ಮಂಗಳವಾರ, ಮಾರ್ಚ್ 9, 2021
18 °C

‘ಮೀಸಲಾತಿಯಿಂದ ಬಸವಣ್ಣನ ಆಶಯಕ್ಕೆ ಧಕ್ಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೀಸಲಾತಿಯಿಂದ ಬಸವಣ್ಣನ ಆಶಯಕ್ಕೆ ಧಕ್ಕೆ’

ಬಳ್ಳಾರಿ: ಮೀಸಲಾತಿ ಪಡೆಯುವುದಕ್ಕೆ ಎಲ್ಲ ಸಮುದಾಯದವರೂ ಹೋರಾಟಕ್ಕೆ ಇಳಿಯು­ತ್ತಿರು­ವುದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮೀಸಲಾತಿ ಎಂಬ ಭಿಕ್ಷೆಯು ಸಮಾನತೆ ಸಾರಿದ ಬಸವಣ್ಣನ ಆಶಯಗಳಿಗೆ ಕೊಡಲಿ ಏಟು ನೀಡುತ್ತಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್‌ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ನಡೆದ ಬಣಜಿಗ ಸಮುದಾಯದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿಯೇ ಬಸವಣ್ಣನವರು ಪ್ರತಿಪಾದಿಸಿದ್ದ ಆರ್ಥಿಕ, ಸಾಮಾಜಿಕ ನೀತಿಗಳು ಅತ್ಯುತ್ತಮವಾಗಿದ್ದು, ಅವರ ಕಾಯಕ ನೀತಿಗೆ ಮೀಸಲಾತಿಯಿಂದ ಧಕ್ಕೆ ಎದುರಾಗುತ್ತಿದೆ ಎಂದು ಅವರು ಹೇಳಿದರು.ಎಲ್ಲ ಜಾತಿ– ಜನಾಂಗಗಳಲ್ಲೂ ಬಡವರಿದ್ದು, ಅವರನ್ನು ಆರ್ಥಿಕವಾಗಿ ಮೇಲೆತ್ತುವುದೇ ನಿಜವಾದ ರಾಜಧರ್ಮ. ಬಡವರಿಗೆ ಜಾತಿಯೇ ಇಲ್ಲ. ಅಂಥವರಿಗೆ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ರಾಜಕೀಯ ಅವಕಾಶ ನೀಡಿದರೆ ಮಾತ್ರ ದೇಶದ ಹಾಗೂ ಸಮಾಜದ ಸುಧಾರಣೆ ಸಾಧ್ಯ. ‘ಸಮಬಾಳು– ಸಮಪಾಲು’ ಎಂಬ ನೀತಿ ಜಾರಿಗೆ ಬಂದರೆ ಮಾತ್ರ ವೀರಶೈವ ಲಿಂಗಾಯತ ಸಮುದಾಯದವರು ಒಗ್ಟಟಿನಿಂದ ಸಾಗಲು ಸಾಧ್ಯ ಎಂದು ಅವರು ತಿಳಿಸಿದರು.ಗುರು– ವಿರಕ್ತರೇ ಒಂದಾಗಿ: ‘ಲಿಂಗಾಯತ ಸಮುದಾಯದಲ್ಲಿ ಬಣಜಿಗರು ಮಾತ್ರ ಗುರು, ವಿರಕ್ತ ಮತ್ತು ಶರಣ ಪರಂಪರೆಯ ಮಠಗಳು, ಸ್ವಾಮೀಜಿಗಳ  ಹಿಂಬಾಲಕರಾಗಿದ್ದಾರೆ. ಆದರೆ, ಗುರು, ವಿರಕ್ತರ ನಡುವಿನ ಭಿನ್ನಾಭಿಪ್ರಾಯದಿಂದ ಬೇಸರ ಉಮಟಾಗುತ್ತಿದೆ’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ತಿಳಿಸಿದರು.‘ಸ್ವಾಮೀಜಿಗಳು ತಮ್ಮನ್ನು ಅಡ್ಡ ಹೊರಬೇಕು ಎಂದರೆ ಅಡ್ಡ ಹೊರುತ್ತೇವೆ. ಉದ್ದ ಹೊರು ಎಂದರೆ ಉದ್ದ ಹೊರುತ್ತೇವೆ. ಐದೇ ವರ್ಷದ ಚಿಕ್ಕ ಬಾಲಕ ಗುರುವಿನ ಸ್ಥಾನದಲ್ಲಿ ಪಲ್ಲಕ್ಕಿ ಮೇಲೆ ಕುಳಿತರೂ ಲಂಗಾಯತರೆಲ್ಲ ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ನಿಮ್ಮ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಾಲ್ಕು ಗೋಡೆಗಳ ನಡುವೆ ಬಗೆಹರಿಸಿಕೊಳ್ಳಿ’ ಎಂದು ಅವರು ಮನವಿ ಮಾಡಿದರು.‘ಧರ್ಮ, ಸತ್ಯ, ನ್ಯಾಯ, ನೀತಿ, ಸೌಜನ್ಯದಿಂದ ನಡೆಯುವವರ ಬಗ್ಗೆ ದಯೆ ತೋರಿ. ಯಾರು ನಮ್ಮ ಸರ್ವನಾಶಕ್ಕೆ ಪಣ ತೊಡುತ್ತಾರೋ ಅವರ ಮೇಲೆ ದಯೆ ತೋರುವ ಅಗತ್ಯವಿಲ್ಲ’ ಎಂದು ಅವರು ಖಾರವಾಗಿ ನುಡಿದರು.ಕೇಂದ್ರ ಸರ್ಕಾರ ಸಗಟು ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಒದಗಿಸಿದರೆ ವ್ಯಾಪಾರವನ್ನೇ ಅವಲಂಬಿಸಿರುವ ಬಹುತೇಕ ಬಣಜಿಗರಿಗೆ ತೀವ್ರ ಸಮಸ್ಯೆ ಎದುರಾಗಲಿದೆ. ರಾಜ್ಯ ಸರ್ಕಾರ ಈ ಕುರಿತು ಗಮನ ಹರಿಸಿ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಲು ಅವಕಾಶ ದೊರೆಯದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.ಸರ್ಕಾರವು ‘ಅನ್ನಭಾಗ್ಯ’ ಯೋಜನೆ ಆರಂಭಿಸಿ­ದ್ದ­ರಿಂದ ಅಕ್ಕಿ, ಗೋಧಿ, ಸಕ್ಕರೆ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೆಲಸ ಇಲ್ಲದಂ­ತಾ­ಗಿದೆ. ಕಡೆಯಪಕ್ಷ ಸರ್ಕಾರ ಗ್ರಾಮೀಣ ಭಾಗದಲ್ಲಿ ಸಣ್ಣ–ಪುಟ್ಟ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುವವರಿಗೆ ನ್ಯಾಯ ಬೆಲೆ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಬೇಕು ಎಂದು ಅವರು ಆಗ್ರಹಿಸಿದರು.ಲಿಂಗಾಯತ ಸಮುದಾ­ಯದ ಎಲ್ಲ ಒಳ ಪಂಗಡಗಳೂ ವೀರಶೈವ ಧರ್ಮ­ವೆಂಬ ವಿಶಾಲ ವೃಕ್ಷದ ಹೂಗಳಂತಿದ್ದು, ಒಂದಾಗಿ ಮುನ್ನಡೆ­ಯುವ ಮೂಲಕ ಸಹಬಾಳ್ವೆಯ ಸೇಶ ಸಾರ­ಬೇಕಿದೆ ಎಂದು ಮನವಿ ಮಾಡಿದರು.ಬಳ್ಳಾರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬಣಜಿಗ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ‘2–ಎ’ ಅಡಿ ಮೀಸಲಾತಿ ನೀಡದಿರುವ ವಿಷಯ ಗೊತ್ತಾಗಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಮೂಲಕ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭರವಸೆ ನೀಡಿದರು.ಈ ಸಮಾವೇಶವನ್ನು ಶಕ್ತಿ ಪ್ರದರ್ಶನಕ್ಕೆ ಅಲ್ಲ. ಬದಲಿಗೆ, ಅಸ್ತಿತ್ವ ಸಾರು ಹಾಗೂ ಜಾಗೃತಿ ಮೂಡಿಸುವುದಕ್ಕೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಹೇಳಿದರು.ವಿಧಾನ ಪರಿಷತ್‌ ಸದಸ್ಯರಾದ ಮೃತ್ಯುಂಜಯ ಜಿನಗಾ, ಅಮರನಾಥ ಪಾಟೀಲ, ಮಾಜಿ ಸದಸ್ಯ ಶಶಿಲ್‌ ನಮೋಶಿ, ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್‌, ಜಿ.ಪಂ. ಉಪಾಧ್ಯಕ್ಷೆ ಮಮತಾ, ತಾರಾದೇವಿ ವಾಲಿ, ಪ್ರೇಮಕ್ಕ ಅಂಗಡಿ, ತ್ರಿಶೂಲಪಾಣಿ ಪಾಟೀಲ್‌, ಕೆ.ಎಸ್. ನಾಗರಾಜ್, ಚಿತ್ರಿಕಿ ಪಂಚಪ್ಪ, ಕೋರಿ ವಿರೂ­ಪಾಕ್ಷಪ್ಪ, ರಾಜಶೇಖರ ಪಟ್ಟಣಶೆಟ್ಟಿ, ಗೊಂಗಡ­ಶೆಟ್ಟಿ, ಹೊಂಗಲ್‌, ನಿಷ್ಠಿ ರುದ್ರಪ್ಪ, ಬಿ.ಹೇಮನ­ಗೌಡ, ಚಿದಾನಂದ ಐಗೋಳ, ಬಿ.ವಿ. ಬಸವ­ರಾಜ್‌, ಸಾಹುಕಾರ್‌ ಸತೀಶ್‌ಬಾಬು ಮತ್ತಿತರರಿದ್ದರು. ಚಂದ್ರನಾಥ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.