ ಕೈಗಾರಿಕೆಗಳ ಪ್ರದರ್ಶನ, ಪುಸ್ತಕ ಪ್ರದರ್ಶನ, ಪ್ರಗತಿ ಪರ ರೈತ ಸಿದ್ದನಹುಂಡಿ ಶ್ರೀನಿವಾಸಮೂರ್ತಿ ಏರ್ಪಡಿಸಿದ್ದ ದೇಸಿ ಭತ್ತದ ತಳಿಗಳ ಪ್ರದರ್ಶನ, ಭತ್ತ ತಳಿಯ ನಾಟಿ ಪದ್ಧತಿ, ಹಳ್ಳಿ ಮನೆ, ಕಬ್ಬಿನ ಮನೆ, ರೈತ ಕುಟುಂಬ, ಬಾಳೆ ಬೆಳೆಯ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಮಾದರಿಗಳಿದ್ದವು. ರಾಸಾಯನಿಕ ವಸ್ತುಗಳನ್ನು ಬಳಸದೇ ಬೆಳೆದ ಹಣ್ಣುಗಳ ಪ್ರದರ್ಶನ ಹಾಗೂ ಸ್ಥಳಿಯ ಕಲಾವಿದ ಎನ್‌. ರಘುನಂದನ್‌ ನಿರ್ಮಿಸಿದ್ದ ಮರಳಿನ ಶಿವ ಮೂರ್ತಿ ಗಮನ ಸೆಳೆದವು.ಇದಲ್ಲದೇ, ತೋಟಗಾರಿಕೆ, ಕೃಷಿ, ಶಿಕ್ಷಣ ಇಲಾಖೆಯ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳ ಮಾಹಿತಿ, ನಾರಿನಿಂದ ತಯಾರಾದ ವಸ್ತುಗಳ ಪ್ರದರ್ಶನ ಸೇರಿದಂತೆ ವಿವಿಧ ಖಾಸಗಿ ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಿದ್ದವು. ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳಾ ಸಂಘಟನೆಗಳು, ಪ್ರಗತಿಪರ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.