ಭಾನುವಾರ, ಜೂನ್ 13, 2021
21 °C
ಆಂತರಿಕ ಪರೀಕ್ಷೆ –ಪೂಜಾರಿ ಉತ್ತೀರ್ಣ

‘ಮೋದಿ ವಿರುದ್ಧ ಹೋರಾಟವೇ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯ ಆಂತರಿಕ ಚುನಾವಣೆ ಭಾನು­ವಾರ ಯಶಸ್ವಿಯಾಗಿ ನಡೆದಿದ್ದ, ಪರೀಕ್ಷೆ­ಯಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉತ್ತೀರ್ಣರಾಗಿದ್ದಾರೆ.ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರೂ ಟಿಕೆಟ್‌ ಆಕಾಂಕ್ಷಿ ಆಗಿದ್ದುದರಿಂದ ಪೈಪೋಟಿ ತೀವ್ರಗೊಂಡಿತ್ತು. ಅದೇ ವೇಳೆ ಯು.ಕೆ.ಮೋನು ಅವರೂ ಸ್ಪರ್ಧೆಗೆ ಇಳಿದಿದ್ದರು. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಪಕ್ಷದ ವಲಯದಲ್ಲಿ ಕೇಳಿಬಂದಿತ್ತು. ಆದರೆ ಮೂ­ವರೂ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದರು.ಈ ಪೈಕಿ ಹರ್ಷ ಮೊಯಿಲಿ ಅವರ ನಾಮಪತ್ರ ತಿರಸ್ಕೃತಗೊಂಡು ಜನಾರ್ದನ ಪೂಜಾರಿ ಮತ್ತು ಯು.ಕೆ.ಮೋನು ಮಾತ್ರ ಕಣದಲ್ಲಿ ಉಳಿ­ದಿದ್ದರು.ಈ ಹಿನ್ನೆಲೆಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು 478 ಮತಗಳನ್ನು ಗಳಿಸಿ ಯು.ಕೆ.­ಮೋನು (62ಮತಗಳು) ಅವರನ್ನು ಸ್ಪರ್ಧೆ­ಯಿಂದ ಹಿಮ್ಮೆಟ್ಟಿಸಿದರು.ಬೆಳಿಗ್ಗೆ 10 ಗಂಟೆಗೆ ಮತದಾರರ ನೋಂ­ದಣಿ ಆರಂಭವಾಯಿತು. 11 ಗಂಟೆಗೆ ಆರಂಭ­ವಾದ ಸಭೆಯಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ತನಗೆ ಮತ ನೀಡಿ ಎಂದು ನೇರವಾಗಿ ಉಲ್ಲೇಖಿಸಲೇ ಇಲ್ಲ. ಬಿಜೆಪಿ ಸೇರಿದಂತೆ ಎಲ್ಲ ಕೋಮುವಾದಿ ಪಕ್ಷಗಳನ್ನು ಸೋಲಿಸಬೇಕು. ಶಾಂತಿ, ಸಹಬಾಳ್ವೆಯನ್ನು ನಡೆಸಬೇಕಿದೆ. ಇವುಗಳ ಬಗ್ಗೆ ಸಂಸತ್ತಿನಲ್ಲಿ ಯಾರು ಮಾತನಾ­ಡ­ಬಹುದು ಎಂದು ನಿಮಗೆ ತಿಳಿದಿದೆ. ಇದು ಕುಟುಂಬದ ಚುನಾವಣೆ. ಶಾಂತಿಯಿಂದ ಮತ­ದಾನ ಮಾಡಬೇಕು. ಕೈ ಚಪ್ಪಾಳೆ ಹೊಡೆಯ­ಬಾರದು. ಯಾವುದೇ ಘೋಷಣೆಯನ್ನೂ ಕೂಗಬಾರದು. ಎಲ್ಲರೂ ಸೇರಿ ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕು ಎಂದರು.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಉತ್ತರ ನೀಡಬೇಕು. ಅಲ್ಲಿ ಮೋದಿ ದ್ವೇಷ ಬಿತ್ತಿದರೆ ಇಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟ ದ್ವೇಷ ಬಿತ್ತು­ತ್ತಿದ್ದಾರೆ. ಅವರೆಲ್ಲರಿಗೂ ಚುನಾವಣೆ­ಯಲ್ಲಿ ಉತ್ತರ ನೀಡಬೇಕು ಎಂದರು. ಯು.ಕೆ.ಮೋನು ಮಾತನಾಡಿ, ಜಾತ್ಯತೀತ ಸಿದ್ಧಾಂತವನ್ನು ಮೈಗೂ­ಡಿ­ಸಿಕೊಂಡಿದ್ದು, ಪಕ್ಷ­ಕ್ಕಾಗಿ 40 ವರ್ಷ­ಗಳಿಂದ ದುಡಿಯುತ್ತಿದ್ದೇನೆ. ಒಂದು ವಾರದಿಂದ ನೋವು ಅನುಭವಿ­ಸುತ್ತಿದ್ದೇನೆ. ಕೆಲವರು ಮಾತಿ­ನಿಂದ ಚುಚ್ಚಿದರು. ಇನ್ನು ಕೆಲವರು ಮತದಾ­ರರನ್ನು ಭೇಟಿ ಮಾಡಲು ಬಿಡಲಿಲ್ಲ ಎಂದು ಗದ್ಗದಿತರಾದರು. ಎಐಸಿಸಿ ಕಾರ್ಯದರ್ಶಿ ಶಾಂತಾರಾಮ ನಾಯಕ್‌ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಮತದಾನ: ಬೆಳಿಗ್ಗೆ 11.35ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ 12.30ರ ಸುಮಾರಿಗೆ ಪೂರ್ಣ­ಗೊಂಡಿತು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ­ವಾರು ಮತಗಟ್ಟೆಗಳನ್ನು ನಿರ್ಮಿಸ­ಲಾ­ಗಿತ್ತು. ಪ್ರತಿ ಮತಗಟ್ಟೆಗಳಲ್ಲೂ ಎರಡು ಮತ ಪೆಟ್ಟಿಗೆಗಳಿದ್ದವು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಎನ್‌ಎಸ್‌ಯುಐ ಸದಸ್ಯರಿಗೂ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಮತ ಚಲಾಯಿಸಿದವರಿಗೆ ಎಡಕೈ ಮಧ್ಯ ಬೆರಳಿಗೆ ಶಾಯಿ ಹಾಕಲಾ­ಯಿತು.ಮತ ಎಣಿಕೆ ಚಿತ್ರೀಕರಣ:  ಮತ ಎಣಿಕೆ ಸೇರಿದಂತೆ ಚುನಾವಣೆಯ ಎಲ್ಲ ಪ್ರಕ್ರಿಯೆ­ಗಳನ್ನೂ ವಿಡಿಯೊ ಚಿತ್ರೀಕರಣ ಮಾಡಲಾ­ಯಿತು. ಆಂತರಿಕ ಚುನಾವಣಾ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 2ರ ಸುಮಾರಿಗೆ ಚುನಾವಣಾ ಫಲಿತಾಂಶ ಪ್ರಕಟಿಸಲಾಯಿತು.ಕಾರ್ಯಕರ್ತರಿಂದಲೇ ಅಭ್ಯರ್ಥಿ ಸೂಚನೆ:

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿ­ಗಾರರೊಂದಿಗೆ ಮಾತನಾಡಿದ ಚುನಾವಣಾ ವೀಕ್ಷಕ ಶಾಂತಾರಾಮ ನಾಯಕ್‌, ಕಾರ್ಯ­ಕರ್ತರಿಂದಲೇ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವುದು ವಿನೂತನ ಪ್ರಯೋಗ. ಇದು ಸಫಲವಾಗಿದೆ. ಇದು ನೂತನ ಯೋಜನೆ ಆಗಿದೆ ಎಂದರು.ಸೋತು ಗೆದ್ದಿದ್ದೇವೆ: ಈ ಚುನಾವಣೆ ಆಂತ­ರಿಕವಾದುದು. ಇದರಲ್ಲಿ ಯಾವ ಸಾಧನೆ­ಯೂ ಇಲ್ಲ. ಇಬ್ಬರೂ ಸೋತು ಗೆದ್ದಿದ್ದೇವೆ. ಮೋದಿ ವಿರುದ್ಧದ ಹೋರಾಟವೇ ನಮ್ಮ ಗುರಿ.  ನಾವೆಲ್ಲರೂ ಒಟ್ಟಾಗಿದ್ದೇವೆ. ಈ ಚುನಾವಣೆ­ಯಲ್ಲಿ ವ್ಯಕ್ತಿ ಜಯಿಸದೆ ಕಾಂಗ್ರೆಸ್‌ ಪಕ್ಷ ಜಯಿಸಿದೆ. ನಾವೆಲ್ಲ ಇಂದೇ ಭಾವನೆಯಿಂದ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.ಪೂಜಾರಿ ಗೆಲುವಿಗೆ ಶ್ರಮಿಸುವೆ: ಪರಾಜಿತ ಅಭ್ಯರ್ಥಿ ಯು.ಕೆ. ಮೋನು ಮಾತನಾಡಿ, ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇತ್ತು. ಪೂಜಾರಿ ಅವರನ್ನು ಗೆಲ್ಲಿಸು­ತ್ತೇವೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.