ಶನಿವಾರ, ಫೆಬ್ರವರಿ 27, 2021
20 °C
ಗಣರಾಜ್ಯೋತ್ಸವದ ಸಂಭ್ರಮ: ಯುವಜನಾಂಗ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಲಹೆ

‘ಯುವಜನತೆ ದೇಶದ ಸಂಪನ್ಮೂ ಲವಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯುವಜನತೆ ದೇಶದ ಸಂಪನ್ಮೂ ಲವಾಗಲಿ’

ಕಾರವಾರ: ಇಡೀ ವಿಶ್ವದಲ್ಲಿ ಭಾರತ ದೇಶ ಜ್ಞಾನದ ಕಣಜವೆಂದು ಖ್ಯಾತವಾಗಿದೆ. ವಿಜ್ಞಾನ- ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದ್ದು, ವಿಶ್ವದ ಬಲಾಢ್ಯ ರಾಷ್ಟ್ರವೆನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.ಇಲ್ಲಿನ ಪೊಲೀಸ್ ಪರೇಡ್‌ ಮೈದಾನದಲ್ಲಿ ಮಂಗಳವಾರ ಆಯೋಜಿ ಸಿದ್ದ  ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 60 ರಷ್ಟು ಯುವಜನರಿದ್ದಾರೆ. ಸಚ್ಚಾರಿತ್ರ್ಯದೊಂದಿಗೆ ಯುವಜನತೆ ದೇಶದ ಸಂಪನ್ಮೂಲವಾಗಬೇಕು. ಭಾರತದಲ್ಲಿ ಇರುವಷ್ಟು ಸ್ವಉದ್ಯೋಗದ ಅವಕಾಶಗಳು ಇನ್ನೆಲ್ಲೂ ಇಲ್ಲ. ಹಾಗಾಗಿ ಇದನ್ನು ಯುವಜನಾಂಗ ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಗಣರಾಜ್ಯೋತ್ಸವ ಸ್ವಾಭಿಮಾನ, ಗೌರವದ ಸಂಕೇತ. ಭಾರತೀಯರ ಪಾಲಿಗೆ ಇದು ಐತಿಹಾಸಿಕ ದಿನ. ಗಣರಾಜ್ಯ ಭಾರತವು ಸಾಮಾಜಿಕ ನ್ಯಾಯದ ಮೇಲೆ ವಿಶ್ವಾಸವಿಟ್ಟಿದೆ. ಡಾ.ಅಂಬೇಡ್ಕರ್ ನಾಯಕತ್ವದಲ್ಲಿ ಅಧಿಕಾರ, ಜವಾಬ್ದಾರಿಗಳನ್ನು ಒಳಗೊಂಡ ಸಂವಿಧಾನ ರಚನೆಯಾಗಿದೆ ಎಂದು ಹೇಳಿದರು.ಕೋಮುವಾದಿ ಹಾಗೂ ದುಷ್ಟ ಶಕ್ತಿಗಳು ದೇಶದ ಪ್ರಗತಿ ಹಾಗೂ ನೆಮ್ಮದಿಗೆ ಅಡ್ಡಗಾಲಾಗಿವೆ. ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿರುವ ಅವುಗಳ ನಿರ್ಮೂಲನೆ ಇಂದಿನ ಅಗತ್ಯವಾಗಿದೆ. ಕೋಮುವಾದಿ ಶಕ್ತಿಗಳನ್ನು ದಮನ ಮಾಡುವಲ್ಲಿ ಜನತೆಯ ಪಾತ್ರ ಕೂಡ ಅಗತ್ಯ ಎಂದು ಹೇಳಿದರು.ಆಕರ್ಷಕ ಪಥ ಸಂಚಲನ:  ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌ ಪಡೆ, ಗೃಹರಕ್ಷಕದಳ, ಎನ್‌ಸಿಸಿ, ಸೇವಾದಳ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಪೊಲೀಸ್ ಬ್ಯಾಂಡ್ ತಂಡದ ವಾದ್ಯವಾದನವು ಪಥ ಸಂಚಲನಕ್ಕೆ ಮೆರುಗು ನೀಡಿತು. ಶಿಸ್ತಿನ ಪಥ ಸಂಚಲನ ನಡೆಸಿದ ಸೇಂಟ್ ಮೈಕೆಲ್ ಹೈಸ್ಕೂಲ್ ಎನ್‌ಸಿಸಿ ತಂಡ ಪ್ರಥಮ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವಸತಿ ಶಾಲೆ ತಂಡ ದ್ವಿತೀಯ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ ತಂಡ ತೃತೀಯ ಬಹುಮಾನ ಪಡೆದವು.ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ: ಉತ್ತಮ ಸೇವೆ ಸಲ್ಲಿಸಿದ ಆರು ಅಧಿಕಾರಿಗಳಿಗೆ ತಲಾ ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಇದೇ ಸಂದರ್ಭದಲ್ಲಿ ಪ್ರದಾನ ಮಾಡಿದರು.ಲಕ್ಷ್ಮಣರಾವ್ ವಿ. ಯಕ್ಕುಂಡಿ, ಅಶೋಕಕುಮಾರ್ ದೇಶಮುಖ, ಗಜಾನನ ನಾಯ್ಕ, ಉಲ್ಲಾಸ ಎಂ. ನಾಯ್ಕ, ಮನೋಹರ ಬಿ. ಅಗೇರ, ಸಾವಿತ್ರಿ ಎಂ. ಸಣ್ಣಬಡ್ತಿ ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರೀಯ ಯುವಜನೋತ್ಸವದಲ್ಲಿ ಬಹುಮಾನ ಪಡೆದ ದಿನೇಶ ನಾಯ್ಕ, ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದ ಮಹಮ್ಮದ್‌ ಹಸನ್ ಶೇಖ್ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕದ ಫ್ಲಾಗ್‌ ಆಫೀಸರ್‌ ರಿಯರ್ ಅಡ್ಮಿರಲ್ ಆರ್.ಜೆ. ನಾಡಕರ್ಣಿ, ಶಾಸಕ ಸತೀಶ ಸೈಲ್, ಕೆಡಿಎ ಅಧ್ಯಕ್ಷ ಕೆ.ಶಂಭುಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಗೌಡ, ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿ. ರಾಮಪ್ರಸಾದ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ವಂಶಿ ಕೃಷ್ಣ ಉಪಸ್ಥಿತರಿದ್ದರು.ದಾಂಡೇಲಿ ವರದಿ

ನಗರದ ಹಳೆ ಸಿ.ಎಂ.ಸಿ ಮೈದಾನದಲ್ಲಿ ನಗರಸಭಾ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರಪತಿ ಪದಕದ ಗೌರವಕ್ಕೆ ಭಾಜನರಾದ ದಾಂಡೇಲಿ ಡಿ.ವೈ.ಎಸ್.ಪಿ ದಯಾನಂದ ಪವಾರ್,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಕೆ.ಎಲ್. ಜಮಾದರ,  ಎನ್.ಸಿ.ಸಿಯಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಶಿಕ್ಷಕ ಕಿಶೋರ ಕಿಂದಳ್ಕರ, ಕ್ರೀಡಾ ಸಾಧನೆ ಮಾಡಿದ ಬಂಗೂರನಗರ ಪಿ.ಯು. ಕಾಲೇಜಿನ ವಿದ್ಯಾರ್ಥಿ ಏ.ಸಿ. ಬೋಪಯ್ಯ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿಶೇಷ ಸಾಧನೆ ಮಾಡಿದ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಸುಮಯ್ಯಾ ಗೌಸಖಾನ ಜೈಲರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ರಾಜು ರುದ್ರಪಾಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಡಿವೆಪ್ಪ ಭದ್ರಕಾಳಿ, ನಗರಸಭೆ ವ್ಯವಸ್ಥಾಪಕ ಜೋಶಿ  ಉಪಸ್ಥಿತರಿದ್ದರು. ಉಪನ್ಯಾಸಕ ಹನ್ಮಂತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ನಗರದ ಪೋಲಿಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದವರ ಕವಾಯತು ಆಕರ್ಷಕವಾಗಿತ್ತು.ಭಟ್ಕಳ ವರದಿ

ಪಟ್ಟಣದ ನವಾಯಿತಿ ಕಾಲೊನಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ  ಗಣರಾಜ್ಯೋತ್ಸವದ  ದ್ವಜಾರೋಹಣವನ್ನು ಉಪವಿಭಾಗಾಧಿ ಕಾರಿ ಚಿದಾನಂದ ವಠಾರೆ ನೆರವೇರಿಸಿ  ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಮಂಕಾಳ ವೈದ್ಯ, ನಮ್ಮ ದೇಶದ ಸಂವಿಧಾನ ಅತ್ಯಂತ ವಿಶಿಷ್ಟತೆಯಿಂದ ಕೂಡಿದ್ದು, ಯಾವುದೇ ಜಾತಿಮತ ಬೇಧವಿಲ್ಲದೇ ಸಾಮಾನ್ಯ ಪ್ರಜೆ ಕೂಡ ಉನ್ನತ ಸ್ಥಾನಕ್ಕೇರಬಹುದು ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಯಶ್ರೀ ಮೊಗೇರ್, ಅಬ್ದುಲ್ ರಹೀಮ, ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ ನಾಯ್ಕ, ಸಿಪಿಐ ಪ್ರಶಾಂತ ನಾಯಕ ಉಪಸ್ಥಿತರಿದ್ದರು.

ತಹಶೀಲ್ದಾರ್ ವಿ.ಎನ್ ಬಾಡಕರ್‌ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್‌ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ್‌ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಸಕ ಮಂಕಾಳ ವೈದ್ಯ ಸನ್ಮಾನಿಸಿದರು. ಧ್ವಜಾರೋಹಣದ ಬಳಿಕ ಪೊಲೀಸ್‌, ಎನ್‌ಸಿಸಿ, ಸ್ಕೌಟ್ಸ್‌ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಗೋಕರ್ಣ ವರದಿ

ಇಲ್ಲಿಯ ರಥಬೀದಿಯಲ್ಲಿರುವ ಸುಭಾಷ ಚೌಕದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಜೋಯಿಸ್ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು.

ವಿದ್ಯಾರ್ಥಿಗಳು , ಪ್ರಾಚಾರ್ಯರು, ಶಿಕ್ಷಕರು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಭದ್ರಕಾಳಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಎಸ್. ಸಿ. ನಾಯಕ ಧ್ವಜರೋಹಣ ನೆರವೇರಿಸಿದರು. ಹೆಸ್ಕಾಂ ಕಚೇರಿಯಲ್ಲಿ ಹೆಸ್ಕಾ ಅಧಿಕಾರಿ ಮಂಜುನಾಥ ಹುಟಗಿ ಧ್ವಜಾರೋಹಣ ನೆರವೇರಿಸಿದರು. ನಂತರ ಹತ್ತಿರದ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು. 

ಮಹಾಬಲೇಶ್ವರ ಕೋ–ಅಪರೇಟಿವ್ ಅರ್ಬನ್ ಬ್ಯಾಂಕಿನಲ್ಲಿ ಬ್ಯಾಂಕಿನ ಅಧ್ಯಕ್ಷ ಮೋಹನ ನಾಯಕ ಧ್ವಜಾರೋಹಣ ನೆರವೇರಿಸಿದರು. 

ಅನೇಕ ವಿದೇಶಿಯರು ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷ ಪಟ್ಟರು. ಮುಂಡಗೋಡ ವರದಿ

ಸಂವಿಧಾನವು ಪ್ರಜಾಪ್ರಭುತ್ವ ಸರ್ಕಾರದ ಮೂಲ ರಚನೆಯನ್ನು ಜನರೇ ನಿರ್ಧರಿಸಿಕೊಳ್ಳುವಂತೆ ಅವಕಾಶ ಕಲ್ಪಿಸಿದೆ. ಜನತೆ ಹಾಗೂ ಸರ್ಕಾರದ ನಡುವಿನ ಸಂಬಂಧವನ್ನು ನಿಯಂತ್ರಿಸುವ ಕೊಂಡಿಯಾಗಿ ಸಂವಿಧಾನ ಕಾರ್ಯನಿರ್ವಹಿಸುತ್ತದೆ ಎಂದು ತಹಶೀಲ್ದಾರ್‌ ಅಶೋಕ ಗುರಾಣಿ ಹೇಳಿದರು. ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 67ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರೀತಿ, ವಿಶ್ವಾಸ ಹಾಗೂ ಸದ್ಭಾವನೆ ಯೊಂದಿಗೆ ಬಲಿಷ್ಠ ರಾಷ್ಟ್ರ ವನ್ನಾಗಿಸಲು ಕಂಕಣಬದ್ಧರಾಗೋಣ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜನಪ್ರತಿನಿಧಿಗಳು, ಸಂಘಸಂಸ್ಥೆ ಮುಖಂಡರು, ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಹೊನ್ನಾವರ ವರದಿ

ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಹಶೀಲ್ದಾರ್‌ ಜಿ.ಎಂ.ಬೋರಕರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಸೈನಿಕರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು, ವಿದ್ಯಾಥಿರ್ಗಳನ್ನು ತಾಲ್ಲೂಕು ಆಡಳಿತದ ಪರವಾಗಿ ಹಾಗೂ ಸಮಾಜ ಸೇವೆಗಾಗಿ ರೆಡ್‌ಕ್ರಾಸ್‌ನಿಂದ ಆಟೊ ಚಾಲಕ ಮಾಧವ ವಿ.ನಾಯ್ಕ, ನರ್ಸ್ ಸುಜಾತಾ ನಾಯ್ಕ ಹಾಗೂ ಪೌರ ಕಾರ್ಮಿಕ ಕಮಲಾ ಎಚ್.ಹರಿಜನ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್, ಹೋಮ್‌ಗಾರ್ಡ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ತಾಲ್ಲೂಕಿನ ವಿವಿಧ ಶಾಲೆಗಳ ಏಳು ವಿದ್ಯಾರ್ಥಿ ತಂಡದಿಂದ ನಡೆದ ರಾಷ್ಟ್ರಪ್ರೇಮ ಸಾರುವ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿತ್ತು. ನೃತ್ಯ ಪ್ರದರ್ಶನ ನೀಡಿದ ತಂಡಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಎಸ್.ಯು.ತಲಖಣಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ.,ಸಿಪಿಐ ಕುಮಾರಸ್ವಾಮಿ,ಜಗದೀಪ ತೆಂಗೇರಿ ಉಪಸ್ಥಿತರಿದ್ದರು. ರಾಜು ಹೆಬ್ಬಾರ, ಸುಧೀಶ ನಾಯ್ಕ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಭಟ್ಟ ವಂದಿಸಿದರು. ಸಿದ್ದಾಪುರ ವರದಿ

‘ಭಯೋತ್ಪಾದನೆಯ ನಿರ್ಮೂಲನಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದು ತಹಶೀಲ್ದಾರ್ ಬಸಪ್ಪ ಪೂಜಾರಿ ಹೇಳಿದರು. ಪಟ್ಟಣದ ನೆಹರೂ ಮೈದಾನದಲ್ಲಿ 67ನೇ ಗಣರಾಜ್ಯೋತ್ಸವದ  ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ತಾಲ್ಲೂಕು ಪಂಚಾಯ್ತಿ ಇಓ ಶ್ರೀಧರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಂ.ಆರ್.ಭಟ್ಟ ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ನಿರೂಪಿಸಿದರು.  ಪೊಲೀಸ್, ಗೃಹ ರಕ್ಷಕದಳ, ಎನ್‌ಸಿಸಿ,ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತಿತರ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಲಾಯಿತು.ವಿದ್ಯಾರ್ಥಿಗಳಿಂದ ಕವಾಯತು, ಯೋಗಾಸನ, ಸೂರ್ಯನಮಸ್ಕಾರ,  ಹಗ್ಗ ಜಗ್ಗಾಟ ಹಾಗೂ ಸಂಗೀತ ಕುರ್ಚಿ ಮತ್ತಿತರ ಕಾರ್ಯಕ್ರಮಗಳು ನಡೆದವು. ಉತ್ತಮ  ಪಥ ಸಂಚಲನಕ್ಕಾಗಿ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ತಂಡ(ಪ್ರಥಮ), ಎಸ್‌ಆರ್‌ಜಿಎಚ್‌ಎಂ  ಪ್ರೌಢಶಾಲೆಯ ತಂಡ(ದ್ವಿತೀಯ) ಮತ್ತು ಲಿಟ್ಲ್‌ ಫ್ಲವರ್ ಪ್ರೌಢಶಾಲೆಯ ತಂಡ(ತೃತೀಯ) ಬಹುಮಾನ ಪಡೆದವು. ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಗೌಡರ್  ಬಹುಮಾನ ವಿತರಣೆ ಮಾಡಿದರು.ದೇಶದ ಆಸ್ತಿಯಾದ ಯುವಜನತೆ ಸರಿಯಾದ ದಿಕ್ಕಿನಲ್ಲಿ ಸಾಗಿ, ರಾಷ್ಟ್ರದ ಸಮಗ್ರ ಪ್ರಗತಿಗೆ ಶ್ರಮಿಸಬೇಕು

– 
ಆರ್.ವಿ. ದೇಶಪಾಂಡೆ,

ಜಿಲ್ಲಾ ಉಸ್ತುವಾರಿ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.