ಸೋಮವಾರ, ಜೂನ್ 14, 2021
27 °C

‘ಮುಕುಂದರಾಜ್ ಕಾರ್ಯದರ್ಶಿ ಅಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮುಕುಂದರಾಜ್ ಎಂಬ ವ್ಯಕ್ತಿ ದೊಡ್ಡಗಂಗವಾಡಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ (ವಿಎಸ್ಎಸ್ಎನ್) ಕಾರ್ಯದರ್ಶಿ ಅಲ್ಲ. ಅವರಿಗೆ ನಾವು ಯಾವುದೇ ಕಿರುಕುಳ ನೀಡಿಲ್ಲ. ಅವರ ಆತ್ಮಹತ್ಯೆ ಪ್ರಯತ್ನಕ್ಕೆ ನಾವು ಕಾರಣರಲ್ಲ ಎಂದು ಸಂಘದ ಅಧ್ಯಕ್ಷ ಬಸವಲಿಂಗಯ್ಯ ಸ್ಪಷ್ಟಪಡಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿದ ಅವರು, ‘ಫೆ.25ರಂದು ಸಂಘದ ನಿರ್ದೇಶಕರು ಹಾಗೂ ಅಧಿ­ಕಾರಿ­ಗಳ ಕಿರುಕುಳದಿಂದ ಕಾರ್ಯ­ದರ್ಶಿ ಮುಕುಂದರಾಜ್ ಎಂಬು­ವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮಾಧ್ಯಮ­­ಗಳಲ್ಲಿ ವರದಿಯಾಗಿದೆ. ಆದರೆ ಮುಕುಂದ­ರಾಜ್ ಅವರ ಆತ್ಮಹತ್ಯೆ ಯತ್ನಕ್ಕೂ ನಮ್ಮ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ನಮ್ಮ ಸಂಘದಲ್ಲಿ ಮಾರಾಟ ಗುಮಾಸ್ತ­ನಾಗಿ ಕಾರ್ಯ ನಿರ್ವಹಿಸುತ್ತಿ­ದ್ದಾರೆಯೇ ಹೊರತು, ಕಾರ್ಯದರ್ಶಿ ಅಲ್ಲ’ ಎಂದು ತಿಳಿಸಿದರು.ಕಳೆದ ಸೆಪ್ಟಂಬರ್ 10ರಂದು ಅಸ್ತಿತ್ವಕ್ಕೆ ಬಂದ ಸಂಘದ ನೂತನ ಆಡಳಿತ ಮಂಡಳಿಯನ್ನು ಕೆಲವು ಕಾರಣ­­­ಗಳಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಡಳಿತ ಮಂಡಳಿಯನ್ನು ರದ್ದುಗೊಳಿಸಿ, ವಿಶೇಷಾ­­ಧಿ­ಕಾರಿ­ಯೊಬ್ಬರನ್ನು ನೇಮಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷಾ­ಧಿಕಾರಿ, ಆಡಳಿತದ ಅನುಕೂಲ­ಕ್ಕಾಗಿ ಮುಕುಂದರಾಜ್ ಅವರನ್ನು ಪ್ರಭಾರ ಕಾರ್ಯದರ್ಶಿ­ಯಾಗಿ ನೇಮಿಸಿ­ಕೊಂಡಿದ್ದರು. ಆದರೆ ಸಹಕಾರ ಸಂಘ­ಗಳ ಸಹಾಯಕ ನಿಬಂಧಕರ ಈ ತೀರ್ಮಾನ­ವನ್ನು ಹೈಕೋರ್ಟ್‌­ನಲ್ಲಿ ಪ್ರಶ್ನಿಸಲಾಗಿದೆ.ಹೈಕೋರ್ಟ್‌ ಅವರ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆಡಳಿತ ಮಂಡಳಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ.

ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಸಹಕಾರ ಇಲಾಖೆಯ ನಿಯಮಗಳಿಗೆ ಅನುಸಾರ ಜೇಷ್ಠತೆಯ ಆಧಾರದ ಮೇಲೆ ಬೇರೊಬ್ಬ ವ್ಯಕ್ತಿಯನ್ನು ಸಂಘದ ಪ್ರಭಾರ ಕಾರ್ಯದರ್ಶಿಯಾಗಿ ನೇಮಿಸಿ­ಕೊಳ್ಳಲಾಗಿದೆ. ಅವರನ್ನು ಮಾರಾಟ ಗುಮಾಸ್ತರ ಹುದ್ದೆಯಲ್ಲಿ ಮುಂದು­ವರೆಸ­ಲಾಗಿದೆ. ಇದನ್ನು ಸಹಿಸದ ಮುಕುಂದ­ರಾಜ್ ಹಾಗೂ ಸಹಚರರು, ನಮ್ಮ ಸಂಘದ ಕೆಲವು ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ಬಸವಲಿಂಗಯ್ಯ ತಿಳಿಸಿದರು.‘ಸಂಘಕ್ಕೆ ಕೆಲಸಗಾರರನ್ನು ನೇಮಿಸಿ­ಕೊಳ್ಳುವವುದಕ್ಕೆ ಆಡಳಿತ ಮಂಡಳಿಗೆ ಸಂಪೂರ್ಣ ಅಧಿಕಾರವಿದೆ. ಮುಕುಂದ­ರಾಜ್ ಅವರಿಗೆ ಅನ್ಯಾಯವಾಗಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಎಲ್ಲಾ ಅಧಿಕಾರ ಅವರಿಗಿದೆ. ಆದರೆ ಅವರ ಆರೋಪಗಳಿಂದ ನಮ್ಮ ಸಂಘದ ಮೇಲೆ ಸಾರ್ವಜನಿಕರಿಗೆ ಕೆಟ್ಟ ಅಭಿ­ಪ್ರಾಯ ಮೂಡಿದ್ದು, ಮುಕುಂದ­ರಾಜ್ ಅವರ ವಿರುದ್ಧ ನ್ಯಾಯಾಲಯ­ದಲ್ಲಿ ಮಾನನಷ್ಟ ಮೊಕದ್ದಮೆ ದಾಖ­ಲಿಸ­ಲಾಗುವುದು’ ಎಂದು ಅವರು ತಿಳಿಸಿದರು.ಸಂಘದ ನಿರ್ದೇಶಕರಾದ ವಿಶ್ವೇಶ್ವರಯ್ಯ, ರೇವಣಸಿದ್ದಯ್ಯ, ರಾಜ­ಶೇಖರಯ್ಯ, ತಮ್ಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.