ಮಂಗಳವಾರ, ಜನವರಿ 21, 2020
18 °C
ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 57ನೇ ಪರಿನಿರ್ವಾಣ ದಿನಾಚರಣೆ

‘ಮೀಸಲಾತಿಯಿಂದ ಸಾಮಾಜಿಕ ಸಮಾನತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೀಸಲಾತಿಯಿಂದ ಸಾಮಾಜಿಕ ಸಮಾನತೆ’

ಮಂಗಳೂರು: ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಮೀಸ­ಲಾತಿ ಎಂಬ ಪರಿಕಲ್ಪನೆಯನ್ನು ಸೇರಿಸದೇ ಹೋಗಿದ್ದರೆ ಎಷ್ಟೋ ಮಂದಿ ದಲಿತರು ಇಂದು ಒಳ್ಳೆಯ ಉದ್ಯೋಗದಲ್ಲಿರುವುದು ಅಥವಾ ಮೂರು ಹೊತ್ತು ನೆಮ್ಮದಿಯ ಊಟ ಮಾಡುವುದು ಕೂಡ ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನ ಶಿಲ್ಪಿಯೂ ಆಗಿರುವ ಅವರು ಎಲ್ಲರಿಗೂ ಸ್ಮರಣೀಯರು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಿ. ಸಂತೋಷ್‌ ಕುಮಾರ್‌ ಹೇಳಿದರು.ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕುದ್ಮುಲ್‌ ರಂಗರಾವ್ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ 57ನೇ ಪರಿ­ನಿರ್ವಾಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ದಲಿತರು ಸಾಮಾಜಿಕವಾಗಿ ಮೇಲೇರಬಹುದು ಎಂದು ಅಂಬೇಡ್ಕರ್‌ ಕರೆ ನೀಡಿದ್ದರು. ಇಂದಿಗೂ ಕೂಡ ಯಾವುದೇ ಕ್ಷೇತ್ರದಲ್ಲಿ ಜಾತಿ ವಿಚಾರ ದಲಿತರ ಉನ್ನತಿಗೆ ಅಡ್ಡಗಾಲಾಗಿಯೇ ನಿಲ್ಲುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಅಂಕಗಳನ್ನು ನೀಡುವಾಗಲೂ ಜಾತಿ ಆಧಾರಿತ ತಾರತಮ್ಯ ಮಾಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅಂಬೇಡ್ಕರ್‌ ಅವರ ತತ್ವಾದರ್ಶಗಳು ಜೀವನ ರೂಪಿಸಲು ನೆರವಾಗುತ್ತವೆ ಎಂದು ಅವರು ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ದಯಾನಂದ ನಾಯಕ್‌ ಅಂಬೇಡ್ಕರ್‌ ಅವರ ಜೀವನ ಮತ್ತು ಆದರ್ಶಗಳ ಕುರಿತು ವಿದ್ಯಾರ್ಥಿನಿಯರಿಗೆ ವಿವರಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ನಿರ್ದೇಶಕ ಚಂದ್ರಹಾಸ ರೈ. ಬಿ. ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್‌ ನಿವೃತ್ತ ಅಧಿಕಾರಿ ನೋಣಯ್ಯ ಬಂಗೇರ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)ಯ ಸಂಚಾಲಕ ಎಸ್‌. ಪಿ. ಆನಂದ್‌, ಕೆಎಸ್‌ಆರ್‌­ಟಿಸಿ ನಿಗಮಗಳ ಎಸ್‌ಸಿ–ಎಸ್‌ಟಿ ನೌಕರರ  ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರಿಶ್ಚಂದ್ರ, ವಾರ್ಡನ್‌ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಪದ್ಮನಾಭ ಮೂಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು.ಮಾಲಾರ್ಪಣೆ

ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಪರಿ­ನಿರ್ವಾಣ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಪುರಭವನದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಮಾಲಾರ್ಪಣೆ ಮಾಡಿ ಗೌರವಿಸಿದರು. ಪೊಲೀಸ್‌ ಆಯುಕ್ತ ಮನಿಷ್‌ ಖರ್ಬೀಕರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)