ಗುರುವಾರ , ಜೂನ್ 24, 2021
25 °C

‘ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಮಾಧ್ಯಮಗಳು ಇಂದು ಜನಾಭಿಪ್ರಾಯ ಮೂಡಿಸುವುದಕ್ಕಿಂತ ಜನಾಭಿಪ್ರಾಯ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಅಭಿಪ್ರಾಯ ಆಧಾರಿತ ಪತ್ರಿಕೋದ್ಯಮ ಮಾದರಿ ಪತ್ರಿಕೋದ್ಯಮ ಆಗಲಾರದು’ ಎಂದು ಮೈಸೂರಿನ ಮಾನಸಗಂಗೋತ್ರಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ. ಎನ್‌. ಉಷಾರಾಣಿ ಅಭಿಪ್ರಾಯಪಟ್ಟರು.ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದವರು ಹಮ್ಮಿಕೊಂಡಿದ್ದ ಅಂತರಕಾಲೇಜು ಮಟ್ಟದ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಮಾಧ್ಯಮಗಳ ಸಮ್ಮಿಲನವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮೊಬೈಲ್‌ ಸಹ ಪ್ರಮುಖ ಸುದ್ದಿ ಮಾಧ್ಯಮವಾಗಬಹುದು. ಇಂಥ ಸನ್ನಿವೇಶದಲ್ಲಿ ಪತ್ರಿಕೋದ್ಯಮ ವಿಭಾಗಗಳು ವಿದ್ಯಾರ್ಥಿಗಳಿಗೆ ಏನನ್ನು ಕಲಿಸಬೇಕು ಎಂಬುದೇ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಪತ್ರಿಕೆ ಅಥವಾ ಬೇರೆ ಮಾಧ್ಯಮಕ್ಕೆ ಸೇರಿದಾಗ ಕಾಲೇಜಿನಲ್ಲಿ ಕಲಿತಿರುವುದನ್ನು ಮರೆಯಬೇಕಾಗುತ್ತಿದೆ. ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟ ಕುಸಿಯಲು ವಿಭಾಗಗಳು ಮತ್ತು ಪತ್ರಿಕೋದ್ಯಮ ಶಿಕ್ಷಕರೂ ಕಾರಣ ಎಂದರು.‘ಅಭಿಪ್ರಾಯ ಆಧಾರಿತ ಪತ್ರಿಕೋದ್ಯಮ ಬಂದಾಗಿನಿಂದ ಮಾಧ್ಯಮಗಳ ಗುಣಮಟ್ಟವೂ ಕುಸಿಯುತ್ತಿದೆ. ಇಂದು ಮಾಧ್ಯಮಗಳು ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿಲ್ಲ. ಒಂದು ರೀತಿಯಲ್ಲಿ ಮಾಧ್ಯಮಗಳೂ ಸಹ ಆತ್ಮಾವಲೋಕನ ಮಾಡಬೇಕಾದ ಕಾಲ ಈಗ ಬಂದಿದೆ’ ಎಂದು ಉಷಾರಾಣಿ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್‌.ಬಿ. ಮದನಗೌಡ ಹಾಗೂ ಕೆ.ಆರ್‌.ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಸ್‌.ಜಿ. ರಾಘವೇಂದ್ರ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ರೂಪರಾಜ್‌ ಚಂದನ್‌ ಎಚ್‌.ಎನ್‌. ಅಧ್ಯಕ್ಷತೆ ವಹಿಸಿದ್ದರು.ಮೈಸೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಜೆವರೆಗೆ ನಡೆದ ಮಾಧ್ಯಮ ಹಬ್ಬದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.