‘ವಿರೋಧದ ನಡುವೆ ವಿದ್ಯೆ ಕಲಿತೆ’

7
ಮನೆಯಂಗಳದಲ್ಲಿ ಮಾತುಕತೆ

‘ವಿರೋಧದ ನಡುವೆ ವಿದ್ಯೆ ಕಲಿತೆ’

Published:
Updated:

ಬೆಂಗಳೂರು: ‘ನಮ್ಮ ಅಜ್ಜ ಶಿಕ್ಷಕ. ಆದರೂ ವಿದ್ಯೆ ಕಲಿಯಲು ನಮ್ಮ ಮನೆಯಲ್ಲಿ ನನಗೆ ವಿರೋಧ ಇತ್ತು. ಕೊನೆಗೆ ಒಬ್ಬ ಪುಣ್ಯಾತ್ಮನ ಕೃಪೆಯಿಂದ 9ನೇ ವರ್ಷಕ್ಕೆ ನನಗೆ ಶಿಕ್ಷಣದ ಭಾಗ್ಯ ಲಭಿಸಿತು’. ಇದನ್ನು ನೆನಪಿಸಿಕೊಳ್ಳುವಾಗ  ಚಿತ್ರ ಕಲಾವಿದ ಎಂ.ಬಿ. ಪಾಟೀಲ ಭಾವುಕರಾಗಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಅವರು ತಾವು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.ಅವರೇ ಬಿಚ್ಚಿಟ್ಟ ನೆನಪಿನ ಬುತ್ತಿ: ‘ಜವಳಿ ವ್ಯವಹಾರದ ಕುಟುಂಬದಲ್ಲಿ ಹುಟ್ಟಿದ ನನಗೆ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಎಲ್ಲ ವಿಷಯದಲ್ಲೂ ವ್ಯವಹಾರಸ್ಥರಾಗಿಯೇ ಯೋಚಿಸು ತ್ತಿದ್ದ  ನನ್ನ ತಂದೆಗೆ ನಾನು ಜೀವನೋಪಾಯಕ್ಕಾಗಿ ಕೆಲಸ ಕಲಿಯಬೇಕು ಎಂಬ ಇಚ್ಛೆ’.‘ಕೈಯಲ್ಲಿ ಬಳಪ ಹಿಡಿಯುವ ಕಾಲದಲ್ಲಿ ಬೀಡಿ ಹಿಡಿದು ಎಮ್ಮೆ ಕಾಯಲು ಹೋಗುತ್ತಿದ್ದೆ. ಆಗ ಎಮ್ಮೆ ಕಾಯುವ ಕೆಲಸದವರಿಗೆ ಒಂದು ರೂಪಾಯಿ ನೀಡಬೇಕಿತ್ತು. ಅದನ್ನು ತಪ್ಪಿಸಲು ತಂದೆ ನನ್ನನ್ನು ಎಮ್ಮೆ ಕಾಯಲು ಹಾಕಿದ್ದರು. ಆಗ ಖರ್ಚಿಗೆ ಸಿಗುತ್ತಿದ್ದ ಎರಡು ಆಣೆಯಲ್ಲಿ ಬಿಡಿ, ತಿಂಡಿ ಖರೀದಿಸಿ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದೆ’. ‘ತಂದೆಯ ವಿರೋಧದ ನಡುವೆ ತಡವಾಗಿ ವಿದ್ಯಾಭ್ಯಾಸ ಪ್ರಾರಂಭಿಸಿ, ಹೈಸ್ಕೂಲ್‌ ಮೆಟ್ಟಿಲೇರುತ್ತಿದ್ದಂತೆಯೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಯಿತು. ಅದಕ್ಕೆ ಹಿರಿಯ ಅಣ್ಣ ನನಗೆ ಮಾನಸಿಕವಾಗಿ ಶಕ್ತಿ ತುಂಬುತ್ತಿದ್ದ. ಅದರ ಫಲವಾಗಿ ನಾನು ಕಲಾವಿದನಾಗಿ ಬೆಳೆಯಲು ಸಾಧ್ಯವಾಯಿತು’.  ‘ಮುಂಬೈನಲ್ಲಿ ಪದವಿ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಲಗಿದ ದಿನಗಳು ಎಷ್ಟೋ ಇವೆ. ಆದರೆ ಹಟಕ್ಕೆ ಬಿದ್ದು ಕಷ್ಟಪಟ್ಟು ಪದವಿ ಮುಗಿಸಿದೆ’.‘ನಂತರ ವಾರ್ತಾ ಇಲಾಖೆಯಲ್ಲಿ  ಉದ್ಯೋಗವನ್ನು ಸಂಪಾದಿಸಿದೆ. ಇಲಾಖೆಯಲ್ಲಿ ಒಮ್ಮೆ  ಮುಕ್ತ ಬಾಂಗ್ಲಾ ಎಂಬ ವಿಷಯವಾಗಿ ನಾನು ಬಿಡಿಸಿದ್ದ ಚಿತ್ರವನ್ನು ಕಂಡ ದ.ರಾ.ಬೇಂದ್ರೆ ಅವರು ಇದಕ್ಕೆ ಅಕ್ಷರಗಳ ಅಗತ್ಯವೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು’. ‘ನನ್ನ ಜೀವನದಲ್ಲಿ ಆಸ್ತಿ, ಅಂತಸ್ತು ಹಾಗೂ ಹಣವನ್ನು ಸಂಪಾದಿಸಲಿಲ್ಲ. ಬದಲಾಗಿ ವಿದ್ಯೆ, ಕಲೆ, ಒಳ್ಳೆಯ ಸ್ನೇಹಿತರು ಹಾಗೂ ಉತ್ತಮ ಶಿಷ್ಯ ವೃಂದವನ್ನು ಸಂಪಾದಿಸಿದ್ದೇನೆ. ಹೀಗಾಗಿಯೇ ಹಣವಿಲ್ಲದಿದ್ದರೂ ನನ್ನನ್ನು ಅರಸಿ ಬರುವ ವಿದ್ಯಾರ್ಥಿಗಳು ನನ್ನ ಅಗತ್ಯಗಳ ಬಗ್ಗೆ ಮೊದಲು ವಿಚಾರಿಸುತ್ತಾರೆ. ಅದನ್ನು ನೆನೆದಾಗಲೆಲ್ಲಾ ನಾನು ಒಂಟಿ ಅಲ್ಲ ಎಂದು ನನಗೆ ಅರಿವಾಗುತ್ತದೆ’.ಕಲಾವಿದ

ಎಂ.ಬಿ.ಪಾಟೀಲ ಅವರು ಪ್ರಸಿದ್ಧ ಚಿತ್ರ ಕಲಾವಿದ. 1939ರ ಡಿ. 10ರಂದು ವಿಜಾಪುರದ ಸಣ್ಣ ಗ್ರಾಮದಲ್ಲಿ ಜನನ. ಮುಂಬೈನ ಜೆ.ಜೆ. ಕಲಾ ಕಾಲೇಜಿನ ಪದವೀಧರ. ರಾಜ್ಯದ ವಿವಿಧ ಭಾಗಗಳು ಹಾಗೂ ವಿವಿಧ ರಾಜ್ಯಗಳಲ್ಲಿ  ಹಲವಾರು ಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry