‘ಲಿಂಗಪ್ಪ ಹೇಳಿಕೆಯ ಅಪಾರ್ಥ ಸರಿಯಲ್ಲ’

7
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿಕೆ

‘ಲಿಂಗಪ್ಪ ಹೇಳಿಕೆಯ ಅಪಾರ್ಥ ಸರಿಯಲ್ಲ’

Published:
Updated:

ರಾಮನಗರ: ‘ರಾಜಕಾರಣಿಗಳು ಸತ್ಯ ಹೇಳುವುದೇ ಕಡಿಮೆ. ಹೀಗಿರುವಾಗ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು ಪಾಪದ ಹಣ ಕುರಿತು ಇತ್ತೀಚೆಗೆ ನಗ್ನ ಸತ್ಯ ಹೇಳುವ ಎದೆಗಾರಿಕೆ ತೋರಿದ್ದಾರೆ. ಅದನ್ನು ಸ್ವಾಗತಿಸಬೇಕಾದ ಮಾಜಿ ಶಾಸಕ ಕೆ.ರಾಜು ಅವರು ಅಪಾರ್ಥ ಕಲ್ಪಿಸಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ರಾಮನಗರ– ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚಿಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಜಯಗಳಿಸಲು ಸಾಕಷ್ಟು ಹಣ ಸುರಿಯಬೇಕಾಗುತ್ತದೆ. ಚುನಾವಣಾ ಆಯೋಗ ನಿಗದಿಪಡಿಸಿರುವಷ್ಟು ಮಿತಿಯಲ್ಲಿ ಚುನಾವಣೆ ಎದುರಿಸುವುದು ಅಭ್ಯರ್ಥಿಗಳಿಗೆ ಕಷ್ಟವಾಗಿದ್ದು, ಅದನ್ನೂ ಮೀರಿ ವ್ಯಯಿಸುತ್ತಿದ್ದಾರೆ. ಇದೆಲ್ಲ ಪಾಪದ ಹಣದಿಂದ ಸಾಧ್ಯವಾಗುತ್ತಿದೆ ಎಂಬ ಅರ್ಥದಲ್ಲಿ ಲಿಂಗಪ್ಪ ಅವರು ಮಾತನಾಡಿದ್ದರು’ ಎಂದು ಅವರು ಸ್ಪಷ್ಟೀಕರಣ ನೀಡಿದರು.ಕನಕಪುರದಲ್ಲಿ ಕರಿಯಪ್ಪ ಅವರ ನಂತರ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿರುವ ಮತ್ತು ನೀಡುತ್ತಿರುವ ವ್ಯಕ್ತಿ ಲಿಂಗಪ್ಪ ಅವರು. ಸಕ್ರಿಯ ರಾಜಕೀಯದಿಂದ ದೂರ ಇರುವ ಅವರು, ಈಗಲೂ ತಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಪಾಠ ಮಾಡುತ್ತಾರೆ. ಬೈರಮಂಗಲದಲ್ಲಿ ಶಾಲೆ ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅವರ ಸೇವೆ ಆರಂಭವಾಗಿ, ಬಿಡದಿಯಲ್ಲಿ ಶಾಲೆ, ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜು ನಿರ್ಮಿಸುವ ಮೂಲಕ ಸೇವೆ ಮುಂದುವರೆಸಿದ್ದಾರೆ. ಇಂತಹ ಸಜ್ಜನ ರಾಜಕಾರಣಿಯ ಬಗ್ಗೆ ತಪ್ಪು ತಿಳುವಳಿಕೆ ಬೇಡ ಎಂದು ಅವರು ಹೇಳಿದರು.300 ಕೋಟಿ ಹೇಗೆ ಬಂತು:

‘ಮಾಜಿ ಪ್ರಧಾನಿ ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 300 ಕೋಟಿ ರೂಪಾಯಿಯ ಟಿವಿ ಚಾನೆಲ್‌ ತೆರೆಯುವ ಸಾಮರ್ಥ್ಯ ಹೊಂದಿದ್ದಾರೆ. ಮೇಲಾಗಿ ಅವರು ಸಿನಿಮಾ ನಿರ್ಮಾಪಕರಾಗಿದ್ದಾಗ ಹಣಗಳಿಸಿ, ಚಾನೆಲ್‌ ನಿರ್ಮಿಸಿದ್ದಾರೆ ಎಂದು ರಾಜು ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ. ಕನ್ನಡದಲ್ಲಿ ಐದು ಅಥವಾ ಆರು ಸಿನಿಮಾಗಳನ್ನು ಕುಮಾರಸ್ವಾಮಿ ನಿರ್ಮಿಸಿದ್ದು, ಅದರಲ್ಲಿ ಕೆಲವು ಹಿಟ್‌ ಆಗಿದ್ದರೆ ಇನ್ನೂ ಕೆಲವು ತೋಪು ಹಿಡಿದಿವೆ. ಸಿನಿಮಾ ರಂಗದಲ್ಲಿ ಅವರ ಆದಾಯ ಅಂದಾಜು 80 ಲಕ್ಷ ರೂಪಾಯಿ ಇರಬಹುದೇ ಹೊರತು 300 ಕೋಟಿ ರೂಪಾಯಿ ಹೇಗೆ ಆಗುತ್ತದೆ’ ಎಂದು ಅವರು ಪ್ರಶ್ನಿಸಿದರು.‘ಮಾಜಿ ಶಾಸಕ ಲಿಂಗಪ್ಪ ಅವರು ರಾಮನಗರ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶ ಮತ್ತು ನಗರಕ್ಕೆ ಕುಡಿಯುವ ನೀರಿನ ಯೋಜನೆ, ವಸತಿ ಯೋಜನೆಗಳನ್ನು ಅವರು ಜಾರಿಗೊಳಿಸಿದರು. ಅವರ ನಂತರ ಅಧಿಕಾರಕ್ಕೆ ಬಂದವರು ನಗರದಲ್ಲಿ ಜನರಿಗೆ ಒಂದೇ ಒಂದು ನಿವೇಶನ ಒದಗಿಸಲು ಸಾಧ್ಯವಾಗಿಲ್ಲ’ ಎಂದು ಅವರು ದೂರಿದರು.‘ಕುಮಾರಸ್ವಾಮಿ ಅವರ ಸಹೋದರ ನಿವೃತ್ತ ಅಧಿಕಾರಿ ಬಾಲಕೃಷ್ಣ ಅವರ ಮೇಲೆ ನೂರಾರು ಕೋಟಿಯ ಅಕ್ರಮ ಆಸ್ತಿಯ ತನಿಖೆ ನಡೆಯುತ್ತಿದೆ. ಇದನ್ನು ಆಧರಿಸಿ ಅವರ ಇಡೀ ಕುಟುಂಬ ಪದ್ಮನಾಭನಗರದಲ್ಲಿ ರೂ 2000 ಕೋಟಿ ಆಸ್ತಿ ಹೊಂದಿದೆ ಎಂದು ಲಿಂಗಪ್ಪ ಅವರು ಆರೋಪಿಸಿದ್ದರು’ ಎಂದು ಅವರು ತಿಳಿಸಿದರು.‘ಮಾಜಿ ಮುಖ್ಯಮಂತ್ರಿ ಆಗಿದ್ದವರು ಶಿಷ್ಟಾಚಾರ ಪಾಲನೆಯಲ್ಲಿ ಬೇರೆಯವರಿಗೆ ಮಾದರಿಯಾಗಿರಬೇಕು. ಆದರೆ ಹಿಂದೆ ಯಾರೊ ಮಾಡಿದರೂ ಎಂದು ಇವರೂ ಹಾಗೆ ಮಾಡಿದರೆ ಹೇಗೆ. ಅದು ಅವರ ಘನೆತೆಗೆ ಸೂಕ್ತವಲ್ಲ’ ಎಂದು ಅವರು ಹೇಳಿದರು.ಪ್ರಮಾಣ ಮಾಡಲಿ:

‘ಕುಮಾರಸ್ವಾಮಿ ಕುಟುಂಬ 2000 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದೆ ಎಂಬುದು ಸತ್ಯ. ಅದಕ್ಕೆ ಸಾಕಷ್ಟು ದಾಖಲೆಗಳು ನಮ್ಮ ಬಳಿ ಇವೆ. ಇದು ಸುಳ್ಳಾಗಿದ್ದರೆ, ಕುಮಾರಸ್ವಾಮಿ ಅವರು ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಬಂದು ಪ್ರಮಾಣ ಮಾಡಲಿ’ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮರಿದೇವರು ಸವಾಲು ಹಾಕಿದರು.‘ದೊಡ್ಡವರು ದೊಡ್ಡತನ ಪ್ರದರ್ಶಿಸಬೇಕೇ ಹೊರತು ಸಣ್ಣತನ ತೋರಬಾರದು. ಶುದ್ಧ ನೀರಿನ ಘಟಕ ನಿರ್ಮಿಸಲು ಐಜೂರು ಟ್ಯಾಂಕ್‌ ಬಳಿ ಕಾಂಗ್ರೆಸ್‌ನವರು ಗುರುತಿಸಿದ್ದ ಜಾಗದಲ್ಲಿ ಕುಮಾರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದ್ದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.‘ವಿವಿಧ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ನಡೆಸುವ ಗುದ್ದಲಿ ಪೂಜೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ವ್ಯಕ್ತಿಯಾಗಿ ನಾನು ಪಾಲ್ಗೊಂಡಿದ್ದೇನೆ. ಮಾಜಿ ಶಾಸಕ ರಾಜು ಅವರಿಗೆ ತಿಳುವಳಿಕೆ ಇಲ್ಲ ಎಂದರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಿಗೂ ಇಲ್ಲವೇ’ ಎಂದು ಅವರು ಪ್ರಶ್ನಿಸಿದರು.ಅಭಿವೃದ್ಧಿ ಆಗಬಾರದೆ ?:

‘10 ತಿಂಗಳಿಂದ ತಾಲ್ಲೂಕಿನ ಜನ ತೀವ್ರ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದಾರೆ. ಆಗ ಕುಮಾರಸ್ವಾಮಿ ಸಂಸದರಾಗಿದ್ದರು. ನೀರಿನ ಹಾಹಾಕಾರ ಇದ್ದಾಗ ಅವರೇಕೆ ಕುಡಿಯುವ ನೀರಿನ ಘಟಕ ನಿರ್ಮಿಸಲಿಲ್ಲ. ಈಗಿನ ಸಂಸದರು ಆ ಕೆಲಸ ಮಾಡಲು ಮುಂದಾದರೆ ಅಡ್ಡಗಾಲು ಹಾಕಿತ್ತೀರಲ್ಲ. ಇದು ನಿಮ್ಮ ಸಣ್ಣತನ ಅಲ್ಲವೆ ? ರಾಮನಗರ ಅಭಿವೃದ್ಧಿ ಆಗಬಾರದು ಎಂಬುದು ನಿಮ್ಮ ಇಚ್ಛೆಯೇನು?’ ಎಂದು ಮರಿದೇವರು ಆಕ್ರೋಶದಿಂದ ಕೇಳಿದರು.ರೂ 300 ಕೋಟಿ ಕಿಕ್‌ಬ್ಯಾಕ್‌:

ಕೆಪಿಸಿಸಿ ಸದಸ್ಯ ಎ. ಮಂಜುನಾಥ್‌ ಮಾತನಾಡಿ, ’ಬಿಡದಿಯಲ್ಲಿ ಡಿಎಲ್‌ಎಫ್‌ ಟೌನ್‌ಶಿಪ್‌ ನಿರ್ಮಿಸುವ ಉದ್ದೇಶ ಹೊಂದಿದ್ದ ಕುಮಾರಸ್ವಾಮಿ ಅವರು ಡಿಎಲ್‌ಎಫ್‌ನಿಂದ 300 ಕೋಟಿ ರೂಪಾಯಿ ಕಿಕ್‌ ಬ್ಯಾಕ್‌ ಪಡೆದಿದ್ದರು’ ಎಂದು ದೂರಿದರು. ’ಬಿಡದಿಯ ಕೇತಿಗಾನಹಳ್ಳಿಯಲ್ಲಿ ಅವರು 100 ಎಕರೆಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಅವರ ಅತ್ತೆ ಹೆಸರಿನಲ್ಲಿಯೂ ಹಲವು ಎಕರೆ ಆಸ್ತಿ ನೋಂದಣಿಯಾಗಿದೆ ಎಂದು ಅವರು ತಿಳಿಸಿದರು. ಈ ಜಮೀನುಗಳು ಹೇಗೆ ಇವರಿಗೆ ಬಂದವು ಎಂಬುದನ್ನು ಹೇಳುವ ಮೂಲ ದಾಖಲಾತಿಗಳು, ಟಿಪ್ಪಣಿಗಳು ಎಲ್ಲೂ ಸಿಗುತ್ತಿಲ್ಲ. ಎಲ್ಲವೂ ಕಾಣೆಯಾಗಿವೆ’ ಎಂದು ಅವರು ಹೇಳಿದರು.’ಬಿಡದಿ ಭಾಗದಲ್ಲಿ ಕಸ ಸುರಿಯಲು ಜಾಗ ಇಲ್ಲ. ಸ್ಮಶಾನವೂ ಇಲ್ಲ. ಜನಪ್ರತಿನಿಧಿಯಾಗಿರುವ ಕುಮಾರಸ್ವಾಮಿ ದೊಡ್ಡ ಮನಸ್ಸು ಮಾಡಿ ತಮ್ಮ ಜಮೀನನ್ನು ಈ ಕೆಲಸಗಳಿಗೆ ಬಿಟ್ಟುಕೊಡಲಿ’ ಎಂದು ಸವಾಲು ಹಾಕಿದರು.‘ಮಾಗಡಿಯ ಪಿಡಬ್ಲು್ಯಡಿ ಹಗರಣದಲ್ಲಿ ಗುತ್ತಿಗೆದಾರರಿಂದ ಅವರು ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ. ಅದ್ದರಿಂದ ಅದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಹಾವೇರಿಯಲ್ಲಿ ಅವರು ಮೊದಲು ನೀಡಿದ ಹೇಳಿಕೆ ಬೆಂಗಳೂರಿಗೆ ಬರುವಷ್ಟರಲ್ಲಿ ಮಾಯವಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದನ್ನು ಸಿಬಿಐ ತನಿಖೆಗೆ ಒಪ್ಪಿಸಲು ವಿರೋಧ ಪಕ್ಷದ ನಾಯಕರೇಕೆ ಆಗ್ರಹಿಸುತ್ತಿಲ್ಲ ಎಂದು ಕೇಳಿದರು.

ಕೆಎಂಎಫ್‌ ನಿರ್ದೇಶಕ ಪಿ.ನಾಗರಾಜು, ಮುಖಂಡರಾದ ಸಿ.ಎನ್‌.ವೆಂಕಟೇಶ್‌, ಚಂದ್ರಶೇಖರ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry