‘ರಾಜಕಾರಣದಲ್ಲಿ ಶುದ್ಧಹಸ್ತರಿಲ್ಲ’

7

‘ರಾಜಕಾರಣದಲ್ಲಿ ಶುದ್ಧಹಸ್ತರಿಲ್ಲ’

Published:
Updated:

ಮೈಸೂರು: ‘ರಾಜಕಾರಣದಲ್ಲಿ ಯಾರೂ ಶುದ್ಧ ಹಸ್ತರಿಲ್ಲ. ನಾನೂ ಶೇ 100ರಷ್ಟು ಪರಿಶುದ್ಧನಲ್ಲ. ಪರಿಶುದ್ಧವಾಗಿದ್ದರೆ ರಾಜಕಾರಣದಲ್ಲಿ ಉಳಿಯಲು ಸಾಧ್ಯವಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.ನಗರದ ಕೆಂಪನಂಜಾಂಬ ಅಗ್ರಹಾರದ ಎಸ್‌.ಕೆ.ಬಿ. ವಿದ್ಯಾಸಂಸ್ಥೆಯಲ್ಲಿ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದಾನ ಸಮಾರಂಭದಲ್ಲಿ ಅವರು ಮಾತನಾಡಿ­ದರು. ‘ವ್ಯವಸ್ಥೆಯಲ್ಲಿ ಸಾಧ್ಯವಾದಷ್ಟು ಸುಧಾರಣೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಸರ್ಕಾರದ ಸಚಿವರಿಗಿಂತ ಉತ್ತಮವಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದೇವೆ’ ಎಂದರು.‘ಮೀಸಲಾತಿ ಸೌಲಭ್ಯ ಹಲವು ಸಮುದಾಯಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಇದೇ ಸಮಯದಲ್ಲಿ ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ತೊಂದರೆಗಳಾಗಿವೆ. ಇಂತಹ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಕುರಿತು ಚಿಂತಿಸಲು ಸರ್ಕಾರ ಒಲವು ತೋರಿದೆ’ ಎಂದು ಹೇಳಿದರು.ವಿಮರ್ಶಕ ಪ್ರೊ.ನರಹಳ್ಳಿ ಸುಬ್ರಹ್ಮಣ್ಯ ಮಾತನಾಡಿ, ‘ಪದವಿ ಪಡೆಯುವುದು ಮಾತ್ರ ಪ್ರತಿಭೆಯಲ್ಲ. ರಾಜಕಾರಣ ಕೂಡ ಒಂದು ಪ್ರತಿಭೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಗುಂಡೂರಾವ್ ಅವರು ಮಾದರಿ­ಯಾಗಬೇಕು. ಪ್ರಾಮಾಣಿಕತೆ, ನಿಷ್ಠೆ, ಧೈರ್ಯಕ್ಕೆ ಅವರನ್ನು ಅಭಿನಂದಿಸಬೇಕು‘ ಎಂದು ಅಭಿಪ್ರಾಯಪಟ್ಟರು.ಎಸ್‌.ಕೆ.ಬಿ. ವಿದ್ಯಾಸಹಾಯ ಸಂಘದ ಅಧ್ಯಕ್ಷ ಇ.ಎಸ್‌. ಸೀತಾರಾಮಯ್ಯ, ಡಿ.ಎನ್‌. ಶ್ರೀಕಾಂತ್‌, ಉದ್ಯಮಿ ನಾಗರಾಜರಾವ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry