‘ವಿಶ್ವವಿದ್ಯಾಲಯಗಳು ವೈಚಾರಿಕತೆ ಕಲಿಸಲಿ’

7

‘ವಿಶ್ವವಿದ್ಯಾಲಯಗಳು ವೈಚಾರಿಕತೆ ಕಲಿಸಲಿ’

Published:
Updated:

ಕುಶಾಲನಗರ: ‘ವಿಶ್ವವಿದ್ಯಾಲಯಗಳು ಕೇವಲ ಪದವಿ ಪ್ರದಾನ ಕೇಂದ್ರಗಳಾಗಬಾರದು. ಪದವಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಬದುಕಿನಲ್ಲಿ ವೈಚಾರಿಕತೆಯನ್ನು ಅಳವಡಿಸಿ ಕೊಳ್ಳುವಂಥ ವಾತಾವರಣ ನಿರ್ಮಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕುಶಾಲನಗರ ಸಮೀಪದ ಚಿಕ್ಕಅಳುವಾರದಲ್ಲಿ ನಿರ್ಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಜ್ಞಾನ ಸಂಕೀರ್ಣ, ವಿದ್ಯಾರ್ಥಿನಿಲಯ ಮತ್ತು ವಸತಿಗೃಹಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.‘ಖಾಸಗಿ ವಿಶ್ವವಿದ್ಯಾನಿಲಯ ಗಳಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಹೀಗಿರುವಾಗ ಸರ್ಕಾರಿ ವಿಶ್ವವಿದ್ಯಾನಿಲಯಗಳು ಉತ್ಕೃಷ್ಟವಾದ ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಇದೆ. ಶಿಕ್ಷಣವು ಆದರ್ಶ ವ್ಯಕ್ತಿಗಳನ್ನು ರೂಪಿಸುವಂತಾಗ ಬೇಕು. ಆದರೆ, ಇಂದಿಗೂ ಸಮಾಜದಲ್ಲಿ ಮೌಢ್ಯ, ಕಂದಾಚಾರಗಳು ತಾಂಡವವಾಡುತ್ತಿವೆ. ಆದ್ದರಿಂದ ವಿಶ್ವವಿದ್ಯಾಲಯಗಳು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಿ ಮೌಢ್ಯದಿಂದ ಹೊರಬರುವಂತೆ ಮಾಡಬೇಕು’ ಎಂದರು.ರಾಜ್ಯ ಉನ್ನತ ಶಿಕ್ಷಣ ಸಚಿವ

ಆರ್.ವಿ. ದೇಶಪಾಂಡೆ ಮಾತನಾಡಿ, ಬಡ, ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು  ಇಂದಿಗೂ ಉನ್ನತ ಶಿಕ್ಷಣಕ್ಕೆ ಬರುತ್ತಿಲ್ಲ. ಹೀಗಾಗಿ ಶಿಕ್ಷಣವು ದುಬಾರಿಯಾಗುವ ಬದಲು ಎಲ್ಲರಿಗೂ ಸಿಗುವಂತಾಗಬೇಕು’ ಎಂದರು.‘ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಉಚ್ಛತಾ ಶಿಕ್ಷಣ ಅಭಿಯಾನದಡಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅಪಾರ ಅನುದಾನ ಬರಲಿದೆ. ವಿಶ್ವ ವಿದ್ಯಾಲಯಗಳ ಮೂಲ ಸೌಕರ್ಯ ಹೆಚ್ಚಿಸಲು ಇದು ಸಹಾಯವಾಗಲಿದೆ’ ಎಂದರು.ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಮಾತನಾಡಿ, ಚಿಕ್ಕ ಅಳುವಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಧ್ಯಯನ ಕೇಂದ್ರವನ್ನು ಸ್ಥಾಪಿಸುತ್ತಿರುವುದು ಸ್ವಾಗತಾರ್ಹ. ವಿವಿಯ 33 ವರ್ಷಗಳ ಇತಿಹಾಸದಲ್ಲಿ ವಿವಿ ಇದೇ ಮೊದಲಬಾರಿ ಇಂಥ ಸಾಧನೆ ಮಾಡಿದೆ’ ಎಂದರು.ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಟಿ.ಸಿ. ಯಡಪಡಿತ್ತಾಯ,  ಗೃಹಸಚಿವರಾದ ಕೆ.ಕೆ. ಜಾರ್ಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ವಿಧಾನ ಪರಷತ್‌ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಚಂದ್ರಶೇಖರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry