‘ಲೈಂಗಿಕ ಹಕ್ಕುಗಳ ಸಂರಕ್ಷಣೆ ಅಗತ್ಯ’

ಧಾರವಾಡ: ‘ಇತ್ತಿಚೆಗೆ ಲೈಂಗಿಕ ಹಕ್ಕುಗಳ ದುರ್ಬಳಕೆ ಹೆಚ್ಚುತ್ತಿದ್ದು, ಅವುಗಳ ಸಮರ್ಪಕ ಅರಿವಿನ ಕೊರತೆಯಿಂದಾಗಿ ಲೈಂಗಿಕ ಕಿರುಕುಳ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಹೇಳಿದರು.
ನಗರದ ಎಮ್ಮಿಕೇರಿಯಲ್ಲಿರುವ ಫ್ಯಾಮಿಲಿ ಪ್ಲಾನಿಂಗ್ ಆಫ್ ಅಸೋಸಿಯೇಶನ್ ಇಂಡಿಯಾ ಧಾರವಾಡ ಶಾಖೆಯ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಲೈಂಗಿಕ ಹಾಗೂ ಪ್ರಜನನ ಆರೋಗ್ಯ ಮತ್ತು ಹಕ್ಕುಗಳ ಜ್ಯಾಗೃತಿ ರ್್ಯಾಲಿಗೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರೌಢಶಾಲೆಯ ಬಾಲಕರು ಹಾಗೂ ಯುವಕರು ಯೌವನಕ್ಕೆ ಬರುವ ಮುನ್ನವೇ ಅವರಿಗೆ ಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಲೈಂಗಿಕ ನಡವಳಿಕೆ ಶಿಕ್ಷಣ ಹಾಗೂ ತಿಳಿವಳಿಕೆ ಅತಿ ಅವಶ್ಯವಾಗಿದೆ. ಸರ್ಕಾರೇತರ ಸಂಸ್ಥೆಗಳು ಇಂತಹ ಜಾಗೃತಿ ರ್್ಯಾಲಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿಸುವ ಮೂಲಕ ಸಮಾಜದಲ್ಲಿ ಅರಿವು ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಶಿವು ಹಿರೇಮಠ, ‘ಯುವಕ ಹಾಗೂ ಯುವತಿಯರು ಮದುವೆಗೆ ಮುನ್ನ ಎಚ್ಐವಿ ದೃಢಪಡಿಸುವ ಪ್ರಮಾಣಪತ್ರ ಪ್ರದರ್ಶನ ಕಡ್ಡಾಯದ ಹಕ್ಕೊತ್ತಾಯ ಮಾಡಬೇಕು. ಇದರಿಂದ ಮುದುವೆಗೆ ಮುನ್ನವೇ ಬಾಳು ಬಂಗಾರವಾಗಿಸುವ ಖಾತ್ರಿ ಪಡೆದಂತಾಗುತ್ತದೆ. ಅಲ್ಲದೇ, ಯುವಕರು ದೂರದರ್ಶನ ಮಾಧ್ಯಮಗಳ ಹಾವಳಿಯಿಂದ ದಾರಿ ತಪ್ಪುತ್ತಿದ್ದು, ಅವುಗಳನ್ನು ಪಾಲಕರು ನೋಡದಂತೆ ತಡೆಗಟ್ಟುವ ಪ್ರಯತ್ನ ಮಾಡಬೇಕಿದೆ. ಇದರಿಂದ ಲೈಂಗಿಕ ಹಾಗೂ ಪ್ರಜನನ ಆರೋಗ್ಯ ಮತ್ತು ಹಕ್ಕುಗಳ ಪ್ರಾಮಾಣಿಕ ಜಾರಿಗೆ ಕೈಜೋಡಿಸಿದಂತಾಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಬಿ. ಉಷಾ, ‘ಲಿಂಗ ಅನುಪಾತದಲ್ಲಿ ಗಣನೀಯ ವ್ಯತ್ಯಾಸ ಕಂಡುಬರುತ್ತಿದೆ. ಇದಕ್ಕೆ ಮಹಿಳೆಯರ ಮರಣ ಪ್ರಮಾಣ ಹೆಚ್ಚುತ್ತಿರುವುದು ಕಾರಣವಾಗಿದ್ದು, ಇದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಹಿಳೆಯರು ಎಲ್ಲ ರಂಗಗಳಲ್ಲಿ ಸಮಾನತೆ ಸಾಧಿಸಿದ್ದಾರೆ ಎಂಬುದು ತಪ್ಪು ಕಲ್ಪನೆಯಾಗಿದ್ದು, ಮಹಿಳೆ ಸಾಕಷ್ಟು ಹಕ್ಕುಗಳಿಂದ ವಂಚಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ವಿಫಲರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಪಾರ್ವತಿ ಹಾಲಬಾವಿ, ಸದಸ್ಯರಾದ ಹೇಮಲ್ ದೇಸಾಯಿ, ಸುರೇಶ ಹಾಲಬಾವಿ, ಕವಿವಿ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಸಂಗೀತ ಮಾನೆ, ಶಾಖಾ ವ್ಯವಸ್ಥಾಪಕಿ ಸುಜಾತ ಅನಿಶೆಟ್ಟರ ಹಾಜರಿದ್ದರು. ರ್್ಯಾಲಿಯಲ್ಲಿ ಕವಿವಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಕಿಡ್ಸ್, ಬಾಲನಂದನ ಟ್ರಸ್ಟ್, ಬಿಡಿಎಸ್ಎಸ್ ಸೇರಿದಂತೆ ಎಫ್ಪಿಎಐ ಯೂತ್ ಪೋರಂ ಸದಸ್ಯರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.