‘ವಾಪಸು ಬಂದವರ’ ಸಮೀಕ್ಷೆಗೆ ಸಿಎಂ ಆದೇಶ

7
ಜಾತಿ ಪ್ರಮಾಣಪತ್ರ ಗೊಂದಲಕ್ಕೆ ತೆರೆ ಎಳೆಯಲು ಕ್ರಮ

‘ವಾಪಸು ಬಂದವರ’ ಸಮೀಕ್ಷೆಗೆ ಸಿಎಂ ಆದೇಶ

Published:
Updated:

ಬೆಂಗಳೂರು: ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ ವಾಪಸು ಬಂದು ರಾಜ್ಯದಲ್ಲಿ ಆಶ್ರಯ ಪಡೆದಿರು­ವವರ ಕುರಿತು ವಿಸ್ತೃತವಾದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.ಶ್ರೀಲಂಕಾದಿಂದ ವಾಪಸು ಬಂದು ರಾಜ್ಯದಲ್ಲಿ ನೆಲೆಸಿರುವವರ ನಿಯೋಗದ ಜೊತೆ ಮುಖ್ಯ­ಮಂತ್ರಿ­ಯವರು ಶುಕ್ರವಾರ ಸಭೆ ನಡೆಸಿದರು. ತಮ್ಮನ್ನು ‘ನಿರಾಶ್ರಿತರು’ ಎಂದು ಪರಿಗಣಿಸಬಾರದು, ಬದಲಿಗೆ ‘ವಾಪಸು ಬಂದವರು’ ಎಂದು ಪರಿಗಣಿಸಬೇಕು ಎಂದು ನಿಯೋಗ ಮನವಿ ಸಲ್ಲಿಸಿತು. ಈ ಮನವಿ­ಯನ್ನು ಮಾನ್ಯ ಮಾಡಿದ ಮುಖ್ಯಮಂತ್ರಿಯವರು, ಶ್ರೀಲಂಕಾ ಮತ್ತು ಬಾಂಗ್ಲಾದಿಂದ ವಾಪಸು ಬಂದು ರಾಜ್ಯದಲ್ಲಿ ಆಶ್ರಯ ಪಡೆದಿರುವವರ ಕುರಿತ ಸಮೀಕ್ಷೆಗೆ ಆದೇಶಿಸಿದರು.ಅರಣ್ಯ ಸಚಿವ ಬಿ.ರಮಾನಾಥ ರೈ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಶ್ರೀಲಂಕಾ ಮತ್ತು ಬಾಂಗ್ಲಾದಿಂದ ಬಂದು ರಾಜ್ಯದಲ್ಲಿ ನೆಲೆಸಿ­ರುವವರಿಗೆ  ಜಾತಿ ಪ್ರಮಾಣ ಪತ್ರ ನೀಡದಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.‘ವಾಪಸು ಬಂದವರನ್ನು’ ಕೆಲ ಅಧಿಕಾರಿಗಳು ‘ನಿರಾಶ್ರಿತರು’ ಎಂದು ಅರ್ಥೈಸಿದ್ದೇ ಗೊಂದಲಕ್ಕೆ ಕಾರಣ ಎನ್ನಲಾಗಿದೆ. ಶ್ರೀಲಂಕಾದಿಂದ ಹಿಂದಿರುಗಿ ಬಂದವರ ನಿಯೋಗವು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಅಡ್ವೊಕೇಟ್‌ ಜನರಲ್‌ ಜೊತೆ ಮಾತುಕತೆ ನಡೆಸಿದ ಬಳಿಕ ಗೊಂದಲಕ್ಕೆ ತೆರೆಬಿದ್ದಿದೆ ಎಂದು ಮೂಲಗಳು ಹೇಳಿವೆ.ಶ್ರೀಲಂಕಾದಿಂದ ಹಿಂದಿರುಗಿ ಬಂದ ಸುಮಾರು 15 ಸಾವಿರ ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದೇ ರೀತಿ ಬಾಂಗ್ಲಾದೇಶದಿಂದ ಬಂದ 700 ಕುಟುಂಬಗಳು ರಾಯಚೂರಿನಲ್ಲಿ ನೆಲೆಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry