‘ವಾಯೇಜರ್‌’ನ ಅನನ್ಯ ಯಾನ

6

‘ವಾಯೇಜರ್‌’ನ ಅನನ್ಯ ಯಾನ

Published:
Updated:

‘ವಾಯೇಜರ್‌–1’.

ಅದೊಂದು ಅಸದೃಶ ವ್ಯೋಮನೌಕೆ (ಚಿತ್ರ–10). 1977ರ ಸೆಪ್ಟೆಂಬರ್‌ 5ರಂದು ಎಂದರೆ ಮುವ್ವತ್ತಾರು ವರ್ಷಗಳಿಗೂ ಸ್ವಲ್ಪ ಹಿಂದೆ ಅಂತರಿಕ್ಷಕ್ಕೆ ಪ್ರಯಾಣ ಹೊರಟ ಈ ಅದ್ಭುತ ನೌಕೆ ಇಂದಿಗೂ ವರ್ಷಕ್ಕೆ ಐವತ್ನಾಲ್ಕು ಕೋಟಿ ಕಿ.ಮೀ. ಕ್ರಮಿಸುತ್ತ (ಸೆಕೆಂಡ್‌ಗೆ ಸಮೀಪ 17 ಕಿ.ಮೀ.) ಭೂ ಸಂಪರ್ಕದಲ್ಲೂ ಇದ್ದು ಹೇರಳ ಹೊಸ ಮಾಹಿತಿಗಳನ್ನು ಕಳುಹುತ್ತಲೂ ಇದೆ. ಅದಕ್ಕೂ ಹದಿನಾರು ದಿನ ಮೊದಲೇ ಹಾರಿದ ಅವಳಿ ನೌಕೆ ವಾಯೇಜರ್‌–2 ಅನ್ನು ಹಿಂದಿಕ್ಕಿ ಈವರೆಗೆ ಇನ್ನಾವ ನೌಕೆಯೂ ಸಾಧಿಸಿದ, ಅನನ್ಯ ಸಾಧನೆಯ ಅದ್ವಿತೀಯ ವಿಶ್ವದಾಖಲೆಯನ್ನು ಸೃಷ್ಟಿಸಿದೆ.ನಿಮಗೇ ತಿಳಿದಿರುವಂತೆ ಈವರೆಗೆ ಅಂತರಿಕ್ಷ ಯಾನ ಕೈಗೊಂಡಿರುವ ಮಾನವ ನಿರ್ಮಿತ ವ್ಯೋಮ ಸಾಧನಗಳು ಹೇರಳ. ವಿವಿಧ ಉದ್ದೇಶಗಳ ಸಾವಿರಾರು ಕೃತಕ ಉಪಗ್ರಹಗಳು (ಚಿತ್ರ–7) ಹಾಗೂ ನಮ್ಮ ಸೌರವ್ಯೂಹದ ಸೂರ್ಯ, ಚಂದ್ರ, ಇತರ ಗ್ರಹ–ಉಪಗ್ರಹಗಳು, ಕ್ಷುದ್ರಗ್ರಹ–ಧೂಮಕೇತುಗಳ ಅಧ್ಯಯನಕ್ಕೆ ಹಲವು ಹತ್ತು ವ್ಯೋಮನೌಕೆಗಳು (ಚಿತ್ರ 1ರಿಂದ 6) ಬಾಹ್ಯಾಕಾಶಕ್ಕೆ ಹೋಗಿವೆ. ಆದರೆ ಪಯಣಿಸಿರುವ ದೂರ, ಪಯಣದ ಅವಧಿ ಮತ್ತು ತಲುಪಿರುವ ನೆಲೆ ಈ ಅಂಶಗಳಲ್ಲಿ ಈವರೆಗೂ ವಾಯೇಜರ್‌–1ಕ್ಕೆ ಬೇರಾವ ನೌಕೆಯೂ ಸಾಟಿ ಇಲ್ಲ.ವಿಸ್ಮಯ ಏನೆಂದರೆ ಹಾದಿಯಲ್ಲಿ ಹಲವು ಗ್ರಹಗಳ ಸನಿಹದಲ್ಲೇ ಸಾಗಿ, ಹಾಗೆಯೇ ಮುಂದೆ ಮುಂದೆ ಹೋಗಿ, ನಮ್ಮ ಸೌರವ್ಯೂಹದ ಸೀಮೆಯನ್ನೂ ದಾಟಿ, ಕಡೆಗೆ ನಕ್ಷತ್ರ ಲೋಕದತ್ತ ಅನಂತ ಯಾನ ಕೈಗೊಳ್ಳುವಂತೆ ಯೋಜಿಸಿ ಸಜ್ಜುಗೊಳಿಸಿ ಈವರೆಗೆ ಅಮೆರಿಕದ ‘ನಾಸಾ’ ಸಂಸ್ಥೆ ನಾಲ್ಕು ವ್ಯೋಮನೌಕೆಗಳನ್ನು ಹಾರಿಸಿದೆ: ‘1972ರಲ್ಲಿ ಪಯೊನೀರ್‌–10, 1973ರಲ್ಲಿ ಪಯೊನೀರ್‌–11 (ಚಿತ್ರ–8), 1977ರಲ್ಲಿ ವಾಯೇಜರ್–1 ಮತ್ತು 2’ (ಈ ನೌಕೆಗಳ ಮಾರ್ಗವನ್ನು ಚಿತ್ರ–11ರಲ್ಲಿ ಗಮನಿಸಿ). ನಮ್ಮಿಂದ 54 ಖಗೋಳಮಾನ ದೂರದಲ್ಲಿ (1 ಖಗೋಳಮಾನ=15 ಕೋಟಿ ಕಿ.ಮೀ.) ಇಸವಿ 2000ದಲ್ಲಿ ಪಯೋನೀರ್‌–11 ಮತ್ತು 2003ರಲ್ಲಿ 82 ಖಗೋಳಮಾನ ದೂರದಲ್ಲಿ ಪಯೋನೀರ್‌–10 ಭೂಸಂಪರ್ಕ ಕಳೆದುಕೊಂಡಿವೆ. ಆದರೆ ವಾಯೇಜರ್‌ ನೌಕೆಗಳು ಇಂದೂ ಭೂಸಂಪರ್ಕದಲ್ಲಿದ್ದು ಸಂಪೂರ್ಣ ವಿಭಿನ್ನ ದಿಕ್ಕುಗಳಲ್ಲಿ ಪಯಣಿಸುತ್ತಿವೆ (ಚಿತ್ರ–11ರಲ್ಲಿ ಗಮನಿಸಿ). ಈ ಅತ್ಯದ್ಭುತ ವ್ಯೋಮಯಾನ ಸ್ಪರ್ಧೆಯಲ್ಲಿ ವಾಯೇಜರ್‌–1 ಕಲ್ಪನಾತೀತ ವಿಶ್ವದಾಖಲೆಯನ್ನು ನಿರ್ಮಿಸಿದೆ.ಈ ನೌಕೆಯ ಸಾಧನೆಯ, ಶಕ್ತಿ–ಸಾಮರ್ಥ್ಯಗಳ, ಭವಿಷ್ಯದ ಗುರಿಯ ಕುರಿತಾದ ಪರಮ ವಿಸ್ಮಯದ ಅಂಶಗಳು:

* 2004ರ ಡಿಸೆಂಬರ್‌ 16ರಂದು ವಾಯೇಜರ್‌–1 ವ್ಯೋಮನೌಕೆ ನಮ್ಮ ಸೌರವ್ಯೂಹದ ಸುತ್ತಲಿನ ‘ಟರ್ಮಿನೇಶನ್‌ ಶಾಕ್‌’ ಆವರಣವನ್ನು ತಲುಪಿತು (ಚಿತ್ರ–8ರಲ್ಲಿ ನೋಡಿ). ಸೂರ್ಯನಿಂದ ಹದಿನಾಲ್ಕು ಶತಕೋಟಿ ಕಿ.ಮೀ. ದೂರದಲ್ಲಿನ ಪ್ರದೇಶ ಇದು. ಬಾಹ್ಯಾಕಾಶದಿಂದ ಅವಿರತ ಹರಿದು ಬರುತ್ತಿರುವ ಕಾಸ್ಮಿಕ್‌ ಕಿರಣ ಕಣಗಳ ಪ್ರಬಲ ಮಹಾಪೂರವನ್ನು ಎದುರಿಸಿ ಒತ್ತರಿಸಿ ಪ್ರತ್ಯೇಕವಾಗಿಯೇ ಉಳಿಯಲು ಯತ್ನಿಸುವ ಸೌರಕಣಗಳ ಪ್ರವಾಹದ ಸಾಮರ್ಥ್ಯ ಇಷ್ಟು ದೂರದ ಈ ನೆಲೆಯಲ್ಲಿ ಅಂತ್ಯಗೊಳ್ಳುತ್ತದೆ. ಈ ವಿಶಿಷ್ಟ ನೆಲೆಯನ್ನು ತಲುಪಿ ಅಲ್ಲಿಂದಾಚಿನ ‘ಹೀಲಿಯೋ ಶೀತ್‌’ ಪ್ರದೇಶವನ್ನು ಪ್ರವೇಶಿಸಿದ ಪ್ರಪ್ರಥಮ ಮಾನವ ನಿರ್ಮಿತ ವಾಹನ ಇದು (ಇದೇ ಸಾಧನೆಯನ್ನು ವಾಯೇಜರ್‌–2 ವ್ಯೋಮನೌಕೆ 2007ರ ಆಗಸ್ಟ್ 30ರಂದು ಪೂರ್ಣಗೊಳಿಸಿತು).* 2013ರ ಆಗಸ್ಟ್ನಲ್ಲಿ ಮುವ್ವತ್ತಾರು ವರ್ಷಗಳ ನಿರಂತರ ಪಯಣದ ಬಳಿಕ ಸೌರವ್ಯೂಹದ ಸ್ಪಷ್ಟ ಸೀಮೆಯನ್ನು ದಾಟಿ ಹೊರಕ್ಕೆ ಸಾಗಿತು. ಹಾಗೆ ನಮ್ಮ ಸೌರವ್ಯೂಹದಾಚಿನ ‘ಇಂಟರ್‌ಸ್ಟೆಲ್ಲಾರ್‌ ಸ್ಪೇಸ್‌’– ಅನ್ನು ಪ್ರವೇಶಿಸಿದ ಪ್ರಪ್ರಥಮ ನೌಕೆ ಎಂಬ ಅಪ್ರತಿಮ ಅನನ್ಯ ವಿಶ್ವದಾಖಲೆಯನ್ನು ಸೃಜಿಸಿತು. ಸದ್ಯದಲ್ಲಿ ಈ ನೌಕೆ ಹತ್ತೊಂಬತ್ತು ಶತಕೋಟಿ ಕಿ.ಮೀ. ದೂರದಲ್ಲಿದೆ; ಇನ್ನೂ ದೂರದತ್ತ ಪಯಣಿಸುತ್ತಿದೆ.* ಹೀಗೆ ಈವರೆಗೆ ಯಾವ ನೌಕೆಯೂ ತಲುಪದಿದ್ದ ಇಂಟರ್‌ಸ್ಟೆಲ್ಲಾರ್‌ ಸ್ಪೇಸ್‌ನಲ್ಲಿ ಯಾನ ಮುನ್ನಡೆಸಿರುವ ವಾಯೇಜರ್‌–1 ಅಲ್ಲಿನ ದ್ರವ್ಯ ವಿವರಗಳನ್ನೂ ಅಜ್ಞಾತ ವಿದ್ಯಮಾನಗಳನ್ನೂ ಕುರಿತ ಹೇರಳ ಮಾಹಿತಿಗಳನ್ನು ವರ್ಷ 2020ರವರೆಗೂ ಸಮರ್ಥವಾಗಿ ನಿರಂತರ ಕಳುಹಬಲ್ಲದಾಗಿದೆ.* ಅಂತರಿಕ್ಷದಲ್ಲಿ ಒಂದೇ ವೇಗದ ಪಯಣ ಮುಂದುವರೆಸಲು ಯಾವ ಇಂಧನವೂ ಬೇಕಿಲ್ಲವಾದರೂ ರೇಡಿಯೋ ಸಂಪರ್ಕಕ್ಕೆ ಮತ್ತು ವ್ಯೋಮನೌಕೆಯಲ್ಲಿನ ವೈಜ್ಞಾನಿಕ ಉಪಕರಣಗಳಿಗೆ ವಿದ್ಯುತ್‌ ಶಕ್ತಿ ಬೇಕೇ ಬೇಕು. ಅದಕ್ಕಾಗಿ ವಾಯೇಜರ್‌– ೧ರಲ್ಲಿ ಪ್ಲುಟೋನಿಯಂ ಇಂಧನದ ‘ಆರ್‌.ಟಿ.ಜಿ’ (ರೇಡಿಯೋ ಐಸೋಟೋಪ್‌ ಥರ್ಮೋ ಎಲೆಕ್ಟ್ರಿಕ್‌ ಜನರೇಟರ್‌) ಅನ್ನು ಜೋಡಿಸಲಾಗಿದೆ. 2025ರ ವೇಳೆಗೆ ಈ ಸಾಧನದ ಇಂಧನ ಮುಗಿದುಹೋಗಲಿದೆ. ಹಾಗಾದಾಗ ವಾಯೇಜರ್‌–1ರ ಸಂಪರ್ಕ ವ್ಯವಸ್ಥೆ ಸ್ತಬ್ಧವಾಗಲಿದೆ.* ಸಂಪರ್ಕ ಸ್ಥಗಿತಗೊಂಡರೂ ವಾಯೇಜರ್‌–1ರ ಪಯಣ ನಿಲ್ಲುವುದಿಲ್ಲ. ಈಗಿನ ವೇಗದಲ್ಲೇ, ಎಂದರೆ ಗಂಟೆಗೆ ಅರವತ್ತೊಂದು ಸಾವಿರ ಕಿ.ಮೀ. ವೇಗದಲ್ಲೇ, ಅದು ಹತ್ತಾರು, ನೂರಾರು, ಸಾವಿರಾರು ವರ್ಷ ಪಯಣಿಸುತ್ತಲೇ ಇರುತ್ತದೆ. ಹಾಗಾಗಿ ಬಹುದೂರದ ಭವಿಷ್ಯದಲ್ಲಿ ಇನ್ನಾವುದಾದರೂ ನಕ್ಷತ್ರದ ಸುತ್ತಲಿನ ಗ್ರಹವ್ಯೂಹದ ಸನಿಹ ತಲುಪಿ, ಅಲ್ಲಿ ನಮ್ಮಂತಹ ಅಥವಾ ಇನ್ನೂ ಅಧಿಕ ಬುದ್ಧಿಮತ್ತೆಯ ಅನ್ಯಜೀವಿಭರಿತ ಭೂ ಸದೃಶಗ್ರಹದ ‘ಕಣ್ಣಿಗೆ ಬೀಳಬಹುದು’; ಆ ಜೀವಿಗಳ ಕೈ ಸೇರಬಹುದು!* ಹಾಗೇನಾದರೂ ಆದರೆ ವಾಯೇಜರ್‌–೧ ಅನ್ನು ಕಳುಹಿಸಿದ ನಮ್ಮ ವಿವರವನ್ನು, ನಮ್ಮ ವಿಳಾಸವನ್ನು (ಎಂದರೆ ಕ್ಷೀರಪಥದಲ್ಲಿ ನಮ್ಮ ಸೌರವ್ಯೂಹ ಇರುವ ಸ್ಥಳ, ಅದರಲ್ಲಿ ನಮ್ಮ ಭೂಮಿಯ ನೆಲೆ ಇತ್ಯಾದಿ ವಿವರಗಳು) ಗಣಿತೀಯ ಭಾಷೆಯಲ್ಲಿ ಕೆತ್ತಲಾದ ಬಂಗಾರ ಲೇಪಿತ, ‘ಆಡಿಯೋ ಸಹಿತ’ ಲೋಹದ ಡಿಸ್‌್ಕವೊಂದನ್ನು (ಚಿತ್ರ–9) ಈ ನೌಕೆಯಲ್ಲಿ ಇರಿಸಲಾಗಿದೆ.* ಅದೆಲ್ಲ ಸಂಭವಿಸಿದ್ದೇ ಆದರೆ ಮುಂದೆ ಎಂದೋ ಒಮ್ಮೆ ಭೂಮಿಗೆ ಅಂಥ ಏಲಿಯನ್ನರಿಂದ ಒಂದು ‘ಕರೆ’ ಬರಬಹುದು! ಎಂಥ ಕಲ್ಪನೆ! ಕಲ್ಪನೆ ಹೌದಾದರೂ ಅದು ಅಸಂಭವವಲ್ಲ; ಅಸಾಧ್ಯವೇನಲ್ಲ. ಅದನ್ನೆಲ್ಲ ಸಾಧ್ಯವಾಗಿಸುವ ಹಾದಿಯಲ್ಲಿದೆ ವಾಯೇಜರ್‌–1.

ಎಂಥ ಅದ್ಭುತ! ಅಲ್ಲವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry