ಭಾನುವಾರ, ಮೇ 9, 2021
25 °C
ಮೂಡಿಗೆರೆ: ಜೆಡಿಎಸ್‌ ಕಾರ್ಯಕರ್ತರ ಸಭೆ

‘ರಾಜಕೀಯದಲ್ಲಿ ಕತ್ತು ಕೊಯ್ಯುವವರಿಗೆ ಪಾಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ರಾಜಕೀಯದಲ್ಲಿ ನಂಬಿಕೆ ದ್ರೋಹದ ಮೂಲಕ ಕತ್ತು ಕೊಯ್ಯುವ ಪ್ರವೃತ್ತಿ ಅನುಸರಿಸುವವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಸಿಗಲಿದೆ ಎಂದು ಶಾಸಕ ಬಿ.ಬಿ.ನಿಂಗ್ಯಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ರೈತ ಭವನದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಡಿಯೂರಪ್ಪ ಅವರ ಸಂಕಷ್ಟ ಸ್ಥಿತಿಯಲ್ಲಿ ಧನಂಜಯ ಕುಮಾರ್‌ ಉನ್ನತ ಹುದ್ದೆಯನ್ನು ತೊರೆದು ಕೆಜೆಪಿ ಪಕ್ಷದ ಮೂಲಕ ಯಡಿಯೂರಪ್ಪ ಅವರ ಕೈ ಹಿಡಿದಿದ್ದರು. ಆದರೆ ಯಾವುದೇ ತಪ್ಪನ್ನು ಮಾಡದ ಪ್ರಮಾಣಿಕ ವ್ಯಕ್ತಿಗಳನ್ನು ನಿಕೃಷ್ಠವಾಗಿ ಕಂಡು ನಡು ನೀರಿನಲ್ಲಿಯೇ ಕೈಬಿಟ್ಟರು. ಇದೆಲ್ಲವನ್ನು ರಾಜ್ಯದ ಜನತೆ ನೋಡುತ್ತಿದ್ದು, ಈ ಚುನಾವಣೆಯಲ್ಲಿ ಅಂಥಹ ನಂಬಿಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳ ಆಡಳಿತಕ್ಕೆ ಯಾವುದೇ ವ್ಯತ್ಯಾಸವಿಲ್ಲ, ಎರಡೂ ಸರ್ಕಾರಗಳು ಆಡಳಿತ ನಡೆಸಿದ್ದರೂ, ಸ್ಥಳೀಯ ಸಮಸ್ಯೆಗಳು ಇದುವರೆಗೂ ಬಗೆಹರಿದಿಲ್ಲ, ಅರಣ್ಯಭೂಮಿ, ಒತ್ತುವರಿ, ಇನಾಂ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮಕೈಗೊಳ್ಳದೇ ರಾಜ್ಯದ ಜನತೆಗೆ ದ್ರೋಹವೆಸಗಿದ್ದಾರೆ. ಅಲ್ಲದೇ ಅಡಿಕೆ ವಿಷಯುಕ್ತ ಪದಾರ್ಥವೆಂದು ಸುಪ್ರಿಂಕೋರ್ಟಿಗೆ ಪ್ರಮಾಣ­ಪತ್ರ ಸಲ್ಲಿಸಿದ್ದಾರೆ ಎಂದು ಪುನರುಚ್ಚರಿಸಿ ಆರೋಪಿಸಿದರು.ಕ್ಷೇತ್ರದ ಚುನಾವಣಾ ಅಭ್ಯರ್ಥಿ ಧನಂಜ­ಯಕುಮಾರ್‌ ಮಾತನಾಡಿ, ಕಳೆದ 40 ವರ್ಷಗಳಿಂದ ರಾಜಕೀಯ ನಡೆಸಿದ್ದು, ವಿವಿಧ ಹುದ್ದೆಗಳನ್ನು ಯಾವುದೇ ಕಳಂಕವಿಲ್ಲದೇ ಸಮರ್ಥವಾಗಿ ನಿಭಾಯಿಸಿದ್ದೇನೆ, ನನಗೆ ಅಧಿಕಾರದ ಆಸೆಯಿಲ್ಲ, ಬದಲಾಗಿ ಈ ಚುನಾ­ವಣೆಯು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿದ್ದು, ವಿಶ್ವಾಸದ್ರೋಹಿಗಳಿಗೆ ತಕ್ಕ ಉತ್ತರ ನೀಡುವ ಚುನಾವಣೆಯಾಗಿದೆ.ಎರಡು ವರ್ಷಗಳಿಂದ ಅಡಿಕೆ ಬೆಳೆಗಾಗಿ ಗೋರಕ್‌ಸಿಂಗ್‌ ವರದಿ ಜಾರಿಗೊಳಿಸಲಾಗದ ಕೇಂದ್ರ ಸರ್ಕಾರಕ್ಕೆ ಕೇವಲ ಎರಡೇ ವಾರಗಳಲ್ಲಿ ಅನುಷ್ಠಾನ­ಗೊಳಿಸಲು ಸಾಧ್ಯ ಎನ್ನುವುದನ್ನು ತೋರಿಸಲು ಜೆಡಿಎಸ್‌ನ್ನು ಬೆಂಬಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆನೀಡಿದರು.ಚಿಕ್ಕಮ­ಗ­ಳೂರು ಕ್ಷೇತ್ರದಿಂದ ಗೆದ್ದ ಇಂದಿರಾಗಾಧಿ ಅವರು, ಗೆಲುವಿನ ನಂತರ ಕ್ಷೇತ್ರವನ್ನು ಹಿಂತಿರುಗಿ ನೋಡಲಿಲ್ಲ, ಇದರ ಪರಿಣಾಮ ಇಂದಿಗೂ ಮುಂದುವರೆದಿದ್ದು, ಸ್ಥಳೀಯ ಸಮಸ್ಯೆಗಳು ಜೀವಂತವಾಗಿವೆ. ಅಭಿವೃದ್ಧಿಯಲ್ಲಿ ಹಿನ್ನೆಡೆ­ಯಾಗಿದೆ ಎಂದು ಆರೋಪಿಸಿದರು. ಸ್ಥಳೀಯ ಸಮಸ್ಯೆಗಳಿಗೆ ಕೇಂದ್ರದಲ್ಲಿ ಧ್ವನಿಯಾಗಲು ಜೆಡಿಎಸ್‌ ಗೆಲುವು ಸಾಧಿಸಬೇಕಿದೆ ಎಂದರು.ಸಭೆಯಲ್ಲಿ ಮಾಜಿ ಶಾಸಕ ಧರ್ಮೇಗೌಡ, ಪದಾಧಿಕಾರಿಗಳಾದ ಮಂಜಪ್ಪ, ಎಚ್‌.ಎಚ್‌. ದೇವರಾಜು, ಎಚ್‌.ಟಿ. ರಾಜೇಂದ್ರ, ಉಮಾ­ಪತಿ, ರಂಜನ್‌ ಅಜಿತ್‌ ಕುಮಾರ್‌ ಮಾತನಾಡಿ­ದರು. ಭೈರೇಗೌಡ, ಶಾಕೀರ್‌ ಹುಸೇನ್‌, ಸರೋಜ ರವಿ, ಪದ್ಮ ತಿಮ್ಮೇಗೌಡ, ಅಶೋಕ್‌ ಮುಂತಾದವರಿದ್ದರು.ಅನುಮತಿಯಿಲ್ಲದೇ ಪಟಾಕಿ ಸಿಡಿತ: ಇಲ್ಲಿ ನಡೆದ ಕಾರ್ಯಕರ್ತರ ಸಭೆಯ ಅಂಗವಾಗಿ ಪಟ್ಟಣದ ಲಯನ್ಸ್‌ ವೃತ್ತ, ಮಂಜ್ರಾಬಾದ್‌ ವೃತ್ತ ಹಾಗೂ ರೈತಭವನದ ಬಳಿ ಅನುಮತಿ­ಯಿಲ್ಲದೇ ಪಟಾಕಿಯನ್ನು ಸಿಡಿಸಲಾಯಿತು. ಅಲ್ಲದೇ ಪಟ್ಟಣದಿಂದ ರೈತ ಭವನದವರೆಗೆ ಬೈಕ್‌ ಜಾಥಾ ಕೂಡ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.