ಸೋಮವಾರ, ಮಾರ್ಚ್ 8, 2021
22 °C
ಅಂಕದ ಪರದೆ

‘ರಂಗಾಭರಣ’ ನಾಟಕ ಪಯಣ

ರಮೇಶ ಕೆ. Updated:

ಅಕ್ಷರ ಗಾತ್ರ : | |

‘ರಂಗಾಭರಣ’ ನಾಟಕ ಪಯಣ

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಬಾಲಕನೊಬ್ಬ ಗೆಳೆಯರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹಳ್ಳಿಯ ಬೀದಿಗಳಲ್ಲಿ ಪೌರಾಣಿಕ ಕಥೆಗಳನ್ನು ಆಧರಿಸಿದ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದ. ಪ್ರೌಢಶಾಲೆ ಮೆಟ್ಟಿಲೇರಿದ ಮೇಲೆ ಆತನ ರಂಗಭೂಮಿ ಆಸಕ್ತಿಗೆ ನೀರೆರೆದು ಪೋಷಿಸಲು ಒಬ್ಬ ಗುರು ಸಿಕ್ಕರು.ಪದಗಳ ಬಳಕೆ, ನಾಟಕ ರಚಿಸುವ ಬಗೆ, ಸಂಭಾಷಣೆ, ರಂಗದ ಮೇಲೆ ಅದನ್ನು ಪರಿಣಾಮಕಾರಿಯಾಗಿ ಹೇಗೆ ತರಬೇಕು ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಅವರು ತಿಳಿಸಿಕೊಡುತ್ತಿದ್ದರು. ಪ್ರೌಢಾವಸ್ಥೆಯಲ್ಲಿ ಇರುವಾಗಲೇ ಅವನಿಗೆ ಸಿಕ್ಕಿದ ರಂಗಶಿಕ್ಷಣದಿಂದ ಮುಂದೊಂದು ದಿನ ಅವನು ಅನೇಕ ನಾಟಕಗಳನ್ನು ಸ್ವತಂತ್ರವಾಗಿ ನಿರ್ದೇಶನ ಮಾಡುವ ಮಟ್ಟ ತಲುಪಲು ಕಾರಣವಾಯಿತು.ಪ್ರೌಢಶಾಲಾ ಹಂತದಲ್ಲೇ ಹೀಗೆ ಪರಿಪೂರ್ಣ ರಂಗಕಲಾವಿದರಾದ ವ್ಯಕ್ತಿಯ ಹೆಸರು ಎಂ.ಎಸ್‌. ಗುಣಶೀಲನ್. ಸದ್ಯ ದೂರದರ್ಶನದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದ ಎಂ.ಎಸ್‌. ಗುಣಶೀಲನ್‌ ಅವರು ಪದವಿ ಶಿಕ್ಷಣ ಪಡೆದದ್ದು ದೊಡ್ಡಬಳ್ಳಾಪುರದಲ್ಲಿ. ಪದವಿ ಅಭ್ಯಾಸ ಮಾಡುತ್ತಲೇ ಸಮಾನಮನಸ್ಕ ಯುವಕರನ್ನು ಒಟ್ಟುಗೂಡಿಸಿದರು. ಆ ತಂಡಕ್ಕೆ ‘ನಟ ಗಂಗೋತ್ರಿ’ ಎಂದು ಹೆಸರನ್ನಿಟ್ಟು ಜಿಲ್ಲೆಯಾದ್ಯಂತ ಸುತ್ತುತ್ತಾ ನಾಟಕ ಪ್ರದರ್ಶನ ಮಾಡಲು ಆರಂಭಿಸಿದರು. ಪ್ರದರ್ಶನ ಕಾಣುತ್ತಿದ್ದ ನಾಟಕಗಳನ್ನು ನಿರ್ದೇಶನ ಮಾಡುತ್ತಿದ್ದವರೂ ಗುಣಶೀಲನ್‌ ಅವರೇ.ಸಿ.ವಿ.ಶಂಕರ್‌ ಅವರ ‘ಸುಳಿಯಲ್ಲಿ ಸಿಕ್ಕವರು’, ಬರಗೂರು ರಾಮಚಂದ್ರಪ್ಪ  ರಚನೆಯ ‘ನಮ್‌ ಸಂಗಪ್ಪ’, ಬೇಲೂರು ಕೃಷ್ಣಮೂರ್ತಿ ಅವರ ‘ಕಲೆಯ ಕೊಲೆ’ ಅಲ್ಲದೇ ಚಂದ್ರಶೇಖರ ಕಂಬಾರ ಅವರ  ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಎಂಬತ್ತರ ದಶಕದಲ್ಲಿ ರಂಗಭೂಮಿ ಜನಪ್ರಿಯ ಮಾಧ್ಯಮವೂ ಆಗಿತ್ತು. ಟಿ.ವಿ, ಸಿನಿಮಾ ಅಷ್ಟು ಪರಿಣಾಮಕಾರಿಯಾಗಿರದ ಅಂದು ನಾಟಕಗಳನ್ನು ನೋಡುವವರ ಸಂಖ್ಯೆ ದೊಡ್ಡದಿತ್ತು. ಗಣೇಶೋತ್ಸವ, ಹಬ್ಬ, ಜಾತ್ರೆಗಳ ಸಂದರ್ಭಗಳಲ್ಲೂ ಇವರ ತಂಡ ರಂಗಪ್ರಯೋಗಗಳನ್ನು ಮಾಡಿ ಜನಮನ್ನಣೆ ಗಳಿಸಿತ್ತು.‘ಪ್ರಾಥಮಿಕ ಶಾಲೆಯಲ್ಲಿರುವಾಗಲೇ ನಾನು ನಾಟಕಗಳ ಗೀಳು ಹತ್ತಿಸಿಕೊಂಡವನು. ನಮ್ಮೂರಿನ ಬೀದಿ ಬೀದಿಗಳಲ್ಲೂ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡಿದ್ದೇವೆ. ರಂಗಾಸಕ್ತರು, ಊರಿನ ಹಿರಿಯರ ಪ್ರೋತ್ಸಾಹವೂ ನಮಗಿತ್ತು. ನಂತರ ಪ್ರೌಢಶಾಲೆಗೆ ಬಂದಾಗ ಅಲ್ಲಿಯೂ ನಾವು ಬೆಳೆಯಲು ಪೂರಕ ವಾತಾವರಣ ಸೃಷ್ಟಿಯಾಯಿತು. ಗುರು ಆಂಜನಪ್ಪ ನಮಗೆ ರಂಗಪಾಠ ಮಾಡಿದರು. ಗುಂಡಣ್ಣ, ಎ.ಎಸ್. ಮೂರ್ತಿ ಅವರ ನಾಟಕಗಳನ್ನು ನಿರ್ದೇಶನ ಮಾಡಿ ಆಡಿಸುತ್ತಿದ್ದರು. ಅಂದು ಆರಂಭವಾದ ರಂಗದ ಓಟ ಇಲ್ಲಿಯವರೆಗೂ ನಿಂತಿಲ್ಲ. ನಾಟಕಗಳಷ್ಟೇ ಅಲ್ಲದೇ ಸುಗಮ ಸಂಗೀತ, ಜನಪದ ಗೀತೆಗಳನ್ನು ಹಾಡುತ್ತಿದ್ದೆವು. ತಾಲ್ಲೂಕಿನ ಯುವ ಕಲಾವಿದರಿಗಾಗಿ ನಗರದ ಪುರಭವನದಲ್ಲಿ ಕಲಾಮೇಳ ಆಯೋಜಿಸಿದ್ದೆವು. ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಂಗಭೂಮಿ ಎಂಬ ಸಮುದ್ರದಲ್ಲಿ ಈಜುತ್ತಿದ್ದೇವೆ’ ಎನ್ನುತ್ತಾರೆ ಎಂ.ಎಸ್‌.ಗುಣಶೀಲನ್‌.1984ರಲ್ಲಿ ಆರ್‌.ಟಿ. ನಗರದ ಸುತ್ತಮುತ್ತ ಸಂಗೀತ, ನೃತ್ಯ ಕಲಿಯುವ ಹಾಗೂ ನಾಟಕಗಳಲ್ಲಿ ಅಭಿನಯಿಸುವ ಆಸಕ್ತರು ಹೆಚ್ಚಾಗಿದ್ದರು. ಪ್ರದರ್ಶನ ನೀಡಲು ಸುಸಜ್ಜಿತ ಸಭಾಂಗಣ ಇರಲಿಲ್ಲ. ಇಂಥ ಕೊರತೆಯನ್ನು ನೀಗಿಸಲೆಂದು ಗುಣಶೀಲನ್‌ ಅವರು ಮನೆಯಲ್ಲೇ ‘ರಂಗಾಭರಣ’ ಕಲಾಕೇಂದ್ರವನ್ನು ಆರಂಭಿಸಿದರು. ಎ.ಪಿ. ಶಂಕರ್‌ ಎನ್ನುವವರು ಸಭಾಂಗಣ ಕಟ್ಟಿಸಿದರು. ಅಲ್ಲಿ ರಂಗ ತರಬೇತಿ ಸೇರಿದಂತೆ ನೃತ್ಯ, ಸಂಗೀತ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಸಿಕ್ಕಂತಾಯಿತು.ಸಂಜಯನಗರದಲ್ಲೂ ರಂಗಮಂದಿರ

ಕಳೆದ ಆರು ವರ್ಷಗಳ ಹಿಂದೆ ಸಂಜಯನಗರದಲ್ಲೂ ಚಂದ್ರಪ್ರಿಯ ರಂಗಮಂದಿರವನ್ನು ನಿರ್ಮಿಸಿದ್ದಾರೆ. ಇಲ್ಲಿ ಉತ್ತಮ ಬೆಳಕು, ಧ್ವನಿ, ಪ್ರಸಾಧನ ಕೊಠಡಿ, ಕಲಾವಿದರಿಗೆ ತರಬೇತಿ ಕೊಠಡಿ, ಸಂಗೀತ, ನೃತ್ಯ, ವಾದ್ಯಗೋಷ್ಠಿ, ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲು ಅವಕಾಶವಿದೆ. 200 ಆಸನಗಳ ಸಭಾಂಗಣ ಇದಾಗಿದ್ದು, ಸುತ್ತಮುತ್ತಲಿನ ಕಲಾವಿದರಿಗೆ ಅನುಕೂಲವಾಗಿದೆ.ನಟ ಗಂಗೋತ್ರಿ ತಂಡವನ್ನು ಕಟ್ಟಿದ ದಿನದಿಂದಲೂ ಎನ್‌. ಮೋಹನ್‌ರಾಜು, ಸುಂದರರಾಜ್‌ ಅರಸ್‌, ಸಾ.ಸಾ. ರವೀಂದ್ರಬಾಬು, ಕೆ.ಪಿ. ಪ್ರಕಾಶ್‌, ಯಲಪ್ಪ, ನಾ. ನರೇಶ್‌ ಕುಮಾರ್‌, ಬಿ. ರಾಮಯ್ಯ, ಬಿ.ಜಿ. ಅಮರನಾಥ್‌, ಚೌಡಪ್ಪ ಮತ್ತಿತರರು ರಂಗಾಭರಣ ಕಟ್ಟಿ ಬೆಳೆಸಲು ಕಾರಣರಾದರು.‘ಚಂದ್ರಪ್ರಿಯ ರಂಗಮಂದಿರ ಕಟ್ಟಲು  ಲಕ್ಷ್ಮಣ ಎಂಬುವರು ಸುಮಾರು ₨40 ಲಕ್ಷ  ಧನಸಹಾಯ ಮಾಡಿದರು. ಅಲ್ಲದೇ ಶ್ರೀನಿವಾಸ ರೆಡ್ಡಿ, ಕೆ.ವಿ.ಆರ್‌. ಟ್ಯಾಗೋರ್‌, ಮಾಸ್ಟರ್‌ ಹಿರಣಯ್ಯ, ಎಂ.ವಿ.ಸಿ. ಹನುಮಂತಯ್ಯ, ಸಿ. ಶಿವಲಿಂಗಯ್ಯ, ಶಂಕರ ಬಿದರಿ ಮತ್ತಿತರರು ಧನ ಸಹಾಯ ಮಾಡಿದ್ದಾರೆ’ ಎಂದು ರಂಗಾಭರಣಕ್ಕಾಗಿ ದುಡಿದವರನ್ನು ಸ್ಮರಿಸಿಕೊಳ್ಳುತ್ತಾರೆ ಗುಣಶೀಲನ್‌.ರಂಗಾಭರಣದ ವಿದ್ಯಾರ್ಥಿ ಅಭಿಮಾನ್ ರಾಯ್‌ ಅವರು ‘ತಾಜ್‌ಮಹಲ್‌’, ‘ಕರೋಡ್‌ಪತಿ’ ಸೇರಿದಂತೆ ಪ್ರಮುಖ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪರಾರಿ’, ‘ಚಿಕ್ಕಮಗಳೂರ ಚಿಕ್ಕಮಲ್ಲಿಗೆ’ ಚಿತ್ರಗಳ ನಾಯಕ ಶ್ರವಂತ್‌, ಸೇನ್‌ ಪ್ರಕಾಶ್‌, ‘ದಿಲ್‌ದಾರ್‌’ ಚಿತ್ರದ ನಟಿ ನಿಶ್ಮಾ ಕೂಡ ರಂಗಾಭರಣದ ಗರಡಿಯಲ್ಲಿ ಪಳಗಿದವರು. ಬೆಳ್ಳಿತೆರೆ ಅಲ್ಲದೇ ಧಾರಾವಾಹಿಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳಾದ ಕೆ.ಟಿ. ಪ್ರಕಾಶ್‌, ರಾಮಯ್ಯ, ಪ್ರೀತಿ, ಸುಂದರರಾಜ್‌ ಅರಸ್‌ ಮಿಂಚುತ್ತಿರುವುದು ರಂಗಾಭರಣದ ಕೊಡುಗೆಯಾಗಿದೆ.ರಂಗಭೂಮಿ ಅಲ್ಲದೆ ವಿಚಾರ ಸಂಕಿರಣ, ಕವಿ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಾಭರಣದ ವತಿಯಿಂದ ಆಯೋಜಿಸಲಾಗುತ್ತಿದೆ.

‘‘ಸಾಮಾಜಿಕ ಸಂವೇದನೆ, ಸೃಜನಶೀಲ ಕಲೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ‘ರಂಗಾಭರಣ’ ಮಾಸ ಪತ್ರಿಕೆಯನ್ನು ಪ್ರತಿ ತಿಂಗಳು ಹೊರ ತರಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ, ಆ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದವನ್ನು ಆಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ತಿರುಗಾಟ ತಂಡವನ್ನು ಕಟ್ಟುವ ಯೋಜನೆಯೂ ಇದೆ’’ ಎಂದು ಹೇಳುತ್ತಾರೆ ಗುಣಶೀಲನ್‌.

ಸುಬ್ಬು ನರಸಿಂಹ ಅವರ ರಚನೆಯ ‘ಸಮಯಕ್ಕೊಂದು ಸುಳ್ಳು’ ನಾಟಕ 100ಕ್ಕೂ ಹೆಚ್ಚು ಪ್ರದರ್ಶನ ಕಂಡು ತಂಡಕ್ಕೆ ಹೆಸರು ತಂದುಕೊಟ್ಟಿದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.