ಭಾನುವಾರ, ಮಾರ್ಚ್ 7, 2021
31 °C

‘ಮಾಧ್ಯಮ ಕ್ಷೇತ್ರದ ಆತ್ಮವಿಮರ್ಶೆಗೆ ಸಕಾಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾಧ್ಯಮ ಕ್ಷೇತ್ರದ ಆತ್ಮವಿಮರ್ಶೆಗೆ ಸಕಾಲ’

ಹುಬ್ಬಳ್ಳಿ: ‘ಸಮಾಜದಲ್ಲಿನ ಅನಪೇಕ್ಷಿತ ಬೆಳ­ವಣಿಗೆ­­ಗಳ ಪ್ರತಿಫಲನ ಮಾಧ್ಯಮ ಕ್ಷೇತ್ರದ ಮೇಲೂ ಆಗಿದ್ದು, ಸಂವಿಧಾನದ ನಾಲ್ಕನೇ ಅಂಗಕ್ಕೆ ಜನರಿಂದ ಕಲ್ಲು ಹೊಡೆಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸಿನಿಕತನ ಬಿಟ್ಟು ಆತ್ಮ ವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ’ ಎಂದು ಮಯೂರ ಮಾಸ ಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್‌. ಪೂರ್ಣಿಮಾ ಅಭಿಪ್ರಾಯಪಟ್ಟರು.ಇಲ್ಲಿನ ಕೆಎಲ್‌ಇ ಸಂಸ್ಥೆಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ‘ಮಾಧ್ಯಮ; ವರ್ತಮಾನ ಮತ್ತು ಭವಿಷ್ಯ’ ಕುರಿತಾದ ರಾಜ್ಯ­ಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯ­ಮೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.‘ದೃಶ್ಯ ಚೆನ್ನಾಗಿ ಕಾಣುತ್ತದೆ ಎಂಬ ಕಾರಣಕ್ಕೆ, ಟಿಆರ್‌ಪಿಗೆ ಜೋತುಬಿದ್ದು ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಬೇಕಾದ ವಿಚಾರಗಳನ್ನು ಕ್ಯಾಮೆರಾ ಎದುರು ತರುವ ಕೆಲಸ ನಡೆ­ಯುತ್ತಿದೆ. ಬದಲಿಗೆ ಕೌಟುಂಬಿಕ ಸಂಘರ್ಷ­ಗಳನ್ನು ಬಗೆಹರಿಸಿಕೊಳ್ಳಲು ಬೇರೆಯದೇ ಮಾರ್ಗಗಳಿವೆ ಎಂದು ಸಾರ್ವಜನಿಕರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಧ್ಯಮ ಕ್ಷೇತ್ರ ಮಾಡಬೇಕಿದೆ’ ಎಂದು ಕಿವಿಮಾತು ಹೇಳಿದರು.ಸರ್ವಾಧಿಕಾರಿ ಧೋರಣೆ ಇರುವ ಯಾವುದೇ ವ್ಯಕ್ತಿಯೂ ಮಾಧ್ಯಮಗಳನ್ನು ಇಷ್ಟಪಡುವುದಿಲ್ಲ. ತುರ್ತುಪರಿಸ್ಥಿತಿಯ ವೇಳೆಯೂ ಇದೇ ಪರಿಸ್ಥಿತಿ ಎದುರಾಗಿತ್ತು. ರಾಷ್ಟ್ರೀಯ ಚಳವಳಿ, ಏಕೀ­ಕರಣದ ಆದರ್ಶದೊಟ್ಟಿಗೆ ಬೆಳೆದು ಬಂದಿದ್ದ ಪತ್ರಿ­ಕೋದ್ಯಮ ಅಂತಹ ವಿಪ್ಲವ ಪರಿಸ್ಥಿತಿಯಲ್ಲಿ ತನ್ನನ್ನು ರಕ್ಷಿಸಿಕೊಂಡಿತ್ತು. 90ರ ದಶಕದಲ್ಲಿ ದೇಶ ಜಾಗತೀಕರಣ ಒಪ್ಪಿಕೊಂಡಿದ್ದು, ಅದರ ಪ್ರಭಾವ­ದಿಂದ ಮಾತ್ರ ಮಾಧ್ಯಮಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಬದ್ಧತೆಯೇ ತಂತ್ರಾಂಶ (ಸಾಫ್ಟ್‌­ವೇರ್) ಆಗಿದೆ. ಅದನ್ನು ಹೊರತುಪಡಿಸಿ ಬೇರೆ ಇಂಧನ ಇರಲು ಸಾಧ್ಯವೇ ಇಲ್ಲ. ಮಾಧ್ಯಮ­ಗಳಲ್ಲಿ ಈಗ ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಕಾಣೆಯಾಗಿದೆ ಎಂದು ಸಿನಿಕರಾಗುವುದು ಅಥವಾ ನಿರಾಶೆ ಹೊಂದುವುದು ಸರಿಯಲ್ಲ. ಈ ವಿಚಾರದಲ್ಲಿ ಆಮ್‌ ಆದ್ಮಿ ಪಕ್ಷದ ಸ್ಥಾಪಕ ಅರವಿಂದ ಕ್ರೇಜಿವಾಲ್‌ ಹೇಳಿಕೆಯೂ ಪೂರ್ಣ ಸತ್ಯವಲ್ಲ. ಭವಿಷ್ಯದಲ್ಲಿ ನಂಬಿಕೆ ಕಳೆದುಕೊಳ್ಳದೇ ­ಸಾಮಾಜಿಕ ಬದ್ಧತೆಯ ತಂತ್ರಾಂಶ ಡೌನ್‌­ಲೋಡ್ ಮಾಡಿಕೊಳ್ಳುವಂತೆ ಕಿರಿಯ ಮಿತ್ರರಿಗೆ ಸಲಹೆ ನೀಡಿದರು.‘ದೇವಸ್ಥಾನದೊಳಗೆ ದಲಿತರಿಗೆ ಪ್ರವೇಶ ನಿರಾಕರಿಸುವ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವ ಕೆಲಸ ಈಗಲೂ ಮುಂದುವರೆದಿದೆ. ಮಾಧ್ಯಮ ಕ್ಷೇತ್ರದ ಆದ್ಯತೆಯ ವಿಚಾರಗಳು ಇವೇ ಆಗಬೇಕಿದ್ದು, ಸಮಾಜದ ಒಳಿತಿಗೆ ದುಡಿಯಬೇಕಿದೆ. ವರ್ತಮಾನ ಹೀಗಿದೆ; ಭವಿಷ್ಯ ಬೇರೆಯಾಗಿರಲಿ’ ಎಂದು ಆಶಿಸಿದರು.ಧಾರವಾಡ ಆಕಾಶವಾಣಿ ನಿರ್ದೇಶಕ ಸಿ.ಯು.­ಬೆಳ್ಳಕ್ಕಿ ಮಾತನಾಡಿ, 100 ವರ್ಷಗಳ ಹಿಂದೆಯೇ ಟೈಟಾನಿಕ್‌ ಹಡಗು ಮುಳು­ಗುತ್ತಿರುವ ಸಂದೇಶವನ್ನು ಬೇರೊಂದು ಹಡಗಿಗೆ ಕಳುಹಿಸಿ 700 ಜನರ ಜೀವ ಉಳಿಸಿದ ಶ್ರೇಯ ರೇಡಿಯೋಗೆ ಸಲ್ಲುತ್ತದೆ. ಮಾಧ್ಯಮ ಪ್ರವಾಹದ ನಡುವೆಯೂ ತನ್ನತನ ಹಾಗೂ ಪ್ರಭಾವಿ ಸಂವಹನ ಸಾಮರ್ಥ್ಯ ರೇಡಿಯೋ ಉಳಿಸಿ­ಕೊಂಡಿದೆ ಎಂದರು. ದೇಶದಾದ್ಯಂತ ಐದು ಸಾವಿರ ಸಮೂಹ ರೇಡಿಯೋ ಕೇಂದ್ರಗಳನ್ನು ತೆರೆ­ಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. 857 ಖಾಸಗಿ ಎಫ್ಎಂ ಆರಂಭಿಸಲಾಗುತ್ತಿದೆ. ರೇಡಿಯೋ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋ­ಗಾವಕಾಶಗಳಿವೆ ಎಂದು ಸಲಹೆ ನೀಡಿದರು.‘ಕೆಎಲ್‌ಇ ಧ್ವನಿ’ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ, ಪತ್ರಕರ್ತ ಅಜಿತ್ ಹನುಮಕ್ಕನವರ ಮಾತ­ನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಅರುಣಕುಮಾರ ಹಬ್ಬು ಪ್ರಾಸ್ತಾವಿಕ­ವಾಗಿ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಸಿ.ಬಿ.ಪಾಟೀಲ, ಕಾಲೇಜಿನ ಪ್ರಾಚಾರ್ಯ ಎಂ.ಟಿ.ಕುರಣಿ ಹಾಜರಿದ್ದರು.ಹಿರಿಯ ಪತ್ರಕರ್ತರ ಜೊತೆ ವಿದ್ಯಾರ್ಥಿಗಳ ಸಂವಾದ

ಮಾಧ್ಯಮೋತ್ಸವದ ಅಂಗವಾಗಿ ಹಿರಿಯ ಪತ್ರಕರ್ತರಾದ ರಾಜು ವಿಜಾಪುರ, ಮೋಹನ ಹೆಗಡೆ, ಹರ್ಷವರ್ಧನ ಶೀಲವಂತ, ಅಮರೇಗೌಡ ಗೋನಾವರ, ಅಜಿತ್ ಹನುಮಕ್ಕನವರ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಡಾ.ಆರ್.ಪೂರ್ಣಿಮಾ, ಗೋಪಾಲಕೃಷ್ಣ ಹೆಗಡೆ ಹಾಗೂ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ಪಾಲ್ಗೊಂಡಿದ್ದರು.

ಛಾಯಾಚಿತ್ರಗಳ ಪ್ರದರ್ಶನ

ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ಕಿರಣ್‌ ಬಾಕಳೆ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಮಾಧ್ಯಮೋತ್ಸವದ ಹೈಲೈಟ್ ಆಗಿತ್ತು. 1984ರಿಂದ ಅವಳಿ ನಗರದ ರಾಜಕೀಯ, ಸಾಮಾಜಿಕ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದ ವಿದ್ಯಮಾನಗಳನ್ನು ಹಿಡಿದಿಟ್ಟ ಅಪರೂಪದ ಛಾಯಾ­ಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ರಮೇಶ ಪಾಟೀಲ, ಪ್ರದರ್ಶನ ಉದ್ಘಾಟಿಸಿದರು. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹುಬ್ಬಳ್ಳಿಗೆ ಬಂದ ಸಂದರ್ಭ, ಈದ್ಗಾ ಮೈದಾನದ ಗಲಭೆಯ ಚಿತ್ರಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 10 ವರ್ಷಗಳ ಹಿಂದೆ ಕಾಡಿದ್ದ ಬರದ ಭೀಕರ ಚಿತ್ರಗಳು ನೋಡುಗರ ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.