‘ಲೈಂಗಿಕ ಅಲ್ಪಸಂಖ್ಯಾತರಿಗೆ ₨ 1,000 ಪಿಂಚಣಿ’

ಬೆಂಗಳೂರು: ‘ಲೈಂಗಿಕ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ₨ 500 ಅನ್ನು ₨ 1,000 ಕ್ಕೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು’ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಬೆಂಗಳೂರು ನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ‘ಮೈತ್ರಿ’ ಪಿಂಚಣಿ ಆಂದೋಲನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಲೈಂಗಿಕ ಅಲ್ಪಸಂಖ್ಯಾತರಿಗೆ ಆರ್ಥಿಕ ಸಹಾಯವನ್ನು ಒದಗಿಸಿ, ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರವು ಮೈತ್ರಿ ಯೋಜನೆಯನ್ನು ಜಾರಿಗೆ ತಂದಿದೆ’ ಎಂದರು. ‘ಈ ಯೋಜನೆಯು ಮಧ್ಯವರ್ತಿಗಳ ಪಾಲಾಗಬಾರದೆಂದು 30 ಜಿಲ್ಲೆಗಳಲ್ಲಿ ಪಿಂಚಣಿ ಅದಾಲತ್ ಅನ್ನು ಆರಂಭಿಸಲಾಗಿದೆ. ಇದುವರೆಗೂ 30 ಜಿಲ್ಲೆಗಳಲ್ಲಿ 1,395 ಪಿಂಚಣಿ ಅದಾಲತ್ಗಳು ನಡೆದಿವೆ’ ಎಂದು ಹೇಳಿದರು.
‘ಇಡೀ ರಾಜ್ಯದ ಲೈಂಗಿಕ ಅಲ್ಪಸಂಖ್ಯಾತರಿಂದ ಪಿಂಚಣಿಗಾಗಿ 1,27,633 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1,23,507 ವಿಲೇವಾರಿಯಾಗಿವೆ. ಇನ್ನು 4,126 ಅರ್ಜಿಗಳು ಬಾಕಿಯಿವೆ’ ಎಂದು ವಿವರಿಸಿದರು. ‘ಮನಸ್ವಿ ಯೋಜನೆಯಲ್ಲಿ ಅವಿವಾಹಿತರಿಗೆ, ಪತಿ ಪರಿತ್ಯಕ್ತ ಮಹಿಳೆಯರಿಗೆ ನೀಡುವ ಪಿಂಚಣಿ ಯೋಜನೆಯಲ್ಲಿ ಅವಿವಾಹಿತರಿಂದ 15,668 ಅರ್ಜಿಗಳು ಬಂದಿದ್ದು, ಪತಿ ಪರಿತ್ಯಕ್ತ ಮಹಿಳೆಯರಿಂದ 7,160 ಅರ್ಜಿಗಳು ಬಂದಿವೆ’ ಎಂದು ಮಾಹಿತಿ ನೀಡಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಲೈಂಗಿಕ ಅಲ್ಪಸಂಖ್ಯಾತರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ವಿದ್ಯಾಭ್ಯಾಸವನ್ನು ಆಧರಿಸಿ ಹೊರಗುತ್ತಿಗೆಯಲ್ಲಿ ಉದ್ಯೋಗ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ‘ಲೈಂಗಿಕ ಅಲ್ಪ-ಸಂಖ್ಯಾತರಿಗೆ ಸಾಮಾಜಿಕವಾಗಿ ಭದ್ರತೆಯನ್ನು ಒದಗಿಸಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅವುಗಳ ಲಾಭ ಪಡೆಯಬೇಕು. ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷಾಟನೆ ಅಥವಾ ಪೀಡಿಸುವಂತಹ ಕಾರ್ಯಗಳನ್ನು ಬಿಟ್ಟು ಸ್ವಾಭಿಮಾನದಿಂದ ಬದುಕು ನಡೆಸಬೇಕು’ ಎಂದರು.
ಸಂಗಮ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸದಸ್ಯರಿಂದ ಆಕ್ರೋಶ: ಮೈತ್ರಿ ಯೋಜನೆ ಅಡಿಯಲ್ಲಿ ಸರ್ಕಾರ ನೀಡುತ್ತಿರುವ ಪಿಂಚಣಿ ₨ 500 ಯಾವುದಕ್ಕೂ ಸಾಲುವುದಿಲ್ಲ. ₨ 5,000 ಪಿಂಚಣಿಯನ್ನು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು ಎಂದು ಸಂಗಮ ಮತ್ತು ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಸದಸ್ಯರು ಕಾರ್ಯಕ್ರಮದ ನಂತರ ಆಕ್ರೋಶ ವ್ಯಕ್ತಪಡಿಸಿದರು.
‘ಪಿಂಚಣಿಯನ್ನು 18 ರಿಂದ 64 ವರ್ಷದೊಳಗಿನವರಿಗೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕರಪತ್ರಗಳಲ್ಲಿ ತಿಳಿಸಿದ್ದಾರೆ. ಆದರೆ, ಇಲ್ಲಿ 40 ವರ್ಷದವರಿಗಿಂತ ಹೆಚ್ಚಿನವರಿಗೆ ಪಿಂಚಣಿ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ನಮಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಲೈಂಗಿಕ ಅಲ್ಪಸಂಖ್ಯಾತೆ ಕಿರಣ್ ಹೇಳಿದರು. ಸಚಿವ ಆಂಜನೇಯ ಅವರ ಮಾತಿಗೂ ತೀವ್ರತರವಾದ ಆಕ್ರೋಶ ವ್ಯಕ್ತವಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.