ಮಂಗಳವಾರ, ಜೂನ್ 22, 2021
29 °C

‘ಲೂಸಿಯಾ’ ಗುಳಿಗೆ ‘ಲೂಸಿ’ ಗಳಿಗೆ

– ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನಿರ್ದೇಶಕ ಪವನ್ ಕುಮಾರ್ ‘ಲೂಸಿಯಾ’ ಚಿತ್ರದ ನಂತರ ವಿರಾಮದಲ್ಲಿದ್ದಾರೆ. ಲೂಸಿಯಾ ಸುದ್ದಿಯಲ್ಲಿರುವಾಗಲೇ ಜನಿಸಿದ ಮಗಳನ್ನು ಅವರು ಪ್ರೀತಿಯಿಂದ ಕರೆಯುವುದು ಲೂಸಿ ಎಂದು. ಗಂಭೀರವದನ ಪವನ್‌ ತಮ್ಮ ಮಗಳ ಮುಗ್ಧ ನಗುವಿನಲ್ಲಿ ಕಳೆದುಹೋಗಿದ್ದಾರೆ. ‘ಕಾಮನಬಿಲ್ಲು’ ಮಾತಿಗೆಳೆದಾಗ ಪವನ್ ‘ಲೂಸಿಯಾ’ ಮತ್ತಿನಿಂದ ಹೊರಬರಲು ಧ್ಯಾನಸ್ಥರಾಗಿರುವುದು ಕಂಡಬಂತು.

* ಲೂಸಿಯಾ ಬಳಿಕ ಸುದ್ದಿಯೇ ಇಲ್ಲ? ‘ಲೂಸಿಯಾ’ ಮಾತ್ರೆ ತೆಗೆದುಕೊಂಡು ಕನಸಿಗೆ ಜಾರಿದ್ದೀರೋ ಹೇಗೆ?

ಲೂಸಿಯಾ ಮಾಡುವಾಗ ವೈಯಕ್ತಿಕ ಬದುಕಿನಿಂದ ತುಂಬಾ ದೂರ ಹೋಗಿದ್ದೆ. ಈಗ ಆರು ತಿಂಗಳ ಮಗು ಇದೆ. ಜಾಸ್ತಿ ಸಮಯ ಮಗುವಿನೊಂದಿಗೆ ಮನೆಯಲ್ಲಿ ಕಳೆಯುತ್ತಿದ್ದೇನೆ. ಲೂಸಿಯಾ ಮೇಕಿಂಗ್‌ ಡಿವಿಡಿಗಳನ್ನೆಲ್ಲಾ ಮಾಡುತ್ತೇವೆ ಎಂದು ಮಾತು ನೀಡಿದ್ದೆ. ಸಿನಿಮಾ ಬಿಡುಗಡೆಯಾಗಿ ತುಂಬಾ ಸಮಯ ಆಯ್ತು ಎಂದುಕೊಂಡರೂ ನನ್ನ ಸಾಕಷ್ಟು ಕೆಲಸಗಳು ಬಾಕಿ ಇದ್ದವು. ಲೂಸಿಯಾದಿಂದ ನಿರೀಕ್ಷೆಗಳು ಜಾಸ್ತಿ ಆಗಿವೆ. ಅದನ್ನು ಜನ ಮರೆಯಲಿ. ಲೂಸಿಯಾ ಹಿಂದಿ ಆವೃತ್ತಿ ಶುರುವಾಗಬೇಕಿದೆ. ಫಾಕ್ಸ್‌ಸ್ಟಾರ್‌ನವರು ಬೇರೆ ಸಿನಿಮಾಗಳನ್ನು ನಿರ್ಮಿಸುತ್ತಿರುವುದರಿಂದ ಸರದಿಯಲ್ಲಿ ಕಾಯಬೇಕಿದೆ.

*ಸಿನಿಮಾ ಮಾಡದೇ ಇದ್ದರೂ ಫೇಸ್‌ಬುಕ್‌ನಲ್ಲಿ ತುಂಬಾ ‘ಸ್ಕ್ರಿಪ್ಟ್‌’ಗಳನ್ನು ಬರೀತೀರಲ್ಲಾ?

ಯಾವುದಾದರೂ ಘಟನೆ ನಡೆದಾಗ ಅಥವಾ ಯಾವುದಾದರೂ ಸಂಗತಿಯನ್ನು ಹಂಚಿಕೊಳ್ಳುವ ಅಭ್ಯಾಸ. ಜೊತೆಗೆ ಕೈಯಲ್ಲಿ ಫೋನ್‌ ಇರುವುದರಿಂದ ಪ್ರಯಾಣ ಮಾಡುವಾಗ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡುವ ಕೆಲಸ ಮಾಡುತ್ತೇನೆ!

*ಮಗಳನ್ನೂ ಸಿನಿಮಾಕ್ಕೆ ಕರೆತರುತ್ತೀರಾ?

ನನ್ನ ತಾಯಿಗೆ ನಾನು ಎಂಜಿನಿಯರ್‌ ಆಗಬೇಕೆಂಬ ಆಸೆ ಇತ್ತು. ಅದನ್ನು ಮಗಳ ಕೈಯಲ್ಲಿ ಮಾಡಿಸುತ್ತೇನೆ. ಅವಳ ಭವಿಷ್ಯದ ಬಗ್ಗೆ ಸದ್ಯಕ್ಕೆ ಬೇರೇನೂ ಯೋಚನೆ ಇಲ್ಲ.

*ಲೂಸಿಯಾ ಮಾಡಿದ ಬಳಿಕವೂ ‘ಲೈಫು ಇಷ್ಟೇನೆ’ ಅಂತ ಅನಿಸುತ್ತಿದೆಯಾ?

ಇನ್ನೂ ಜಾಸ್ತಿ ಅನಿಸುತ್ತಿದೆ. ಲೈಫನ್ನು ಯಾವತ್ತೂ ದೊಡ್ಡದು ಎಂದು ಅಂದುಕೊಂಡಿಲ್ಲ. ಗೆಲುವು ಬಂದರೂ ಅದೊಂದು ಅದೃಷ್ಟದ ಪ್ರಾಜೆಕ್ಟ್‌ನಂತೆ ಸಿಕ್ಕಿದೆ ಅಷ್ಟೇ. ಸಾಧನೆ ಕಣ್ಣಿಂದ ನೋಡಿದಾಗ ಇಷ್ಟೇನೆ!

*ಇಂಗ್ಲಿಷ್‌ ರಂಗಭೂಮಿಯಲ್ಲಿದ್ದಾಗ ಕಲಿತಿದ್ದೇನು? ಸಿನಿಮಾಕ್ಕೆ ಬಂದ ಬಳಿಕ ಕಳೆದುಕೊಂಡಿದ್ದೇನು?

ರಂಗಭೂಮಿಯಲ್ಲಿ ಇನ್ನೂ ಆರಾಮಾಗಿ ಪ್ರಯೋಗಗಳನ್ನು ಮಾಡುತ್ತಿದ್ದೆ. ಜನ ಬಂದು ಇಷ್ಟಪಡುತ್ತಾರಾ ಎನ್ನುವ ಯೋಚನೆ ಮಾಡುತ್ತಿರಲಿಲ್ಲ. ಮಾಡಬೇಕು ಅನಿಸಿದ್ದನ್ನು ಮಾಡುತ್ತಿದ್ದೆ. ಸಿನಿಮಾಕ್ಕೆ ಬಂದ ಬಳಿಕ ಕಳೆದುಕೊಂಡದ್ದು ಆ ಸ್ವಾತಂತ್ರ್ಯವನ್ನು. ಆದರೆ ಅದು ಸಿನಿಮಾದಲ್ಲಿ ಸುಲಭವಲ್ಲ. ಬಂಡವಾಳ ವಾಪಸು ಬರಬೇಕು ಎಂಬ ಭಯ ಇದ್ದೇ ಇರುತ್ತದೆ.

*‘ಮನಸಾರೆ‘ಯಲ್ಲಿ ‘ಅದೇನೋ’ ತೊಳಿಯೋ ಮೆಷೀನ್‌ ಕಂಡು ಹಿಡಿದಿದ್ದಿರಿ. ಲೂಸಿಯಾದಲ್ಲಿ ಮಾತ್ರೆ ಕಂಡುಹಿಡಿದಿರಿ. ಮುಂದಿನ ಸಂಶೋಧನೆ?

ಈಗ ತಲೇಲಿ ಓಡುತ್ತಿರುವ ಐಡಿಯಾ ಎಂದರೆ ಭವಿಷ್ಯದಲ್ಲಿ ‘ಗುರುತ್ವಾಕರ್ಷಣೆ’ಯನ್ನು ಸಬ್‌ಸ್ಕ್ರೈಬ್‌ ಮಾಡಬೇಕು ಎಂದು! ಗ್ರಾವಿಟೇಷನ್‌ ಸಬ್‌ಸ್ಕ್ರೈಬ್‌ ಮಾಡಿಕೊಂಡಾಗ ತುಂಬಾ ದುಡ್ಡಿರೋರು, ಖ್ಯಾತನಾಮರು ಭೂಮಿ ಮೇಲೆ ನಡೆಯಲು ಶುರು ಮಾಡುತ್ತಾರೆ. ಇಲ್ಲದಿದ್ದರೆ ನಾವ್ಯಾರೂ ಭೂಮಿ ಮೇಲೆಯೇ ಇರೊಲ್ಲ.

*ಮೇಲಿದ್ದವರನ್ನು ಕೆಳಗೆ ತರುವ ಯೋಚನೆಯೇ?

ಹ್ಹ ಹ್ಹ. ಮಗಳು ಮುಂದೆ ಬೆಳೆದಾಗ ಅವಳನ್ನು ಹೇಗೆಲ್ಲಾ ರೇಗಿಸಬಹುದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಇದು. ಗ್ರಾವಿಟಿ ಸಬ್‌ಸ್ಕ್ರಿಪ್ಷನ್‌ ಮಾಡಿಕೊಂಡಿದ್ದರಿಂದ ಭೂಮಿಗೆ ಬಂದಿದ್ದಾಳೆ ಎಂದು ರೇಗಿಸಬೇಕಿದೆ.

*ಲೂಸಿಯಾ ವ್ಯಾಪಾರ ಹೇಗಿದೆ?

ತುಂಬಾ ಜನ ಆ ರೀತಿ ಗುಳಿಗೆ ಸಿಗುತ್ತಾ ಎಂದು ಕೇಳುತ್ತಿರುತ್ತಾರೆ. ನಾನೇನೋ ಸಿನಿಮಾದಲ್ಲಿ ತೋರಿಸಿದ್ದೇನೆ, ಅದು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎನ್ನುತ್ತೇನೆ.

*ಯಾವಾಗಲೂ ಗಂಭೀರವಾಗಿ ಇರುತ್ತೀರಿ. ಮೊದಲಿನಿಂದಲೂ ಹಾಗೆಯೇ ಅಥವಾ ಮದುವೆ ಆದ ಬಳಿಕ ಹಾಗೆ ಆಗಿದ್ದೇ?

ನಾನು ಗಂಭೀರ ಅಲ್ಲ. ಎಲ್ಲರೊಂದಿಗೂ ಬೇಗನೆ ಹೊಂದಿಕೊಳ್ಳುವುದಿಲ್ಲ ಅಷ್ಟೇ. ಗೆಳೆಯರ ಜೊತೆಗಿದ್ದಾಗ ಕಾಲೆಳೆಯುವ ಕೆಲಸವನ್ನೂ ಸಲೀಸಾಗಿ ಮಾಡುತ್ತೇನೆ.

*ಲೂಸಿಯಾದಲ್ಲಿ ಸಿನಿಮಾ ಭಾಗವನ್ನೆಲ್ಲಾ ಕಪ್ಪು ಬಿಳುಪಿನಲ್ಲಿ ಚಿತ್ರಿಸಿದ್ದಿರಲ್ಲ, ಬಣ್ಣ ಖಾಲಿಯಾಗಿತ್ತೇ?

ಎರಡು ಕಾರಣ ಇದೆ. ಒಂದು ಕಥೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ನಿಜ ಜೀವನದಲ್ಲಿ ಬಣ್ಣವೂ ಕಾಣದಂಥ ಫ್ಲಾಟ್‌ ಬದುಕು ಆತನದ್ದಾಗಿರುತ್ತದೆ. ಇನ್ನೊಂದು ನಮ್ಮ ಬಜೆಟ್‌ ತುಂಬಾ ಕಡಿಮೆ ಇತ್ತು. ಶ್ರೀಮಂತ ಸೂಪರ್‌ಸ್ಟಾರ್‌ನ ಮನೆಯೆಂದು ಚಿತ್ರೀಕರಿಸುವಾಗ ಏನು ಮಾಡಿದರೂ ಚೆನ್ನಾಗಿ ಕಾಣಿಸುತ್ತಿ­ರಲಿಲ್ಲ. ಕಪ್ಪು ಬಿಳುಪುನಲ್ಲಿ ಎಷ್ಟೇ ಕೆಟ್ಟದಾಗಿದ್ದರೂ ಸುಂದರವಾಗಿ ಕಾಣಿಸುತ್ತಿತ್ತು.

*ಹಾಗಾದರೆ, ವಾಸ್ತವ ವರ್ಣಮಯವೋ, ಕನಸೋ?

ನನ್ನ ಲೈಫಲ್ಲಿ ವಾಸ್ತವವೇ ಸಾಕಷ್ಟು ಕಲರ್‌ಫುಲ್‌ ಆಗಿದೆ. ಕನಸುಗಳು ಕಪ್ಪು–ಬಿಳುಪು ಆಗಿವೆ!

*ಲೂಸಿಯಾ ತುಂಬಾ ಜನಕ್ಕೆ ಅರ್ಥ ಆಗಿಲ್ಲ ಎನ್ನುತ್ತಾರೆ. ನಿಮ್ಮ ಸೆಟ್‌ನಲ್ಲಿದ್ದವರಿಗೆ ಅರ್ಥ ಆಗಿತ್ತಾ?

ಅವರಲ್ಲೂ ಗೊಂದಲಗಳಿದ್ದವು. ಮಾಡುವಾಗಲೇ ಅದು ಫಜಲ್‌ ಥರ ಇರುತ್ತದೆ ಎನ್ನುವುದು ಗೊತ್ತಿತ್ತು. ಕುಳಿತು ಯೋಚನೆ ಮಾಡಿದರೆ ಮಾತ್ರ ಸ್ಪಷ್ಟತೆ ಸಿಗುತ್ತದೆ, ಹಾಗೆ ಆಗಬೇಕೆಂದೇ ಈ ಸಿನಿಮಾ ಮಾಡಿದ್ದು. ಕಲಾವಿದರಿಗೆ ಇದ್ಯಾಕೆ ಬರುತ್ತದೆ ಎಂಬ ಪ್ರಶ್ನೆಗಳು ಏಳುತ್ತಿದ್ದವು. ಅವರಿಗೆ ವಿವರಿಸುವಾಗಲೇ ನನಗೂ ಸ್ಪಷ್ಟತೆ ಸಿಗುತ್ತಾ ಹೋಗುತ್ತಿತ್ತು.

*ಭಟ್ಟರ ಸಹವಾಸದಲ್ಲಿ ಕಲಿತದ್ದು ಏನನ್ನು?

ಈ ಮೊದಲು ಬರೀ ಗಂಭೀರ ನಾಟಕಗಳನ್ನು ಮಾಡುತ್ತಿದ್ದೆ. ಆದರೆ ಭಟ್ಟರು ರಿಯಾಲಿಟಿಯನ್ನು ತೋರಿಸಿಕೊಟ್ಟರು. ಈ ಥರದ ಸಿನಿಮಾಗಳು ಎಂಟರ್‌ಟೈನಿಂಗ್ ಆಗಿ ಮಾಡಿದರೆ ಮಾತ್ರ ಜನರಿಗೆ ತಲುಪುತ್ತದೆ. ಈಗಿನ ಸಿನಿಮಾ ನೋಡುವ ಮನಸುಗಳು ಹೇಗಿವೆ, ನಮ್ಮ ಥೀಮ್‌ ಅನ್ನು ಅವರಿಗೆ ತಲುಪಿಸಬೇಕೆಂದರೆ ಅವರದೇ ಭಾಷೆಯನ್ನು ಹೇಗೆ ಬಳಸಬೇಕು ಮುಂತಾದವುಗಳು ಅವರ ಸಾಹಚರ್ಯದ ಕೊಡುಗೆಗಳು.‘ಲೈಫು ಇಷ್ಟೇನೆ’ಯಲ್ಲಿ ಈ ರೀತಿ ಸಂಭಾಷಣೆಗಳನ್ನು ನನ್ನಿಂದ ಬರೆಯಲು ಸಾಧ್ಯವಾಯಿತೇ ಎನಿಸುತ್ತದೆ. ಆಗ ಭಟ್ಟರ ಪ್ರಭಾವದಿಂದಲೋ ಏನೋ ಅದು ಸುಲಭವಾಗಿ ಬಂದಿತ್ತು. ಈಗ ಅವರು ಹೇಳಿಕೊಟ್ಟ ಮೂಲ ಅಂಶಗಳಂತೂ ಇದ್ದೇ ಇವೆ. ಅವರದು ಸಂಭಾಷಣೆ ಪ್ರಾಮುಖ್ಯವಿರುವ ಸಿನಿಮಾ. ನಾನು ಲೂಸಿಯಾದಲ್ಲಿಯೇ ಅದನ್ನು ಕಡಿಮೆ ಮಾಡಿದೆ. ನನ್ನ ಸಿನಿಮಾ ಕಥೆ, ಚಿತ್ರಕಥೆ, ಸಂಗತಿಗಳನ್ನು ಆಧರಿಸಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.