ಭಾನುವಾರ, ಫೆಬ್ರವರಿ 28, 2021
23 °C

‘ರಾಷ್ಟ್ರೀಯವಾದಿ ಸಿದ್ಧಾಂತಕ್ಕೆ ಜನರ ಮತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಷ್ಟ್ರೀಯವಾದಿ ಸಿದ್ಧಾಂತಕ್ಕೆ ಜನರ ಮತ’

ಯಲ್ಲಾಪುರ: ‘ಸೆಕ್ಯೂಲರ್ ಸಿದ್ಧಾಂತದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸೆಕ್ಯೂಲರ್ ಸಿದ್ಧಾಂತಕ್ಕೆ ಮತ ನೀಡದೇ ರಾಷ್ಟ್ರೀಯವಾದಿ ಸಿದ್ಧಾಂತಕ್ಕೆ ಮತ ನೀಡಿದ್ದಾನೆ. ಇದು ಕೇವಲ ಬಿಜೆಪಿ ಗೆಲುವಲ್ಲ ಭಾರತದ ಗೆಲುವು’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ವಿಜಯೋತ್ಸವ ಹಾಗೂ ಮತದಾರ , ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.‘ಸಾವಿರ ವರ್ಷಗಳ ದಬ್ಬಾಳಿಕೆಯ ಇತಿಹಾಸದ ವಿರುದ್ಧ ಇಂದು ದೇಶ ಎದ್ದು ನಿಂತಿದೆ. ಮುಂದಿನ ಶತಮಾನ ಭಾರತದ್ದಾಗಬೇಕು. ಜಗತ್ತಿನಲ್ಲಿ ಭಾರತದ ಶಕ್ತಿಯ ಅರಿವಾಗಬೇಕೆಂದು ಜನತೆ ಬಿಜೆಪಿಗೆ ಅಧಿಕಾರ ನೀಡಿದೆ. ಮುಂದಿನ ದಿನಗಳಲ್ಲಿ ಇತಿಹಾಸಕ್ಕೆ ಹೊಸ ಭಾಷ್ಯವನ್ನು ಬರೆಯುವ  ಮೂಲಕ ಜಗತ್ತಿಗೆ ಭಾರತದ ಸ್ಥಾನ ತಿಳಿಸಬೇಕಿದೆ’ ಎಂದರು.ಮಾಜಿ ಶಾಸಕ ವಿ.ಎಸ್.ಪಾಟೀಲ್ ಅಭಿನಂದನಾ ಮಾತನಾಡಿ, ‘ಕಾರ್ಯಕರ್ತರು, ಮತದಾರರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಚುನಾವಣೆ ಒಂದು ನಿದರ್ಶನ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ನಾಯ್ಕ  ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾ ಘಟಕದ  ಪ್ರಧಾನ ಕಾರ್ಯದರ್ಶಿ ಎನ್. ಎಸ್ ಹೆಗಡೆ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರೇಖಾ ಹೆಗಡೆ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುಬ್ಬಣ್ಣ ಬೋಳ್ಮನೆ, ನಾರಾಯಣ ನಾಯಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಭಟ್ಟ ಸ್ವಾಗತಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಉಮೇಶ ಭಾಗ್ವತ ಪ್ರಾಸ್ತಾವಿಕ ಮಾತನ್ನಾಡಿದರು. ಸಾಮಾಜಿಕ ಕಾರ್ಯಕರ್ತ ರವಿ ಶಾನಭಾಗ ನಿರೂಪಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಯೋಗೇಶ ಹಿರೇಮಠ ವಂದಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ  ಗ್ರಾಮ ದೇವಿಗೆ ಪೂಜೆ ಸಲ್ಲಿಸಿದ ಸಂಸದ ಅನಂತಕುಮಾರ ಹೆಗಡೆ, ಗ್ರಾಮ ದೇವಿ ದೇವಸ್ಥಾನದಿಂದ ಪಟ್ಟಣದ ವೆಂಕಟ್ರಮಣ ಮಠದವರೆಗೆ ತೆರೆದ ಜೀಪಿನಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡರು.ವಿಜಯೋತ್ಸವ ಆಚರಣೆ

ಮುಂಡಗೋಡ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ, ಬಿಜೆಪಿ ಕಾರ್ಯಕರ್ತರೊಂದಿಗೆ ಭಾನುವಾರ ಮೆರವಣಿಗೆಯಲ್ಲಿ ಸಾಗಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಶಿರಸಿ ರಸ್ತೆಯಿಂದ ಕಾರ್ಯಕರ್ತರ ಜಯಘೋಷಗಳು, ಸಿಡಿಮದ್ದಿನ ಆರ್ಭಟದೊಂದಿಗೆ ಮೆರವಣಿಗೆ ನಡೆಸಿದ ಸಂಸದರು ಶಿವಾಜಿ ಸರ್ಕಲ್‌, ಅಂಬೇಡ್ಕರ್‌ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಹುರುಪಿನಲ್ಲಿದ್ದ ಕಾರ್ಯಕರ್ತರ ಉತ್ಸಾಹ ಮುಗಿಲುಮಟ್ಟಿತ್ತು.ನಂತರ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅನಂತಕುಮಾರ ಹೆಗಡೆ, ‘ಮುಂದಿನ ಸಾವಿರ ವರ್ಷಗಳಿಗೆ ಲಾಲಕಿಲಾದಲ್ಲಿ ಧರ್ಮದ ಧ್ವಜ ಕೆಳಗಿಳಿಯಬಾರದು’ ಎಂದರು.  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಹಾವಣಗಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಣಿರಾಜ ಹದಳಗಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನ್‌ ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶ್ಯಾಮಲಾ ಹೆಗಡೆ, ಉಮೇಶ ಬಿಜಾಪುರ ಇನ್ನಿತರರು ಉಪಸ್ಥಿತರಿದ್ದರು.‘ಬಿಜೆಪಿ ಗೆಲುವು ದೇಶದ ಗೆಲುವು-’

ದಾಂಡೇಲಿ: ‘ಇಡೀ ಜಗತ್ತನ್ನು ನಿಯಂತ್ರಿಸುವ ಸುಸಮಯ ಭಾರತಕ್ಕೆ ಒದಗಿ ಬರುವ ಲಕ್ಷಣ ಮೋದಿಯವರು ಅಧಿಕಾರ ಗ್ರಹಣ ಮಾಡುವ ಮೊದಲೆ ಗೊಚರಿಸುತ್ತಿದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸದಾ ಕಾಲೆಳೆಯುವ ಪಾಕಿಸ್ತಾನ ಮುದುಡಿಕೊಂಡು ಬಾಂದವ್ಯ ವರ್ಧನೆಗೆ ಮುಂದಾಗುತ್ತಿದೆ.ಅತ್ತ ಕಡೆ ಚೈನಾದ ಜೊತೆ ಬಾಂದವ್ಯ ಸುಧಾರಣೆಯಾಗುವ ಎಲ್ಲ ಲಕ್ಷಣ ಕಂಡುಬರುತ್ತಿರುವ ಈ ಹಂತದಲ್ಲೆ ರೂಪಾಯಿ ಮೌಲ್ಯ ಸುಧಾರಿಸಿದೆ, ಷೇರು ಮಾರುಕಟ್ಟೆ ಬೆಲೆ ನಿಮಿಷಕ್ಕೆ ಸಾವಿರ ಪಟ್ಟು ಏರಿಕೆ ಕಂಡು ಬಂದಿದೆ. ಸಾರ್ಕ್್ ರಾಷ್ಟ್ರಗಳು ಭಾರತವನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳುವ ಮಟ್ಟಕ್ಕೆ ಬಂದಿದೆ. ಇವುಗಳಿಗೆಲ್ಲ ಕಾರಣ ಈ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಭೂತಪೂರ್ವ ಜಯವನ್ನು ದೊರಕಿಸಿಕೊಟ್ಟ ಮತದಾರರು. ಹಾಗಾಗಿ ಬಿಜೆಪಿ ಗೆಲುವು ಎನ್ನವುದಕ್ಕಿಂತ ಇದು ದೇಶದ ಗೆಲುವು; ಮತದಾರರ ಗೆಲುವು’ ಎಂದು  ವ್ಯಾಖ್ಯಾನಿಸಿದರು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಧೂಳಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಸ್ಥಳೀಯ ಘಟಕದ ಅಧ್ಯಕ್ಷ ಸುಧಾಕರ ರೆಡ್ಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ ಕ್ಷೀರಸಾಗರ ವಂದಿಸಿದರು. ಸಂಸದೀಯ ಕ್ಷೇತ್ರದ ವಕ್ತಾರ ರೋಶನ್ ನೇತ್ರಾವಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಕೆಸಿ ವೃತ್ತದಿಂದ ನಗರದ ಮುಖ್ಯ ರಸ್ತೆಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಲಾಯಿತು.‘ಅಭಿವೃದ್ಧಿಯಲ್ಲಿ ನೂತನ ದಾಖಲೆ’ಹಳಿಯಾಳ: ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಬಿಜೆಪಿ ನೂತನ ದಾಖಲೆ ನಿರ್ಮಿಸಲಿದೆ. ಬಿಜೆಪಿ ಮೂಲಕ  ಜನಸಾಮಾನ್ಯರ ಬದುಕಿನ ಉತ್ಸುಂಗಕ್ಕೆ ಪ್ರಯತ್ನ ಮಾಡುತ್ತೇವೆ’ ಎಂದು ಸಂಸದರಾಗಿ ಐದನೇ ಬಾರಿಗೆ ಆಯ್ಕೆಯಾದ ಅನಂತಕುಮಾರ ಹೆಗಡೆ ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಮತದಾರರ ವತಿಯಿಂದ ಸ್ಥಳೀಯ ಪಟ್ಟಣ ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಈ ಬಾರಿ ನನ್ನ ಗೆಲುವಿಗೆ ಕಾಂಗ್ರೆಸ್‌ನಲ್ಲಿ ಇದ್ದವರೇ ಕಾರಣರಾಗಿದ್ದಾರೆ. ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಸಾಗಲಿ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಧೂಳಿ, ತಾಲ್ಲೂಕು ಘಟಕದ  ಅಧ್ಯಕ್ಷ ಎಲ್.ಎಸ್.ಅರಶೀಣಗೇರಿ, ಮುಖಂಡ ಎಸ್.ಕೆ.ಗೌಡ, ಪ್ರಕಾಶ ಕಮ್ಮಾರ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.