ಬುಧವಾರ, ಜೂನ್ 23, 2021
30 °C

‘ವಿವಿಗಳಲ್ಲೂ ಮತ ಬ್ಯಾಂಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮತ ಬ್ಯಾಂಕ್‌ ರಾಜ­ಕೀಯ­ದಿಂದ ರಾಜ್ಯದ ವಿಶ್ವವಿದ್ಯಾಲ­ಯ­ಗಳಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ. ಪ್ಯಾಕ್‌) ಆಶ್ರಯದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಕರ್ನಾಟಕ­ದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾ­­ರಣೆ ಹಾಗೂ ಸಾಮರ್ಥ್ಯ ವೃದ್ಧಿ’  ಸಂವಾದದಲ್ಲಿ  ಮಾತನಾಡಿದರು.‘ಕೆಲವು ವರ್ಷಗಳ ಹಿಂದಿನವರೆಗೂ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ರಾಜ್ಯ ಹೆಸರಾಗಿತ್ತು. ಇಂದು ಗುಣ­ಮಟ್ಟ ಕಡಿಮೆಯಾಗಿದೆ. ವಿಶ್ವವಿದ್ಯಾಲ­ಯ­­ಗಳು  ಬೇರೆ ಬೇರೆ ಕಾರಣ­ಗಳಿಂದ ಸುದ್ದಿಯಾ­ಗುತ್ತಿವೆ. ಉಪನ್ಯಾಸ­ಕರ ನೇಮಕ  ಸಮರ್ಪಕವಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಉಪನ್ಯಾಸಕರ ಸಬಲೀಕರಣಕ್ಕೆ ಮುಂದಾ­ಗಬೇಕು’ ಎಂದು ಸಲಹೆ ನೀಡಿದರು.

‘ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆ ಹಾಗೂ ಕೈಗಾರಿಕಾ ಸಂಸ್ಥೆ­ ನಡುವೆ ಸಂವಹನ ಏರ್ಪಡ­ಬೇಕು. ಶಿಕ್ಷಣ ಸಂಸ್ಥೆಗಳ ಸಂಶೋಧನಾ ಹಾಗೂ ಅಭಿ­ವೃದ್ಧಿ ಚಟುವಟಿಕೆಗಳಿಗೆ ಕೈಗಾರಿಕೆಗಳು ನೆರವು ನೀಡಬೇಕು’ ಎಂದರು.ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಬಿ.ಎಸ್‌.­ಶೇರಿಗಾರ್‌, ‘ರಾಜ್ಯ­ದ 43 ವಿವಿಗಳ ಪೈಕಿ 10 ಸಾಂಪ್ರದಾಯಿಕ ವಿವಿಗಳು. ಕನ್ನಡ, ಸಂಸ್ಕೃತ, ತೋಟ­ಗಾರಿಕೆ, ಕಾನೂನು ಸೇರಿದಂತೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟ 10 ವಿಶೇಷ ವಿವಿಗಳು ಇವೆ. ಈ ವಿವಿಗಳ ಆರಂಭ­ದಿಂದ ಸಮಸ್ಯೆ ಸೃಷ್ಟಿಯಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಕಾಲೇಜುಗಳು ಈ ವಿಶೇಷ ವಿವಿಗಳ ವ್ಯಾಪ್ತಿಗೆ ಬರುತ್ತಿವೆ. ಇದರಿಂದಾಗಿ ಸಾಂಪ್ರದಾಯಿಕ ವಿವಿಗಳು ಎಂ.ಎ, ಎಂ.ಎಸ್ಸಿಯಂತಹ ಪದವಿ ನೀಡು­ವು­ದಕ್ಕೆ ಸೀಮಿತವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಕೆಲವು ವರ್ಷಗಳ ಹಿಂದೆ ನ್ಯಾನೋ ಆಯೋಗದ ಶಿಫಾರಸಿನ ಮೇರೆಗೆ ₨2 ಕೋಟಿ ಅನುದಾನದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಟೆಕ್‌ ಪದವಿ ಆರಂಭಿಸಲಾಯಿತು. ಕೆಲವು ಸಮಯ ಈ ಪದವಿ ಚೆನ್ನಾಗಿ ನಡೆಯಿತು. ಈ ಪದವಿ ಆರಂಭಿಸಿದ್ದಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತಕರಾರು ಎತ್ತಿತ್ತು. ಬಳಿಕ ಈ ವಿವಾದ ಉನ್ನತ ಶಿಕ್ಷಣ ಇಲಾಖೆಯ ಬಳಿಗೆ ಹೋಯಿತು. ಈ ಬಗ್ಗೆ ಶಿಫಾರಸು ಮಾಡುವಂತೆ ಇಲಾಖೆಯು ವಿಶ್ವೇಶ್ವ­ರಯ್ಯ ತಾಂತ್ರಿಕ ವಿವಿಯನ್ನೇ ಕೋರಿತು. ಈ ಪದವಿಯನ್ನೇ ನಿಲ್ಲಿಸುವ ಹಂತಕ್ಕೆ ಕುವೆಂಪು ವಿವಿ ತಲುಪಿತ್ತು’ ಎಂದು ಅವರು ನೆನಪಿಸಿಕೊಂಡರು.ಬಿ. ಪ್ಯಾಕ್‌ ಉಪಾಧ್ಯಕ್ಷ ಟಿ.ವಿ.­ಮೋಹ­­ನ­­ದಾಸ ಪೈ, ‘ಕಳೆ­ದೊಂದು ದಶಕ­ದಲ್ಲಿ ಉನ್ನತ ಶಿಕ್ಷಣ ಪಡೆ­ಯುವವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. 2006­ರಲ್ಲಿ ದೇಶದಲ್ಲಿ 29,000 ಕಾಲೇಜು ಇದ್ದರೆ, 20­12­­ಕ್ಕೆ ಕಾಲೇಜುಗಳ ಸಂಖ್ಯೆ 45,000ಕ್ಕೆ ಏರಿತ್ತು. ಉನ್ನತ ಶಿಕ್ಷಣದ ಮಾನದಂಡ ಬದಲಾಗಬೇಕು. ಗುಣ­ಮಟ್ಟದ ಶಿಕ್ಷಣ ನೀಡಿ ಕೌಶಲದ ಪದವೀ­ಧರ­ರನ್ನು ಸೃಷ್ಟಿಸಬೇಕು’ ಎಂದರು.ಜೈನ್‌ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ. ಸಂದೀಪ್‌ ಶಾಸ್ತ್ರಿ, ‘ಈಗ ಬೋಧಿಸುತ್ತಿರುವ ಪಠ್ಯಕ್ರಮ ಹಳೆ­ಯದು. ಇದೇ ಕಾರಣದಿಂದ ಪ್ರಾಧ್ಯಾ­ಪಕರು ತಮ್ಮನ್ನು ಸೀಮಿತ ಮಾಡಿ­­ಕೊಳ್ಳು­ವುದು ಸರಿಯಲ್ಲ’ ಎಂದರು.

ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶು­­­­ಪಾಲ ಡಾ.ವೆಂಕಟೇಶಪ್ಪ, ಟೀಮ್‌ ಲೀಸ್‌ ಸರ್ವಿಸಸ್‌ ಸಂಸ್ಥೆಯ ಮುಖ್ಯಸ್ಥ ಮನಿಷ್‌ ಸಬರ್‌ವಾಲ್‌, ಮೌಂಟ್‌ ಕಾರ್ಮೆಲ್‌ ಪ್ರಾಧ್ಯಾ­­­­ಪಕಿ ಸುಮಾ ಸಿಂಗ್‌ ವಿಷಯ ಮಂಡಿ­­ಸಿದರು.  ಬಿ.ಪ್ಯಾಕ್‌ ಕಾರ್ಯ­ದರ್ಶಿ ಕೆ.­ಜೈರಾಜ್‌  ಸಮನ್ವಯ­ಕಾರರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.