‘ಯುವ’ ಭಾರತದ ವಿಜಯಾರಂಭ

7
ಕ್ರಿಕೆಟ್‌: ಯುವರಾಜ್‌ ಶತಕದ ಸೊಬಗು, ನಿರಾಸೆಯ ಕಡಲಲ್ಲಿ ವಿಂಡೀಸ್ ‘ಎ’

‘ಯುವ’ ಭಾರತದ ವಿಜಯಾರಂಭ

Published:
Updated:

ಬೆಂಗಳೂರು: ಪ್ರತಿ ಎಸೆತ ಎದುರಿಸುವಾಗಲೂ ಯುವರಾಜ್‌ ಸಿಂಗ್‌ ಮೊಗದಲ್ಲಿ ಕಾಣುತ್ತಿದ್ದ ದಿಟ್ಟತನ ಹಾಗೂ ಛಲಕ್ಕೆ ಶಹಬ್ಬಾಸ್‌ ಹೇಳಲೇಬೇಕು. ವೆಸ್ಟ್‌ ಇಂಡೀಸ್ ‘ಎ’ ತಂಡದ ಬೌಲರ್‌ಗಳನ್ನು ಚೆಂಡಾಡಿದ ಯುವಿ ಭಾರತ ‘ಎ’ ತಂಡಕ್ಕೆ 77 ರನ್‌ಗಳ ಗೆಲುವು ತಂದುಕೊಟ್ಟರಲ್ಲದೇ ಕ್ರಿಕೆಟ್ ಪ್ರಿಯರ ಮನದಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡರು.ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ಬೆಂಗಳೂರಿನಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿದ ಭಾರತ ‘ಎ’ ತಂಡದ ನಾಯಕ ಯುವರಾಜ್‌ ನಿರಾಸೆ ಮೂಡಿಸಲಿಲ್ಲ. ಅನಾರೋಗ್ಯದಿಂದ ಬಳಲಿದಾಗ ಗುಣವಾಗಲೆಂದು ಪ್ರಾರ್ಥಿಸಿದ ಕೋಟ್ಯಂತರ ಅಭಿಮಾನಿಗಳಿಗೆ ತಮ್ಮ ಬ್ಯಾಟ್‌ ಮೂಲಕವೇ ‘ಅಭಿನಂದನೆ’ ಸಲ್ಲಿಸಿದರು. ಇದರಿಂದ ಭಾರತ ‘ಎ’ ತಂಡ ವಿಂಡೀಸ್‌ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಸಾಧಿಸಿತಲ್ಲದೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ದಾಖಲೆಯನ್ನು ಮುಂದುವರಿಸಿತು.

ಭಾನುವಾರ ಬೆಳಿಗ್ಗೆ ಕೊಂಚ ಮಳೆ ಸುರಿದ ಕಾರಣ 9 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 11 ಗಂಟೆಗೆ ಶುರುವಾಯಿತು. ಆದ್ದರಿಂದ ಎಂಟು ಓವರ್‌ ಕಡಿತಗೊಳಿಸಲಾಯಿತು.ಕ್ರೀಡಾಂಗಣ ಒದ್ದೆಯಾಗಿದ್ದ ಕಾರಣ ಪ್ರವಾಸಿ ತಂಡದ ನಾಯಕ ಕೀರನ್‌ ಪೊವೆಲ್ ಟಾಸ್ ಗೆದ್ದರೂ ಫೀಲ್ಡಿಂಗ್‌ ಆರಿಸಿಕೊಂಡರು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಭಾರತ 42 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 312 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು.ಇನಿಂಗ್ಸ್‌ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಪರದಾಡಿದ ವಿಂಡೀಸ್‌ 39.1ಓವರ್‌ಗಳಲ್ಲಿ 235 ರನ್‌ ಕಲೆ ಹಾಕಿ ತನ್ನ ಹೋರಾಟ ಅಂತ್ಯಗೊಳಿಸಿತು.ಯುವಿ ಸೊಬಗು, ಅಭಿಮಾನಿಗಳು ಬೆರಗು: ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ‘ಅಗ್ನಿಪರೀಕ್ಷೆ’ಯ ಸರಣಿಯಾಗಿರುವ ಕಾರಣ ಎಚ್ಚರಿಕೆಯಿಂದ ಆಡಿದ ಯುವರಾಜ್‌ ಮೊದಲ ಪಂದ್ಯದಲ್ಲಿಯೇ ಭರವಸೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ.  ಭಾನುವಾರ ರಜೆಯ ದಿನವಾಗಿದ್ದ ಕಾರಣ ಅಂದಾಜು ಎರಡು ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಅವರು ಯುವರಾಜ್‌ ಆಟದ ಸೊಬಗಿಗೆ ಬೆರಗಾದರು.ಕರ್ನಾಟಕದ ರಾಬಿನ್‌ ಉತ್ತಪ್ಪ (23, 37 ಎಸೆತ, 2 ಬೌಂಡರಿ) ಮತ್ತು ಉನ್ಮುಕ್ತ್ ಚಾಂದ್‌ (1) ಬೇಗನೇ ಪೆವಿಲಿಯನ್‌ ಸೇರಿದರು. ನಂತರ ಶುರುವಾಗಿದ್ದೇ ಮನ್‌ದೀಪ್‌ ಸಿಂಗ್‌ ಮತ್ತು ಯುವರಾಜ್‌ ಅಬ್ಬರ.ಮನ್‌ದೀಪ್‌ (67, 78ಎಸೆತ, 7 ಬೌಂಡರಿ, 1 ಸಿಕ್ಸರ್‌) ಅರ್ಧ ಶತಕ ಗಳಿಸಿದರೆ, ಯುವರಾಜ್‌ ಕೇವಲ 89 ಎಸೆತಗಳಲ್ಲಿ 123 ರನ್‌ ಕಲೆ ಹಾಕಿ ಅಬ್ಬರಿಸಿದರು. ಇದರಲ್ಲಿ ಎಂಟು ಬೌಂಡರಿ ಹಾಗೂ ಏಳು ಸಿಕ್ಸರ್‌ ಸೇರಿವೆ. ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 18.3 ಓವರ್‌ಗಳಲ್ಲಿ 100 ರನ್‌ಗಳಿಸಿತು.ಆರಂಭದಲ್ಲಿ ನಿಧಾನವಾಗಿ ರನ್‌ ಗಳಿಸುತ್ತಾ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲು ಯುವಿ ಪ್ರಯತ್ನಿಸಿದರು. 61 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಮುಂದಿನ 50 ರನ್‌ ಗಳಿಸಲು ಕೇವಲ 19 ಎಸೆತಗಳನ್ನು ತೆಗೆದುಕೊಂಡರು.  ಎಡಗೈ ಬ್ಯಾಟ್ಸ್‌ಮನ್‌ ಯುವಿ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ. 98 ರನ್‌ ಆಗಿದ್ದ ವೇಳೆ ಅವರು ಲಾಂಗ್ ಆನ್‌ನಲ್ಲಿ ಆಕರ್ಷಕವಾಗಿ ಸಿಕ್ಸರ್‌ ಸಿಡಿಸಿ ಶತಕ ಸಂಭ್ರಮ ಆಚರಿಸಿಕೊಂಡರು.ಯುವರಾಜ್‌ಗೆ ಸೂಕ್ತ ಬೆಂಬಲ ನೀಡಿದ ಬರೋಡಾದ ಯೂಸುಫ್‌ ಪಠಾಣ್‌ (ಔಟಾಗದೆ 70, 32 ಎಸೆತ, 4 ಬೌಂಡರಿ, 6 ಸಿಕ್ಸರ್‌) ಭಾರತದ ಮೊತ್ತವನ್ನು 300ರ ಗಡಿ ದಾಟಿಸಿದರು. ಈ ಜೋಡಿ 37 ಮತ್ತು 38ನೇ ಓವರ್‌ನಲ್ಲಿ ವಿಂಡೀಸ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿತು. ಕೇವಲ 12 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ ಸೇರಿದಂತೆ ಒಟ್ಟು 52 ರನ್‌ಗಳನ್ನು ಗಳಿಸಿತು. ಯುವರಾಜ್‌ ಹಾಗೂ ಯೂಸುಫ್‌ ಅಬ್ಬರದ ಮುಂದೆ ಪ್ರವಾಸಿ ತಂಡದ ಬೌಲರ್‌ಗಳು ತತ್ತರಿಸಿ ಹೋದರು. ಯುವಿ ಲಾಂಗ್ ಆನ್‌ನಲ್ಲಿ ಸಿಡಿಸಿದ ಮೂರು ಅಮೋಘ ಸಿಕ್ಸರ್‌ಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು.ಪರದಾಡಿದ ವಿಂಡೀಸ್‌: ಸವಾಲಿನ ಗುರಿಯನ್ನು ಬೆನ್ನು ಹತ್ತಿದ ವಿಂಡೀಸ್‌ ಆರಂಭದಲ್ಲಿ ಪರದಾಡಿತಾದರೂ, ನಂತರ ಮರು ಹೋರಾಟ ತೋರಿತು.ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರಮಾಹ್‌ ಬೊನ್ನೆರ್‌ ಮತ್ತು ಕೀರನ್ ಪೊವೆಲ್‌ ತಂಡದ ಒಟ್ಟು ಮೊತ್ತ 47  ಆಗುವಷ್ಟರಲ್ಲಿ ಔಟಾಗಿದ್ದರು. ಗಾಯಗೊಂಡಿರುವ ಪ್ರವೀಣ್‌ ಕುಮಾರ್‌ ಬದಲು ಸ್ಥಾನ ಗಳಿಸಿರುವ ಕರ್ನಾಟಕದ ವಿನಯ್‌ ಕುಮಾರ್‌ ಮೊದಲ ಎರಡೂ ವಿಕೆಟ್‌ ಉರುಳಿಸಿ ಆರಂಭಿಕ ಮೇಲುಗೈ ತಂದುಕೊಟ್ಟರು.ನರ್ಸಿಂಗ್ ಡಿಯೊನಾರಾಯಣ್‌ (57, 63ಎಸೆತ, 6 ಬೌಂಡರಿ, 1 ಸಿಕ್ಸರ್‌) ಮತ್ತು ಅಷ್ಲೇ ನರ್ಸ್‌ (57, 50 ಎಸೆತ, 6 ಬೌಂಡರಿ, 2 ಸಿಕ್ಸರ್‌) ತಂಡವನ್ನು ಗೆಲುವಿನ ದಡ ಸೇರಿಸಲು ನಡೆಸಿದ ಹೋರಾಟಕ್ಕೆ ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಸುಮಿತ್‌ ನರ್ವಾಲ್‌ (28ಕ್ಕೆ2), ರಾಹುಲ್‌ ಶರ್ಮಾ (57ಕ್ಕೆ2), ಯೂಸುಫ್‌ ಪಠಾಣ್‌ (47ಕ್ಕೆ2) ವಿಂಡೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿ ‘ಯುವ’ ಭಾರತದ ವಿಜಯಾರಂಭಕ್ಕೆ ಕಾರಣರಾದರು.ಸ್ಕೋರ್ ವಿವರ

ಭಾರತ ‘ಎ’ 42 ಓವರ್‌ಗಳಲ್ಲಿ 4 ವಿಕೆಟ್‌ಗೆ 312

-ರಾಬಿನ್‌ ಉತ್ತಪ್ಪ ಸಿ ಕಮಿನ್ಸ್‌ ಬಿ ಅಂಡ್ರೆ ರಸೆಲ್‌  23

ಉನ್ಮುಕ್ತ್‌ ಚಾಂದ್‌ ಸಿ ಥಾಮಸ್‌ ಬಿ ಕಮಿನ್ಸ್‌  01

ಮನ್‌ದೀಪ್‌ ಸಿಂಗ್‌ ಬಿ. ನಿಕಿತ್ ಮಿಲ್ಲರ್‌  67

ಯುವರಾಜ್ ಸಿಂಗ್‌ ಸಿ ಬೇಟನ್‌ ಬಿ ಬೊನ್ನೆರ್‌  123

ಯೂಸುಫ್‌ ಪಠಾಣ್ ಔಟಾಗದೆ  70

ನಮನ್‌ ಓಜಾ ಔಟಾಗದೆ  10

ಇತರೆ: (ಲೆಗ್‌ ಬೈ–3, ವೈಡ್‌–13, ನೋ ಬಾಲ್‌–2)

18

ವಿಕೆಟ್‌ ಪತನ: 1–8 (ಚಾಂದ್‌; 2.5), 2–47 (ಉತ್ತಪ್ಪ; 11.4), 3–147 (ಮನ್‌ದೀಪ್‌; 30.1), 4–272 (ಯುವರಾಜ್‌; 39.2).ಬೌಲಿಂಗ್‌: ಮಿಗುಯೆಲ್ ಕಮಿನ್ಸ್‌ 9–1–50–1, ರನ್ಸ್‌ಫೋರ್ಡ್‌ ಬೇಟನ್‌ 8–0–72–0, ಅಂಡ್ರೆ ರಸೆಲ್‌ 4–0–17–1, ನಿಕಿತ್‌ ಮಿಲ್ಲರ್‌ 9–0–62–1, ಅಷ್ಲೇ ನರ್ಸ್‌ 6–0–58–0, ನರ್‌ಸಿಂಗ್ ಡಿಯೊನಾರಾಯಣ್ 4–0–20–0, ಕ್ರಮಾಹ್‌ ಬೊನ್ನೆರ್‌ 2–0–30–1.

ವೆಸ್ಟ್ ಇಂಡೀಸ್‌ ‘ಎ‘ 39.1 ಓವರ್‌ಗಳಲ್ಲಿ 235

ಕ್ರಮಾಹ್‌ ಬೊನ್ನೆರ್‌ ಸಿ ನಮನ್‌ ಓಜಾ ಬಿ ವಿನಯ್‌ ಕುಮಾರ್‌  16

ಕೀರನ್ ಪೊವೆಲ್‌ ಸಿ ಸುಮಿತ್‌ ನರ್ವಾಲ್‌ ಬಿ ವಿನಯ್‌ ಕುಮಾರ್  17

ಕಿರ್ಕ್‌ ಎಡ್ವರ್ಡ್ಸ್‌್ ಸಿ ಓಜಾ ಬಿ ಸುಮಿತ್ ನರ್ವಾಲ್‌  19

ನರ್ಸಿಂಗ್ ಡಿಯೊನಾರಾಯಣ್‌ ಸಿ ಮನ್‌ದೀಪ್‌ ಸಿಂಗ್‌ ಬಿ ರಾಹುಲ್ ಶರ್ಮ  57

ಅಂಡ್ರೆ ಫ್ಲೆಚರ್‌ ಸಿ ಉನ್ಮುಕ್ತ್‌ ಚಾಂದ್‌ ಬಿ ಯೂಸುಫ್‌ ಪಠಾಣ್‌  29

ಡೇವನ್‌ ಥಾಮಸ್‌ ಎಲ್‌ಬಿಎಬ್ಲ್ಯು ಬಿ ಯೂಸುಫ್‌ ಪಠಾಣ್‌  10

ಅಂಡ್ರೆ ರಸೆಲ್‌ ರನ್‌ ಔಟ್‌ (ವಿನಯ್‌ ಕುಮಾರ್‌)  01

ಅಷ್ಲೇ ನರ್ಸ್‌ ಸಿ ಓಜಾ ಬಿ ಸುಮಿತ್‌ ನರ್ವಾಲ್‌  57

ನಿಕಿತ್‌ ಮಿಲ್ಲರ್‌ ಸಿ ಮತ್ತು ಬಿ ರಾಹುಲ್‌ ಶರ್ಮಾ  02

ರಾನ್ಸ್‌ಫರ್ಡ್‌ ಬೇಟನ್‌ ಹಿಟ್‌ ವಿಕೆಟ್‌ ಬಿ ಜಯದೇವ್ ಉನದ್ಕತ್‌  15

ಮಿಗುಯೆಲ್ ಕಮಿನ್ಸ್‌ ಔಟಾಗದೆ  04ಇತರೆ: (ಲೆಗ್ ಬೈ–3, ವೈಡ್‌–4, ನೋ ಬಾಲ್‌–1) 08

ವಿಕೆಟ್‌ ಪತನ: 1–24 (ಬೊನ್ನೆರ್‌; 3.3), 2–47 (ಪೊವೆಲ್; 7.5), 3–58 (ಎಡ್ವರ್ಡ್ಸ್‌್; 10.5), 4–112 (ಫ್ಲೆಚರ್‌; 19.5), 5–139 (ಥಾಮಸ್‌; 23.5), 6–140 (ರಸೆಲ್‌; 24.2), 7–176 (ಡಿಯೊನಾರಾಯಣ್‌; 29.5), 8–181 (ಮಿಲ್ಲರ್‌; 31.1), 9–205 (ಬೇಟನ್‌; 36.4), 10–235 (ನರ್ಸ್‌; 39.1)

ಬೌಲಿಂಗ್‌: ಜಯದೇವ್‌ ಉನದ್ಕತ್‌ 6–0–41–1, ಸುಮಿತ್‌ ನರ್ವಾಲ್‌ 6.1–0–28–2, ಆರ್‌. ವಿನಯ್‌ ಕುಮಾರ್‌ 7–0–42–2, ರಾಹುಲ್‌ ಶರ್ಮಾ 9–0–57–2, ಯೂಸುಫ್‌ ಪಠಾಣ್‌ 7–0–47–2, ಯುವರಾಜ್‌ ಸಿಂಗ್‌ 4–0–17–0.

ಫಲಿತಾಂಶ: ಭಾರತ ‘ಎ’ ತಂಡಕ್ಕೆ 77 ರನ್ ಗೆಲುವು

ಮುಂದಿನ ಪಂದ್ಯ ಸೆಪ್ಟೆಂಬರ್ 17, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry