‘ಮಹಿಳೆಯನ್ನು ನೋಡುವ ನೋಟ ಬದಲಾಗಬೇಕು’

7

‘ಮಹಿಳೆಯನ್ನು ನೋಡುವ ನೋಟ ಬದಲಾಗಬೇಕು’

Published:
Updated:

ಮಂಡ್ಯ:'ಹೆಣ್ಣಿನ ಶೋಷಣೆಯ ಮೂಲ ನೆಲೆ ಲೈಂಗಿಕತೆಯೇ ಆಗಿದ್ದು, ತನ್ನ ದೇಹದ ಕಾರಣಕ್ಕಾಗಿ ಆಕೆ ದಿನನಿತ್ಯ ಒಂದಲ್ಲಾ ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾಳೆ. ಎಲ್ಲರೂ ಎಲ್ಲದರಲ್ಲಿ, ಎಲ್ಲರಲ್ಲೂ ಒಳ್ಳೆಯದನ್ನು ಕಾಣುವ, ಪರಸ್ಪರರನ್ನು ಗೌರವದಿಂದ ನೋಡುವ ದೃಷ್ಟಿಕೋನ ಹೊಂದಿದರೆ ಆಕೆಯ ಮೇಲಿನ ದೌರ್ಜನ್ಯಗಳು ನಿಲ್ಲಬಹುದೇನೋ...’ಇದು, ಗೋಕುಲ ಪಬ್ಲಿಷರ್ಸ್‌ ಮತ್ತ ಮಂಗಲ ಗ್ರಾಮದ ಭೂಮಿ ಬೆಡಗು ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ‘ಕೆಂಗುಲಾಬಿ’ ಕಾದಂಬರಿ ಕುರಿತು ಲೇಖಕ ಹನುಮಂತ ಹಾಲಿಗೇರಿ ಅವರೊಂದಿಗೆ ಏರ್ಪಡಿಸಿದ್ದ ಆಪ್ತ ಸಂವಾದಲ್ಲಿ ವ್ಯಕ್ತವಾದ ಅಭಿಪ್ರಾಯ.ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆಗಳು ನಿಲ್ಲಬೇಕಾದರೆ ಆಕೆಯನ್ನು ಅಸಹನೀಯವಾಗಿ, ನಿಕೃಷ್ಟವಾಗಿ ನೋಡುವ ಸಮಾಜದ ಭಾವನೆ, ನೋಟ ಕೂಡ ಬದಲಾಗಬೇಕೆ ಹೊರತು, ಕಾನೂನಿನ ಕಟ್ಟಲೆಗಳಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದವು.ಲೇಖಕ ಹನುಮಂತ ಹಾಲಿಗೇರಿ ಮಾತನಾಡಿ, ‘ಹೆಣ್ಣಿನ ಮೇಲಿನ ಶೋಷಣೆಗಳಿಗೆ ಹಲವು ಮುಖಗಳಿವೆ. ವೇಶ್ಯಾ  ಪ್ರವೃತ್ತಿಯ ಕತ್ತಲ ಬದುಕಿಗೆ ಮಹಿಳೆ ಪ್ರವೇಶಿಸಲು ಧರ್ಮ, ಸಮಾಜ, ಆರ್ಥಿಕ ಸ್ಥಿತಿ, ರಾಜಕೀಯ ವ್ಯವಸ್ಥೆ ಸೇರಿ ಹಲವು ಕಾರಣಗಳಿರಬಹುದು. ಆದರೆ, ಯಾರೊಬ್ಬರೂ ಇಚ್ಛೆ ಪಟ್ಟು ಈ ವೃತ್ತಿಗೆ ಬರುವುದಿಲ್ಲ’ ಎಂದರು.ನನ್ನೂರಿನ ಬಾಗಲಕೋಟೆ, ಮುಧೋಳ, ಹೊಸಪೇಟೆ ಸೇರಿದಂತೆ ವಿವಿಧೆಡೆ ನೋಡಿದ ವೇಶ್ಯೆಯರ ಕತ್ತಲಿನ ಬದುಕು ನನ್ನ ಕಥೆಗೆ ಪ್ರೇರಣೆ.ಒಬ್ಬೊಬ್ಬ ವೈಶ್ಯರದೂ, ವಿಭಿನ್ನ ಕಥೆ. ಅದಕ್ಕೆ ಅಕ್ಷರ ರೂಪ ನೀಡಿದ್ದೇನೆ. ಒಮ್ಮೆ ಮಹಿಳೆಯು ವೇಶ್ಯಾವೃತ್ತಿಗೆ ಇಳಿದು, ಹೊರಬಂದರೂ ಬದುಕಿನ ಮೇಲಿನ ಕಳಂಕ ಹಾಗೆ ಉಳಿದುಬಿಡುತ್ತದೆ ಎಂದರು.ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ಸ್ವಾಭಿಮಾನದ ಬದುಕು ನಡೆಸುತ್ತೇನೆ ಎಂಬ ನಿಲುವು ತಾಳಿದರೆ, ಇಂಥ ಅನಿಷ್ಟಗಳು ತನ್ನಿಂತಾನೆ ಕೊನೆಯಾಗುತ್ತವೆ ಎಂದು ಹೇಳಿದರು.ಪ್ರೊ. ಜಿ.ಟಿ. ವೀರಪ್ಪ, ಸಂದೀಪ್‌, ಅನಿತಾ, ರಮೇಶ್‌, ರಾಜೇಂದ್ರಸಿಂಗ್‌ ಬಾಬು ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಗೋಕುಲ ಪಬ್ಲಿಷರ್ಸ್‌ನ ಶಿವಕುಮಾರಾಧ್ಯ ಸಂವಾದ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry