‘ವೈಜ್ಞಾನಿಕ ವಿಧಾನದಿಂದ ಹತೋಟಿ’

7
ಕಾಳು ಮೆಣಸಿಗೆ ಸೊರಗು ರೋಗ ಬಾಧೆ

‘ವೈಜ್ಞಾನಿಕ ವಿಧಾನದಿಂದ ಹತೋಟಿ’

Published:
Updated:

ಗೋಣಿಕೊಪ್ಪಲು: ಕಾಳು ಮೆಣಸಿಗೆ ಶೀಘ್ರ ಸೊರಗು ರೋಗದ ಬಾಧೆ ಅತಿಯಾಗಿದ್ದು ಬೆಳೆಗೆ ತೀವ್ರ ಹಾನಿಯಾಗುತ್ತಿದೆ. ಫೈಟಾಪ್ತರ ಕ್ಯಾಪ್ಸಿಸಿ ಎಂಬ ಶಿಲೀಂಧ್ರ ರೋಗಾಣುವಿನಿಂದ ಹರಡುವ ಈ ರೋಗವು ಜೌಗು ಪ್ರದೇಶ ಹಾಗೂ ತೇವಾಂಶದಿಂದ ಕೂಡಿದ ವಾತಾವರಣಲ್ಲಿ ಹೆಚ್ಚಾಗಿ ಕಂಡಬರಲಿದೆ ಎಂದು  ಸ್ಥಳೀಯ ಕೃಷಿ ವಿಜ್ಞಾನ ಕೇಂದದ್ರ ಸಸ್ಯ ಸಂರಕ್ಷಣಾ ತಜ್ಞ  ಕೆ.ವಿ. ವೀರೇಂದ್ರಕುಮಾರ್ ಹೇಳಿದರು.ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ, ಬಾಳೆಲೆ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಅಲ್ಲಿನ  ಕೊಡವ ಸಮಾಜದಲ್ಲಿ ಬುಧವಾರ ಏರ್ಪಡಿಸಿದ್ದ `ಕಾಳು ಮೆಣಸಿನ ಸಮಗ್ರ ರೋಗದ ನಿರ್ವಹಣೆ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಪ್ರತೀ ದಿನ ಸುಮಾರು 22 ಮಿ.ಮೀ. ಗಿಂತ ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ಇದು  ಹೆಚ್ಚಾಗಿ ಕಂಡು ಬರಲಿದೆ.  ಶೇ. 83 ರಿಂದ 99 ರಷ್ಟು ಆರ್ದ್ರತೆ, 22 ರಿಂದ 29 ಸೆಂ. ಉಷ್ಣಾಂಶ ಮತ್ತು ದಿನಕ್ಕೆ 2 ರಿಂದ 3 ಗಂಟೆಗಳಿಗಿಂತ ಕಡಿಮೆ ಸೂರ್ಯನ ಬೆಳಕು ಇದ್ದಾಗ ಬಳ್ಳಿಯು ಬೇಗ ರೋಗದ ಬಾಧೆಗೆ ತುತ್ತಾಗುತ್ತದೆ. ಎಂದು ಹೇಳಿದರು.ರೋಗ ಪೀಡಿತ ಬಳ್ಳಿಯನ್ನು ವೀಕ್ಷಿಸಿದಾಗ ಮೊದಲಿಗೆ ಬಳ್ಳಿಯ ಬುಡದ ಒಂದೆರಡು ಎಲೆಗಳು ನಂತರ ಇತರೆ ಎಲೆಗಳ ಮೇಲೆ ವೃತ್ತಾಕಾರದ ನೀರಿನಿಂದ ತೋಯ್ದಂತಹ ಬೂದು ಬಣ್ಣದ ಮಚ್ಚೆಗಳು ಕಂಡು ಬರುತ್ತವೆ. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆತು ಉದುರಿ ಬೀಳುತ್ತವೆ. ಬುಡದಿಂದ ಸುಮಾರು 30 ರಿಂದ 40 ಸೆಂ.ಮೀ. ವರೆಗೆ ಕಾಂಡದ ಮೇಲೆ ನೀರಿನಿಂದ ತೋಯ್ದಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ದೊಡ್ಡದಾಗುತ್ತವೆ ಎಂದು  ತಿಳಿಸಿದರು.ಈ ರೋಗವು ತೀವ್ರವಾದಾಗ ಕಾಂಡವು ಕೊಳೆತು ಆ ಭಾಗದ ತೊಗಟೆ ಸುಲಿದು ಹೋಗಿ ಬಳ್ಳಿ ಸಂಪೂರ್ಣವಾಗಿ ಹಾಳಾಗುವುದು. ಒಮ್ಮೆ ಈ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಇದರ ಹತೋಟಿ ತುಂಬಾ ಕಷ್ಟ ಮತ್ತು ರೋಗದ ಬಾಧೆಗೆ ತುತ್ತಾದ ಇಡೀ ಬಳ್ಳಿಯು 30 ದಿನಗಳಲ್ಲಿ ಸಾಯುತ್ತದೆ. ಆದುದರಿಂದ ಈ ರೋಗದ ಹತೋಟಿಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ತಿಳಿದು ಸೂಕ್ತ ಸಮಯದಲ್ಲಿ ಗುರುತಿಸಿ, ಹತೋಟಿ ಮಾಡಬಹುದೆಂದು ತಿಳಿಸಿದರು.ಕೇಂದ್ರದ ತೋಟಗಾರಿಕಾ ತಜ್ಞ ಪ್ರಭಾಕರ ಅವರು ಕೃಷಿ ವಿಜ್ಞಾನ ಕೇಂದ್ರದ ಉದ್ದೇಶವನ್ನು ತಿಳಿಸುತ್ತಾ ಜಿಲ್ಲೆಯ ರೈತರು ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳ ಬೇಕು ಎಂದರು.ತೋಟಗಾರಿಕಾ ತಜ್ಞ ಕೆ.ಎ.ದೇವಯ್ಯ ಮಾತನಾಡಿ  ಕಾಳು ಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಕಾಳು ಮೆಣಸು ಗಿಡಗಳ ಉತ್ಪಾದನೆ ಮಾಡುವುದು ಅಗತ್ಯ. ಬೆಳೆಗಾರರು ಆರೋಗ್ಯಕರ ಬಳ್ಳಿಯನ್ನು ಪಡೆದು ಕೃಷಿಮಾಡಬೇಕು.  ಇದರ ಬಗ್ಗೆ ಅನುಭವಿ ಕೃಷಿಕರ ಮತ್ತು ತಜ್ಞರ  ಸಲಹೆ ಪಡೆಯುವುದು ಅಗತ್ಯ ಎಂದು ಹೇಳಿದರು. ಕೇಂದ್ರದ ತೋಟಗಾರಿಕಾ ತಜ್ಞ ಪ್ರಭಾಕರ ಅವರು ಕೃಷಿ ವಿಜ್ಞಾನ ಕೇಂದ್ರ ರೈತರ ಪ್ರಗತಿಗಾಗಿ ತನ್ನನ್ನು ತೊಡಗಿಸಿಕೊಂಡಿದೆ. ಜಿಲ್ಲೆಯ ರೈತರು ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳ ಬೇಕು ಎಂದರು.ವಿಜ್ಞಾನಿ  ವಸಂತಕುಮಾರ್ ಅವರು ರೈತರು  ಮಣ್ಣು ಪರೀಕ್ಷೆ ಮಾಡಿಸಿ ರಸ ಗೊಬ್ಬರಗಳನ್ನು ಬೆಳೆಗಳಿಗೆ ನೀಡಬೇಕು. ಗೊಬ್ಬರ ಹಾಕುವುದಕ್ಕು ಮೊದಲು ಮಣ್ಣು ಪರೀಕ್ಷೆ ಮಾಡಿಸುವುದು  ಮುಖ್ಯ ಎಂದು ತಿಳಿಸಿದರು.ಬಾಳೆಲೆ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ಕೃಷ್ಣಗಣಪತಿಯವರು  ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿಪರ ಕೃಷಿಕರಾದ ಮೇಚಂಡ ಬೋಸ್ ಚೆಂಗಪ್ಪನರು ಕಾಳುಮೆಣಸು ಕೃಷಿಯ ತಮ್ಮ ಅನುಭವವನ್ನು ಹಂಚಿಕೊಂಡರು.ಬಾಳೆಲೆ ಸ್ಪೋರ್ಟ್ಸ್ ಕ್ಲಬ್‌ನ  ಸಿ.ಪಿ.ಮಾದಪ್ಪ,  ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು ಉತ್ತಪ್ಪ  ಮುಂತಾದವರು ಹಾಜರಿದ್ದರು.  75ಕ್ಕೂ ಹೆಚ್ಚು   ಆಸಕ್ತ ಕಾಳುಮೆಣಸು ಬೆಳೆಯುವ ರೈತರು ಈ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry