ಗುರುವಾರ , ಜೂನ್ 24, 2021
24 °C

‘ರಾಜಕಾರಣಿ ಮಗ ಎಂಬುದು ನಾಚಿಕೆಯಾಗಿತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ನಾನು 1973ರಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ... ಮೇಷ್ಟ್ರು ವಿದ್ಯಾರ್ಥಿಗಳಿಗೆ ತಂದೆಯ

ಹೆಸರು ಮತ್ತು ವೃತ್ತಿ ಕೇಳುತ್ತಿದ್ದರು. ಆಗ ನನ್ನ ತಂದೆ ಜೆ.ಎಚ್. ಪಟೇಲರು ಸಂಸತ್‌ ಸದಸ್ಯರಾಗಿದ್ದರು. ನನ್ನ ಸರದಿ

ಬಂದಾಗ ನಾನು ರಾಜಕಾರಣಿ ಮಗ ಎಂದೆ... ಎಲ್ಲರು ಗೊಳ್‌ ಎಂದು ನಕ್ಕರು... ರಾಜಕಾರಣಿಗಳ ಬಗ್ಗೆ ಆಗಲೇ

ಜನರಲ್ಲಿ ಅಸಹ್ಯ ಭಾವನೆ ಇತ್ತು. ಹಾಗಾಗಿ, ರಾಜಕಾರಣಿ ಮಗ ಎಂದು ಹೇಳಿಕೊಳ್ಳುವುದು ನನಗೆ ನಾಚಿಕೆ ಎನಿಸುತ್ತಿತ್ತು...’

–ಹೀಗೆ ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಟ್ಟವರು ಮಾಜಿ ಶಾಸಕ ಮಹಿಮ ಪಟೇಲ್.ಜೆ.ಎಚ್.ಪಟೇಲ್ ಕಾಲೇಜು ವತಿಯಿಂದ ಶುಕ್ರವಾರ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ  ಜೆ.ಎಚ್.ಪಟೇಲ್ ಸೇವಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಂಗ್ ಸ್ಪ್ರಿಂಗ್–2014

ಅಂತರರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದ ಅವರು, ತಂದೆ ಮತ್ತು ತಮ್ಮ ಜೀವನಾನುಭವಗಳ ಆತ್ಮಾವಲೋಕನವನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು.‘ನಾನು ಮೂಲತಃ ವಿಜ್ಞಾನ ಪದವೀಧರ. ಆದರೆ, ರಾಜಕೀಯ ಕೈಹಿಡಿದು ಕರೆಯಿತು. ತಂದೆ ಅಕಾಲಿಕ ಮರಣದ ನಂತರ ರಾಜಕೀಯ ಪ್ರವೇಶಿಸದ ಮೇಲೆ ರಾಜಕಾರಣಿಯಾಗಿ ರೂಪುಗೊಂಡೆ. ಹಾಗೆ ಆಗುವ ಮುನ್ನ ಹತ್ತಾರು

ಬಾರಿ ಆತ್ಮಾವಲೋಕನ ಮಾಡಿಕೊಂಡಿದ್ದೆ. ಸಮಾಜ ಸುಧಾರಣೆಗೆ ರಾಜಕೀಯ ಅಗತ್ಯ ಎನಿಸಿತು’ ಎಂದು ಹೇಳಿದರು.‘ಸಮಾಜ ಹೇಗಿರಬಾರದು ಎಂದು ನಾವು ಹೆಚ್ಚು ಆಲೋಚಿಸುತ್ತೇವೆ. ಆದರೆ, ಎಂದೂ ಹೇಗಿರಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸುವುದಿಲ್ಲ. ನಾವು ಆಲೋಚನೆಗಳಿಗೆ ಬೆಲೆ ಕೊಡುತ್ತೇವೆ. ಅದರ ಪರಿಣಾಮವಾಗಿ ಆಲೋಚನೆಗಳನ್ನೇ ಆಯ್ಕೆ ಮಾಡಿ ಕೊಳ್ಳುತ್ತೇವೆ. ಆದರೆ, ಆಲೋಚನೆಗಳ ಜತೆಜತೆಗೆ ಭಾವನೆಗಳೂ ಇರುತ್ತವೆ.

ಆಲೋಚನೆ– ಭಾವನೆ ಎರಡನ್ನೂ ಆಯ್ಕೆ ಮಾಡಿಕೊಂಡು ಯೋಜನೆ ರೂಪಿಸಿದರೆ ಸುಸ್ಥಿರ ಸಮಾಜ ನಿರ್ಮಿಸಬಹುದು’ ಎಂದು ಸಲಹೆ ನೀಡಿದರು.ಪ್ರಶಸ್ತಿ ಸ್ವೀಕರಿಸಿದ ಪ್ರೊ.ಎಂ.ಆರ್. ನಾಗರಾಜ್ ಮಾತನಾಡಿ, ‘ಬೌದ್ಧಿಕ ಮಟ್ಟ ಕುಸಿಯುತ್ತಿರುವ ಕಾರಣ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮಾನವ ಸಂಬಂಧಗಳ ಅಂತರ ಬೆಸೆಯುವುದರಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಅವರಿಗೆ ಜೆ.ಎಚ್.ಪಟೇಲ್ ಸೇವಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಚ್.ವಿಶ್ವನಾಥ್, ಡಿ.ಜಿ.ರೇವಣಪ್ಪ, ದೊಗ್ಗಳ್ಳಿಗೌಡ್ರು ಪುಟ್ಟರಾಜು, ಎಂ.ಗುರುಸಿದ್ದಸ್ವಾಮಿ, ಪ್ರತಿಭಾ ಪಿ.ದೊಗ್ಗಳ್ಳಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.