ಶುಕ್ರವಾರ, ಮಾರ್ಚ್ 5, 2021
28 °C

‘ವಿರೋಧಪಕ್ಷಕ್ಕೆ ಗುರುತರ ಜವಾಬ್ದಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿರೋಧಪಕ್ಷಕ್ಕೆ ಗುರುತರ ಜವಾಬ್ದಾರಿ’

ಶಿವಮೊಗ್ಗ: ಸರ್ಕಾರದಲ್ಲಿ ವಿರೋಧಪಕ್ಷಕ್ಕೆ ಗುರುತರವಾದ ಜವಾಬ್ದಾರಿ ಇದ್ದು, ಅದರ ಅರಿವು ವಿರೋಧಪಕ್ಷಕ್ಕೆ ಇರಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೂಚ್ಯವಾಗಿ ಹೇಳಿದರು.ರೋಟರಿ ಕ್ಲಬ್‌ ಶಿವಮೊಗ್ಗ, ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದರಿ ಯುವ ಸಂಸತ್‌ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ನಡೆಯನ್ನು ನಿಯಂತ್ರಿಸುವ ಶಕ್ತಿ ವಿರೋಧಪಕ್ಷದಲ್ಲಿರುತ್ತದೆ. ಆದರೆ, ಎಲ್ಲದಕ್ಕೂ ಸಭಾತ್ಯಾಗ ಮಾಡಿದರೆ ಅದಕ್ಕೆ ಅರ್ಥವೇನು? ಎಂದು ಪ್ರಶ್ನಿಸಿದರು.ಸದನ ಇರುವುದೇ ಚರ್ಚೆ ಮಾಡುವುದಕ್ಕೆ; ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಚರ್ಚೆಗಳು ಬಂದಾಗ ವಿರೋಧ ಪಕ್ಷದಲ್ಲಿ ಒಮ್ಮತದ ತೀರ್ಮಾನ ಇರಬೇಕು. ಅವಾಗ ಸರ್ಕಾರವನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಕಡಿವಾಣ ಹಾಕಿ ಅದನ್ನು ಜನಪರವಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ವಿರೋಧಪಕ್ಷದ ನಾಯಕರಿಗಿರುತ್ತದೆ.

 ಆಡಳಿತ ಪಕ್ಷ ವಿರೋಧ ಪಕ್ಷಕ್ಕೆ ದೈನಂದಿನ ಆಗು–ಹೋಗುಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು ಎಂದರು.

ಶಾಸನಸಭೆ ಪವಿತ್ರ ಮತ್ತು ಅತ್ಯಂತ ಪ್ರಮುಖವಾದ ವೇದಿಕೆ. ಇದನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ಬೇಕು. ಇದಕ್ಕೆ ಪ್ರೊಫೆಸರೇ ಆಗಬೇಕಿಲ್ಲ; ಸಾಮಾನ್ಯ ವಿದ್ಯಾವಂತನೂ ಉತ್ತಮ ಸಂಸದೀಯ ಪಟುವಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು.ನಿಗದಿಪಡಿಸಿದ ಸಮಯದಲ್ಲಿ ವಿಷಯವನ್ನು ಸಮರ್ಥವಾಗಿ ಮಂಡಿಸಿ, ಸದನವನ್ನೂ ಒಪ್ಪಿಸಿಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಜಾಣ್ಮೆ ಅಡಗಿದೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರದ ಭವಿಷ್ಯ ನಿರ್ಧರಿಸುವುದು ಸಂಸತ್ತು; ಪ್ರಮುಖವಾಗಿ ಅಲ್ಲಿ ಚರ್ಚೆಯಿಂದಲೇ ಎಲ್ಲಾ ತೀರ್ಮಾನವಾಗಬೇಕು.ಆದರೆ, ಕೆಲವು ‘ಅಭ್ಯಾಸ’ಗಳು ಬಂದು ಬಿಟ್ಟಿವೆ ಎಂದು ಸೂಚ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರದ ಪ್ರಜೆಯಾಗಿ, ಅದರಲ್ಲೂ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಸಂಪತ್ತಿನ ನಡಾವಳಿಗಳನ್ನು ತಿಳಿದುಕೊಳ್ಳುವುದು ತೀರಾ ಅವಶ್ಯವಾಗಿದೆ ಎಂದು ಹೇಳಿದರು.

ಕಠಿಣ ಶ್ರಮ, ಲೋಕಜ್ಞಾನ, ಚರ್ಚೆ ಮಾಡುವ ಮನೋಭಾವ ಬೆಳೆಸಿಕೊಂಡರೆ ಶ್ರೇಷ್ಠ ಸಂಸತ್‌ ಪಟುಗಳಾಗಿ ಬೆಳೆಯಬಹುದು.

ಎಲ್ಲರೂ ಸಂಸತ್‌, ಶಾಸನಸಭೆಗಳಿಗೆ ಹೋಗಲು ಸಾಧ್ಯವಾಗದಿದ್ದರೆ ಕನಿಷ್ಠ ಹೋಗುವವರನ್ನು ತಯಾರು ಮಾಡುವುದಕ್ಕೆ, ಮತದಾರರನ್ನು ಜಾಗೃತಗೊಳಿಸುವುದಕ್ಕಾದರೂ ಈ ಮಾದರಿ ಯುವ ಸಂಸತ್‌ ಸಹಕಾರಿಯಾಗಲಿ ಎಂದು ಹೇಳಿದರು.ಸಮಾರಂಭದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ, ವಿಧಾನ ಪರಿಷತ್‌ ಸದಸ್ಯ ಆರ್‌.ಕೆ.ಸಿದ್ದರಾಮಣ್ಣ, ರೋಟರಿ ಜಿಲ್ಲೆ ವಲಯ–11 ಅಸಿಸ್ಟೆಂಟ್‌ ಗರ್ವನರ್ ಎಸ್‌.ಜಿ.ಆನಂದ್, ರೋಟರಿ ಕ್ಲಬ್‌ ವೀರಣ್ಣ ಎ.ಹುಗ್ಗಿ, ಮುಖ್ಯ ತರಬೇತುದಾರ ಪ್ರೊ.ಎಸ್‌.ವಿ.ಶಾಸ್ತ್ರಿ ಉಪಸ್ಥಿತರಿದ್ದರು. ಕನ್ನಿಕಾಪ್ರಸಾದ್‌ ಪ್ರಾರ್ಥಿಸಿದರು. ರೋಟರಿ ಕ್ಲಬ್‌ ಅಧ್ಯಕ್ಷ ಗೋಪಾಲಕೃಷ್ಣ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಪಾರ್ಲಿಮೆಂಟರಿ ಕಮಿಟಿ ಛೇರ್‌ಮನ್  ಚ್‌.ಡಿ.ಉದಯಶಂಕರಶಾಸ್ತ್ರಿ ಸ್ವಾಗತಿಸಿದರು.

‘ಪತ್ರಕರ್ತರಿಗೆ ಕೊಲ್ಲುವುದು ಗೊತ್ತು; ಬೆಳೆಸುವುದು ಗೊತ್ತು’

‘ಪ್ರಜಾಪ್ರಭುತ್ವದಲ್ಲಿ ಮೂರು ಅಂಗಗಳಿವೆ.  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ  ಇದೆ. ಈ ಮೂರು ಸಮರ್ಥವಾಗಿ ಕೆಲಸ ಮಾಡಬೇಕಿದೆ’ ಎಂದು ಕಾಗೋಡು ಹೇಳುತ್ತಿದ್ದಂತೆ, ಅತಿಥಿಯೊಬ್ಬರು ‘ಈಗ ಪತ್ರಿಕಾರಂಗವೂ ಇದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಕಾಗೋಡು, 'ಈ ಬಗ್ಗೆ ರಾಜ್ಯಾಂಗದಲ್ಲಿ ಪ್ರಸ್ತಾಪವಿದೆಯೇ? ಇಲ್ಲದಿದ್ದರೆ ಅದು ಹೇಗೆ ನಾಲ್ಕನೇ ಅಂಗವಾಗಲು ಸಾಧ್ಯ' ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಕಾಗೋಡು, 'ರಾಜ್ಯಾಂಗದ ನಾಲ್ಕನೇ ಅಂಗವೆಂದು ತೃಪ್ತಿಪಡಿಸಿ ತಮ್ಮ ಬಗ್ಗೆ ಚೆನ್ನಾಗಿ ಬರೆಯಲಿ ಎಂದು ಈ ರೀತಿ ಹೇಳುತ್ತಾರೆ' ಎಂದರು. ನಂತರ ಪತ್ರಕರ್ತರ  ಕಡೆಗೆ ತಿರುಗಿ 'ಹೌದಾ. ನೀವು ನಾಲ್ಕನೇ ಅಂಗವೇ' ಎಂದು ಹಾಸ್ಯವಾಗಿ ಪ್ರಶ್ನಿಸಿದರು.  ಪತ್ರಿಕೆಯವರಿಗೆ ಒಬ್ಬರನ್ನು ಕೊಲ್ಲುವುದು ಗೊತ್ತು, ಬೆಳೆಸುವುದೂ ಗೊತ್ತು ಎಂದು ಮಾರ್ಮಿಕವಾಗಿ ನುಡಿದ ಅವರು, ಈ ಹಿಂದೆ ತಾವು ಚುನಾವಣೆ ಸಂದರ್ಭದಲ್ಲಿ ಸಾಗರದಲ್ಲಿ ಕೈ ಕತ್ತರಿಸಿ ಎಂದು ಹೇಳಿರಲಿಲ್ಲ.ಕೈ ಕತ್ತರಿಸಿ ಎಂದು ಹೇಳುವವರು ಅಧಿಕಾರಕ್ಕೆ ಬಂದರೆ ಹೇಗಾಗುತ್ತದೆ ಎಂದು ಮಾತನಾಡಿದ್ದೆ. ಆದರೆ, ಪತ್ರಿಕೆಯೊಂದರಲ್ಲಿ ‘ಕೈ ಕತ್ತರಿಸಿ’ ಎಂದು ಹೇಳಿದ್ದೇನೆ ಎಂದು ವರದಿಯಾಗಿತ್ತು ಎಂದು ನೆನಪಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.