‘ಲವ್‌ ಜಿಹಾದ್‌’ನಿಂದ ದೂರ ಸರಿದ ಬಿಜೆಪಿ

7

‘ಲವ್‌ ಜಿಹಾದ್‌’ನಿಂದ ದೂರ ಸರಿದ ಬಿಜೆಪಿ

Published:
Updated:

ನವದೆಹಲಿ (ಐಎಎನ್‌ಎಸ್‌): ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿನ ಹಿನ್ನಡೆಯ ಬೆನ್ನಲ್ಲೇ ಬಿಜೆಪಿ ‘ಲವ್‌ ಜಿಹಾದ್‌’ ಅಭಿಯಾನದಿಂದ ಅಂತರ ಕಾಯ್ದು­ಕೊಂಡಿದೆ. ಉತ್ತರ ಪ್ರದೇಶದಲ್ಲಿ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎಂಟು ಕ್ಷೇತ್ರಗಳನ್ನು ಕಳೆದುಕೊಂಡಿದೆ.‘ಕೆಲವು ಸ್ಥಳೀಯ ನಾಯಕರು ಲವ್‌ ಜಿಹಾದ್‌ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಪಕ್ಷವಾಗಿ ಬಿಜೆಪಿ ಅದನ್ನು ಯಾವತ್ತೂ ಅಂಗೀಕರಿಸಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.ಕಳೆದ ತಿಂಗಳು ಉತ್ತರ ಪ್ರದೇಶ ಬಿಜೆಪಿ ವೃಂದಾವನದಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ‘ಲವ್ ಜಿಹಾದ್‌’ ವಿಷಯ ಸೇರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.‘ಬಿಜೆಪಿಯು ಮತಗಳ ಧ್ರುವೀಕರಣ ನಡೆಸುತ್ತದೆ ಎಂಬ ಆರೋಪ ಲೋಕಸಭಾ ಚುನಾವಣೆಯಲ್ಲಿಯೇ ಸುಳ್ಳಾಗಿದೆ. ಬಿಜೆಪಿ ಜಾತ್ಯತೀತ ಪಕ್ಷ ಅಲ್ಲ ಎಂಬುದನ್ನು ಜನರು ತಿರಸ್ಕರಿಸದೇ ಇದ್ದರೆ ನಾವು ಅಧಿಕಾರಕ್ಕೆ ಬರುವುದೇ ಸಾಧ್ಯವಿರಲಿಲ್ಲ’ ಎಂದು ಸಂಬಿತ್‌ ಹೇಳಿದ್ದಾರೆ. ಬಿಜೆಪಿಯ ಹಿಂದುತ್ವ ಸಿದ್ಧಾಂತವನ್ನು ಜನರು ತಿರಸ್ಕರಿಸಿರುವುದನ್ನು ಈ ಫಲಿತಾಂಶ ತೋರಿಸುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.ಮೇನಕಾ ಕ್ಷೇತ್ರದಲ್ಲಿ ‘ಲವ್ ಜಿಹಾದ್‌’: ಉತ್ತರ ಪ್ರದೇಶದ ಪಿಲಿಭೀತ್‌ನ ತಮ್ಮ ಕ್ಷೇತ್ರದಲ್ಲಿ ಕೆಲವು ‘ಲವ್‌ ಜಿಹಾದ್‌’ ಪ್ರಕರಣಗಳು ನಡೆದಿವೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಆದರೆ ಈ ಬಗ್ಗೆ ತಮ್ಮ ಸಚಿವಾಲಯಕ್ಕೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.‘ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕೋ ಬೇಡವೋ ಗೊತ್ತಿಲ್ಲ. ನಮ್ಮ ಸಚಿವಾಲಯಕ್ಕೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ಈ ಬಗ್ಗೆ ನನಗೆ 7–8 ದೂರುಗಳು ಬಂದಿವೆ’ ಎಂದು ಸಚಿವರು ಹೇಳಿದ್ದಾರೆ. ‘ಲವ್‌ ಜಿಹಾದ್‌’ ಬಗೆಗಿನ ಪ್ರಶ್ನೆಯೊಂದಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry