‘ವೈನ್‌ಶಾಪ್‌’ ಹೆಸರಿಗೆ ತಕರಾರು

7

‘ವೈನ್‌ಶಾಪ್‌’ ಹೆಸರಿಗೆ ತಕರಾರು

Published:
Updated:

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.ಶನಿವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಅವರು ಕಾಂಗ್ರೆಸ್‌ ಕಾರ್ಯಕರ್ತರ ಅಹವಾಲು ಆಲಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದರು.

ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟದ ಅವಧಿಯನ್ನು ವಿಸ್ತರಣೆ ಮಾಡುವ ವಿಚಾರವೂ ಇಲ್ಲ. ಮದ್ಯದ ಅಂಗಡಿಗಳಿಗೆ ‘ವೈನ್‌ ಶಾಪ್‌’ ಎಂದು ಹೆಸರಿಡುವುದಕ್ಕೆ ಅವಕಾಶ ನೀಡಬಾರದು ಎಂಬ ಕೋರಿಕೆ ತೋಟ­ಗಾರಿಕೆ ಇಲಾಖೆಯಿಂದ ಬಂದಿದೆ. ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಪ್ರತಿಕ್ರಿಯಿಸಿ­ದರು.ಕಳ್ಳಬಟ್ಟಿ ದಂಧೆಯಲ್ಲಿ 3,000 ಮಂದಿ: ರಾಜ್ಯದಲ್ಲಿ 3,000 ಜನರು ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ­ಯನ್ನು ಅಬಕಾರಿ ಇಲಾಖೆ ಅಧಿಕಾರಿ­ಗಳು ಕಲೆ ಹಾಕಿದ್ದಾರೆ. ಅವರನ್ನು ಮನವೊಲಿಸಿ ಪುನರ್ವಸತಿ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಿನ ಪ್ರಮಾಣದಲ್ಲಿದೆ. ಅದನ್ನು

ನಿಯಂತ್ರಿ­ಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳ­ಲಾಗಿದೆ. ಜಾಗೃತಿ ಮತ್ತು ಪುನರ್ವ­ಸತಿಯ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.ಸಕ್ಕರೆ ಕಾರ್ಖಾನೆ ಜೊತೆ ಸಂಬಂಧವಿಲ್ಲ

‘ಗೋಕಾಕದ ಸತೀಶ್‌ ಷುಗರ್ಸ್‌ ಸಕ್ಕರೆ ಕಾರ್ಖಾನೆಯಲ್ಲಿ ಈಗ ನಾನು ಇಲ್ಲ. ನನ್ನ ಕುಟುಂಬದವರೂ ಆಡಳಿತ ಮಂಡಳಿಯಲ್ಲಿ ಇಲ್ಲ’ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಆದರೆ ಸತೀಶ್‌ ಮತ್ತು ಅವರ ಪತ್ನಿ ‘ಸತೀಶ್‌ ಷುಗರ್ಸ್‌’ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೇ ಈಗ ಕಾರ್ಖಾನೆ­ಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry