‘ಮೋದಿ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ’

ಬೆಂಗಳೂರು: ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ದೇಶದ ಏಕತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾಜೋಯಿಸ್ ಹೇಳಿದರು.
ಸಮೃದ್ಧ ಸಾಹಿತ್ಯ ಪ್ರಕಾಶನ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರ ‘ನರೇಂದ್ರ ಮೋದಿ– ಎ ವಿಕ್ಟಿಮ್ ಆಫ್ ಮಾನುಪುಲೇಷನ್ಸ್’ ಇಂಗ್ಲಿಷ್ ಪುಸ್ತಕದ ಅನುವಾದ ‘ನರೇಂದ್ರ ಮೋದಿ– ಷಡ್ಯಂತ್ರಗಳಿಂದ ವಿಮೋಚನೆ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಬ್ರಿಟಿಷರು ದೇಶವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅವರು ದೇಶ ಬಿಟ್ಟು ಹೋದ ನಂತರ ಕಾಂಗ್ರೆಸ್ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಹಿಂದೂ– ಮುಸ್ಲಿಮರಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದರು.
‘ಜಾತ್ಯತೀತ ಎಂದು ಹೇಳಿಕೊಳ್ಳುವ ರಾಜಕಾರಣಿಗಳೇ ಕೋಮುವಾದಿಗಳಾಗಿದ್ದಾರೆ. ನರೇಂದ್ರ ಮೋದಿ ಅವರ ಬಗ್ಗೆ ಮುಸ್ಲಿಮರಲ್ಲಿ ಭಯ ಹುಟ್ಟುವಂತೆ ಷಡ್ಯಂತ್ರ ರೂಪಿಸಲಾಗಿದೆ.
ಕುಟುಂಬ ರಾಜಕಾರಣ ಮಾಡುತ್ತಿರುವವರು ಯಾರು, ಅಭಿವೃದ್ಧಿರ ಇರುವವರು ಯಾರು ಎಂಬುದು ದೇಶದ ಜನತೆಗೆ ಗೊತ್ತಿದೆ’ ಎಂದು ಹೇಳಿದರು.
‘ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸಾಕಷ್ಟು ಕನಸುಗಳನ್ನು ಹೊಂದಿದ್ದಾರೆ. ಆದರೆ, ಅವರ ಬಗ್ಗೆ ಸತ್ಯಕ್ಕಿಂತ ಸುಳ್ಳಿನ ಪ್ರಚಾರವೇ ಹೆಚ್ಚಾಗಿದೆ. ಅವರ ಬಗ್ಗೆ 21 ಸಾವಿರ ಪುಟದಷ್ಟು ಮಾಹಿತಿ ಸಂಗ್ರಹಿಸಿ ‘ನರೇಂದ್ರ ಮೋದಿ– ಎ ವಿಕ್ಟಿಮ್ ಆಫ್ ಮಾನುಪುಲೇಷನ್ಸ್’ ಪುಸ್ತಕ ಬರೆದಿದ್ದೆ.
ಈಗ ಪುಸ್ತಕ ಕನ್ನಡಕ್ಕೆ ಅನುವಾದವಾಗಿರುವುದರಿಂದ ಕನ್ನಡದ ಜನತೆಗೂ ಸತ್ಯಾಂಶ ಗೊತ್ತಾಗಲಿದೆ’ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.