ಗುರುವಾರ , ಮಾರ್ಚ್ 4, 2021
30 °C
ವೆಂಕಟಕೃಷ್ಣಮ್ಮನಹಳ್ಳಿ ಮನೋವೇದನೆ

‘ವೆಂಕಟಕೃಷ್ಣಮ್ಮ’ನಿಗೆ ಅಭಿವೃದ್ಧಿಯದ್ದೇ ಚಿಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೆಂಕಟಕೃಷ್ಣಮ್ಮ’ನಿಗೆ ಅಭಿವೃದ್ಧಿಯದ್ದೇ ಚಿಂತೆ!

ಸಿಲಿಪಲ್ಲಿಯಿಂದ ವೆಂಕಟಕೃಷ್ಣಮ್ಮಹಳ್ಳಿ..

‘ತುಂಬಾ ವರ್ಷಗಳ ಹಿಂದೆ ನಮ್ಮ ಹಳ್ಳಿಯು ಸಿಲಿಪಲ್ಲಿ ಎಂಬ ಅರಣ್ಯಪ್ರದೇಶದ ಒಳಗಡೆ ಇತ್ತು. ಅರಣ್ಯದಲ್ಲಿ ಪ್ರಾಣಿಗಳು ಹೆಚ್ಚಿರುತ್ತವೆ ಮತ್ತು ವಾಸವಿರಲು ಯೋಗ್ಯವಲ್ಲ ಎಂಬ ಕಾರಣಕ್ಕೆ ಹಳ್ಳಿಯ ಜನರು ಸಮೀಪದ ಹಳ್ಳಿಗಳಿಗೆ ಹೋಗಿ ನೆಲೆ ಕಂಡುಕೊಂಡರು. ಆದರೆ ಅದೇ ಅರಣ್ಯಪ್ರದೇಶದಲ್ಲಿ ವಾಸವಿದ್ದ ವೆಂಕಟಕೃಷ್ಣಮ್ಮ ಮತ್ತು ವೆಂಕಟಕೃಷ್ಣಪ್ಪ ದಂಪತಿ ಮಾತ್ರ ಹೊಸ ಸ್ಥಳದ ಹುಡುಕಾಟ ನಡೆಸಿ, ಕೊನೆಗೆ ಇಲ್ಲಿಯೆ ವಾಸಿಸತೊಡಗಿದರು. ಆಗಿನಿಂದ ನಮ್ಮ ಹಳ್ಳಿಗೆ ಎರಡು ಹೆಸರು. ಆದರೆ ವೆಂಕಟ­ಕೃಷ್ಣಪ್ಪಹಳ್ಳಿಗಿಂತ ವೆಂಕಟ­ಕೃಷ್ಣಮ್ಮನ­ಹಳ್ಳಿಯೆಂದೇ ಹೆಚ್ಚು ಪರಿಚಿತ’ ಎಂದು ಈ ಹಳ್ಳಿಗೆ ಅಜ್ಜಿಯೊಬ್ಬರ ಹೆಸರು ಬಂದದ್ದು ಹೇಗೆ ಎಂಬ ಸ್ವಾರಸ್ಯಕರ ಕತೆಯನ್ನು ಗ್ರಾಮಸ್ಥರು ಹೇಳುತ್ತಾರೆ.

ಮೂಲ ಸೌಕರ್ಯ ಕೊರತೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರು ತಾಲ್ಲೂಕಿನ ತೇಕಲಹಳ್ಳಿಯ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತ ಬಹಿಷ್ಕಸಿದಂತೆಯೇ ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಸಹ ವೆಂಕಟಕೃಷ್ಣಮ್ಮನಹಳ್ಳಿ ಎಂಬ ಕುಗ್ರಾಮದ ನಿವಾಸಿಗಳು ಮತ ಬಹಿಷ್ಕರಿಸಿದ್ದರು. ಅಧಿಕಾರಿಗಳು ಮತ್ತು ಪ್ರಮುಖರು ಬಂದು ಮನವಿ ಮಾಡಿಕೊಂಡರೂ ಗ್ರಾಮಸ್ಥರು ಮತಗಟ್ಟೆಯತ್ತ ಹೊರಳಲಿಲ್ಲ.

ಚುನಾವಣೆಯನ್ನೇ ಬಹಿಷ್ಕರಿಸುವಂತಹ ಗಟ್ಟಿಯಾದ ನಿರ್ಧಾರವನ್ನು ಗ್ರಾಮಸ್ಥರು ಕೈಗೊಳ್ಳುತ್ತಾರೆಂದರೆ, ಅದಕ್ಕೆ ಮುಖ್ಯವಾದ ಕಾರಣಗಳೇ ಇರಬಹುದೆಂದು ಬೆನ್ನತ್ತಿ ಕುಗ್ರಾಮಕ್ಕೆ ಭೇಟಿ ನೀಡಿದಾಗ, ವಾಸ್ತವಾಂಶಗಳು ಒಂದೊಂದಾಗಿ ಬೆಳಕಿಗೆ ಬಂದವು. ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ವೆಂಕಟಕೃಷ್ಣಮ್ಮನಹಳ್ಳಿಯ ನೈಜ ಚಿತ್ರಣವನ್ನು ಅರಿಯಲು ‘ಪ್ರಜಾವಾಣಿ’ ಪ್ರಯತ್ನಿಸಿತು. ಅಲ್ಲಿನ ಗ್ರಾಮಸ್ಥರು ಕೂಡ ಮನಬಿಚ್ಚಿ ಮಾತನಾಡಿದರು.‘ಜನರ ಸಮಸ್ಯೆಗಳನ್ನು ಅರಿಯುವ ಮತ್ತು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಜನಪ್ರತಿನಿಧಿಯನ್ನು ಜನರೇ ಆಯ್ಕೆಮಾಡಲಿ ಎಂಬ ಉದ್ದೇಶದಿಂದ ಚುನಾವಣೆ ನಡೆಸಲಾಗುತ್ತದೆ. ಆದರೆ ಚುನಾವಣೆಯ ನಂತರ ಜನಪ್ರತಿನಿಧಿಯೇ ಕಣ್ಣಿಗೆ ಕಾಣಸಿಗದಿದ್ದರೆ, ಜನರಾದರೂ ಏನು ಮಾಡಬೇಕು. ಅದೇ ಕಾರಣಕ್ಕೆ ನಮ್ಮ ಗ್ರಾಮಸ್ಥರು ಚುನಾವಣೆಯಿಂದ ದೂರ ಉಳಿದರು. ನಮ್ಮ ನಿರ್ಧಾರದಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.ಗ್ರಾಮ ಪ್ರವೇಶಿಸಿದ ಕೂಡಲೇ ಕಣ್ಣಿಗೆ ರಾಚುವಂತೆ ಒಂದೊಂದೇ ಸಮಸ್ಯೆಗಳು ಅಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಸುಮಾರು 24 ಮನೆಗಳಿರುವ ಈ ಕುಗ್ರಾಮದಲ್ಲಿ ಎಂಟು ಗುಡಿಸಲು ಮನೆಗಳಿವೆ. 130ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಈ ಗ್ರಾಮದ ಜನರು ಬಸ್‌ ಹತ್ತಬೇಕೆಂದರೆ, ಸುಮಾರು 3 ಕಿ.ಮೀ.ದೂರದಲ್ಲಿರುವ ಜರಗಳ್ಳಿ ಗೇಟ್‌ವರೆಗೆ ನಡೆಯಲೇಬೇಕು. ಆಟೊರಿಕ್ಷಾ, ಬಸ್‌ ಗ್ರಾಮದ ಸುತ್ತಮುತ್ತ ಕೂಡ ಸುಳಿದಾಡುವುದಿಲ್ಲ.ನಡೆದುಕೊಂಡು ಹೋಗಲು ಕೂಡ ಆಗದ ಈ 3 ಕಿ.ಮೀ.ರಸ್ತೆಯಲ್ಲಿ 1 ಕಿ.ಮೀ. ರಸ್ತೆ ಹಳ್ಳದಿಣ್ಣೆಗಳಿಂದ ಕೂಡಿದೆ. ಯಾರಾದರೂ ಅಸ್ವಸ್ಥರಾದರೆ ಅಥವಾ ಬೇರೇನೋ ಸಮಸ್ಯೆ ಉಂಟಾದರೆ 2 ಕಿ.ಮೀ.ದೂರದಲ್ಲಿರುವ ದಿಬ್ಬೂರಹಳ್ಳಿ ಅಥವಾ ಸಾದಲಿಗೆ ನಡೆದುಕೊಂಡು ಹೋಗಬೇಕು. ಈ ಗ್ರಾಮದಲ್ಲಿ ಶಾಲೆಯಿಲ್ಲ. ಅಕ್ಷರಗಳನ್ನು ಕಲಿಯುವ ಉತ್ಸಾಹದಿಂದ ಮಕ್ಕಳು ದೂರದ ಶಾಲೆಗೆ ನಡೆದುಕೊಂಡೇ ಹೋಗುತ್ತಾರೆ.'ಗ್ರಾಮದ ಮುಖ್ಯರಸ್ತೆಯಿಂದ ಬಸ್‌ ನಿಲ್ದಾಣದವರೆಗೆ 2 ಕಿ.ಮೀ. ನಡೆದುಕೊಂಡೇ ಹೋಗಬೇಕು. ಅರಣ್ಯ, ಗುಡ್ಡಗಾಡು ಪ್ರದೇಶದಿಂದಲೇ ಸಾಗಬೇಕು. ಸರಿಯಾದ ರಸ್ತೆಯಿಲ್ಲದೇ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಓಡಾಡಲು ತುಂಬ ತೊಂದರೆಯಾಗುತ್ತದೆ. ಗ್ರಾಮದಲ್ಲಿ ಚರಂಡಿ, ಬೀದಿ ದೀಪ, ಸಿಮೆಂಟ್ ರಸ್ತೆ, ಅಂಗನವಾಡಿ ಕಟ್ಟಡ ಇಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಯೂ ನಮ್ಮ ಗ್ರಾಮಕ್ಕೆ ಭೇಟಿ ನೀಡುವುದಿಲ್ಲ’ ಎಂದು ಗ್ರಾಮಸ್ಥ ಕೋನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.‘ಬಡವರಿಗೆ ಮನೆಗಳಿಲ್ಲ. ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲದೆ ಗ್ರಾಮ ವಂಚಿತವಾಗಿದೆ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಹಲವು ಬಾರಿ ನಮ್ಮ ಸಮಸ್ಯೆಗಳನ್ನು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಮತ್ತು ಅಧಿಕಾರಿಗಳ ಬಳಿ ನಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್‌  ಅಸಹಾಯಕತೆಯನ್ನು ತೋರ್ಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.