‘ವಿಜ್ಞಾನದ ಪಾರಿಭಾಷಿಕ ಪದ ಚರ್ಚೆಯಾಗಲಿ’

7

‘ವಿಜ್ಞಾನದ ಪಾರಿಭಾಷಿಕ ಪದ ಚರ್ಚೆಯಾಗಲಿ’

Published:
Updated:

ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ಕನ್ನಡದ ಮಕ್ಕಳು ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲೇ ವ್ಯಾಸಂಗ ಮಾಡುತ್ತಿರುವ ಕಾರಣ ಮುಂದೊಂದು ದಿನ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವೇ ಇಲ್ಲದಂತೆ ಆಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ ವಿಜ್ಞಾನ – ತಂತ್ರಜ್ಞಾನ ಗೋಷ್ಠಿ ‘ಕನ್ನಡದಲ್ಲಿ ಬಳಸಬೇಕಾದ ವಿಜ್ಞಾನದ ಪಾರಿಭಾಷಿಕ ಪದಗಳ ಕುರಿತು ಸಾಕಷ್ಟು ಚರ್ಚೆ ಆಗಬೇಕಿದೆ’ ಎಂಬ ಆಶಯ ವ್ಯಕ್ತಪಡಿಸಿತು.80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಗೋಷ್ಠಿಯಲ್ಲಿ ಮಾತನಾಡಿದ ವಿಜ್ಞಾನ ಲೇಖಕ ಸಂಪಿಗೆ ತೋಂಟದಾರ್ಯ ಅವರು, ‘ಇಂಗ್ಲಿಷಿನ ಬ್ಲ್ಯಾಕ್ ಹೋಲ್ ಎಂಬ ಪದಕ್ಕೆ, ಕನ್ನಡದಲ್ಲಿ ಹಿಂದೆ ಕೃಷ್ಣವಿವರ ಎಂಬ ಪದ ಬಳಸಲಾಯಿತು. ಆದರೆ, ಬ್ಲ್ಯಾಕ್ ಹೋಲ್‌ನ ಗುಣಗಳನ್ನು ಕೃಷ್ಣವಿವರ ಎಂಬ ಪದ ಸಮಗ್ರವಾಗಿ ಧ್ವನಿಸಲಿಲ್ಲ. ಈ ಪದವನ್ನು ಕನ್ನಡದಲ್ಲಿ ಕಾಳರಂಧ್ರ ಎಂದು ಕರೆಯುವುದೇ ಸೂಕ್ತ. ವಿಜ್ಞಾನದ ಪಾರಿಭಾಷಿಕ ಪದಗಳ ಕುರಿತು ಸಾಕಷ್ಟು ಚರ್ಚೆ ಆಗಬೇಕಿದೆ’ ಎಂದು ಹೇಳಿದರು.ಕನ್ನಡದಲ್ಲಿ ಈಗ ಬರುತ್ತಿರುವ ವಿಜ್ಞಾನ ಪುಸ್ತಕಗಳ ಗುಣಮಟ್ಟ ಅಷ್ಟೇನೂ ಒಳ್ಳೆಯದಾಗಿಲ್ಲ. ಒಳ್ಳೆಯ ಗುಣಮಟ್ಟದ ಪುಸ್ತಕಗಳನ್ನು ಹೊರತರಲು ಆರ್ಥಿಕ ಸಂಪನ್ಮೂಲದ ಕೊರತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇಂಥ ಪುಸ್ತಕಗಳ ಪ್ರಕಟಣೆಗೆ ಆರ್ಥಿಕ ನೆರವು ನೀಡಬೇಕು ಎಂದರು.ವಿಜ್ಞಾನ ಮಾಸಪತ್ರಿಕೆಯೊಂದು ಕನ್ನಡಕ್ಕೆ ಬೇಕು. ಇದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಶಾಲಾ ಮಟ್ಟದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಪ್ರಾಮುಖ್ಯ ನೀಡಿದರೆ ಭವಿಷ್ಯದ ವಿಜ್ಞಾನಿಗಳನ್ನು ತಯಾರು ಮಾಡಬಹುದು ಎಂದರು.‘ಪ್ರಜಾವಾಣಿ’ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕ ಎನ್.ಎ.ಎಂ. ಇಸ್ಮಾಯಿಲ್ ಮಾತನಾಡಿ, ‘ಇಂಟರ್ನೆಟ್, ಮೊಬೈಲ್‌ಗಳಲ್ಲಿ ಕನ್ನಡದ ಬಳಕೆ ಹೆಚ್ಚಿಸುವುದು ತಂತ್ರಜ್ಞರ ಕೆಲಸ ಮಾತ್ರವಲ್ಲ. ಈ ಕಾರ್ಯಕ್ಕೆ ಸಾಂಸ್ಕೃತಿಕ ಆಯಾಮವೂ ಇದೆ. ಆದರೆ ಸಾಂಸ್ಕೃತಿಕ ಕಾರ್ಯಸೂಚಿಯನ್ನು ಮರೆತ ಕಾರಣ, ಆಧುನಿಕ ಸಂವಹನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗಿದೆ‘ ಎಂದು ವಿಶ್ಲೇಷಿಸಿದರು.‘ಶಿಷ್ಟತೆ ರೂಪಿಸುವ ವಿಚಾರದಲ್ಲಿ ಮಲಯಾಳಂ ಭಾಷೆಗೆ ಹೋಲಿಸಿದರೆ ಕನ್ನಡಕ್ಕೆ ಸಮಸ್ಯೆಗಳು ಕಡಿಮೆ. ಇದು ಕಡಿಮೆಯಾಗಿದ್ದು ಸರ್ಕಾರದ ಪ್ರಯತ್ನದಿಂದ ಅಲ್ಲ. ಆದರೆ ಆಸಕ್ತ ತಂತ್ರಜ್ಞರ ಕೆಲಸದಿಂದ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry