ಶನಿವಾರ, ಫೆಬ್ರವರಿ 27, 2021
31 °C

‘ಲಿಂಫೋಮಾ’ ಎಂಬ ರಕ್ತ ಕ್ಯಾನ್ಸರ್‌

ಡಾ. ಮಲ್ಲಿಕಾರ್ಜುನ್ ಕಲಾಶೆಟ್ಟಿ Updated:

ಅಕ್ಷರ ಗಾತ್ರ : | |

‘ಲಿಂಫೋಮಾ’ ಎಂಬ ರಕ್ತ ಕ್ಯಾನ್ಸರ್‌

ಕ್ಯಾನ್ಸರ್ ಎಂಬ ಪದ ಜನರ ಮನಸ್ಸುಗಳಲ್ಲಿ ಭಯ ಹುಟ್ಟಿಸುತ್ತದೆ, ಆದರೂ ಒಳ್ಳೆಯ ಸುದ್ದಿಯೇನೆಂದರೆ, ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ನೀಡಿದಲ್ಲಿ ದೀರ್ಘಕಾಲ ರೋಗವಿಲ್ಲದೇ ಬದುಕುವ ಅವಕಾಶವನ್ನು ಕ್ಯಾನ್ಸರ್ ಪೀಡಿತ ವ್ಯಕ್ತಿಗಳಿಗೆ ನೀಡಬಹುದಾಗಿದೆ. ಆದರೆ ಎಲ್ಲ ವಯೋಮಾನದವರನ್ನೂ ಕಾಡುವ ಸಾಮಾನ್ಯ ರೀತಿಯ ರಕ್ತ ಕ್ಯಾನ್ಸರ್‌ಗಳಲ್ಲಿ ಲಿಂಫೋಮಾ ಒಂದಾಗಿದೆ. ಇದರ ಲಕ್ಷಣ, ಕಾರಣಗಳು, ರೋಗ ನಿದಾನದ ವಿವಿಧ ಕ್ರಮಗಳು ಮತ್ತು ಈ ರೀತಿಯ ಕ್ಯಾನ್ಸರ್‌ಗೆ ಲಭ್ಯವಿರುವ ಚಿಕಿತ್ಸೆಗಳನ್ನು ಕುರಿತು ಬಹಳಷ್ಟು ಕಡಿಮೆ ಮಾಹಿತಿ ಲಭ್ಯವಿದೆ. ಲಿಂಫೋಮಾಗಳನ್ನು ಎರಡು ವಿಧಗಳಾಗಿ ವಿಗಡಿಸಬಹುದಾಗಿದ್ದು, ಇವುಗಳಲ್ಲಿ ಹಾಡ್ಗ್‌ಕಿನ್ಸ್ ಮತ್ತು  ಹಾಡ್ಗ್‌ಕಿನ್ಸ್‌ಯೇತರ ಎಂಬುವು ಸೇರಿವೆ. ಹಾಡ್ಗ್‌ಕಿನ್ಸ್‌ಯೇತರ ಮಾದರಿ ಹೆಚ್ಚು ಸಾಮಾನ್ಯವಾಗಿದ್ದು ಬಹುತೇಕ ಪ್ರಕರಣಗಳಲ್ಲಿ ಕಂಡುಬರುತ್ತದೆ.ಲಿಂಫೋಮಾ ಎಂದರೇನು?

ನಮ್ಮ ದೇಹದ ಬಿಳಿ ರಕ್ತ ಕಣಗಳ ಮೇಲೆ ಲಿಂಫೋಮಾಗಳು ಪರಿಣಾಮ ಉಂಟು ಮಾಡುತ್ತವೆ ಎಂದು ಹೇಳಬಹುದು. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ನಮ್ಮೆಲ್ಲರಿಗೂ ತಿಳಿದಿದೆ. ದುಗ್ಧನಾಳ ವ್ಯವಸ್ಥೆ ರಕ್ತ ಪರಿಚಲನಾ ವ್ಯವಸ್ಥೆಯ ಭಾಗವಾಗಿದ್ದು, ದುಗ್ಧ ನಾಳಗಳು ತಿಳಿಯಾದ ದ್ರವವಾದ ದುಗ್ಧ ರಸವನ್ನು ಹೃದಯದೆಡೆಗೆ ಒಯ್ಯುತ್ತವೆ.ಕುತ್ತಿಗೆ, ಕಂಕಳು, ಎದೆ, ಹೊಟ್ಟೆ ಮತ್ತು ತೊಡೆ ಸಂದುಗಳಲ್ಲಿ ದುಗ್ಧ ಗ್ರಂಥಿಗಳು ಕಂಡು ಬರುತ್ತವೆ. ಹೊಟ್ಟೆ, ತ್ವಚೆ, ಸಣ್ಣಕರುಳು ಸೇರಿದಂತೆ ದೇಹದ ಇತರೆ ಭಾಗಗಳಲ್ಲೂ ದುಗ್ಧ ಅಂಗಾಂಶಗಳು ಕಂಡು ಬರುತ್ತವೆ. ಈ ರೀತಿಯ ಕ್ಯಾನ್ಸರ್‌ಗೆ ಕಾರಣಗಳು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ದುಗ್ಧ ಕಣಗಳ ವಂಶವಾಹಿಗಳಲ್ಲಿ ಒಂದು ಅಥವಾ ಹೆಚ್ಚಿನ ಬದಲಾವಣೆಗಳಿಂದಾಗಿ ಲಿಂಫೋಮಾ ಕಂಡು ಬರುತ್ತದೆ. ಜೀವಕೋಶಗಳು ಯಾವ ರೀತಿ ಬೆಳೆಯುತ್ತವೆ ಮತ್ತು ಭಾಗವಾಗುತ್ತವೆ ಎನ್ನುವ ಪ್ರಕ್ರಿಯೆಯಲ್ಲಿ ಬದಲಾವಣೆ ತಂದು, ಜೀವಕೋಶಗಳನ್ನು ಅಮರವಾಗಿಸಬಹುದು. ವಂಶವಾಹಿಗಳಲ್ಲಿ ಈ ಬದಲಾವಣೆಗಳನ್ನು ತರುವ ಕಾರಣಗಳನ್ನು ಬಹು ಅಂಶಗಳನ್ನು ಒಳಗೊಂಡಿರಬಹುದು. ಆದರೂ ಇದರ ಮೂಲವಾಗಿ ಒಂದು ಕಾರಣವನ್ನು ಹೆಸರಿಸಲಾಗದು.ಲಿಂಫೋಮಾಗೆ ಕಾರಣಗಳು

ಲಿಂಫೋಮಾಗೆ ದಾರಿ ಮಾಡಿಕೊಡುವ ನಿರ್ದಿಷ್ಟ ಅಪಾಯದ ಅಂಶಗಳ ಬಗ್ಗೆ ತಿಳಿದುಕೊಂಡು ಗಮನ ಹರಿಸಬಹುದು. ಇವುಗಳಲ್ಲಿ ರೋಗನಿರೋಧಕ ಶಕ್ತಿಯಲ್ಲಿ ಕೊರತೆಯ ಸ್ಥಿತಿ, ಕೆಲವು ದೀರ್ಘಕಾಲದ ಸೋಂಕುಗಳು, ಕುಟುಂಬದಲ್ಲಿ ಲಿಂಫೋಮಾದ ಇತಿಹಾಸ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿರುವ ವ್ಯಕ್ತಿಗಳು ಮತ್ತು ವೃದ್ಧಾಪ್ಯ ಮುಖ್ಯ ಕಾರಣವಾಗಿವೆ. ಈ ರೋಗವನ್ನು ತಡೆಯಲು ಕೆಲವು ನಿರ್ದಿಷ್ಟ ಜೀವನಶೈಲಿಯ ಬದಲಾವಣೆ ಕಡ್ಡಾಯ. ಧೂಮಪಾನ, ಅನಾರೋಗ್ಯಕರ ಆಹಾರ ಕ್ರಮ, ಬೊಜ್ಜು ಮೈ ಮುಂತಾದವುಗಳು ಅಂಥ ರೀತಿಯ ಕ್ಯಾನ್ಸರ್‌ಗಳಿಗೆ ಉನ್ನತ ಅಪಾಯದ ಅಂಶಗಳಾಗಬಹುದು.ಲಿಂಫೋಮಾ ಲಕ್ಷಣಗಳು: ಲಕ್ಷಣಗಳನ್ನು ಗುರುತಿಸಲು ಜನರು ಕಂಕುಳು, ಕುತ್ತಿಗೆ, ತೊಡೆ ಸಂದಿ ಮುಂತಾದ ದುಗ್ಧ ಗ್ರಂಥಿಗಳ ಪ್ರದೇಶಗಳಲ್ಲಿ ನೋವಿಲ್ಲದ ಊತಗಳ ಕಡೆಗೆ ಗಮನಹರಿಸಬೇಕು. ಹೆಚ್ಚು ಹಸಿವಿಲ್ಲದಿರುವುದು, ತೂಕನಷ್ಟ, ದೀರ್ಘಕಾಲದ ಜ್ವರ ಮತ್ತು ಸುಸ್ತು, ಸತತವಾದ ಮತ್ತು ವಿವರಿಸಲಾಗದಂತಹ ತುರಿಕೆ ಮುಂತಾದವುಗಳನ್ನು ಗಮನಿಸಬೇಕು. ಈ ರೀತಿಯ ವೈದ್ಯಕೀಯ ಸ್ಥಿತಿಗಳನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದು ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಕೂಲಂಕಷವಾದ ವೈದ್ಯಕೀಯ ಇತಿಹಾಸವನ್ನು ಪಡೆಯಲಾಗುತ್ತದೆ.ಇವುಗಳಲ್ಲಿ ಲಕ್ಷಣಗಳನ್ನು ಕುರಿತು ಮಾಹಿತಿ, ಲಕ್ಷಣಗಳು ಕಾಣಿಸಿಕೊಂಡ ಅವಧಿ, ಸಾಧ್ಯವಿರುವ ಅಪಾಯದ ಅಂಶಗಳು, ಕುಟುಂಬದ ಇತಿಹಾಸ ಮತ್ತು ಇತರೆ ವೈದ್ಯಕೀಯ ಸ್ಥಿತಿಗಳು ಸೇರಿರುತ್ತವೆ. ಲಿಂಫೋಮಾದಿಂದ ಈ ಲಕ್ಷಣಗಳು ಬಂದಿವೆ ಎಂಬ ಸಂದೇಹ ವೈದ್ಯರಿಗೆ ಬಂದರೆ ಆಗ ಕೆಲವು ಅಗತ್ಯ ಪರೀಕ್ಷೆಗಳಾದ ರಕ್ತ ತಪಾಸಣೆಗಳು ಅಲ್ಲದೆ ಸಿಟಿ ಸ್ಕ್ಯಾನ್ ಅಥವಾ ಪಿಇಟಿ ಸಿಟಿ ಸ್ಕ್ಯಾನ್, ಊತ ಕಂಡಿರುವ ದುಗ್ಧ ಗ್ರಂಥಿಯ ಅಂಗಾಂಶ ಪರೀಕ್ಷೆ ಹಾಗೂ ಅಸ್ಥಿರಜ್ಜುವಿನ ಅಧ್ಯಯನ ಮುಂತಾದವುಗಳನ್ನು ಸಲಹೆ ಮಾಡಬಹುದು. ರೋಗನಿದಾನವನ್ನು ದೃಢಪಡಿಸಲು ಕೆಲವು ದಿನಗಳು ಹಿಡಿಯಬಹುದು. ಲಿಂಫೋಮಾಗಳು ಸೋಂಕು ರೋಗಗಳಲ್ಲ. ಹತ್ತಿರದ ಸಂಪರ್ಕದಿಂದ ಹರಡುವುದಿಲ್ಲ ಎಂಬುದನ್ನು ಗಮನಿಸಬೇಕು.ಚಿಕಿತ್ಸೆ: ಕ್ಯಾನ್ಸರ್ ಯಾವ ಹಂತದಲ್ಲಿ ಪತ್ತೆಯಾಗಿದೆ, ರೋಗಿಯ ವಯಸ್ಸು ಮತ್ತು ಅವರ ಸೌಖ್ಯತೆ ಮುಂತಾದವುಗಳನ್ನು ಪರಿಗಣಿಸಿ ಲಿಂಫೋಮಾದ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಚಿಕಿತ್ಸೆಗಳಲ್ಲಿ ಹಲವು ಕ್ರಮಗಳಿದ್ದು, ಮೂಲ ಚಿಕಿತ್ಸೆಯಾದ ಕಿಮೋಥೆರಪಿಯಿಂದ ವಿಕಿರಣ ಚಿಕಿತ್ಸೆಯವರೆಗೆ ಮತ್ತು ಅಸ್ಥಿರಜ್ಜುವಿನ ಕಸಿ ಕೂಡ ಕೈಗೊಳ್ಳಬಹುದಾಗಿದೆ. ಕಿಮೋಥೆರಪಿಯಲ್ಲಿ ರಾಸಾಯನಿಕಗಳನ್ನು ಬಳಸಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಇವು ವ್ಯವಸ್ಥಿತವಾಗಿ ಕೆಲಸ ಮಾಡಿ ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುತ್ತವೆ.ಕಿಮೋಥೆರಪಿ ಲಿಂಫೋಮಾದ ಬೆನ್ನುಮೂಳೆಯಂತಹ ಪಾತ್ರವಹಿಸುತ್ತದೆ. ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವ ವಿಕಿರಣವನ್ನು ಬಳಸಲಾಗುತ್ತದೆ. ಸ್ಥಳೀಯವಾಗಿರುವ ಲಿಂಫೋಮಾದ ಚಿಕಿತ್ಸೆಯಲ್ಲಿ ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಅಥವಾ ಕಿಮೋಥೆರಪಿಯೊಂದಿಗೆ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.ಅಸ್ಥಿರಜ್ಜುವಿನ ಚಿಕಿತ್ಸೆ ಅಂದರೆ ಬೋನ್ ಮ್ಯಾರೋ ಥೆರಪಿಯನ್ನು ಮರುಕಳಿಸಿರುವ ರೋಗದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಮೇಲೆ ಹೇಳಲಾದ ಎರಡು ಚಿಕಿತ್ಸೆಗಳಿಗೆ ರೋಗಿಗಳು ಸೂಕ್ತವಾಗಿ ಪ್ರತಿಕ್ರಿಯೆ ನೀಡದಿದ್ದಾಗ ಬೋನ್‌ಮ್ಯಾರೊ ಥೆರಪಿ ಬಳಸಲಾಗುತ್ತದೆ. ಉನ್ನತ ಪ್ರಮಾಣದ ಕಿಮೋಥೆರಪಿ ಮತ್ತು ವಿಕಿರಣ ಥೆರಪಿ ನೀಡಿರುವ ಕಾಂಡಕೋಶಗಳನ್ನು ರೋಗಿಗೆ ಸೇರಿಸಲಾಗುತ್ತದೆ. ಕಾಂಡಕೋಶಗಳನ್ನು ಸೇರಿಸುವುದರಿಂದ ಉನ್ನತ ಪ್ರಮಾಣದ ಕಿಮೋಥೆರಪಿ ನೀಡಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಲು ಅವಕಾಶವಾಗುತ್ತದೆ. ಆಟೋಲೋಗಸ್ ಸ್ಟೆಮ್ ಸೆಲ್ ಕಸಿಯಲ್ಲಿ ಕಾಂಡಕೋಶಗಳನ್ನು ರೋಗಿಯಿಂದ ಸಂಗ್ರಹಿಸಲಾಗುತ್ತದೆ. ಇದರಿಂದ ಉಳಿದ ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸಬಹುದಾಗಿದೆ. ಇದೇ ರೀತಿ ದಾನಿಯೊಬ್ಬರಿಂದ ಸಂಗ್ರಹಿಸಲಾದ ಕಾಂಡಕೋಶಗಳನ್ನು ಸಹ ಬಳಸಬಹುದಾಗಿದೆ.ಯಾವುದೇ ದೊಡ್ಡ ಚಿಕಿತ್ಸೆಗಳಲ್ಲಿ ಇರುವಂತೆ ಇಲ್ಲಿಯೂ ಕೆಲವು ಅಡ್ಡಪರಿಣಾಮಗಳಿರುತ್ತವೆ. ಕಿಮೋಥೆರಪಿಯಲ್ಲಿ ಬಳಸಲಾಗುವ ರಾಸಾಯನಿಕ ಸಂಬಂಧಿ ಶಿಷ್ಟಾಚಾರಗಳ ಮೇಲೆ ಅಡ್ಡ ಪರಿಣಾಮಗಳು ಆಧರಿಸಿರುತ್ತವೆ. ಸಾಮಾನ್ಯ ಅಡ್ಡ ಪರಿಣಾಮಗಳಲ್ಲಿ ವಾಕರಿಕೆ, ವಾಂತಿ, ರಕ್ತ ಕಣಗಳ ಸಂಖ್ಯೆಯಲ್ಲಿ ಇಳಿಕೆ, ಕೂದಲು ಉದುರುವುದು, ಸುಸ್ತು ಮುಂತಾದವು ಸೇರಿವೆ. ಬಹುತೇಕ ಚಿಕಿತ್ಸೆ ಸಂಬಂಧಿ ಅಡ್ಡ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದ್ದು, ರೋಗಿಗಳು ಚಿಕಿತ್ಸೆಯನ್ನು  ಸಹಿಸಿಕೊಳ್ಳಬಹುದಾಗಿದೆ.(ಲೇಖಕರು ರಕ್ತ ಕ್ಯಾನ್ಸರ್ ತಜ್ಞರು, ಸಮಗ್ರ ಕ್ಯಾನ್ಸರ್ ಕೇಂದ್ರ, ಮಣಿಪಾಲ್ ಆಸ್ಪತ್ರೆ, ಬೆಂಗಳೂರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.