‘ರಾಜದ್ರೋಹ ಕಾಯ್ದೆ ರದ್ದತಿಗೆ ಸಹಿ ಅಭಿಯಾನ’

7

‘ರಾಜದ್ರೋಹ ಕಾಯ್ದೆ ರದ್ದತಿಗೆ ಸಹಿ ಅಭಿಯಾನ’

Published:
Updated:

ಮಂಗಳೂರು: ‘ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿರುವ ರಾಜ­ದ್ರೋಹ ಕಾಯ್ದೆಯನ್ನು ರದ್ದುಪಡಿಸುವ ಬಗ್ಗೆ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಂಘಟನೆಯು 10 ಲಕ್ಷ ಸಹಿ ಸಂಗ್ರಹಿಸಲಿದೆ. ಇದಕ್ಕಾಗಿ ದೇಶದಾದ್ಯಂತ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಪಿಯುಸಿಎಲ್‌ನ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್‌ ತಿಳಿಸಿದರು.ಪಿಯುಸಿಎಲ್‌ನ ರಾಷ್ಟ್ರೀಯ ಮಂಡಳಿ ಸಭೆಯ ಮುಕ್ತಾಯವಾದ ಬಳಿಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯರ ದಂಗೆಯನ್ನು ಹತ್ತಿಕ್ಕಲು ಬಿ್ರಿಟಿಷರು ರಾಜದ್ರೋಹದಂತಹ ಕಾಯ್ದಯನ್ನು ಜಾರಿಗೊಳಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಭರವಸೆ ನೀಡಿದ್ದರು. ಅವರದೇ ಪಕ್ಷ ನಿರಂತರ ಆಡಳಿತದಲ್ಲಿದ್ದರೂ ಈ ಭರವಸೆಯನ್ನು ಈಡೇರಿಸದೆ ಜನರನ್ನು ವಂಚಿಸಿದೆ’ ಎಂದು ಆರೋಪಿಸಿದರು.‘ಬ್ರಿಟಿಷರ ಕಾಲಕ್ಕಿಂತಲೂ ಈಗಿನ ಕೆಲವು ಕಾನೂನುಗಳು ಕ್ರೂರವಾಗಿವೆ. ರಾಜದ್ರೋಹದಂತಹ ಅನೇಕ ಕಾಯ್ದೆಗಳು ಜನರ ಹೋರಾಟವನ್ನು ಹತ್ತಿಕ್ಕಲು ಬಳಕೆ ಆಗುತ್ತಿವೆ. ಕೈಗಾರಿಕೆಗೆ ಜಮೀನು ಕಳೆದುಕೊಳ್ಳುವ ರೈತರು, ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳ ಮೇಲೂ ಈ ಕಾನೂನನ್ನು ದುರ್ಬಳಕೆ ಮಾಡಲಾಗುತ್ತಿದೆ. ಸರ್ಕಾರವನ್ನು ಪ್ರಶ್ನಿಸುವ ಎಲ್ಲರ ಧ್ವನಿಯನ್ನು ಹತ್ತಿಕ್ಕುವುದಾದರೆ, ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ?’ ಎಂದು ಅವರು ಪ್ರಶ್ನಿಸಿದರು.‘ಜನಾಭಿಪ್ರಾಯ ಸಂಗ್ರಹದ ಮೂಲಕ ಪೋಟಾದಂತಹ ಕಾಯ್ದೆಯನ್ನು ರದ್ದುಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ರಾಜದ್ರೋಹ ಕಾಯ್ದೆಯೂ ಒಂದು ದಿನ ರದ್ದಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ‘ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆಗೊಳಿಸಬೇಕೆಂದು ಸಂವಿಧಾನ ನಿರ್ದೇಶಾತ್ಮಕ ತತ್ವಗಳು ಹೇಳುತ್ತವೆ. ಆದರೆ ಸರ್ಕಾರದ ನೀತಿಯು ಬಡವ–ಬಲ್ಲಿದರ ನಡಿವನ ಅಂತರವನ್ನು ಹೆಚ್ಚಿಸುತ್ತಿದೆ.

ಸರ್ಕಾರ ರಚಿಸುವ ಕಾನೂನುಗಳು ಬಡವರ ಬದಲು ಕಾರ್ಪೊರೇಟ್‌ ಕಂಪೆನಿಗಳ, ಶ್ರೀಮಂತ ಪಕ್ಷಪಾತಿಯಾಗಿವೆ’ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್‌ನ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಪ್ರಭಾಕರ ಸಿನ್ಹ, ಪ್ರಮುಖರಾದ ಕವಿತಾ ಶ್ರೀವಾತ್ಸವ್‌, ಬಿನಾಯಕ್‌ ಸೆನ್‌, ರವಿಕಿರಣ್‌ ಜೈನ್‌, ರಾಜ್ಯ ಘಟಕದ ಅಧ್ಯಕ್ಷ ಪಿ.ಬಿ.ಡೆಸಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry